ಗದಗ:
ಜಾಗತಿಕ ಲಿಂಗಾಯತ ಮಹಾಸಭಾ ಗದಗ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾ ಲಿಂಗಾಯತ ಸಮಾವೇಶ, ನಗರದ ತೋಂಟದಾರ್ಯ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಸೆಪ್ಟೆಂಬರ್ 22ರಂದು ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ಸ್ಥಳೀಯ ಸಂಘಟನೆಗಳೊಂದಿಗೆ ಹಲವಾರು ತಾಲೂಕುಗಳಿಂದ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು ೮೦೦ ಕ್ಕೂ ಹೆಚ್ಚು ಶರಣ ಬಂಧುಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.
ಶರಣತತ್ವ ಚಿಂತಕ ಟಿ.ಆರ್. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ,
ಲಿಂಗಾಯತವನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಬಸವಾನುಯಾಯಿಗಳ ಈಗಿನ ತುರ್ತು ಜವಾಬ್ದಾರಿಯಾಗಿದೆ ಎಂದರು.
12ನೇ ಶತಮಾನದಲ್ಲಿ ಶರಣರ ವಿಚಾರಧಾರೆಗಳನ್ನು ಒಪ್ಪದೇ ಹಲವಾರು ಶರಣರನ್ನು ಹತ್ಯೆಗೈದು ವಚನ ಕಟ್ಟುಗಳನ್ನು ನಾಶ ಮಾಡಿ, ಆ ಮೂಲಕ ಶರಣರ ವಿಚಾರಧಾರೆಗಳನ್ನು ಮುಂಬರುವ ಪೀಳಿಗೆಗೆ ಸಿಗದಂತೆ ಮಾಡಲು ಪ್ರಯತ್ನಿಸಿದ ವೈದಿಕ ಮನೋಭಾವದ ಸಂತತಿ ಇನ್ನೂ ಮುಂದುವರೆದಿದ್ದು, ಈಗ ಅವರು ನೇರವಾಗಿ ಲಿಂಗಾಯತರನ್ನು ಎದುರಿಸದೆ, ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎಂಬ ತಂತ್ರ ವನ್ನು ಉಪಯೋಗಿಸುತ್ತಿದ್ದಾರೆ. ಶರಣ ತತ್ವಕ್ಕೆ ದ್ರೋಹ ಬಗೆಯಲೆಂದೇ ಇರುವ ಕೆಲವು ಲಿಂಗಾಯತ ಸ್ವಾಮಿಗಳನ್ನು ಮುಂದು ಮಾಡಿ ಶರಣರ ವಿಚಾರಧಾರೆಗಳಿಗೆ ಕೇಡನ್ನು ಬಯಸುವ ‘ಆಕಳ ಮೋತಿ ಕತ್ತೆ ಒದಿಕೆ’ ಮನೋಭಾವವನ್ನು ಅಳವಡಿಸಿಕೊಂಡಿರುವ ಜನಗಳನ್ನು ಕೂಡಿಸಿಕೊಂಡು ಹೊಸ ತಂತ್ರವನ್ನು ಮಾಡುತ್ತಿದ್ದಾರೆ.
“ನಾವು ಸಂಘಟಿತರಾಗಿ ನಮ್ಮ ಜನಗಳನ್ನು ಜಾಗ್ರತೆ ಮಾಡಿ ಶರಣರ ವಿಚಾರಧಾರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು, ಇಲ್ಲದಿದ್ದರೆ ಮುಂದೊಂದು ದಿನ ಲಿಂಗಾಯತವನ್ನು ಇತಿಹಾಸದ ಪುಟಗಳಲ್ಲಿ ಹುಡುಕಬೇಕಾದೀತು,” ಎಂಬ ಎಚ್ಚರಿಕೆ ಮಾತುಗಳನ್ನಾಡಿದರು.
ಚಿಂತಕರು, ಬಸವಬೆಳವಿಯ ಪೂಜ್ಯ ಶರಣಬಸವ ಸ್ವಾಮಿಗಳು ಉಪನ್ಯಾಸ ನೀಡುತ್ತಾ,
ಲಿಂಗಾಯತ ಧರ್ಮೀಯರಿಗೆ ಗದುಗಿನ ಪೂಜ್ಯ ಲಿಂ. ಡಾ.ಸಿದ್ಧಲಿಂಗ ಸ್ವಾಮಿಗಳ ಹಾಗೂ ಇಳಕಲ್ಲಿನ ಪರಮ ಪೂಜ್ಯ ಲಿಂ. ಡಾ.ಮಹಾಂತಪ್ಪಗಳ ಕೊಡುಗೆಗಳನ್ನು ಸ್ಮರಿಸಿಕೊಂಡು, ವೇದಾಗಮಗಳಿಗೂ ಶರಣರ ವಿಚಾರಧಾರೆಗಳಿಗೂ ಇರುವ ವ್ಯತ್ಯಾಸವನ್ನು ತಿಳಿಸಿದರು. ಶರಣರು ಸುಮಾರು ೫೦೦ಕ್ಕೂ ಹೆಚ್ಚು ವಚನಗಳಲ್ಲಿ ವೇದ ಶಾಸ್ತ್ರ ಪುರಾಣ ಗಳನ್ನು ಅಲ್ಲಗಳೆದಿರುವದು ಕಂಡುಬರುತ್ತದೆಂದು ತಿಳಿಸುತ್ತಾ, ಶರಣರ ವಿಚಾರಧಾರೆಗಳನ್ನು ನಾಶಪಡಿಸಲು ಪ್ರಯತ್ನಿಸಿದವರೆಲ್ಲರೂ ಒಂದು ದಿನ ನಾಶವಾಗುತ್ತಾರೆ. ಆದರೆ ಶರಣರ ವಿಚಾರಧಾರೆಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಯಾಕೆಂದರೆ ಅವು ವಿಶ್ವದ ಶಾಶ್ವತ ಮೌಲ್ಯ ಗಳನ್ನು ಒಳಗೊಂಡಿವೆ ಎಂದರು.
ಶರಣತತ್ವ ಚಿಂತಕ ಜೆ.ಎಸ್. ಪಾಟೀಲ ಮಾತನಾಡುತ್ತ,ಶರಣರ ವಿಚಾರಧಾರೆಗಳನ್ನು ಹೊಂದಿರುವ ಅಮೂಲ್ಯವಾದ ವಚನಗಳನ್ನು ಅವುಗಳ ಮೂಲ ಆಶಯಕ್ಕೆ ವಿರುದ್ದವಾಗಿ ಹೊರಗಿನ ಹಾಗೂ ಒಳಗಿನ ಶರಣ ವಿರೋಧಿ ಮನಸ್ಸುಗಳನ್ನು ಆಶೆ-ಆಮಿಷಗಳಿಗೆ ಬಲಿಯಾಗುವಂತೆ ಮಾಡಿ, ಯಾವ ರೀತಿ ದಾಳಿಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ವಿವರಿಸುತ್ತಾ, ಅವರ ಈ ಹೇಯ ಕಾರ್ಯಕ್ಕೆ ಉತ್ತರ ನೀಡಲು ನಾವುಗಳು ಯಾವ ರೀತಿ ಸಜ್ಜಾಗಬೇಕೆಂದು ತಿಳಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ವಿಶ್ರಾಂತಿ ನ್ಯಾಯಾಧೀಶ ಕೆಂಪಗೌಡ್ರ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಜಾ.ಲಿಂ.ಮಹಾಸಭಾ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ, ಜಿ.ಬಿ.ಪಾಟೀಲ, ಬಸವರಾಜ ರೊಟ್ಟಿ, ಬಸವರಾಜ ಧನ್ನೂರ, ಅಶೋಕ ಬರಗುಂಡಿ, ಗೊಂಗಡಶೆಟ್ಟಿ, ಪ್ರಭುಲಿಂಗ ಮಹಾಗಾಂವಕರ, ಹನುಮೇಶ ಕಲ್ಮಂಗಿ, ರಾಜೇಶ ಸಸಿಮಠ, ಆವರಗೆರೆ ರುದ್ರಮುನಿ, ಬಸವರಾಜ ಬುಳ್ಳಾ, ಅಶೋಕ ಲೋಣಿ, ಸವಿತಾ ನಡಕಟ್ಟಿನ, ಕೆ.ಎಸ್.ಚೆಟ್ಟಿ, ಶೇಕಣ್ಣ ಕವಳಿಕಾಯಿ, ಶ್ರಿದೇವಿ ಶೆಟ್ಟರ, ಗೌರಕ್ಕ ಬಡಿಗಣ್ಣವರ, ಪ್ರಕಾಶ ಅಸುಂಡಿ, ವಿವೇಕಾನಂದಗೌಡ ಪಾಟೀಲ ಮತ್ತೀತರರು ವೇದಿಕೆ ಮೇಲಿದ್ದರು.
ಗದಗ ಬಸವದಳ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯರು ಆರಂಭದಲ್ಲಿ ಧ್ವಜಗೀತೆ ಹಾಗೂ ಕೊನೆಗೆ ಮಂಗಲಗೀತೆ ಹಾಡಿದರು. ಮಕ್ಕಳಿಂದ ವಚನ ನೃತ್ಯ ಜರುಗಿತು.
ಡಂಬಳ-ಗದಗ ಲಿಂಗಾಯತ ಅಧ್ಯಯನ ಸಂಸ್ಥೆಯಿಂದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಶ್ರೀಗುರು ತೋಂಟದಾರ್ಯ ಮಿರ್ಚಿ ಕೇಂದ್ರದಿಂದ ಸಂಜೆ ರುಚಿಯಾದ ಉಪಹಾರ ಸೇವೆ ಜರುಗಿತು.
ಶರಣು ಶರಣಾರ್ಥಿಗಳು 🙏.