ವಚನ ಚಳುವಳಿಯ ತಾತ್ವಿಕತೆಯೇ ಸೌಹಾರ್ದತೆ, ಸಮಾನತೆ : ಬರಗೂರು

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

ವಚನ ಚಳುವಳಿ ಸಮಾನತೆ ಮತ್ತು ಸೌಹಾರ್ದತೆ ಸಾಧಿಸಿದ ಚಳುವಳಿಯಾಗಿದೆ. ಕನ್ನಡ ಜಗತ್ತನ್ನು ವೈಚಾರಿಕವಾಗಿ ರೂಪಿಸಿದ್ದು ವಚನಕಾರರು ಎಂದು ಹಿರಿಯ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಪ್ರತಿಷ್ಠಾನದ ೯೬ನೇ ಉಪನ್ಯಾಸ ಸಮಾರಂಭದಲ್ಲಿ  ‘ಕನ್ನಡ ಸಾಹಿತ್ಯ: ಸಮಾನತೆ ಮತ್ತು ಸೌಹಾರ್ದತೆ ‘ ಕುರಿತು ಮಾತನಾಡಿದರು.

ವಚನ ಸಾಹಿತ್ಯಕ್ಕೆ ಸಾಹಿತ್ಯದ ಮನ್ನಣೆ ದೊರೆತದ್ದು ಎಪ್ಪತ್ತು ಎಂಬತ್ತರ ದಶಕದ ನಂತರ. ಅನಂತರ ವಚನಗಳ ಕುರಿತು ಭಿನ್ನ ಆಯಾಮಗಳಲ್ಲಿ ಅಧ್ಯಯನ ಆರಂಭವಾದವು ಎಂದರು.

ದೇಹವೇ ದೇಗುಲ ಎಂಬ ಪರಿಕಲ್ಪನೆ ಭಕ್ತಿಯ ಖಾಸಗೀಕರಣಕ್ಕೆ ಆದ್ಯತೆ ನೀಡಿದೆ. ಈ ಆಲೋಚನೆ ಉಳ್ಳವರಿಗಿಂತ ವೈಯಕ್ತಿಕ ನೆಲೆಯ ಭಕ್ತಿಗೆ ಮಹತ್ವ ತಂದಿದೆ. ಶರಣ ಸತಿ ಲಿಂಗ ಪತಿ, ಕಾಯಕವೇ ಕೈಲಾಸ ಇಂಥ ಪರಿಕಲ್ಪನೆ ನೀಡಿದ ವಚನ ಚಳುವಳಿ ಜನಪರವಾದದ್ದು. ಬಸವಣ್ಣನವರು ರಾಜಾಶ್ರಯದಲ್ಲಿದ್ದು ಚಳುವಳಿ ರೂಪಿಸಿದ್ದರು. ಪಂಪ ರಾಜಾಶ್ರಯದಲ್ಲಿ ಇದ್ದು ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದನು ಎಂದರು.

ಸೌಹಾರ್ದತೆ -ಸಮಾನತೆ ಪ್ರಜಾಪ್ರಭುತ್ವದ ತಾತ್ವಿಕತೆಯಾಗಿದೆ. ಸಂವಾದಗಳು ಸಾಧ್ಯವಾಗದ  ಕಾಲಘಟ್ಟದಲ್ಲಿ ಇದ್ದೇವೆ. ಸಂವಾದ, ವಾಗ್ವಾದಗಳು ಪ್ರಜಾಪ್ರಭುತ್ವ ಜೀವಂತಿಕೆಗೆ ಪ್ರಧಾನ ಸತ್ವವಾಗಿವೆ. ಸಂವಾದದಲ್ಲಿ ಅಭಿಪ್ರಾಯ, ಭಿನ್ನಾಭಿಪ್ರಾಯ, ಸಹಿಷ್ಣುತೆಗಳಿಗೆ ಮನ್ನಣೆ ದೊರೆಯುತ್ತದೆ. ಬಹುತ್ವ ಹಾಗೂ ಏಕತ್ವಗಳ ಬಂದುತ್ವಗಳೆ ಸೌಹಾರ್ದತೆಯಾಗಿದೆ ಎಂದರು.

ವಿವೇಕ ಜಾಗದಲ್ಲಿ ಉದ್ರೇಕ, ಸತ್ಯದ ಜಾಗದಲ್ಲಿ ಅಸತ್ಯ ಬಂದು ನೆಲೆಸಿವೆ. ವಿಚಾರ ಮತ್ತು ವಿಕಾರಗಳ ನಡುವಿನ ಅಂತರ ಕಡಿಮೆಯಾಗಿದೆ.

ಕನ್ನಡ ಸಾಹಿತ್ಯ ಜಾತಿ- ಕುಲ ವ್ಯವಸ್ಥೆಯನ್ನು ವಿರೋಧಿಸಿದೆ. ಲಿಂಗ ತಾರತಮ್ಯವನ್ನು ವಿರೋಧಿಸಿದೆ. ಪರಂಪರೆಗೆ ಚಲನಶೀಲತೆ ಇರುತ್ತದೆ. ಸಂಪ್ರದಾಯಕ್ಕೆ ಜಡತೆ ಇರುತ್ತದೆ. ಸಂಸ್ಕೃತಿಯೂ ಏಕ ಕಾಲದಲ್ಲಿ ಚಲನಶೀಲತೆ ಮತ್ತು ಜಡತ್ವವನ್ನು ಒಳಗೊಂಡಿರುತ್ತದೆ ಎಂದರು.

ನಾವು ಜೀವಿಸುವ ಸಮಾಜದ ಸಹಬಾಳ್ವೆಗೆ, ದೇಶದ ಸೌಹಾರ್ದತೆಗೆ, ಸಮಾನತೆಗೆ ಧಕ್ಕೆ ಬಂದಾಗ ಪ್ರಜ್ಞಾವಂತರು ಆ ಕಾಲದ ದನಿಯಾಗಬೇಕು. ಜಡತ್ವಕ್ಕೆ ಕನ್ನಡ ಸಾಹಿತ್ಯವು ಕಾಲದ ದನಿಯಾಗಿದೆ. ಸಮಕಾಲೀನ ಸೌಹಾರ್ದತೆಗೆ -ಸಮಾನತೆಗೆ ಧಕ್ಕೆ ಬಂದಾಗ ಎಲ್ಲರೂ ಕಾಲದ ದನಿಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.

ಧರ್ಮ ತಾರತಮ್ಯವಿಲ್ಲದೆ, ಲಿಂಗ ತಾರತಮ್ಯವಿಲ್ಲದೆ, ಜಾತಿ ತಾರತಮ್ಯವಿಲ್ಲದೆ  ಕನ್ನಡವನ್ನು ಕಟ್ಟಲಾಗಿದೆ. ಜೈನರು, ಲಿಂಗಾಯತರು, ಬ್ರಾಹ್ಮಣರು, ಕ್ರೈಸ್ತರು, ಮುಸ್ಲಿಂರು ಸೇರಿದಂತೆ ಎಲ್ಲರೂ ಕನ್ನಡ ಜಗತ್ತನ್ನು ಕಟ್ಟಿದ್ದಾರೆ. ಹಾಗಾಗಿಯೇ ಕನ್ನಡ ಸಾಹಿತ್ಯ ಎಂದಿಗೂ ಸಮಾನತೆ ಮತ್ತು ಸೌಹಾರ್ದತೆ ಪ್ರತಿಪಾದಿಸುತ್ತದೆ ಎಂದರು.

ಕರ್ನಾಟಕ ಎಂದರೆ ಬರಿ ನಕಾಶೆಯಲ್ಲ. ನದಿ, ಹಳ್ಳ, ಹಳ್ಳಿ ,ನೆಲ, ಕಾಡು, ಜನ ಸಮುದಾಯ ಎಲ್ಲವೂ ಆಗಿದೆ. ನಿಸರ್ಗದಲ್ಲಿಯೇ ಭೇದ ಭಾವವಿಲ್ಲ. ನಾವು ನಿಸರ್ಗದಲ್ಲೂ ಭೇದಭಾವ ಮಾಡುತ್ತೇವೆ. ನಿಸರ್ಗದಲ್ಲಿ ಯಾವುದು ಕನಿಷ್ಠ, ಶ್ರೇಷ್ಠ ಎಂಬುದಿಲ್ಲ. ಗಂಧದ ಮರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಜಾಲಿಮರ. ಕೋಗಿಲೆಯಷ್ಟೆ ಕಾಗೆಯೂ ಮುಖ್ಯ.

ನಿರಾವರಿ ಎಂದರೆ ನೀರು ಇರದ ಕಡೆಗೆ ನೀರು ಹರಿಸುವುದು. ಭಾವನಾತ್ಮಕವಾಗಿ ಏಕತ್ವದ ಪ್ರತಿಪಾದನೆ ಮತ್ತು ಸಾಂಸ್ಕೃತಿಕವಾಗಿ ಬಹುತ್ವದ ಪ್ರತಿಪಾದನೆ ಇವೆರಡರ ಸೇರುವಿಕೆಯೇ ಸೌಹಾರ್ದತೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.  ಬಿ. ಎಸ್. ಬಿರಾದಾರ ಮಾತನಾಡಿ, ಕನ್ನಡ ಸಾಹಿತ್ಯ ಆರಂಭದಿಂದಲೂ ಸಮಾನತೆ ಮತ್ತು ಸೌಹಾರ್ದತೆಯ ಪಾಠ ಮಾಡುತ್ತಾ ಬಂದಿದೆ. ಅದನ್ನು ಗ್ರಹಿಸುವ, ಅರ್ಥೈಸುವ ಪ್ರಯತ್ನ ಮತ್ತೆ ಮತ್ತೆ ಮಾಡಬೇಕಿದೆ ಎಂದರು.

ಹಿರಿಯ ಸಾಹಿತಿ ಡಾ. ಜಗನ್ನಾಥ ಹೆಬ್ಬಾಳೆ ಅವರು ಮಾತನಾಡಿ, ಕನ್ನಡದ ಸಾಕ್ಷಿ ಪ್ರಜ್ಞೆಯಾಗಿರುವ ಬರಗೂರರು ತಮ್ಮ ಕನ್ನಡಪರ ಕೆಲಸಗಳಿಂದ  ಮನೆಮಾತಾಗಿದ್ದಾರೆ. ಅವರು ತಾಯಿ ಪ್ರೀತಿಯ ಜಾಯಮಾನದವರು. ಎಂದಿಗೂ ಈ ನೆಲದ ಪ್ರಜಾಪ್ರಭುತ್ವದ, ಸಮಾನತೆಯ ಬಗೆಗೆ ಧ್ಯಾನಿಸಿದವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಇಸಿ ಕಾಲೇಜು ಪ್ರಾಚಾರ್ಯ ಡಾ. ಅಶೋಕ ಕುಮಾರ ವಣಗೀರೆ, ಪ್ರತಿಷ್ಠಾನದ ನಿರ್ದೇಶಕ ಡಾ ಭೀಮಾಶಂಕರ ಬಿರಾದಾರ ಮಾತನಾಡಿದರು.

ಬರಗೂರು ರಾಮಚಂದ್ರಪ್ಪ ಅವರು ಬರೆದ ‘ಸೌಹಾರ್ದ ಭಾರತ’ ಪುಸ್ತಕ ಓದುಗರಿಗೆ ನೀಡುವ ಮೂಲಕ ಸಮಾರಂಭ ಉದ್ಘಾಟಿಸಲಾಯಿತು.

ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟ ಆಕಾಂಕ್ಷ ಬರಗೂರು, ಉಪ ಪ್ರಾಚಾರ್ಯ ಡಾ. ಅರುಣಕುಮಾರ ಯಲಾಲ್,  ಪ್ರತಿಷ್ಠಾನದ ನಿರ್ದೇಶಕ ಡಾ. ಶಿವಾಜಿ ಮೇತ್ರೆ, ಚಂದ್ರಕಾಂತ ಅಕ್ಕಣ್ಣ, ಸಂಜು ಕುಮಾರ ನಡುಕರ, ಅನೋಜಕುಮಾರ, ಶರಣಪ್ಪ ಗದಲೆಗಾಂವ ಮೊದಲಾದವರಿದ್ದರು.

ರೆಜಿಸ್ಟ್ರಾರ್ ಪ್ರೇಮಸಾಗರ ಪಾಟೀಲ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಹುಡೇದ ವಂದಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *