ಗದಗ
ಗದಗ-ಬೆಟಗೇರಿ ಬಸವದಳ ಸಂಘಟನೆಯ ಸಮುದಾಯ ಭವನದಲ್ಲಿ, ಪ್ರತಿ ರವಿವಾರ ನಡೆಯುವ ‘ವಚನ ಸಂಗಮ’ ಕಾರ್ಯಕ್ರಮದಲ್ಲಿ ವಚನ-ನಿರ್ವಚನ ಜರುಗಿತು.
ತನ್ನ ತಾನರಿಹವೇ ಪರಮಾತ್ಮಯೋಗ, ತನ್ನ ತಾಮರಹವೇ ಮಾಯಾಸಂಬಂಧ.
ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ ಪರಮಾತ್ಮನು ಪರಬ್ರಹ್ಮಸ್ವರೂಪನು, ನಿತ್ಯ, ನಿರಂಜನ, ಉಪಮಾತೀತ ನಿಷ್ಪತಿ, ಕೇವಲ ನಿಷ್ಕಲಸ್ವರೂಪನು.
ಭ್ರೂಮಧ್ಯದಲ್ಲಿ ಪರಮಾತ್ಮನೇ ಅಂತರಾತ್ಮನೆನಿಸಿ ಸಕಲ ನಿಷ್ಕಲನಾಗಿಪ್ಪ.
ಹೃದಯಸ್ಥಾನದಲ್ಲಿ ಆ ಪರಮಾತ್ಮನೇ ಜೀವಾತ್ಮನಾಗಿ ಕೇವಲ ಸಕಲನಾಗಿಪ್ಪ. ಬ್ರಹ್ಮರಂಧ್ರಸ್ಥಾನದಲ್ಲಿ ನಿಷ್ಕಳಗುರುಮೂರ್ತಿರ್ಲಿಂಗ ಭ್ರೂಮಧ್ಯದಲ್ಲಿ ಸಕಲನಿಷ್ಕಲ ಪರಂಜ್ಯೋತಿರ್ಲಿಂಗ ಹೃದಯಸ್ಥಾನದಲ್ಲಿ ಕೇವಲ ಸಕಲ ಜಂಗಮಲಿಂಗ ಇಂತು ಪರಮಾತ್ಮನೇ ಪರಬ್ರಹ್ಮ, ಪರಮಾತ್ಮನೇ ಅಂತರಾತ್ಮ, ಪರಮಾತ್ಮನೇ ಜೀವಾತ್ಮ. ಬಹಿರಂಗದಲ್ಲಿ ಪರಮಾತ್ಮನೇ ಗುರುಲಿಂಗ, ಪರಮಾತ್ಮನೇ ಶಿವಲಿಂಗ ಪರಮಾತ್ಮನೇ ಜಂಗಮಲಿಂಗ.
ಇಂತು, ಪರಮಾತ್ಮನೇ ಪರಬ್ರಹ್ಮ, ಪರಮಾತ್ಮನೇ ಸರ್ವಾತ್ಮ, ಪರಮಾತ್ಮನೇ ಸರ್ವಗತ, ಪರಮಾತ್ಮನೇ ಆತ್ಮಗತ.
ಇದು ಕಾರಣ, ಪರಮಾತ್ಮನೇ ಅಂತರಂಗ, ಬಹಿರಂಗಭರಿತ ಪ್ರಾಣಲಿಂಗ.
ಇಂತು ಅರಿವುದೇ ಪರಮಾತ್ಮಯೋಗ, ಮರವೇ ಮಾಯಾ ಸಂಗ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
-ಉರಿಲಿಂಗಪೆದ್ದಿ
ವಚನಕಾರ ಶರಣ ಉರಿಲಿಂಗಪೆದ್ದಿಗಳ ಕುರಿತು ತಿಳಿಸುತ್ತಾ, ಅನುಭಾವಿ ನಿಂಗನಗೌಡ ಹಿರೇಸಕ್ಕರಗೌಡರ ಈ ವಚನವನ್ನು ವಿಶ್ಲೇಷಿದರು. ಇದು ಬಹಳ ದೀರ್ಘವಾದ ವಚನ.
ತನ್ನನ್ನು ತಾನು ಯಾರು ಅರಿಯುತ್ತಾರೋ ಅವರೇ ಗುರುವಾಗಬಲ್ಲರು. ಯೋಗವೆಂದರೆ ಬರೀ ಉಸಿರು ತೆಗೆದುಕೊಳ್ಳುವುದು, ನಿಲ್ಲಿಸುವುದು(ಕುಂಭಕ) ಮತ್ತು ಹೊರಗೆ ಉಸಿರು ಚೆಲ್ಲುವುದು ಯೋಗವಲ್ಲ. ಶರಣರು ಇಂಥ ಯೋಗ ತಿರಸ್ಕರಿಸಿದರು. ತನ್ನಲ್ಲಿರುವ ಚೈತನ್ಯವೇ-ಜೀವಾತ್ಮ. ಎಲ್ಲರಲ್ಲಿರುವ, ಎಲ್ಲದರಲ್ಲಿರುವ ಅಂದರೆ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಈ ಪಂಚ ಭೂತಗಳಲ್ಲಿರುವ, ಸಕಲ ಬ್ರಹ್ಮಾಂಡಗಳಿಗೆ ಅನುವಾಗಿರುವ ಚೈತನ್ಯವೇ ಪರಮಾತ್ಮ ಆಗಿದೆ.
ಈ ಚೈತನ್ಯದೊಳಗೇನೇ ಎಲ್ಲರ ಚೈತನ್ಯ ಅಡಗಿದೆ. ನಮ್ಮ ಚೈತನ್ಯ ಜೀವಾತ್ಮವಾದರೆ ಎಲ್ಲರ/ಎಲ್ಲವುಗಳ ಚೈತನ್ಯವೇ ಪರಮಾತ್ಮವಾಗಿದೆ. ಪರಮಾತ್ಮಕ್ಕೆ ಪರ್ಯಾವಾದ ಶಬ್ದವೇ ಪರಬ್ರಹ್ಮವಾಗಿದೆ. ಅದುವೇ ಪರಮಾಶ್ರಯ. ಹೀಗೇಯೇ ಅನುಭಾವಿಸುತ್ತ ಸಾಗುವುದೇ ಯೋಗವಾಗಿದೆ. ಯೋಗವೆಂದರೆ-ಕೂಡುವಿಕೆ. ತನ್ನ ಚೈತನ್ಯವನ್ನು ಪರಮ (ಶ್ರೇಷ್ಠ) ಚೈತನ್ಯದೊಡನೆ ಕೂಡಿಸುವುದು. ಈಗಾಗಲೇ ಅದು ಕೂಡಿಯೇ ಇದೆ. ಆದರೆ ಅಜ್ಞಾನದಿಂದ ಅದು ತಿಳಿಯದಾಗಿದೆ. ಅದನ್ನು ಅರಿತರೆ ತಾನೇ ದೇವ. ಅರಿಯದಿದ್ದರೆ-ಮಾಯಾಸಂಬಂಧವಾಗುತ್ತದೆ.

ಮಾಯೆ ಎಂದರೆ ಬೇರೇನೂ ಅಲ್ಲ. ನಾನು ನಾನು, ನನ್ನೊಳಗೇ ಮನೆ ಮಾಡಿರುವ ಆಸೆ-ಆಮಿಷಗಳು, ಪಂಚ ಜ್ಞಾನೇಂದ್ರಿಯಗಳ, ಕರ್ಮೇಂದ್ರಿಗಳ, ಕಾಮ-ಕ್ರೋಧ ಮುಂ-ಗಳು, ಅಹಂಕಾರ-ಮಮಕಾರಗಳೆಂಬ ಅಷ್ಟ ಮದಗಳು ನಮ್ಮನ್ನು ಆಳುತ್ತಿರುವುದೇ ಮಾಯಾಸಂಬಂಧವಾಗಿದೆ. ಪರಮ ಸತ್ಯ ಒಂದೇ ಆಗಿದೆ. ಅದಕ್ಕೇನೆ ಅಪ್ಪ ಬಸವಣ್ಣನವರು “ತಂದೆ ನೀನು, ತಾಯಿ ನೀನು….” ಎಂದು ಹೇಳಿರುವುದು. ಎಲ್ಲರಿಗೂ ತಂದೆ-ತಾಯಿ ನೀನೇ ಆಗಿದ್ದೀಯಾ ಎಂದಿದ್ದಾರೆ.
ಈ ವಚನದಲ್ಲಿ ಕೂಡ ಪುನಃ ಪುನಃ ನಿತ್ಯ, ನಿರಂಜನ, ಸಕಲ-ನಿಷ್ಕಲ, ಪರಂಜ್ಯೋತಿ, ಶಿವಲಿಂಗ, ಜಂಗಮಲಿಂಗ, ಬಹಿರಂಗ, ಅಂತರಂಗ ಮುಂತಾದ ಶಬ್ದ ಜಾಲಗಳಿಂದ ಹೇಳಲಾಗಿದೆ.
ಅತಿಥಿಗಳಾದ ಶರಣ ಶಿವಣ್ಣ ಮುಗದ ಅವರು ಕೂಡ ನೀರಲ್ಲಿಯೇ ಮೀನು ಇದೆ. ಹಾಗೆಯೇ ಆ ಪರಾತ್ಪರ ವಸ್ತು ಒಂದೇ ಇದೆ. ಅದರೊಳಗೇನೇ ನಾವಿದ್ದೇವೆ. ನಾವು ಯಾರೂ ಬೇರೆ ಬೇರೆ ಅಲ್ಲ. ಎಲ್ಲರೂ ಒಂದೇ ಆಗಿದ್ದೇವೆ. ಅರಿವು ಆಗದ್ದಕ್ಕೆ/ ಅಜ್ಞಾನದಲ್ಲಿದ್ದಾಗ ಭಿನ್ನತೆ ಇರುತ್ತದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣ ಎಸ್. ಎನ್. ಹಕಾರಿ ಗುರುಗಳು ಉರಿಲಿಂಗಪೆದ್ದಿಯ ಕಥೆ ಹೇಳುತ್ತಾ ಎಲ್ಲರೂ ನಿಜವಾದ ಅರಿವಿನಿಂದ ಬಾಳಬೇಕು. ವಿಶ್ವಗುರು ಬಸವಣ್ಣನವರಾದಿ ಎಲ್ಲ ಶರಣರ ಸದಾಶಯದಂತೆ ನಡೆಯೋಣವೆಂದು ತಿಳಿಸಿದರು.
ಆರಂಭದಲ್ಲಿ, ಕಾರ್ಯದರ್ಶಿ ಶರಣ ಜಿನಗಾ ಅವರು ಪ್ರಾರ್ಥನೆ ಮಾಡಿದರು.
ಶರಣೆ ನೀಲಲೋಚನೆ ಹಂಚಿನಾಳ ಶರಣು ಸಮರ್ಪಣೆ ಮಾಡಿದರು. ಶರಣ ರಾಮಣ್ಣ ಕಳ್ಳಿಮನಿಯವರು ಕಾರ್ಯಕ್ರಮ ನಿರೂಪಿಸಿದರು.
ಪ್ರಕಾಶ ಅಸುಂಡಿ, ಮಂಜುನಾಥ ಅಸುಂಡಿ, ಮಹಾಂತೇಶ ಅಂಗಡಿ, ಶೇಖಣ್ಣ ಕಳಸಾಪೂರ, ಶೇಖಣ್ಣ ಕವಳಿಕಾಯಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಕೆ.ಎಸ್. ಚಟ್ಟಿ, ಶರಣೆ ಕಳ್ಳಿಮನಿ ಮತ್ತು ಅವರ ಪುತ್ರಿ, ಸಿದ್ಧಲಿಂಗಪ್ಪ ದಂಪತಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪೂರ್ಣವಾಯಿತು.