ಶರಣ ಮಾಸ ಪ್ರಾರಂಭೋತ್ಸವದ ನಿಮಿತ್ತವಾಗಿ ವಿಶೇಷ ಲೇಖನ
ಗದಗ
ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು ಕ್ರಿ.ಶ. ೧೧೬೭ರಲ್ಲಿ ಕಪ್ಪಡಿಯ ಸಂಗಮನಾಥನ ಮಹಾಬಯಲಿನಲ್ಲಿ ಶ್ರಾವಣ ಶುದ್ಧ ಪಂಚಮಿಯಂದು ಬಯಲಾದರು.
ಅವರ ಸ್ಮರಣೆಯ ಅಂಗವಾಗಿ ಒಂದು ತಿಂಗಳ ಪರ್ಯಂತರ ‘ವಚನ ಶ್ರಾವಣ’ ಕಾರ್ಯಕ್ರಮವನ್ನು ಗದಗ-ಬೆಟಗೇರಿ ನಗರದ ಹಲವಾರು ಬಡಾವಣೆಗಳಲ್ಲಿ ಮತ್ತು ಗ್ರಾಮಗಳ ಮನೆ ಮನೆಗಳಲ್ಲಿ ಬಸವದಳ-ಬಸವಕೇಂದ್ರ-ಲಿಂಗಾಯತ ಪ್ರಗತಿಶೀಲ ಸಂಘ, ಗದಗ-ಬೆಟಗೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಪ್ರತಿವರ್ಷ ನಡೆಸುತ್ತಾ ಬಂದಿರುತ್ತೇವೆ.
ಈ ವರ್ಷ ಶರಣ ಆಂಜನೇಯ ಬಂಗಾರಪ್ಪ ಕಟಗಿ, ವಿಶ್ವೇಶ್ವರ ಬಡಾವಣೆ, ಇಂಡಿಯನ್ ಬ್ಯಾಂಕ್ ಎದುರುಗಡೆ ಕಳಸಾಪೂರ ರಸ್ತೆ, ಗದಗದಲ್ಲಿ ದಿನಾಂಕ ೨೪-೦೭-೨೦೨೫ ಗುರುವಾರ ಸಂಜೆ ೫-೩೦ ಕ್ಕೆ ಪ್ರಾರಂಭಿಸುತ್ತಿದ್ದೇವೆ. ೨೩-೦೮-೨೦೨೫ ರವರೆಗೆ ಕಾರ್ಯಕ್ರಮ ನಡೆಯುತ್ತವೆ.
ವಚನ, ಧರ್ಮ, ದರ್ಶನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಬಸವಾದಿ ಶಿವಶರಣರ ವಚನಗಳಿಗೆ ಮಹತ್ವದ ಸ್ಥಾನವಿದೆ. ಶಿವಶರಣರು ಕಂಡ ಆಧ್ಯಾತ್ಮದ ಆದರ್ಶಗಳು, ಅವರ ಜೀವನ ಆದರ್ಶ ಮತ್ತು ಅವರು ತೋರಿದ ದಾರಿ ವಚನಗಳಲ್ಲಿ ಮಡುಗಟ್ಟಿ ನಿಂತಿವೆ. ಶಿವಶರಣರ ಅಂತರಂಗದ ಪರಿಶುದ್ಧ ಪ್ರೇಮದಿಂದ ಉಕ್ಕಿ ಹರಿಯುವ ಈ ಪ್ರವಾಹದಲ್ಲಿ ಜನರ ಮನಸ್ಸಿನ ಮಾಲಿನ್ಯ ತೊಳೆಯುವ ಅದ್ಭುತ ಶಕ್ತಿ ಇದೆ.
ಶರಣರ ಜೀವನ ಬಹುಮುಖಿಯಾದುದು. ಅವರು ಒಂದೆಡೆ ಸಾಧಕರು, ಇನ್ನೊಂದೆಡೆ ಸಮಾಜ ನಿರ್ಮಾಪಕರು. ವರ್ಗ, ವರ್ಣ, ಲಿಂಗ, ಬೇಧವಿಲ್ಲದ, ಶೋಷಣೆಯಿಂದ ಮುಕ್ತವಾದ ಸಮಾಜವನ್ನು ಕಟ್ಟುವುದು ಅವರ ಗುರಿಯಾಗಿತ್ತು. ಸಕಲ ಜೀವಾತ್ಮರಿಗೆ ಲೇಸನೆ ಬಯಸುವುದು ಅವರ ಬದುಕಿನ ದಾರಿಯಾಗಿತ್ತು. ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣವನ್ನು ಶಿವಶರಣರು ತಮ್ಮ ಗುರಿಯನ್ನು ಸಾಧಿಸಲು ಬಳಸಿಕೊಂಡಿರುವ ಮಾಧ್ಯಮವೇ ವಚನಗಳು.
ಜನರಾಡುವ ಕನ್ನಡ ಭಾಷೆಯಲ್ಲಿ ರಚಿತವಾದ ಈ ವಚನಗಳು ಧರ್ಮವನ್ನು ಬೋಧಿಸಿದ್ದರಿಂದ ಧರ್ಮ ಗ್ರಂಥಗಳಾಗಿ, ತತ್ವವನ್ನು ಒಳಗೊಂಡಿರುವದರಿಂದ ತಾತ್ವಿಕ ಗ್ರಂಥಗಳಾಗಿ, ಸಾಹಿತ್ಯಿಕ ಮೌಲ್ಯಗಳನ್ನು ಪ್ರತಿಪಾದಿಸುವುದರಿಂದ ಉತ್ತಮ ಸಾಹಿತ್ಯ ಕೃತಿಗಳಾಗಿ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿವೆ. ಆಧುನಿಕ ವಿದ್ವಾಂಸರು ವಚನಗಳು ನಮ್ಮ ಕನ್ನಡ ಸಾಹಿತ್ಯದ ಉಪನಿಷತ್ತುಗಳು, ವಚನಕಾರರು ನಮ್ಮ ಕನ್ನಡ ನಾಡಿನ ರಸಋಷಿಗಳು ನಾಡು ಕಂಡ ಶ್ರೇಷ್ಠ ಅನುಭಾವಿಗಳು ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಶ್ರಾವಣ ಅಂದರೆ ಭಾರತೀಯ ದಿನದರ್ಶಿಕೆಯಲ್ಲಿ ಒಂದು ಮಾಸ. ಅದರ ಅದರ ಅನ್ವರ್ಥತೆ ಶ್ರವಣದಲ್ಲಿದೆ. ಶ್ರವಣ ಎಂದರೆ ಕೇಳುವುದು. ಈ ತಿಂಗಳು ಶ್ರಾವಣ ಮಾಸವಾದುದರಿಂದ ಶುದ್ಧವಾದ ಮನಸ್ಸಿನಿಂದ ಪವಿತ್ರ ಸಂಗತಿಗಳನ್ನು, ಶರಣರ ವಚನಗಳ ಚಿಂತನೆಯನ್ನು ಕೇಳಬೇಕೆಂಬುದೇ ಇದರ ಉದ್ದೇಶ. ಆದರೆ ಈ ಉದ್ದೇಶಕ್ಕೆ ಹೊರತಾದ ಅನೇಕ ರೋಚಕ ಸಂಗತಿಗಳೇ ಮುಖ್ಯವೆನಿಸಿ ಮೌಢ್ಯಗಳು, ಕಂದಾಚಾರಗಳು, ಮೇಲು ಕೀಳು, ಜಾತಿಯ ಸಂಕೋಲೆಗಳು, ಅವರವರ ಕರ್ಮ ಎಂಬಿತ್ಯಾದಿಗಳು, ಆಗ ಉಚ್ಛ ಕುಲದವರೆಂದು ಹೇಳಿಕೊಳ್ಳುತ್ತಿದ್ದವರಿಂದ ಹೇರಲ್ಪಟ್ಟವು. ದೀನದಲಿತರು ಶೋಷಣೆಗೆ ಒಳಗಾದರು. ಇಡೀ ಭಾರತದಲ್ಲಿ ಆದಂತೆ ಕರ್ನಾಟಕಲ್ಲಿಯೂ ಕೂಡ ಜಾತಿಯೇ ಮೇಲಾಗಿ, ಅನೇಕ ಮೌಢ್ಯಗಳನ್ನು ಜನರು ನಂಬುವಂತೆ ಮಾಡಿದರು.
ಆದರೆ ವಚನ ಸಾಹಿತ್ಯವು ಹೊರಗೆ ದೇವರನ್ನು ಹುಡುಕಿಸುವುದಲ್ಲ, ಜನರ ಅಂತರಂಗದಲ್ಲಿಯೇ ದೇವರನ್ನು ತೋರಿಸುತ್ತವೆ. ಇಂತಹ ವೈಚಾರಿಕ ಕಾರ್ಯಕ್ರಮ ಗದಗ-ಬೆಟಗೇರಿ ಮಹಾಜನತೆ ಈ ವಚನ ಶ್ರಾವಣ-೨೦೨೫ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸುತ್ತೇವೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs