ಬಸವಕಲ್ಯಾಣ
ತ್ರಿಪುರಾಂತಕ ಕೆರೆಯ ಹೆಸರಿನ ಬದಲಾವಣೆಗೆ ಇಳಿದದ್ದು ಖಂಡನೀಯ. ಒಂದು ವೇಳೆ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಎಚ್ಚರಿಸಿದರು.
ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯಲ್ಲಿ ೨೦೨೫ ನೇ ಸಾಲಿನ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ಬಸವಣ್ಣನವರು ಅಖಂಡ ಸಮಾಜ ಜೋಡಿಸುವ ಕಾರ್ಯ ಮಾಡಿದ್ದಾರೆ. ಸಮಾಜದಲ್ಲಿನ ಜಾತಿ, ಅಸ್ಪೃಶ್ಯತೆ, ಮೌಢ್ಯಗಳನ್ನು ತೊಲಗಿಸಿ ಸಮಸಮಾಜ ನಿರ್ಮಾಣ ಮಾಡಲು ಅನೇಕ ಶರಣರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. ಅವರ ಬಲಿದಾನ ಅಪೂರ್ವವಾದದ್ದು, ಅವರ ತ್ಯಾಗ ನಮ್ಮೊಳಗೆ ಇಳಿಯಬೇಕಾಗಿದೆ.

ಶರಣರ ಬಲಿದಾನ ಕೇವಲ ಘಟನೆಯಲ್ಲ. ಬದಲಾಗಿ ಅವರು ಸಮಾಜಕ್ಕಾಗಿ ನೀಡಿದ ಒಟ್ಟು ಹೋರಾಟದ ಪ್ರತೀಕವಾಗಿದೆ.
ಲಿಂಗಾಯತರಿಗೆ ಹರಳಯ್ಯ ಮಧುವರಸರು ಹುತಾತ್ಮರಾದ ದಿನ ಅತ್ಯಂತ ದೊಡ್ಡ ಹಬ್ಬ. ಈ ದಿನ ಇಡೀ ಜಗತ್ತಿಗೆ ತೋರಿಸಬೆಕು, ಎಂದರು.
ಸಾನಿಧ್ಯ ವಹಿಸಿದ ನಿಡಸೋಸಿ ಜಗದ್ಗುರು ಸಿದ್ಧಸಂಸ್ಥಾನ ಮಠದ ಪೂಜ್ಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಬಸವಾದಿ ಶರಣರು ನಡೆದಾಡಿದ ಈ ನೆಲ ಅತ್ಯಂತ ಪವಿತ್ರವಾಗಿದೆ. ಈ ನೆಲದ ದರ್ಶನ ಪಡೆದರೆ ನಮ್ಮಲ್ಲಿ ಶಕ್ತಿ ಬರುತ್ತದೆ.
ಶರಣರ ವಚನಗಳು ನಮ್ಮಗೆ ಶಕ್ತಿ ಕೊಡುತ್ತವೆ. ಅವುಗಳನ್ನು ಇತರೆ ಭಾಷೆಗಳಿಗೆ ಭಾಷಾಂತರಿಸಿ ಜಗತ್ತಿನೆಲ್ಲೆಡೆ ಪ್ರಸಾರವಾಗಬೇಕಾಗಿದೆ ಎಂದರು.
ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಯಾಣ ಕ್ರಾಂತಿಯ ಕಾಲದಲ್ಲಿ ಅನೇಕ ಶರಣರು ಮಾನವೀಯ ತತ್ವಗಳಿಗಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. ಅವರಲ್ಲಿ ಹರಳಯ್ಯ ಮಧುವರಸರ ಹೆಸರು ಮುಂಚೂಣಿಯಲ್ಲಿದೆ. ತ್ಯಾಗ-ಬಲಿದಾನದ ಭೂಮಿ ಬಸವಕಲ್ಯಾಣ. ಹುತಾತ್ಮ ಶರಣರ ಸ್ಮರಣೆಯನ್ನು ಹೃದಯ ತುಂಬಿ ಮಾಡಿ ಕಲ್ಯಾಣ ಕ್ರಾಂತಿಯ ತತ್ವಗಳನ್ನು ಮನ ಮನಕ್ಕೆ ಮುಟ್ಟಿಸುತ್ತೇವೆ ಎಂಬ ಸಂಕಲ್ಪ ಮಾಡಿ ಶರಣರ ಇತಿಹಾಸವನ್ನು ಜನ ಮನದಲ್ಲಿ ಬಿತ್ತಿ ಬೆಳೆಯಬೇಕು ಎಂದರು.

ಬೀದರ ಲೋಕಸಭಾ ಸದಸ್ಯ ಸಾಗರ ಖಂಡ್ರೆ ಉದ್ಘಾಟಿಸಿ, ಯುವಕರು ದುರಾಸೆಯಿಂದ ದಾರಿ ತಪ್ಪುತ್ತಿದ್ದಾರೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದಿರಲೂ ಬಸವತತ್ವದ ಕಡೆ ಬರಬೇಕು. ಪ್ರತಿದಿನ ಇಷ್ಟಲಿಂಗಪೂಜೆ, ವಚನಗಳ ಅಧ್ಯಯನ ಮಾಡಬೇಕು ಎಂದರು.
ಪೌರಾಡಳಿತ ಸಚಿವ ರಹೀಮಖಾನ ಮಾತನಾಡಿ, ಇದು ಬಸವಣ್ಣನವರ ನಾಡು ಇಲ್ಲಿ ಬಸವಾದಿ ಶರಣರ ವಚನಗಳ, ತತ್ವಗಳ ಕಾರ್ಯಗಳು ನಡೆಯಬೇಕು. ಇಲ್ಲಿಂದ ಬಸವತತ್ವ ಇಡೀ ವಿಶ್ವಕ್ಕೆ ಮುಟ್ಟಿಸುವಂತಹ ಕಾರ್ಯಗಳಾಗಬೇಕು ಎಂದರು.
ಹುಲಸೂರಿನ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಂಡು ಮಾತನಾಡಿ, ಬಸವಣ್ಣನವರು ನಮ್ಮ ಧರ್ಮಗುರು, ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ ಇಷ್ಟಲಿಂಗದ ಜನಕ ಬಸವಣ್ಣ. ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕವಾಗಿ ಮಾನ್ಯತೆ ದೊರೆಯುತ್ತದೆ ಎಂದರು.
ಪಾಂಡೋಮಟ್ಟಿ ವಿರಕ್ತಮಠದ ಪೂಜ್ಯ ಗುರುಬಸವ ಮಹಾಸ್ವಾಮಿಗಳು, ಕೇರಳ ಬಸವ ಸಮಿತಿ ಅಧ್ಯಕ್ಷ ಕೆ. ಪ್ರಸನ್ನಕುಮಾರ ಮಾತನಾಡಿದರು.

ಪೂಜ್ಯ ಬಸವಕುಮಾರ ಸ್ವಾಮಿಗಳು ಅಲ್ಲಮಗಿರಿ, ಅನಿಮಿಷಾನಂದ ಸ್ವಾಮಿಗಳು, ಪೂಜ್ಯ ಬಸವಪ್ರಭು ಸ್ವಾಮಿಗಳು, ಶಿವಾನಂದ ದೇವರು, ಡಾ. ವಿಜಯಶ್ರೀ ಬಶೆಟ್ಟಿ, ನಿವೃತ್ತ ಡೀನ ಅಮರನಾಥ ಸೋಲಪುರೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಜಾಲಿಂಮ ತಾಲೂಕಾಧ್ಯಕ್ಷ ಬಸವರಾಜ ತೊಂಡಾರೆ, ಉದ್ಯಮಿ ಕಾವೇರಿ ಪಾಟೀಲ, ಶಿವರಾಜ ನರಶೆಟ್ಟಿ, ವಿಶ್ವನಾಥ ಕಾಜಿ, ನಿರ್ಮಲಾ ಶಿವಣಕರ, ಶಾಮಾ ರಗಟೆ, ಸುಲೋಚನಾ ಗುದಗೆ ಉಪಸ್ಥಿತರಿದ್ದರು. ಬಸವರಾಜ ಬಾಲಿಕಿಲೆ ಸ್ವಾಗತಿಸಿದರೆ, ಜ್ಯೋತಿ ತೂಗಾಂವೆ ನಿರೂಪಿಸಿದರು.
ಎಳೆಹೂಟೆಯ ಮೆರವಣಿಗೆ:
ನಗರದ ಐತಿಹಾಸಿಕ ಕೋಟೆಯ ಹತ್ತಿರ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಹುಲಸೂರ ಅವರ ಸಾನಿಧ್ಯದಲ್ಲಿ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ನೇತೃತ್ವದಲ್ಲಿ, ಕಲ್ಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಸಮಸಮಾಜ ನಿರ್ಮಾಣಕ್ಕಾಗಿ ಶರಣರ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಅಕ್ಕನವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯ ಐತಿಹಾಸಿಕವಾಗಿದೆ. ಮುಂದೊಂದು ದಿನ ಜಗತ್ತಿನ ಜನ ಕಲ್ಯಾಣಕ್ಕೆ ಬರುತ್ತಾರೆ ಎಂದರು. ಸಿಪಿಐ ಅಲಿಖಾನ ವಚನ ಪಠಣ ಮಾಡಿದರು.
ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಹುತಾತ್ಮ ಶರಣರು ಬಿಟ್ಟುಹೋದ ತತ್ವಗಳನ್ನು ನಮ್ಮ ಚೇತನದಲ್ಲಿ ಮೂಡಿಸಲು ಎಲ್ಲರೂ ಮುಂದೆ ಬರಬೇಕು. ಜಗವೆಲ್ಲ ಶರಣ ತತ್ವಗಳು ಹರಡಿ ಬಸವ ಸಮಾಜ ನಿರ್ಮಿಸಬೇಕು ಎಂದರು.
ಎಳೆಹೂಟೆಯ ಚಿತ್ರಗಳು, ಎತ್ತಿನ ಬಂಡಿಯಲ್ಲಿ ಶರಣರ ಚಿತ್ರಗಳು, ಬಿಜ್ಜನಳ್ಳಿಯಲ್ಲಿರುವ ಹರಳಯ್ಯ ದಂಪತಿಗಳ ಪಾದುಕೆಗಳ ಹತ್ತಿರದಲ್ಲಿ ನಿರಂತವಾಗಿ ಬೆಳಗುತ್ತಿರುವ ಜ್ಯೋತಿಯನ್ನು ಮುಟ್ಟಿದ ಜ್ಯೋತಿ, ಬಸವ ರಥ, ಕುದುರೆ ಒಂಟೆಗಳ ಮೇಲೆ ಶರಣ ವೇಷಧಾರಿಗಳು, ವಚನ ಭಜನೆ ತಂಡಗಳು, ಕೋಲಾಟ, ಡೊಳ್ಳು, ವಚನಗಳಿಗೆ ನೃತ್ಯ, ಪುರವಂತರ ಒಡಪುಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.
ಮೆರವಣಿಗೆಯಲ್ಲಿ ಪೂಜ್ಯ ಬಸವಲಿಂಗ ಪಟ್ಟದ್ದೇವರು, ನಿಡಸೋಸಿ ಶ್ರೀಗಳು, ಪಾಂಡಮೊಟ್ಟಿ ಶ್ರೀಗಳು, ಶಾಸಕ ಶರಣು ಸಲಗರ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಡಾ. ಜಿ.ಎಸ್. ಭುರಾಳೆ, ಸುಭಾಷ ಹೊಳಕುಂದೆ, ರಾಜೇಂದ್ರಕುಮಾರ ಗಂದಗೆ, ರಾಜು ಕೋಟೆ, ಜಗನ್ನಾಥ ರಾಚೋಟಿ, ಶಿವರಾಜ ಶಾಶೆಟ್ಟೆ, ರಾಷ್ಟ್ರೀಯ ಬಸವದಳದ ತಾಲೂಕಾಧ್ಯಕ್ಷ ರವೀಂದ್ರ ಕೊಳಕೂರ, ಅಲ್ಲಮಪ್ರಭು ನಾವದಗೇರೆ, ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಹಮ್ಮಿಲಪೂರೆ, ಮಡಿವಾಳಯ್ಯ ಸ್ವಾಮಿ, ಶಿವಕುಮಾರ ಬಿರಾದಾರ, ಶಿವಕುಮಾರ ಶೆಟಕಾರ, ಲಿಂಗರಾಜ ಶಾಶೆಟ್ಟೆ, ಹಣಮಂತ ಧನಶೆಟ್ಟಿ, ಲಕ್ಷ್ಮೀಕಾಂತ ಜ್ಯಾಂತೆ, ಶಂಕರ ಕರಣೆ, ಮಾಜಿ ಸೈನಿಕರು, ಸ್ಕೌಟ್ಸ ಮತ್ತು ಗೈಡ್ಸ ಹಣಮಂತ ಧನಶೆಟ್ಟಿ, ಎಲ್ಲಾ ಸಮಾಜದ ಶರಣ-ಶರಣೆಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಬೆಳಗ್ಗೆ ೭೭೦ ಅಮರಗಣಂಗಳ ಸಾಂಕೇತಿಕವಾಗಿ ಸಾಮೂಹಿಕ ಇಷ್ಟಲಿಂಗ ಯೋಗ ನಡೆಯಿತು.
ಮುಂಜಾನೆ ೧೧;೦೦ ಗಂಟೆಗೆ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪೂಜ್ಯ ಬಸವಪ್ರಭು ಸ್ವಾಮಿಗಳ ಸಾನಿಧ್ಯದಲ್ಲಿ ಸೋಮನಾಥ ಯಾಳವಾರ ಅನುಭಾವ ನೀಡಿದರು. ವೈಜಿನಾಥ ಕಾಮಶೆಟ್ಟಿ. ಶಿವರಾಜ ಶಾಶೆಟ್ಟೆ, ಶಂಕ್ರೆಪ್ಪ ಪಾಟೀಲ, ನಾಗಯ್ಯ ಸ್ವಾಮಿ, ಪಂಡಿತನಾಗರಾಳೆ, ರಾಜಶ್ರೀ ಪಾಟೀಲ, ಶರಣ ಬಸವಕಲ್ಲಾ ಪ್ರದೀಪ ಬಿರಾದಾರ ದತ್ತಾತ್ರೆಯ ಬಾಂದೆಕರ್ ಇತರರಿದ್ದರು.