ನೆಲಮಂಗಲ:
ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ವಚನ ಸಾಹಿತ್ಯ ವಿಶ್ವದ ಮೇರು ಸಾಹಿತ್ಯವಾಗಿದೆ ಎಂದು ಪವಾಡ ಶ್ರೀ ಬಸವಣ್ಣದೇವರ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಬಸವೇಶ್ವರ ಆಂಗ್ಲ ಶಾಲೆಯಿಂದ ಅವಿರಳ ಜ್ಞಾನಿ ಚನ್ನಬಸಣ್ಣನವರ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಅಂತರ್ ಶಾಲಾ ವಚನಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿ ಕ್ರಾಂತಿ ಉಂಟು ಮಾಡಿದ ಶರಣರ ವಚನಗಳು ಆಧ್ಯಾತ್ಮದ ನೆಲೆಯೊಳಗೆ ಬದುಕಿನ ಸಾರ ತತ್ವವನ್ನು ಸಾರಿ ಜಟಿಲವಾಗಿದ್ದ ಮನುಷ್ಯನ ಬದುಕನ್ನು ಸರಳಗೊಳಿಸಿದೆ.
ಹನ್ನೆರಡನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯರಂಥ ಶರಣರ ಆದರ್ಶಗಳು ಪ್ರತಿಯೊಬ್ಬರ ಜೀವನದ ಪಾಠಗಳಾಗಬೇಕಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ಕೇವಲ ಪದವಿಗಳಿಗೆ ಸೀಮಿತ ವಾಗದೇ ಜೀವನದ ಪಾರಮಾರ್ಥಿಕ ಹಾಗೂ ಲೌಕಿಕ ಜ್ಞಾನವನ್ನು ನೀಡಬೇಕಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ರಮೇಶ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿದ್ದ ಜಾತಿ ಬೇಧ, ಮೇಲು- ಕೀಳೆಂಬ ಅಜ್ಞಾನದ ಕತ್ತಲನ್ನು ಕಳೆದು ವಚನಗಳ ಮೂಲಕ ಜ್ಞಾನದ ಬೆಳಕು ಸಾರಿದ ವಚನಕಾರರ ಸಂದೇಶಗಳು ಇಂದಿನ ಜನಮಾನಸಕ್ಕೆ ಅತಿ ಉಪಯುಕ್ತವಾಗಿದೆ.
ಮನುಷ್ಯನ ಉತ್ತಮ ಜೀವನಕ್ಕೆ ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ ಎಂಬ ವಚನವೊಂದರ ಸಾರ ಸಾಕು ಎಂದರು. ವಚನ ಗಾಯನ ಸ್ಪರ್ಧೆ ಬಹುಮಾನ ವಿತರಣೆ:
ತಾಲೂಕಿನ 30 ಶಾಲೆಗಳ ಪೈಕಿ ಸುಮಾರು 310 ಮಂದಿ ವಿದ್ಯಾರ್ಥಿಗಳು ಅಂತರ್ ಶಾಲಾ ವಚನ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದರು. ಪಿಆರ್‌ಜಿ ಕೆಜಿ ವಿಭಾಗ, ಎಲ್ ಕೆಜಿ ವಿಭಾಗ ಸೇರಿದಂತೆ ಯುಕೆಜಿ ವಿಭಾಗದ ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆ ನಡೆಸಿದ್ದು ಪ್ರಥಮ ಬಹುಮಾನ 5ಸಾವಿರ ನಗದು, ದ್ವಿತೀಯ ಬಹುಮಾನ 3ಸಾವಿರ ನಗದು, ತೃತೀಯ ಬಹುಮಾನ 2ಸಾವಿರ ನಗದು ಜತೆಗೆ 9 ಮಂದಿ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ 1 ಸಾವಿರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಶಾಲ ಆಂಗ್ಲ ಶಾಲೆ ಸಂಸ್ಥಾಪಕ ಟಿ.ಕೆ. ನರಸೇಗೌಡ, ಹರ್ಷ ಇಂಟರ್ ನ್ಯಾಷನಲ್ ಶಾಲೆ ಮುಖ್ಯಶಿಕ್ಷಕಿ ಪೂರ್ಣಿಮಾ, ಎಂಎಸ್. ಇಂಟರ್ ನ್ಯಾಷನಲ್ ಶಾಲೆ ಮುಖ್ಯ ಶಿಕ್ಷಕಿ ಉತ್ತಿಷ್ಟಾ, ಆಡ್ವೆಂಚರ್ ಕಿಡ್ಸ್ ಶಾಲೆ ಮುಖ್ಯ ಶಿಕ್ಷಕಿ ಪಲ್ಲವಿ, ಬಸವೇಶ್ವರ ಆಂಗ್ಲ ಶಾಲೆ ಮುಖ್ಯ ಶಿಕ್ಷಕಿ ನಿರ್ಮಲ, ಬಸವಣ್ಣ ದೇವರ ಮಠದ ಸಹಶಿಕ್ಷಕಿಯರಾದ ಸುವರ್ಣಮ್ಮ, ಮಮತ, ಕುಮಾರಿ, ಸುಚಿತ್ರ, ಮೇಘನಾ, ಲಘುಭಾಮಾಕ್ಷಿ, ಲಾವಣ್ಯ, ಲಕ್ಷ್ಮಮ್ಮ, ನಂದಿನಿ, ಸುಮ, ಮಂಜುನಾಥ, ಯುವರಾಜ, ಶಕುಲ ಮತ್ತಿತರರು ಉಪಸ್ಥಿತರಿದ್ದರು.
