ತಾಯಿಯೇ ಮೊದಲ ಗುರು : ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ನಮ್ಮ ದೇಶದಲ್ಲಿ ತಾಯಿಗೆ ಪೂಜ್ಯನೀಯ ಸ್ಥಾನವಿದೆ. ತಾಯಿಯೇ ದೇವರು ಎಂಬ ಸಂಸ್ಕೃತಿ ನಮ್ಮದು. ಪ್ರತಿಯೊಂದು ಮಗುವಿಗೂ ತಾಯಿಯೇ ಮೊದಲ ಗುರು ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೭೨೫ನೇ ಶಿವಾನುಭವದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪ್ರಾಕೃತಿಕವಾಗಿ ಹೆಣ್ಣು ಮಕ್ಕಳಿಗೆ ಪ್ರೀತಿ, ತಾಳ್ಮೆ, ಅಂತಃಕರಣ ಸ್ವಾಭಾವಿಕವಾಗಿ ಬಂದಿರುತ್ತದೆ. ಇಂತಹ ‘ಅವ್ವ’ನ ನೆನಪಿಗಾಗಿ ಬಸವರಾಜ ಹೊರಟ್ಟಿಯವರು ಅವ್ವ ಸೇವಾ ಟ್ರಸ್ಟ ಸ್ಥಾಪಿಸಿ, ಆ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿದ್ದಾರೆ.

ಮಕ್ಕಳಿಗೆ ಸಂಸ್ಕಾರ ಕೊಟ್ಟು ಪೋಷಿಸಿದರೆ ಎಲ್ಲರೂ ಹೊರಟ್ಟಿಯವರಾಗಬಹುದು. ಅವ್ವ ನೀಡುವ ಸಂಸ್ಕಾರ ಬಹುದೊಡ್ಡದು. ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕಾದರೆ ಬಾಲ್ಯದಲ್ಲಿಯೆ ಅವ್ವನ ಪಾತ್ರ ಬಹುಮುಖ್ಯ. ಅವ್ವನ ಕೃಪೆಯಿಂದ ಶಿವಾಜಿ ಒಬ್ಬ ಮಹಾನ್ ಯೋಧನಾದ. ಹೊರಟ್ಟಿಯವರು ೪೮ ವರ್ಷದಿಂದ ವಿಧಾನ ಪರಿಷತ್‌ನಲ್ಲಿ ಸದಸ್ಯರಾಗಿ ಹೊಸ ಇತಿಹಾಸ ಬರೆದಿದ್ದಾರೆ. ಅವ್ವ ಟ್ರಸ್ಟ್ ಮೂಲಕ ವಿಭಿನ್ನ ಕಾರ್ಯಕ್ರಮಗಳು ಜರುಗುತ್ತಲಿದ್ದು, ಶಶಿ ಸಾಲಿ, ಡಾ. ಬಸವರಾಜ ಧಾರವಾಡ ಅವರ ಪರಿಶ್ರಮ ಸ್ಮರಣೀಯ ಎಂದು ಆಶೀರ್ವಚನದಲ್ಲಿ ಹೇಳಿದರು.

ಅವ್ವ ಸೇವಾ ಟ್ರಸ್ಟಿನ ಕಾರ್ಯದರ್ಶಿ ಶಶಿ ಸಾಲಿ ಮುಖ್ಯಅತಿಥಿಗಳಾಗಿ ಮಾತನಾಡಿ, ಪ್ರತಿಯೊಬ್ಬರು ತಂದೆ ತಾಯಿಯ ಮಹತ್ವ ಅರಿಯಬೇಕು. ಇತ್ತೀಚೆಗೆ ಹೆತ್ತ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅವ್ವ ಸೇವಾ ಟ್ರಸ್ಟ್ ನೊಂದವರ ಆಸರೆಯಾಗಿದೆ. ಮೊದಲಸಲ ವಿಧಾನ ಪರಿಷತ್‌ಗೆ ಆಯ್ಕೆಯಾದ ಸಂದರ್ಭದಲ್ಲಿ ತಾಯಿ ಗುರವ್ವ ಅವರ ಅಪೇಕ್ಷೆಯಂತೆ ಬಸವರಾಜ ಹೊರಟ್ಟಿಯವರು ನೊಂದವರಿಗೆ, ಶಿಕ್ಷಕರಿಗೆ, ಕಾಯಕಜೀವಿಗಳಿಗೆ, ಸಮಾಜಕ್ಕೆ ಶಕ್ತಿಯಾಗಿ ನಿಂತಿದ್ದಾರೆ ಎಂದರು.

ಅವ್ವ ಸೇವಾ ಟ್ರಸ್ಟಿನ ಗದಗ ಸಂಚಾಲಕರಾದ ಡಾ. ಬಸವರಾಜ ಧಾರವಾಡ ಅವರು ಮಾತನಾಡಿ, ಅವ್ವ ಸೇವಾ ಟ್ರಸ್ಟಿನ ಧ್ಯೇಯೋದ್ದೇಶಗಳನ್ನು ತಿಳಿಸುತ್ತಾ, ಅವ್ವನ ಹೆಸರಿನಲ್ಲಿ ಪ್ರತಿವರ್ಷ ವಿಶೇಷ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ೧೦೦ ಕ್ಕೂ ಅಧಿಕ ದಿವ್ಯಾಂಗರಿಗೆ ಟ್ರೆöÊಸಿಕಲ್‌ಗಳನ್ನು ನೀಡಿದೆ. ೮೦ ಅಂಧ ಮಕ್ಕಳಿಗೆ ಧನಸಹಾಯ ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ ೧೦೦೦ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಿದೆ. ಬೆಳಗಾವಿ ವಿಭಾಗ ಮಟ್ಟದ ೨೬ ಸಾವಿರ ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೆ ಅವ್ವನ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಆಯ್ದ ಪ್ರಬಂಧಗಳನ್ನು ‘ಅವ್ವ’ ಎಂಬ ಗ್ರಂಥಗಳಲ್ಲಿ ಪ್ರಕಟಿಸಿ ಲೋಕಾರ್ಪಣೆ ಮಾಡಲಾಗಿದೆ. ಗದಗ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆದು ಮಾದರಿ ಶಾಲೆಯನ್ನಾಗಿ ಅಭಿವೃದ್ದಿಪಡಿಸಲಾಗಿದೆ.

ಬಸವರಾಜ ಹೊರಟ್ಟಿಯವರ ಹುಟ್ಟೂರು ಯಡಹಳ್ಳಿಯಲ್ಲಿ ಸ್ವಂತ ೭ ಎಕರೆ ಜಮೀನಿನಲ್ಲಿ ತಂದೆ ಶಿವಲಿಂಗಪ್ಪ ಅವರ ಹೆಸರಿನಲ್ಲಿ ಹೈಟೆಕ್ ಶಾಲೆ ನಿರ್ಮಿಸಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಡಿ.ಸಿ.ಪಾವಟೆ ಬಿ.ಎಡ್.ಕಾಲೇಜಿನ ಡಾ. ಗಿರಿಜಾ .ಎಸ್. ಹಸಬಿ ಮಾತನಾಡಿ, ಅವ್ವ ಸಂಸ್ಕೃತಿಯ ಪ್ರತೀಕ, ತ್ಯಾಗದ ಸಂಕೇತ, ಒಳ್ಳೆಯ ಗುಣ ನೀಡುವ ಕೆಲಸ ಮಾಡುತ್ತಾಳೆ. ಆಕೆ, ಧೀಶಕ್ತಿ, ಧೈರ್ಯ, ಪಾವಿತ್ರ‍್ಯತೆಯ ಧ್ಯೋತಕ. ಅಂಧ:ಕಾರವನು ಕಳೆದು, ಬೆಳಕನ್ನು ಕೊಡುವ ಕೆಲಸ ಮಾಡುತ್ತಾಳೆ. ತಾಯಿ ದೇವರಾಗಿರಬಹುದು. ದೇವರು ತಾಯಿಯಾಗಲಾಗದು. ಅವ್ವನ ನೆನಪಿಸುವ ಹಾಗೆ ಹೊರಟ್ಟಿ ಸಾಹೇಬರು ಮಾದರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

ಶ್ರೀನಿವಾಸ ಕುಲಕರ್ಣಿ ತುಂಬಾ ಸುಂದರವಾಗಿ ಅವ್ವನ ಕುರಿತು ಹಾಡುಗಳನ್ನು ಹಾಡಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಸಂಗೀತ ಸೇವೆ ನಡೆಸಿಕೊಟ್ಟರು. ಚಂದನ .ಕೆ. ಬಳಿಗೇರ ಧರ್ಮಗ್ರಂಥ ಪಠಣ ಮಾಡಿದರೆ ಭಾಗ್ಯಶ್ರೀ ಕೆ ಹರ್ಲಾಪೂರ ವಚನ ಚಿಂತನ ಮಾಡಿದರು. ಅವ್ವ ಸೇವಾ ಟ್ರಸ್ಟಿನ ಗದಗದ ಸಹ ಸಂಚಾಲಕ ಎಸ್.ಎಂ. ಅಂಗಡಿ ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಹಾಗೂ ಕಾರ್ಯದರ್ಶಿ ವೀರಣ್ಣ ಗೋಟಡಕಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ.ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

Share This Article
Leave a comment

Leave a Reply

Your email address will not be published. Required fields are marked *