ತೇರದಾಳ
ಪಟ್ಟಣದಲ್ಲಿ ಅಕ್ಟೋಬರ್ 14ರಿಂದ ನಡೆಯುತ್ತಿರುವ ಬಸವ ಪುರಾಣ ಪ್ರವಚನದ ಅಂಗವಾಗಿ ನಡೆಯುತ್ತಿರುವ ನಿತ್ಯ ದಾಸೋಹಕ್ಕೆ ಮುಸ್ಲಿಂ ಬಾಂಧವರು 5 ಲಕ್ಷ ರೂಪಾಯಿ ದೇಣಿಕೆ ನೀಡಿದ್ದಾರೆ.
ಈ ಹಣದ ನೆರವಿನಿಂದ ಮಂಗಳವಾರ ಸಂಜೆ ಸಹಸ್ರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಜರುಗಿತು.
ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭು ದೇವರ ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ನಿತ್ಯ ಬಸವ ಪುರಾಣ ಪ್ರವಚನ ನಡೆಯುತ್ತಿದೆ. ಪ್ರತಿದಿನ ಅನ್ನಪ್ರಸಾದ ವ್ಯವಸ್ಥೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ದೇಣಿಗೆ ಸಲ್ಲಿಸಲು ಭಕ್ತರು ಮುಂದೆ ಬರುತ್ತಿದ್ದಾರೆ.
ಮುಸ್ಲಿಂ ಸಮಾಜದ ಮುಖಂಡರಾದ ಮಾಶುಂ ಇನಾಮದಾರ, ಅಲ್ಲಾಭಕ್ಷ ಅಲಾಸ, ದಸ್ತಗೀರ ತಾಂಬೋಳಿ, ಮುನೀರ ಮೊಮೀನ್, ಮಹಮ್ಮದ ಜಮಖಂಡಿ, ಇಮ್ತಿಯಾಜ ಜಮಾದಾರ, ಹಾಫೀಜ್ ಮೌಲಾಅಲಿ, ಇಸಾಕ್ ಇನಾಮದಾರ್, ಅಲ್ತಾಫ್ ಹನಗಂಡಿ ಹಣ ಸಂಗ್ರಹಿಸಿ ದೇಣಿಗೆ ನೀಡಿದರು. ಪ್ರವಚನಕಾರರಾದ ಶೇಗುಣಸಿಯ ಮಹಾಂತ ಪ್ರಭು ಅವರ ಸಮ್ಮುಖದಲ್ಲಿ ದೇವಸ್ಥಾನ ಸಮಿತಿಯ ಜಗದೀಶ ಗುಡಗುಂಟಿ, ಬಸವರಾಜ ಬಾಳಿಕಾಯಿ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಪ್ರವಚನದ ದಾಸೋಹಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಾಗೂ ಬೆಳಗಾವಿ ಜಿಲ್ಲೆಯ ಕೆಲವು ಹಳ್ಳಿಗಳ ಭಕ್ತರು ರೊಟ್ಟಿ ಸೇರಿದಂತೆ ದವಸ ಧಾನ್ಯ ಹಾಗೂ ದೇಣಿಗೆ ನೀಡುತ್ತಿದ್ದು, ಪ್ರತಿದಿನ 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರು ತರಹೇವಾರಿ ಪ್ರಸಾದ ಸವಿಯುತ್ತಿದ್ದಾರೆ.
ಈಗಾಗಲೇ ಪಟ್ಟಣದ ಕಲ್ಲಟ್ಟಿ, ದೇವರಾಜ ನಗರ, ಬಸವ ಕಾಲೋನಿ ಭಕ್ತರು ರೊಟ್ಟಿ ಸೇವೆ ಸಲ್ಲಿಸಿದ್ದಾರೆ. ಗುಮ್ಮಟ ಗಲ್ಲಿಯ ಪಂಚಮಸಾಲಿ ಸಮಾಜದ ಭಕ್ತರು 7 ಕ್ವಿಂಟಲ್‌ನಷ್ಟು ಹೋಳಿಗೆ, ಗೋಲಬಾವಿ ಗ್ರಾಮದ ಭಕ್ತರು 5 ಕ್ವಿಂಟಲ್ ಜಿಲೇಬಿ ಹಾಗೂ ರೊಟ್ಟಿ ಸೇವೆ, ಪಟ್ಟಣದ ಮಾತೆಯರು 1 ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆ, ಕುಡಚಿ ರಸ್ತೆಯ ನಾಲ್ಕನೇ ಕಾಲುವೆಯ ಭಕ್ತರು 7.5 ಕ್ವಿಂಟಲ್ ತುಪ್ಪ, ಸಸಾಲಟ್ಟಿ ಭಕ್ತರು 6 ಟನ್ ಮಾದಿಲಿ ಸೇವೆ, ಚಿಮ್ಮಡದ ಭಕ್ತರು 50 ಟ್ರ್ಯಾಕ್ಟರ್ಗಳಲ್ಲಿ ಕರಿದ ಕಡಬು, ಬೆಳಗಾವಿ ಜಿಲ್ಲೆಯ ಶೇಗುಣಸಿಯ ಭಕ್ತರು 1,11,000ದಷ್ಟು ಶೇಂಗಾ ಉಂಡಿ, ಸತ್ತಿ ಗ್ರಾಮದ ಭಕ್ತರು ರೊಟ್ಟಿ ಸೇರಿದಂತೆ ಹಲವು ಸಲ್ಲಿಸಿದ್ದಾರೆ. ಇದಲ್ಲದೆ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ಲಕ್ಷಗಟ್ಟಲೇ ನಗದು ರೂಪದ ದೇಣಿಗೆ ಸಲ್ಲಿಸಿದ್ದಾರೆ. ಇನ್ನೂ ಕೆಲವು ಗ್ರಾಮದವರು ಪ್ರಸಾದ ಸೇವೆಗೆ ಸಂಕಲ್ಪ ಮಾಡಿದ್ದು ಅವರ ಸರದಿಗಾಗಿ ಕಾಯುತ್ತಿದ್ದಾರೆ.
ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಸಮಿತಿಯವರು ಆಯೋಜನೆ ಮಾಡಿದ್ದು, ಹಲವು ಸಮಿತಿಗಳವರು ಹಗಲಿರುಳು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.
ಇವನಾರವ ಎನ್ನದೆ ಇವ ನಮ್ಮವ ತತ್ವ ಸವ೯ರನ್ನು ಒಳಗೊಂಡ ಅಲ್ಲಮ ಪ್ರಭುಗಳ ಜಾತ್ರೆ ನಾಡಿಗೆ ಮಾದರಿಯಾಗಿದೆ ದಾಸೋಹವನ್ನು ನೀಡುತ್ತಿರುವ ಮುಸ್ಲಿಮ ಭಾಂಧವರಿೂ ಶರಣುಗಳು🙏🙏
Happy
Shree Bevura. You are wrong. This programme is RSS sponsored one. It is not Basava based programme.