ತಿ.ನರಸೀಪುರ
ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕ ವತಿಯಿಂದ ಲಿಂಗಾಯತ ಧರ್ಮಜಾಗೃತಿ ಸಮಾವೇಶ ಮತ್ತು 2025 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭದ ಕಾರ್ಯಕ್ರಮ ರವಿವಾರ ಎ.ಪಿ.ಎಮ್.ಸಿ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮದ್ಗಾರ ಲಿಂಗಯ್ಯನಹುಂಡಿ ವಿರಕ್ತಮಠದ ಗೌರಿಶಂಕರ ಸ್ವಾಮೀಜಿ ನಮ್ಮದೇನಿದ್ದರೂ ಬಸವಮಾರ್ಗ, ಬಸವಧರ್ಮ. ಬಸವಮಾರ್ಗವೆಂದರೆ ಮೌಢ್ಯದ ವಿರುದ್ಧ ಹೋರಾಟ. ಬಸವಣ್ಣನವರ ಆದರ್ಶ, ತತ್ವ ಸಿದ್ಧಾಂತ, ಶರಣ ಪರಂಪರೆ, ಲಿಂಗಾಯತ ಧರ್ಮ ಏನೆಂಬುದು ತಿಳಿಸುವುದೇ ಜಾಗತಿಕ ಲಿಂಗಾಯತ ಮಹಾಸಭಾದ ಉದ್ಧೇಶ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೋಗಿ ಇಷ್ಟಲಿಂಗ ದೀಕ್ಷೆ ಮತ್ತು ಲಿಂಗಾಯತ ಧರ್ಮದ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.
ಸಮಾವೇಶ ಉದ್ಘಾಟಿಸಿ ಜೆ.ಎಲ್.ಎಂ. ರಾಷ್ಟ್ರೀಯ ಉಪಾಧ್ಯಕ್ಷ ಜಿ.ಬಿ. ಪಾಟೀಲ ಮಾತನಾಡುತ್ತಾ, ಲಿಂಗಾಯತರಲ್ಲಿ ದೇವರ ಬದಲು ಬಸವಣ್ಣನವರ ಸ್ಮರಣೆಯಾಗಬೇಕು. ಮನೆಯ ಮಾತೆಯರು ಲಿಂಗಾಯತ ರಾಗಬೇಕು. ಅವರು ಲಿಂಗಾಯತರಾದರೆ ಇಡೀ ಕುಟುಂಬವೇ ಲಿಂಗಾಯತರಾದಂತೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ್ದ ಲಿಂಗಾಯತ ಧರ್ಮ ಕಾಯಕ ಸಂಸ್ಕೃತಿಗೆ ಮಹತ್ವ ನೀಡಿದೆ. ದುಡಿದು ತಿನ್ನು, ಇತರರಿಗೂ ಹಂಚು ಎನ್ನುವ ನೀತಿ ಪ್ರತಿಪಾದಿಸಿದೆ. ವಚನ ಸಾಹಿತ್ಯವೇ ನಮ್ಮ ಪವಿತ್ರ ಗ್ರಂಥವಾಗಿದೆ ಎಂದರು. ನಮ್ಮಲ್ಲಿರುವ ಆತ್ಮ ಸಾಕ್ಷಿಯಲ್ಲಿ ನಿಜವಾದ ದೇವರು ಇದ್ದಾನೆ. ದೇವರಿಗಿಂತ ಮೊದಲು ಬಸವಣ್ಣನವರ ಸ್ಮರಣೆಯಾಗಬೇಕು. ಹಾಗಾಗಿ ನಾವು ಮೇಲು ಕೀಳೆಂಬ ಭಾವನೆ ತೊರೆದು ಭಕ್ತಿ ಭಂಡಾರಿ ಬಸವಣ್ಣನವರು ಬೋಧಿಸಿದ ತತ್ವ ದಲ್ಲಿಯೇ ನಡೆಯಬೇಕು ಎಂದು ಹೇಳಿದರು.

ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಮತ್ತು ಬಡ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳನ್ನು ಒದಗಿಸುವುದೇ ಜೆ. ಎಲ್. ಎಮ್. ಮೂಲ ಉದ್ದೇಶ ಎಂದು ಮೈಸೂರು ಜಿಲ್ಲಾಧ್ಯಕ್ಷ ಮಹದೇವಪ್ಪ ತಮ್ಮ ಭಾಷಣದಲ್ಲಿ ಹೇಳಿದರು.
ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮಾನ್ಯತೆ ದೊರಕಬೇಕು ಎಂಬ ನಿಟ್ಟಿನಲ್ಲಿ ಮಹಾಸಭಾ ಹೋರಾಟ ನಡೆಸುತ್ತಿದೆ ಎಂದರು. ರಾಜ್ಯದಲ್ಲಿ 20 ಜಿಲ್ಲಾ ಕೇಂದ್ರಗಳಲ್ಲಿ ನಗರ, ಪಟ್ಟಣ ಹಾಗೂ ಗ್ರಾಮ ಘಟಕಗಳನ್ನು ಆರಂಭಿಸಿದ್ದೇವೆ. 20 ಸಾವಿರ ಸದಸ್ಯರು ನೋಂದಣಿಯಾಗಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ 7 ಜಿಲ್ಲಾ ಘಟಕ ಆರಂಭಿಸಿದ್ದೇವೆ.

ಸಾನಿಧ್ಯ ವಹಿಸಿದ್ದ ಮೈಸೂರು ಹೊಸಮಠದ ಚಿದಾನಂದ ಸ್ವಾಮೀಜಿ ಷಟಸ್ಥಳ ಧ್ವಜಾರೋಹಣ ನೆರವೇರಿಸಿದರು. ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಶರಣರ ವಿಚಾರಗಳನ್ನು ಮಾತನಾಡುವುದೇ ಸೌಭಾಗ್ಯವೆಂದು ಹೇಳಿದರು. ವಚನಗಳ ಮೂಲಕ ನಮ್ಮ ಬಸವಾದಿ ಶರಣರು ಸಮಾನತೆಯ ಬದುಕನ್ನು, ಮೂಢನಂಬಿಕೆ ಇಲ್ಲದೆ ವೈಜ್ಞಾನಿಕ ಬದುಕನ್ನು ಬದುಕಲು ತೋರಿಸಿದವರು ನಮ್ಮ ಬಸವಾದಿ ಶರಣರೆಂದು ನುಡಿದರು.

ಹಿರಿಯೂರು ಪಿ ವಿರುಪಾಕ್ಷಪ್ಪನವರು ವಚನ ಪ್ರಾರ್ಥನೆ ಮಾಡಿದರು, ತೊಟ್ಟವಾಡಿ ಕುಮಾರ ಸ್ವಾಗತ ಮಾಡಿದರು, ತಾಲೂಕು ಅಧ್ಯಕ್ಷರಾದ ಎಂ ರವಿ ತೊಟ್ಟವಾಡಿ ಶರಣು ಸಮರ್ಪಣೆ ಮಾಡಿದರು, ಪೂಜ್ಯಶ್ರೀ ಚಿದಾನಂದ ಸ್ವಾಮಿ ಗಳು ಹೊಸಮಠ ಮೈಸೂರು, ಸೇತುವೆಮಠ ಸ್ವಾಮಿಗಳು ತಿ. ನರಸೀಪುರ, ಟಿ ಎನ್ ನಾಗರಾಜು ತಾಲೂಕು ಕಾರ್ಯದರ್ಶಿಗಳು, ಶಿವಮಲ್ಲಪ್ಪ ಬೆನಕನಹಳ್ಳಿ ತಾಲೂಕು ಘಟಕದ ಉಪಾಧ್ಯಕ್ಷರು, ಶಿವಪ್ರಸಾದ್ ರೈತ ಸಂಘ ತಿ.ನರಸೀಪುರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇದಿಕೆ ಮೇಲೆ 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಯಾಯಿತು.

ಸದಾ ಧರ್ಮ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಇದ್ದರೆ ಈ ಧರ್ಮ ಉಳಿಯಬಲ್ಲದು, ಇಲ್ಲದಿದ್ದರೆ ವೈದಿಕರು ಆಪೋಷನ ಮಾಡಿಬಿಡುತ್ತಾರೆ.