ಜಮಖಂಡಿ
ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ನೂತನ ಪುತ್ತಳಿ ಜನವರಿ 5ರಂದು ಅನಾವರಣಗೊಳ್ಳಲಿದೆ.
ಜೊತೆಗೆ ಶ್ರೀಶೈಲ ಪಂಚಾಚಾರ್ಯ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಕೂಡ ನಡೆಯಲಿದೆ.
ಗ್ರಾಮದಲ್ಲಿ ಜನವರಿ 1 ರಿಂದ ಪ್ರವಚನ, ಧರ್ಮ ಸಭೆಗಳು ನಡೆಯುತ್ತಿವೆ.
ಜನವರಿ 5ರಂದು ಅಶ್ವಾರೂಢ ಶ್ರೀ ಬಸವೇಶ್ವರ ಪ್ರತಿಮೆ ಅನಾವರಣ ಹಾಗೂ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ ಎಂದು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ದಾರ ಮತ್ತು ವ್ಯವಸ್ಥಾಪಕರ ಕಮಿಟಿಯ ಪ್ರಕಟಣೆ ತಿಳಿಸಿದೆ.
ಜಮಖಂಡಿ ಬಳಿಯ ತೇರದಾಳಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಶ್ರೀಶೈಲ ಶ್ರೀಗಳು ಗುರು ಹಾಗೂ ವಿರಕ್ತ ಪರಂಪರೆಗಳು ಬೇರೆ ಬೇರೆಯಲ್ಲ ಎಂದು ಹೇಳಿದ್ದರು. ಅದಕ್ಕೂ ಮುನ್ನ ಗಜೇಂದ್ರಗಡದಲ್ಲಿ ಬಸವಣ್ಣನವರು, ಪಂಚಪೀಠಗಳು ಶತ್ರುಗಳಲ್ಲ ಎಂದು ಹೇಳಿದ್ದರು.
ಈಗ ತುಂಗಳದಲ್ಲಿ ಬಸವಣ್ಣನವರ ಪುತ್ಥಳಿಯ ಅನಾವರಣದ ಜೊತೆ ತಮ್ಮ ಅಡ್ಡ ಪಲ್ಲಕ್ಕಿ ಮೆರವಣಿಗೆ ನಡೆಸುವುದರ ಮೂಲಕ ಲಿಂಗಾಯತ, ವೀರಶೈವ ಪರಂಪರೆಗಳು ಒಂದೇ ಎಂದು ಸಾಧಿಸಲು ಹೊರಟಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
