ಚಿತ್ರದುರ್ಗ
ಬಹಳ ವರ್ಷಗಳ ಕಾಲದ ಬಳಿಕ ಜಿಲ್ಲೆಯ ಭರಮಸಾಗರದಲ್ಲಿ ಆಯೋಜಿಸಿದ್ದ 9 ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಆರಂಭಗೊಂಡಿತು.
ಭರಮಸಾಗರದಲ್ಲಿರುವ ಭರಮಣ್ಣ ನಾಯಕನ ಕೆರೆಯಲ್ಲಿ ದೋಣಿ ವಿಹಾರ ನಡೆಸುವ ಮೂಲಕ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಇದಕ್ಕೂ ಮೊದಲು ಬೆಳಿಗ್ಗೆ ಸಿರಿಗೆರೆ ಐಕ್ಯಮಂಟಪದಲ್ಲಿ ಶ್ರೀಗಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಭರಮಸಾಗರದತ್ತ ಹೊರಟರು. ಮಾರ್ಗದುದ್ದಕ್ಕೂ 32 ಹಳ್ಳಿಗಳಿಗೆ ಭೇಟಿ ನೀಡಿ ಮುಂದೆ ಸಾಗಿದರು. ಸಂಜೆ 5 ಗಂಟೆಗೆ ಭರಮಸಾಗರದ ಭರಮಣ್ಣನಾಯಕನ ಕೆರೆಯಂಗಳ ತಲುಪಿದರು. ಇಳಿಸಂಜೆಯಲ್ಲಿ ನಡೆದ ದೋಣಿ ವಿಹಾರ ನೋಡುಗರ ಕಣ್ಮನ ಸೆಳೆಯಿತು.

ಸಂಜೆ 6.30ಕ್ಕೆ ಶ್ರೀಗಳನ್ನು ನೂರಾರು ಮಹಿಳೆಯರು ಕುಂಭ, ಹಲವು ಕಲಾತಂಡಗಳ ಸದಸ್ಯರು ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಂಡರು.
ವಚನ ಗೀತೆಗಳ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರು ಸಾಕ್ಷೀಕರಿಸಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಡಾ.ಶ್ರೀಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಚಿವ ಮಧು ಬಂಗಾರಪ್ಪ, ಡಿ.ಸುಧಾಕರ್,ಎಚ್.ಆಂಜನೇಯ, ಶಾಸಕ ಎಂ.ಚಂದ್ರಪ್ಪ, ಹಿರೇಮಗಳೂರು ಕಣ್ಣನ್ ಇತರರಿದ್ದರು.
