ತಿಂಗಳ ಬಸವ ಬೆಳಕು ಕಾರ್ಯಕ್ರಮದಲ್ಲಿ ಚೆನ್ನಬಸವಣ್ಣನವರ ಸ್ಮರಣೆ

ಶಹಾಪುರ

ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ ನಂತರ ಕಲ್ಯಾಣದಲ್ಲಿ ದಂಡನಾಯಕರಾಗಿ ಮುಂದುವರೆದರು. ಶರಣರು ಬರೆದ ವಚನಗಳನ್ನು ಸ್ಥಲ ಕಟ್ಟುಗಳಲ್ಲಿ ವಿಂಗಡಣೆ ಮಾಡಿ ಅವೆಲ್ಲವನ್ನು ಸಂರಕ್ಷಿಸಿದ ಕೀರ್ತಿ ಚೆನ್ನಬಸವಣ್ಣನವರಿಗೆ ಸಲ್ಲುತ್ತದೆ ಎಂದು ಬಸವವಾದಿ ಸೀತಾರಾಮ ಚವ್ಹಾಣ ನುಡಿದರು.

ಸ್ಥಳೀಯ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ, ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು ೧೨೦ ರ ಕಾರ್ಯಕ್ರಮದಲ್ಲಿ ಷಟಸ್ಥಲ ಜ್ಞಾನಿ ಚೆನ್ನಬಸವಣ್ಣನವರ ಸ್ಮರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅರಿವಿಂಗೆ ಹಿರಿದು ಕಿರಿದುಂಟೆ ? ಎಂಬ ವಿಷಯ ಕುರಿತು ಮಾತನಾಡಿದರು.

ಲಿಂಗಾಯತರಲ್ಲಿಯ ಪೂಜೆ ತುಂಬಾ ವಿಭಿನ್ನವಾದುದು. ರೂಪ ಇರುವಂಥದ್ದಕ್ಕೆ ಒಂದಿಲ್ಲ ಒಂದು ದಿನ ಅಳಿವಿದೆ. ನಿರೂಪಕ್ಕೂ ಕೊನೆ ಇದೆ. ಆದರೆ ಅರಿಯಬಾರದ ಲಿಂಗವನು ಅರಿವಂತೆ ಮಾಡಿಕೊಟ್ಟ ಶ್ರೀಗುರು ಬಸವಣ್ಣ ಎರಡನ್ನೂ ಅರಿವಂತೆ ಪೂಜಿಸಬೇಕು ಎಂದು ತಿಳಿಸಿದ ಮಹಾನ್ ವ್ಯಕ್ತಿ ಎಂದು ಹೇಳಿದರು.

ಅಕ್ಕನಾಗಮ್ಮ ತಾಯಿ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರಂಥ ಅಮೂಲ್ಯ ರತ್ನವನ್ನು ಜಗತ್ತಿಗೆ ಕೊಟ್ಟಳು. ಮರ್ತ್ಯಲೋಕದ ಮಹಾಮನೆ ಹಾಳಾಗಬಾರದೆಂದು, ಅಸಂಖ್ಯಾತ ಶಿವಗಣಂಗಳಿಗೆ ಜ್ಞಾನದ ಉದಕವನ್ನು ಎರೆದರು. ಭಕ್ತರ ಮನದ ಕತ್ತಲೆಯ ಕಳೆದು ಜ್ಞಾನದ ಬೆಳಕನ್ನು ನೀಡಿ, ಅವರೆಲ್ಲರಿಗೂ ಮುಕ್ತಿಯ ಪದವಿಯನ್ನು ಕರುಣಿಸಿದರು. ಭವ ಬಂಧನದಲ್ಲಿ ತೊಳಲಾಡುತ್ತಿದ್ದ ಜನರೆಲ್ಲರಿಗೂ ಬದುಕಿನ ರಹಸ್ಯ ತಿಳಿಸಿದ ಮಹಾತ್ಮ ಎಂದು ಮಾರ್ಮಿಕವಾಗಿ ತಿಳಿಸಿದರು.

ಅದ್ಧೂರಿಯ ಮದುವೆಗಳಿಂದ ಯಾವ ಸಾಧನೆಯೂ ಆಗುವುದಿಲ್ಲ. ಸರಳವಾಗಿ ಮದುವೆಯಾಗಿ ಒಳ್ಳೆಯ ಜೀವನ ನಡೆಸುವಂತಾಗಬೇಕು. ಮದುವೆ ಮಾಡಿ ಸಾಲಕ್ಕೆ ಗುರಿಯಾಗಬಾರದು. ಆಡಂಬರದ ಮದುವೆಗಳಿಂದ ಯಾವ ಸಂದೇಶವನ್ನು ಸಮಾಜಕ್ಕೆ ನೀಡುವುದು ಸಾಧ್ಯವಿಲ್ಲ. ಅಲ್ಲದೆ ಅರ್ಥವಿಲ್ಲದೆ ಯಾರ ಕೈಯಿಂದಲಾದರೂ ನಾವು ಮಾಡಿಸುವ ಪೂಜೆ ವ್ಯರ್ಥ. ನಮ್ಮ ಪೂಜೆಯನ್ನು ನಾವೆ ಮಾಡಿಕೊಳ್ಳಬೇಕು. ನಮ್ಮ ದೇವರಿಗೆ ನಾವೇ ಕೈಯಾರೆ ಪೂಜಿಸಿದಾಗಲೆ ಫಲ ಸಾಧ್ಯವೆಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ನಾರಾಯಣಚಾರಿ ಸಗರ ಬಸವಣ್ಣನವರು ಜಗತ್ತಿಗೆ ಅತ್ಯದ್ಭುತವಾದ ಸಂದೇಶ ನೀಡಿದ ಮಹನೀಯರಾಗಿದ್ದಾರೆ. ಅವರು ಬದುಕಿ ಬೋಧಿಸಿದ ಜೀವನ ಮೌಲ್ಯಗಳು ಸದಾಕಾಲ ಅನುಸರಿಸುವಂಥವು. ಅವರೊಂದು ಅನರ್ಘ್ಯ ರತ್ನ. ಪ್ರೀತಿ ಪ್ರೇಮ ವಿಶ್ವಾಗಳಿಂದ ಪರಸ್ಪರರು ಬದುಕಿದರೆ ಇಡೀ ಜಗತ್ತು ಒಂದಾಗಿ ಹೋಗುತ್ತದೆ ಎಂಬುದಕ್ಕೆ ಬಸವಣ್ಣನವರ ವಚನಗಳು ಕಾರಣವಾಗಿವೆ.

ಧರ್ಮದ ಆಚರಣೆಗಳು ಮನೆಯ ಹೊಸ್ತಿಲ ಒಳಗೆ ಇರಬೇಕು. ಇನ್ನೊಬ್ಬರನ್ನು ಘಾಸಿಗೊಳಿಸುವ ಧಾರ್ಮಿಕ ಆಚರಣೆಗಳು ಸಲ್ಲವು. ಮನುಷ್ಯ ಧರ್ಮವನ್ನು ನಾವೆಲ್ಲರು ಪಾಲಿಸಿಕೊಂಡು ಹೋದರೆ ಎಲ್ಲರಿಗೂ ಒಳಿತಾಗುತ್ತದೆ ಎಂದು ಸಭೆಗೆ ಮನವರಿಕೆ ಮಾಡಿಕೊಟ್ಟರು.

ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪಡೆದ ನಿವೃತ್ತ ಅಧಿಕಾರಿ ಕೆಂಚಪ್ಪ ನಗನೂರ ಅವರನ್ನು ಸನ್ಮಾನಿಸಲಾಯಿತು.

Share This Article
Leave a comment

Leave a Reply

Your email address will not be published. Required fields are marked *