ವಚನ ದರ್ಶನ ಪುಸ್ತಕವನ್ನು ಹೊರ ತಂದಿರುವ ತಂಡದ ಸದಸ್ಯರೊಬ್ಬರ ಜೊತೆ ಬಸವ ಮೀಡಿಯಾದ ಪರವಾಗಿ ಮಾತನಾಡಿದೆ.
ಎರಡು ಸಾರಿ ಫೋನಿನಲ್ಲಿ ಒಟ್ಟು 38 ನಿಮಿಷ ಮಾತನಾಡಿದೆವು. ಆದರೆ ಕೊನೆಯಲ್ಲಿ ಇದನ್ನು ಪ್ರಕಟಿಸುವ ವಿಷಯದಲ್ಲಿ ಕೆಲವು ಬಿನ್ನಾಭಿಪ್ರಾಯ ಬಂದಿದ್ದರಿಂದ, ಅವರ ಹೆಸರು ಹಾಕದಿರಲು ನಿರ್ಧರಿಸಿದ್ದೇವೆ.
ಇದು ವಚನ ದರ್ಶನದ ಮುಖ ಪುಟದ ಮೇಲೆ ನಡೆದ ಚರ್ಚೆಯ ಭಾಗ. ಮುಂದಿನ ದಿನಗಳಲ್ಲಿ ಪುಸ್ತಕದ ಬೇರೆ ಬೇರೆ ಅಂಶಗಳನ್ನು ಕುರಿತು ನಡೆದ ಚರ್ಚೆಗಳನ್ನೂ ಪ್ರಕಟಿಸುತ್ತೇವೆ.
ಪ್ರ) ವಚನ ದರ್ಶನ ಮುಖ ಪುಟದ ಹಿಂದಿರುವ ಕಲ್ಪನೆಯೇನು?
ಅದು ಒಬ್ಬ ಧ್ಯಾನಸ್ಥ ಯುವ ಸಾಧಕ ಶರಣನ ಚಿತ್ರ. ವಚನಗಳನ್ನು ಧ್ಯಾನಿಸುತ್ತ ಒಬ್ಬ ಯುವ ಸಾಧಕ ಹೇಗೆ ಸಾಧನೆ ಮಾಡುತ್ತಾನೆ ಎನ್ನುವ ಕಲ್ಪನೆ ಅದರಲ್ಲಿದೆ. ಯುವಕರಿಗೆ ಸಂದೇಶ ಕೊಡಲು ಈ ತರಹದ ಮುಖಪುಟ ಮಾಡಿದ್ವಿ.
ಪ್ರ) ‘ಯುವ ಶರಣ’ ಅಂತ ಪದ ಬಳಸಿದ್ರಿ. ಯಾವ ರೀತಿಯಿಂದ ಈ ವ್ಯಕ್ತಿ ಯುವ ಶರಣ. ಈ ಮುಖಪುಟಕ್ಕೂ ಶರಣ ಸಂಪ್ರದಾಯಕ್ಕೂ ಇರೋ ಸಂಬಂಧವೇನು?
ನಾವು ವಚನಗಳನ್ನು ದರ್ಶನ ಅಂತ ನೋಡ್ತೀವಿ. ಆ concept ಮೇಲೆ ಬಿಡಿಸಿರುವ ಚಿತ್ರ ಇದು.
ಧ್ಯಾನಸ್ಥ ಸ್ಥಿತಿಯಲ್ಲಿದ್ದು ದರ್ಶನವನ್ನು ನೋಡಲು ಬಯಸುತ್ತಿರುವ ಯುವ ಸಾಧಕನನ್ನು ಈ ಚಿತ್ರ ತೋರಿಸುತ್ತದೆ.
ಪ್ರ) ಶರಣ ಸಂಪ್ರದಾಯದಲ್ಲಿ ಈ ತರಹದ ಚಿತ್ರ ಇಲ್ಲಿಯತನಕ ಕಾಣಿಸಿಕೊಂಡಿಲ್ಲ. ಇದೇ ವಿವಾದಕ್ಕೆ ಕಾರಣವಾಗಿದೆಯಾ?
ಹೌದು ಇಲ್ಲಿಯತನಕ ಈ ರೀತಿ ಚಿತ್ರ ಬಂದಿಲ್ಲ…ಆಮೇಲೆ ಇದು 12ನೇ ಶತಮಾನದ ಶರಣರ ಚಿತ್ರ ಅಲ್ಲ.
ವಚನಗಳು ಲಿಂಗಾಯತರಿಗೆ ಮಾತ್ರ ಅಲ್ಲ. ಅವು ವೈಶ್ವಿಕವಾಗಿರುವವು. ಅವುಗಳ ಮೌಲ್ಯಗಳು ಎಲ್ಲರಿಗೂ apply ಆಗ್ತವೆ.
ಈಗಿರುವ ಚಿತ್ರಗಳನ್ನು ಬಳಸಿದ್ರೆ ಅವು ಕೇವಲ ಲಿಂಗಾಯತಕ್ಕೆ ಮಾತ್ರ ಆಗ್ತವೆ. ನಾವು ವಿಶ್ವ ದೃಷ್ಟಿಯಿಂದ ನೋಡಬೇಕು ಅಂತ ಎಲ್ಲಾ ಜಾತಿ, ಜನ, ಧರ್ಮ, ಪಂಥ, ಮತಗಳನ್ನು ಮೀರುವಂತಹ ಮುಖಪುಟ ಮಾಡಿದ್ವಿ.
ಪ್ರ) ಅಂದರೆ ಉದ್ದೇಶಪೂರ್ವಕವಾಗಿಯೇ ಸಾಂಪ್ರದಾಯಿಕ ಶರಣನ ಬದಲು ಈ ಚಿತ್ರ ಮಾಡಿದ್ರಾ?
ನಾವು ಮುಖಪುಟ ಮಾಡಿದಾಗ ಇಷ್ಟೆಲ್ಲಾ ವಿಚಾರ ಮಾಡಿರಲಿಲ್ಲ. ಭಕ್ತಿ ಸ್ಥಿತಿಯಲ್ಲಿ ಧ್ಯಾನಿಸುತ್ತಿರುವ ಶುದ್ದ ಸಾಧಕನನ್ನು ತೋರಿಸುವುದು ನಮ್ಮ ಉದ್ದೇಶವಾಗಿತ್ತು. ಈ ರೀತಿ ವಿವಾದ ಆಗೊತ್ತೆ ಅಂತ ಗೊತ್ತೂ ಇರಲಿಲ್ಲ.
ಮುಖಪುಟಕ್ಕೆ ಮೊದಲು ಒಳ್ಳೆ ಅಭಿಪ್ರಾಯ ಬಂತು. ಸುಮಾರು ಜನ ಇದನ್ನು ಮೊದಲು ಬುದ್ಧ, ಶಿವ, ಯೋಗಿ ಅಂತೆಲ್ಲ ಅಂದುಕೊಂಡ್ರು ಆಮೇಲೆ ವಿವಾದ ಶುರುವಾಯ್ತು.
ಪ್ರ) ಲಿಂಗಾಯತೇತರಿಗೂ ತಲುಪುವಂತಹ ಚಿತ್ರ ಬಿಡಿಸಬೇಕು ಅನ್ನೋ ಉದ್ಧೇಶ ಇದ್ರೆ, ಒಂದು ವೈದಿಕ ಪರಂಪರೆಯ ಚಿತ್ರ ಬಳಸುವ ಅವಶ್ಯಕತೆಯಿತ್ತಾ?
…ವೈದಿಕ ಅಂದ್ರೆ ಏನು ತಪ್ಪಿದೆ ಅನ್ನೋದು ನಂಗೆ ಅರ್ಥ ಆಗ್ತಾ ಇಲ್ಲ… ಇದು ವೈದಿಕ ಪರಂಪರೆಯ ಚಿತ್ರ ಅನ್ನೋದಿಕ್ಕೆ ಯಾವ ಆಧಾರನೂ ಇಲ್ಲ, ಅವರು ತಪ್ಪು ಅರ್ಥ ಮಾಡಿಕೊಂಡ್ರೆ ನಾವೇನೂ ಮಾಡೋದಿಕ್ಕೆ ಆಗೋದಿಲ್ಲ. ಕಾಮಾಲೆ ಕಣ್ಣಿಗೆ ಎಲ್ಲ ಹಳದಿ ಕಾಣಿಸೊತ್ತೇ.
ಪ್ರ) ಮುಖ ಪುಟದಲ್ಲಿ ಯುವ ಸಾಧಕ ಕುಳಿತಿರುವ ಭಂಗಿ ವೈದಿಕ ಪರಂಪರೆಯ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತೆ. ಉದಾಹರಣೆಗೆ ಇದೇ ಭಂಗಿಯಲ್ಲಿ ಕುಳಿತಿರುವ ಶ್ರೀ ರಾಮಚಂದ್ರರ ಚಿತ್ರವೂ ಇದೆ.
ವಿವಾದ ಅವರು ಮಾಡಿಕೊಂಡಿದ್ದಾರೆ. ಅವರು conceptually mistaken ಆಗಿದ್ದಾರೆ
ಇದು ವೈದಿಕ ಪರಂಪರೆ ಅಲ್ಲ ಅನ್ನೋದೇ ಅವರ ವಾದ. ಇದೆಲ್ಲಾ ನಮ್ಮ ತಲೆಯಲ್ಲಿ ಇರಲೇ ಇಲ್ಲ
ವಚನಗಳನ್ನ ವಚನಗಳನ್ನಾಗಿ ಮಾತ್ರ ನೋಡಬೇಕು ಅನ್ನುವುದು ಮಾತ್ರ ನಮ್ಮ ತಲೆಯೊಳಗೆ ಇತ್ತು.
ಪ್ರ) ನಿಮಗೆ ಮುಖ ಪುಟಕ್ಕೆ ಬಳಸಲು ಯಾವುದೇ ಶರಣರ ಚಿತ್ರ ಸಿಗಲಿಲ್ಲವೇ ಅನ್ನೋ ಪ್ರಶ್ನೆಯಿದೆಯಲ್ಲಾ?
ನಾವು ಹಿಂದೆ ಎರಡು ಪುಸ್ತಕಗಳಲ್ಲಿ ಶರಣರ ಚಿತ್ರಗಳನ್ನೇ ಬಳಸಿಕೊಂಡಿದ್ವಿ. ಅವು, ಇದು ಎಲ್ಲಾ ಒಂದೇ ರೀತಿ ಮುಖಪುಟ ಆಗೊತ್ತೆ ಅಂತ, innovative design ಮಾಡಬೇಕೂಂತ ಇದನ್ನು ಮಾಡಿದ್ವಿ. ಮುಖಪುಟ ಇಷ್ಟೊಂದು ವಿವಾದ ಆಗೊತ್ತೆ ಅಂತ ನಾವು ಅಂದುಕೊಂಡಿರಲಿಲ್ಲ.
ಪ್ರ) ಇಷ್ಟೊಂದು ವಿವಾದ ಆಗಲು ಕಾರಣವೇನು?
ಕೊರಳಲ್ಲಿ ಹಾಕಿರೋದು ರುದ್ರಾಕ್ಷಿ ಅಲ್ಲ ತುಳಸೀಮಾಲೆ ಅಂತಾರೆ. ಮುಂದಿರೋದು ವೇದಗಳ ಪುಸ್ತಕ ಅನ್ನೋದು ಅವರ ಕಲ್ಪನೆ. ಹಿಂದೆ ಅಷ್ಟಾವರಣ ಹಾಕಿದ್ರೆ ಅದಕ್ಕೂ ಏನೋ ಹೇಳ್ತಾರೆ. ಇದು ಬಸವಣ್ಣನವರ ಚಿತ್ರ ಅಲ್ಲ, ಆದರೆ ಇದು ಬಸವಣ್ಣನವರ ಚಿತ್ರ ಅಂತಾರೆ. ಇದಕ್ಕೆ ನಾವೇನು ಹೇಳೋದಿಕ್ಕೆ ಸಾಧ್ಯ.
ಪ್ರ) ಪುಸ್ತಕ ಮತ್ತೆ ಮುದ್ರಣವಾದರೆ ಮುಖಪುಟ ಬದಲಿಸುತ್ತೀರಾ?
ಸದ್ಯಕ್ಕೆ ಮುಖಪುಟ ಹಿಂತೆಗೆದುಕೊಳ್ಳುವ ಆಲೋಚನೆಯಿಲ್ಲ.
ನಿಮ್ಮ ಅಮ್ಮನ ಫೋಟೋ ಪಕ್ಕದಲ್ಲಿ ಬೇರೇ ಯಾವದೋ ಒಬ್ಬನ ಫೋಟೋ ಹಾಕಿ ಇವನೇ ನಿಮ್ಮಪ್ಪ ಅಂದರೆ ನಿಮಗೇ ಖುಶಿಯಾಗಬಹುದೇನೋಪಾ. ಇರಲಿ ವೈದಿಕ ಫೋಟೋ ಅಂತ ಒಪ್ಪಿದಿರಲ್ಲಾ ಅದಕ ನಿಮಗ ವೈಚಾರಿಕವಾಗಿ ಬೆತ್ತಲೆ ಮಾಡತಾ ಇರೋದು.
ಮಾನ್ಯ ಶರಣ ಕಮ್ಮಾರ ಅವರೇ
ವಚನಗಳ ಅನುಯಾಯಿಯಾಗಿ ಶರಣರಂತೆ ಬದುಕು ತೋರ್ಪಡಿಸುವ ತಮಗೆ
ಚರ್ಚೆ ಅಥವಾ ವಾದ ಅಭಿಪ್ರಾಯಗಳಲ್ಲಿ ಅಣ್ಣ ಬಸವಣ್ಣ ಸದುವಿನಯ ಎಂದು ಹೇಳಿದ್ದಿಲ್ಲವೇ
ಅಂಥ ಶರಣರ ಮಾರ್ಗದಲ್ಲಿ ನಡೆಯುತ್ತಿದ್ದಿರಿ ಎಂದುಕೊಳ್ಳುವ ತಾವು ಮತ್ತು ಮ್ಮ ಪ್ರತಿಕ್ರಿಯೆ ಎಷ್ಟು ಕೀಳುಮಟ್ಟದ್ದು
ಮಾನ್ಯರೆ, ಬಳಕೆಯಾಗುವ ಶಬ್ದಗಳಲ್ಲಿಯೂ ಪ್ರೌಢತೆ ಬೇಕಿತ್ತಲ್ಲವೇ
ತಮ್ಮ ಪ್ರತಿಕ್ರಿಯೆ ಸ್ವಭಾವ ಮತ್ತು ಧ್ವನಿಗಳನ್ನು ಅವಲೋಕಿಸಿದರೇ ಶರಣ ಬಸವಣ್ಣನ ಪರಿಕಲ್ಪನೆಯಲ್ಲಿ ಇಂಥ ಶರಣ ಇಲ್ಲ ಬಿಡಿ.
ಬೈಗುಳಗಳು ಎಲ್ಲರಿಗೂ ಗೊತ್ತು. ಉಪಮೆ ಉಪಮಾನಗಳೂ ಗೊತ್ತು
ಜಗತ್ತಿನ ಕಾಲಯಾನದಲ್ಲಿ ಬಂದು ಹೋಗುವ ಕ್ರಿಯೆಯಲ್ಲಿ ವರ್ತನೆಯಿಂದಲೇ ಗುಣಸ್ವಭಾವ ತೋರಿ ಕ್ಷುದ್ರವಾಗಿ ಬದುಕಿದಂತಾಗಬಾರದಲ್ಲವೇ
ತಮ್ಮ ತಂದೆ ಈಶ್ವರ ಕಮ್ಮಾರ ಅವರ ಬಗ್ಗೆ ಅಪಾರ ಗೌರವವಿಟ್ಟುಕೊಂಡವನು ನಾನು
ಸದುವಿನಯ ಸದ್ವರ್ತನೆ ಅವರಿಂದಲೇ ಕಲಿಯಬೇಕು ಎನ್ನುವಷ್ಟರ ಮಟ್ಟಿಗೆ ಸಾತ್ವಿಕರು
ಅಂಥವರ ಮಗನ ಬಾಯಿಂದ ಇಂಥ ಮಾತು ಈ ತೆರನಾದ ಆಕ್ರೋಶ, ವಿವೇಕ ಕಳೆದುಕೊಂಡವರಂತೆ ಮಾತುಗಳು ಅನಪೇಕ್ಷೀಯ