ಬಸವನಬಾಗೇವಾಡಿ:
ದಾಸೋಹಕ್ಕೆ ಇನ್ನೊಂದು ಹೆಸರು ಇಂಗಳೇಶ್ವರ ವಚನ ಶಿಲಾಮಂಟಪದ ರೂವಾರಿಗಳಾದ ಚನ್ನಬಸವ ಸ್ವಾಮಿಗಳು ಆಗಿದ್ದರು. ದಾಸೋಹ ಹಾಗೂ ಜ್ಞಾನದಾಸೋಹವನ್ನು ಕೊಟ್ಟ ಕರ್ನಾಟಕದ ಕರ್ನಾಟಕದ ಕೆಲವೇ ಮಠಾಧೀಶರಲ್ಲಿ ಪ್ರಮುಖರಾಗಿದ್ದರು ಎಂದು ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಮರಣೋತ್ಸವ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಷ್ಟಾವರಣ ಹಾಗೂ ಪಂಚಾಚಾರಗಳನ್ನು ಚೆನ್ನಾಗಿ ತಿಳಿದವರಾಗಿದ್ದ ಅವರು ಬದುಕಿನುದ್ದಕ್ಕೂ ಶರಣರ ವಚನಗಳನ್ನೇ ಉಸಿರಾಗಿಸಿಕೊಂಡು ಜೀವನ ಸಾಗಿಸಿದರು. ನಡೆ-ನುಡಿ ಒಂದಾಗಿದ್ದ ಅಪರೂಪದ ಮಠಾಧೀಶರು ಅವರಾಗಿದ್ದರು. ಅವರು ನೀಡಿರುವ ಮಾರ್ಗದರ್ಶನದಲ್ಲಿ ಈಗಿರುವ ಮಠಾಧೀಶರು ನಡೆಯುವಂತಾಗಬೇಕೆಂದರು.
ಸಿಂದಗಿಯ ಡಾ. ಪ್ರಭುಸಾರಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಚನ್ನಬಸವ ಸ್ವಾಮೀಜಿಯವರು ಸೇವೆ ಮಾಡುವುದು ಅವರ ಮೊದಲ ಕರ್ತವ್ಯವಾಗಿತ್ತು. ಎಲ್ಲರನ್ನೂ ಸೇವೆಗೆ ಹಚ್ಚುವ ಕೆಲಸದಲ್ಲಿ ಅವರು ಮೊದಲಿಗರಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಅವರಷ್ಟು ಮಾತೃ ಹೃದಯ ಸ್ವಾಮಿಗಳನ್ನು ನಾಡು ಕಂಡಿಲ್ಲ ಎಂದು ಹೇಳಿದರು.

ಶ್ರೀಮಠದ ಕಿರಿಯ ಸ್ವಾಮೀಜಿ ಡಾ. ಸಿದ್ದಲಿಂಗ ಸ್ವಾಮೀಜಿ ಅವರು ಹಿರಿಯ ಶ್ರೀಗಳ ಕುರಿತು ಭಾವುಕರಾಗಿ ಅವರು ಲಿಂಗೈಕ್ಯರಾಗಿರುವದು ನಮಗೆ ಹಾಗೂ ಸಮಸ್ತ ಭಕ್ತಸಮೂಹಕ್ಕೆ ತುಂಬಾ ದುಃಖವಾಗಿದೆ. ಅವರು ದೈಹಿಕವಾಗಿ ನಮ್ಮನ್ನು ಅಗಲಿದರೂ ಅವರು ಮಾನಸಿಕವಾಗಿ ನಮ್ಮೊಂದಿಗೆ ಸದಾ ಇದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವಂತಾಗಬೇಕಿದೆ ಎಂದರು.

ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ, ಶಿರಸಿ ಶ್ರೀಗಳು, ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ವಡವಡಗಿಯ ನಂದಿಮಠ ಶ್ರೀಗಳು, ಹರಸೂರಿನ ಶ್ರೀಗಳು, ಪಡೇಕನೂರ ಶ್ರೀಗಳು, ಅಥರ್ಗಾದ ಶ್ರೀಗಳು, ಅಥಣಿಯ ಶೆಟ್ಟರ್ ಮಠದ ಶ್ರೀಗಳು, ವಿಜಯಪುರ ಸಿದ್ದಲಿಂಗ ದೇವರು, ಸೋಲಾಪುರ ಶ್ರೀಗಳು, ಗುಣಸಾಗರಿನ ಸಂಗನಬಸವ ದೇವರು, ಕರಬಂಟನಾಳದ ಶ್ರೀಗಳು ಸೇರಿದಂತೆ ಅನೇಕರು ನುಡಿನಮನ ಸಲ್ಲಿಸಿದರು.

ಕೊಲ್ಹಾರದ ಕಲ್ಲಿನಾಥ ದೇವರು, ಮರೆಗುದ್ದಿ ಸ್ವಾಮೀಜಿ, ಶಿರಸಿ ಶಿವಲಿಂಗ ಸ್ವಾಮೀಜಿ, ಮಸೂತಿ ಶ್ರೀ, ಬಣ್ಣದಮಠದ ಶ್ರೀಗಳು, ಪರಪ್ಪ ಜತ್ತಿ, ಮನಗೂಳಿಯ ಅಭಿನವ ಸಂಗನಬಸವ ಸ್ವಾಮೀಜಿ ಸೇರಿದಂತೆ ಇತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಚನ್ನಬಸವ ಸ್ವಾಮೀಜಿಯವರ ಕತೃ ಗದ್ದುಗೆಗೆ ಅಭಿಷೇಕ ವಿವಿಧ ಶ್ರೀಗಳ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿತು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಚನ್ನಬಸವ ಸ್ವಾಮೀಜಿಯವರು ಶ್ರೀಮಠಕ್ಕೆ ಆಗಮಿಸುವ ಭಕ್ತರಿಗೆ ನೀಡುತ್ತಿದ್ದ ಸಜ್ಜಕ-ತುಪ್ಪ, ಅನ್ನ-ಸಾಂಬಾರು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಭಾಗವಹಿಸಿದ್ದರು.

