ಮುಂಡರಗಿ:
೧೨ ನೇ ಶತಮಾನ ಈ ನಾಡಿಗೆ ಕಾಯಕ, ದಾಸೋಹ ಸಂಸ್ಕೃತಿಯನ್ನು ಕೊಡಮಾಡಿದೆ. ಅನೇಕ ಶರಣರು ತಮ್ಮ ತಮ್ಮ ಕಾಯಕದ ಮೂಲದ ವಚನಗಳನ್ನು ಬರೆದು ಅರಿವು ಮೂಡಿಸಿದ್ದಾರೆ ಎಂದು ಪತ್ರಕರ್ತ ಕಾಶೀನಾಥ ಬಿಳಿಮಗ್ಗದ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ, ಶರಣ ಸಾಹಿತ್ಯ ಪರಿಷತ್ತು, ಚೈತನ್ಯ ಶಿಕ್ಷಣ ಸಂಸ್ಥೆ ಸೌರಭ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಶರಣ ಚಿಂತನ ಮಾಲೆ ೨೮ರ ಉಪನ್ಯಾಸ ‘ಶರಣೆ ಸೂಳೆ ಸಂಕವ್ವೆ’ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
೧೨ ನೇ ಶತಮಾನದಲ್ಲಿ ಶರಣರು ನಮಗೆ ಜೀವನದ ಮೌಲ್ಯಗಳನ್ನು ವಚನಗಳ ಮೂಲಕ ಬಿತ್ತರಿಸಿದ್ದಾರೆ. ವಚನ ಎಂದರೆ ಮಾತು, ಭಾಷೆ, ಪ್ರಮಾಣ ಎಂದಾಗುತ್ತದೆ. ಅಂದಿನ ಎಲ್ಲಾ ಶರಣರು ನುಡಿದು ಅದರಂತೆ ನಡೆದಿದ್ದಾರೆ. ಅಂದಿನ ಕಲ್ಯಾಣದಲ್ಲಿ ಸೂಳೆ ಸಂಕವ್ವೆ ಕೂಡ ಶರಣೆಯಾಗಿ ಬದಲಾಗಿ ವಚನಗಳನ್ನು ರಚಿಸಿದರು ಎಂದರು.

ಕಾರ್ಯಕ್ರಮ ಉಧ್ಘಾಟಿಸಿದ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಶರಣರ ಆದರ್ಶಗಳಂತೆ ಇಂದು ಎಷ್ಟರ ಮಟ್ಟಿಗೆ ನಾವೆಲ್ಲರೂ ಅವರನ್ನು ಅನುಸರಿಸುತ್ತೆವೆ ಎನ್ನುವುದನ್ನು ನಾವು ಅರಿಯಬೇಕು. ಅವರು ಹಾಕಿಕೊಟ್ಟ ನೆಲೆಯಲ್ಲಿ ನಾವೆಲ್ಲರೂ ಬಾಳೋಣ ಎಂದರು.
ಅಧ್ಯಕ್ಷತೆ ವಹಿಸಿ ಎಮ್. ಜಿ. ಗಚ್ಚಣ್ಣವರ ಮಾತನಾಡಿ, ಕನ್ನಡ ಸಾಹಿತ್ಯ ಭವನ ಶಿಘ್ರದಲ್ಲಿ ಪೂರ್ಣಗೊಳ್ಳಲಿದೆ. ಮುಂದೆ ಅಲ್ಲಿಯೇ ಕಾರ್ಯಕ್ರಮ ನಡೆಯಲಿವೆ ಎಂದರು.
ಸಾಹಿತಿಗಳಾದ ಆರ್ ಎಲ್ ಪೋಲಿಸ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಎಫ್. ಗುಡದಪ್ಪನವರ, ಸಂತೋಷ ಹಿರೇಮಠ, ಎನ್. ಎಸ್. ಅಲ್ಲಿಪೂರ, ಆರ್.ಕೆ. ರಾಯನಗೌಡ, ಎಸ್.ಬಿ. ಕೆ. ಗೌಡರ, ಸಿ.ಕೆ. ಗಣಪ್ಪನವರ, ಸುರೇಶ ಭಾವಿಹಳ್ಳಿ, ಎಮ್. ಐ. ಮುಲ್ಲಾ, ಜಯಶ್ರೀ ಅಳವಂಡಿ, ಮಧುಮತಿ ಇಳಕಲ್, ಎಂ.ಎಸ್. ಶೀರನಹಳ್ಳಿ ಮತ್ತಿತರರು ಭಾಗವಹಿಸಿದ್ದರು. ಕೊಟ್ರೇಶ ಜವಳಿ ಪ್ರಾರ್ಥಿಸಿದರು, ಮಂಜುನಾಥ ಮುಧೋಳ ನಿರೂಪಿಸಿದರು, ರಮೇಶಗೌಡ ಪಾಟೀಲ ವಂದಿಸಿದರು.
