ಭದ್ರಾವತಿ ತಾಲ್ಲೂಕಿನ ಗೋಣಿಬೀಡು ಶೀಲಸಂಪಾದನಾ ಮಠದಲ್ಲಿ ಇತ್ತೀಚೆಗೆ ನೂರನೇ ಅನುಭಾವ ಸಂಗಮ ಶತಮಾನೋತ್ಸವ, “ಕಲ್ಯಾಣದ ಬಸವ ಬೆಳಕು” ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಲೆನಾಡು ಕಲಾತಂಡದವರಿಂದ ಶರಣೆ ಅಕ್ಕಮಹಾದೇವಿ ಕುರಿತಾದ ‘ಉಡು ತಡಿ’ ನಾಟಕ ಪ್ರದರ್ಶನಗೊಂಡಿತು.
ಶಿವಮೊಗ್ಗದ ರಂಗಕರ್ಮಿ ಗಣೇಶ ಕೆಂಚನಾಳ ರಚಿಸಿದ ನಾಟಕವನ್ನು, ಶ್ರೀಮತಿ ಮಂಜುಳಾ ಬಾದಾಮಿ ಹಾಗೂ ವೈ.ಡಿ. ಬಾದಾಮಿ ಅವರು ನಿರ್ದೇಶನ ಮಾಡಿರುವರು.
ನಾಟಕ ಬರೆದ ಗಣೇಶ ಕೆಂಚನಾಳ ಅವರು, “ಎಲ್ಲವನ್ನು ತ್ಯಜಿಸಿ ಹೊರಡುವ ಅಕ್ಕಮಹಾದೇವಿ, ಉಡುಗೆ ತೊಡುಗೆಗಳನ್ನೂ ಎಸೆದು ಹೊರಡುತ್ತಾರೆ. ಆ ಸಂದರ್ಭದಲ್ಲಿ ಅವರ ತಂದೆ ತಾಯಿ ಬಂದು ವಸ್ತ್ರವನ್ನು ಉಡು, ತಡಿ ಹೋಗಬೇಡ ಎಂದು ಹೇಳುತ್ತಾರೆ. ನಾಟಕದ ಹೆಸರು ‘ಉಡು ತಡಿ’ ಬಂದಿರುವುದು ಈ ಸಂದರ್ಭದಲ್ಲಿ.
“ಪ್ರಪಂಚದ ಮೊಟ್ಟಮೊದಲ ಸ್ತ್ರೀ ಸ್ವಾತಂತ್ರ್ಯದ ಕಲ್ಪನೆ ಕೊಟ್ಟವರು ಅಕ್ಕ. ಸಮಾಜವನ್ನು ಧಿಕ್ಕರಿಸಿ ಕೇಶಾಂಬರಿ ಆಗಿ ಹೊರಡುತ್ತಾರೆ, ಅವರ ಒಳಗಣ್ಣು, ಅಂತರಾತ್ಮ ಎಲ್ಲವನ್ನು ತ್ಯಜಿಸುತ್ತೆ. ಕಾಮ, ಕ್ರೋಧ, ಮದ, ಮತ್ಸರ ಎಲ್ಲವನ್ನು ತ್ಯಜಿಸಿ ಚೆನ್ನಮಲ್ಲಿಕಾರ್ಜುನನೇ ನನ್ನ ಉಡುಗೆ ಎನ್ನುವ ಕಲ್ಪನೆ ‘ಉಡು ತಡಿ’ ನಾಟಕದಲ್ಲಿ ಮೂಡಿ ಬಂದಿದೆ,” ಎಂದರು.
“ಇದೊಂದು ಹೊಸತನದ ಆಲೋಚನೆ. ಇದುವರೆಗೂ ಅಕ್ಕಮಹಾದೇವಿ ಬಗ್ಗೆ ಇದ್ದ ಅಭಿಪ್ರಾಯವನ್ನು ಅಳಿಸಿ ಹೊಸತನವನ್ನು ಕಟ್ಟಿಕೊಡುವ ಪ್ರಯತ್ನ,” ಎಂದು ನಾಟಕ ನಿರ್ದೇಶಿಸಿದ ಮಂಜುಳಾ ಬದಾಮಿ ಹಾಗೂ ವೈ.ಡಿ.ಬದಾಮಿ ಹೇಳಿದರು.
ಇದೀಗ ನಾಲ್ಕನೇ ಪ್ರದರ್ಶನವನ್ನು ಕಂಡಿರುವ ನಾಟಕದಲ್ಲಿ 22 ಜನ ಹವ್ಯಾಸಿ ಕಲಾವಿದರು ನಟಿಸಿದ್ದಾರೆ, ಅಕ್ಕಮಹಾದೇವಿ ಪಾತ್ರವನ್ನು ಶ್ರೀಮತಿ ಲಕ್ಷ್ಮಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.
(ಎಡದಿಂದ ಬಲ) ಬಾದಾಮಿ ದಂಪತಿಗಳು ಮತ್ತು ಗಣೇಶ ಕೆಂಚನಾಳ