ತೇರದಾಳ
ಶೂನ್ಯಸಿಂಹಾಸನಾಧೀಶ್ವರ ಅಲ್ಲಮಪ್ರಭುದೇವರ “ಪ್ರಭು ಪರಂಜ್ಯೋತಿ” ಯಾತ್ರೆ ಬಳ್ಳಿಗಾವಿಯಿಂದ ಭವ್ಯ ಮೆರವಣಿಗೆಯ ಮೂಲಕ ತೇರದಾಳ ಪಟ್ಟಣಕ್ಕೆ ಸೋಮವಾರ ತಲುಪಿತು.
ಚಿಮ್ಮಡ ಗ್ರಾಮದಿಂದ ಹೊರಟ ಮೆರವಣಿಗೆಯು ಹೊಸೂರ, ಸಾಲಿಮನಿ, ರಬಕವಿ, ಹನಗಂಡಿ ಮುಖ್ಯರಸ್ತೆಯ ಮಾರ್ಗವಾಗಿ ಸಂಭ್ರಮದಿಂದ ಪ್ರಭುವಿನ ಕ್ಷೇತ್ರವಾದ ತೇರದಾಳ ಪ್ರವೇಶಿಸಿತು.
ಮೆರವಣಿಗೆಯ ಸಾನಿಧ್ಯವನ್ನು ಹಂದಿಗುಂದದ ಶಿವಾನಂದ ಶ್ರೀ, ಶೇಗುಣಸಿಯ ಮಹಾಂತ ಪ್ರಭುಶ್ರೀ, ಚಿಮ್ಮಡದ ಪ್ರಭುಸ್ವಾಮೀಜಿ, ತೇರದಾಳದ ಗಂಗಾಧರದೇವರು, ಬನಹಟ್ಟಿ ಶರಣಬಸವ ಶಿವಾಚಾರ್ಯರು ವಹಿಸಿಕೊಂಡು ಪಾದಯಾತ್ರೆಯಲ್ಲಿ ಭಾಗಿಯಾದರು.
ದಾರಿಯುದ್ದಕ್ಕೂ ನಗರ-ಗ್ರಾಮಗಳ ಜನ ಭವ್ಯಮೆರವಣಿಗೆಯನ್ನು ಸಂಭ್ರಮದಿಂದ ಸ್ವಾಗತಿಸಿದರು. ಕರಡಿ ಮಜಲು, ನಗಾರಿ, ಕೈಪೆಟ್ಟು, ಸಾಂಬಾಳ ಸೇರಿದಂತೆ ಹತ್ತು ಹಲವಾರು ವಾದ್ಯಮೇಳಗಳು ಮೆರವಣಿಗೆಗೆ ಕಳೆಕಟ್ಟಿದವು.

ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಆರತಿ ಹಿಡಿದು, ಕುಂಭಹೊತ್ತು ಪ್ರಭುವಿನ ಓಂಕಾರ ಧ್ಯಾನ ಮಾಡುತ್ತಾ ಸಾಗಿದರು.
ಪ್ರಭುವಿನ ಪಲ್ಲಕ್ಕಿ ಉತ್ಸವ, ಪರಮನಿರಂಜನ ಜ್ಞಾನಿ, ಪ್ರಭು ಜ್ಯೋತಿಯ ಭವ್ಯ ಅಲಂಕಾರಿಕ ವಾಹನ, ಹಾಗೂ ಐವತ್ತಕ್ಕೂ ಅಧಿಕ ಚಕ್ಕಡಿಗಳಲ್ಲಿ 12ನೇ ಶತಮಾನದ ಅನುಭವಮಂಟಪದ ವಚನಕಾರರ ಭಾವಚಿತ್ರಗಳ ಭವ್ಯ ಮೆರವಣಿಗೆ ಎಲ್ಲರ ಗಮನಸೆಳೆಯಿತು. ಅಂದಿನ ಶರಣರ ಕಾಲದ ಉತ್ಸವವನ್ನು ಮರುಕಳಿಸುವಂತೆ ಮಾಡಿತು.
ದಾರಿಯುದ್ದಕ್ಕೂ ಪಾದಯಾತ್ರಾರ್ಥಿಗಳಿಗಾಗಿ ನೀರು, ಪಾನಕ, ಅಂಬಲಿ, ಉಪಹಾರ, ಸಿಹಿತಿಂಡಿಗಳ ಪ್ರಸಾದ ಸೇರಿದಂತೆ ವಿವಿಧ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಹಿಳೆಯರು, ಚಿಕ್ಕಮಕ್ಕಳು ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಭಕ್ತರು, 05ಕಿ.ಮೀ. ಉದ್ದದ ಮೆರವಣಿಗೆಯಲ್ಲಿ ಭಾಗಿಯಾಗಿ ಅಲ್ಲಮಪ್ರಭುವಿನ ಮಹಾ ಉತ್ಸವಕ್ಕೆ ಸಾಕ್ಷಿಯಾದರು.
ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ತೇರದಾಳ ಶಾಸಕ ಸಿದ್ದು ಸವದಿ, ಗುಹೇಶ್ವರ ಪುರಾಣಿಕಮಠ, ಸಿದ್ದು ಕೊಣ್ಣೂರ ಮತ್ತಿತರರು ಪಲ್ಲಕ್ಕಿ ಹೆಗಲ ಮೇಲೆ ಹೊತ್ತು ಸಾಗಿ ತಮ್ಮ ಭಕ್ತಿ ತೋರಿದರು.
ತೇರದಾಳ ನಗರ ಸುತ್ತಮುತ್ತಲಿನ ಗ್ರಾಮಸ್ಥರು ಅಷ್ಟೇ ಅಲ್ಲದೇ ಇತರ ಜಿಲ್ಲೆಗಳ ಮತ್ತು ಮಹಾರಾಷ್ಟ್ರದ ಭಕ್ತರೊ ಭಾಗಿಯಾಗಿದ್ದರು.

ಊರು, ಗ್ರಾಮಗಳ ಮನೆ-ಮನೆಗಳ ಮುಂದೆ ಪೂಜೆ, ಆರತಿ ಮಾಡಿ, ಹೂಮಳೆಗರೆದು ಜ್ಯೋತಿಯನ್ನು ಶೃದ್ಧಾಭಕ್ತಿಯಿಂದ ಬರಮಾಡಿಕೊಂಡರು.
ಅಲ್ಲಮಪ್ರಭು ಪರಂಜ್ಯೋತಿಯನ್ನು ಅಲ್ಲಮ ಪ್ರಭುಗಳ ಜನ್ಮಸ್ಥಳವಾದ ಶಿವಮೊಗ್ಗ ಜಿಲ್ಲೆ, ಬಳ್ಳಿಗಾವಿಯಿಂದ ಚಿಮ್ಮಡಗ್ರಾಮಕ್ಕೆ ತರಲಾಗಿತ್ತು.
🙏🙏