ಧನ್ನೂರಾ (ಕೆ) ಗ್ರಾಮದಲ್ಲಿ ವಚನ ವಿಜಯೋತ್ಸವ
ಬೀದರ:
ವಚನಗಳು ಶ್ರೇಷ್ಠ ಮಂತ್ರಗಳು, ನೆಮ್ಮದಿಯ ಬದುಕಿನ ಸೂತ್ರಗಳು. ಶರಣರ ವಚನಗಳು ಪರುಷ ಮಣಿ ಇದ್ದಂತೆ. ಪರುಷ ಹುಟ್ಟಿದ ಲೋಹ ಬಂಗಾರವಾಗುವಂತೆ, ವಚನಗಳು ಓದಿದರೆ ಮಾನವ ಜೀವನ ಪರಿವರ್ತನೆಯಾಗುತ್ತದೆ ಎಂದು ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಸ್ವಾಮೀಜಿ ತಿಳಿಸಿದರು.
ಧನೂರ (ಕೆ )ಗ್ರಾಮದಲ್ಲಿ ನಡೆದ 770 ಪ್ರವಚನಗಳ ಅಭಿಯಾನದ ನಿಮಿತ್ಯ ಐದು ದಿನಗಳ ವಚನ ಜೀವನ ಪ್ರವಚನದ ಸಮಾರೋಪ ಸಮಾರಂಭ ಹಾಗೂ ವಚನ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮರ್ತ್ಯದ ಮಾನವರ ಮನದ ಮೈಲಿಗೆಯನ್ನು ತೊಳೆಯಲು ವಚನಗಳಿಂದ ಮಾತ್ರ ಸಾಧ್ಯ. ದೇವರನ್ನು ಕಾಣುವ ದಾರಿ ಯಾವುದು ಎಂದರೆ ವಚನಗಳು. ಅಂತಹ ವಚನಗಳು ಜನಮಾನಸದಲ್ಲಿ ಬಿತ್ತಿ ಬೆಳೆಯಬೇಕೆಂಬ ಸದುದ್ದೇಶದಿಂದ ಲಿಂಗೈಕ್ಯ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿ ವಚನ ವಿಜಯೋತ್ಸವ ಕಾರ್ಯಕ್ರಮ ನಾಡಿನಾದ್ಯಂತ ಆಚರಿಸುತ್ತಾ ಬಂದಿರುವರು.
ಅಕ್ಕನವರ ಸಂಕಲ್ಪದಂತೆ ಹಳ್ಳಿ ಹಳ್ಳಿಗಳಲ್ಲಿಯೂ ವಚನ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಿಗೆ ಸನ್ಮಾರ್ಗದತ್ತ ಕರೆದೊಯ್ಯುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರುವ ಶರಣ ಸಾಹಿತಿಗಳಾದ ರಮೇಶ ಮಠಪತಿಯವರು, ಶರಣರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮಗಾಗಿ ವಚನ ಸಾಹಿತ್ಯವನ್ನು ಉಳಿಸಿ ಹೋಗಿದ್ದಾರೆ. ಅಕ್ಕನವರ ಮಾನಸಪುತ್ರರಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ನಾಡಿನಾದ್ಯಂತ 770 ಪ್ರವಚನಗಳು ಮಾಡುವ ಮುಖಾಂತರ, ಹಳ್ಳಿ ಹಳ್ಳಿಗಳಲ್ಲಿ ವಚನ ವಿಜಯೋತ್ಸವ ಆಚರಿಸುತ್ತ ವಚನಗಳಿಗೆ ಪರಮೋಚ್ಚ ಗೌರವವನ್ನು ಕೊಟ್ಟು ತಮ್ಮ ತಲೆಯ ಮೇಲೆ ವಚನ ಸಾಹಿತ್ಯದ ಕಟ್ಟನ್ನು ಹೊತ್ತು ಮೆರೆಸುತ್ತಿರುವುದು ಮಾದರಿಯ ಕಾರ್ಯ.

ಗ್ರಾಮದ ಮಹಿಳೆ ಮಕ್ಕಳು ಹಿರಿಯರೆಲ್ಲ ವಚನ ಸಾಹಿತ್ಯ ತಲೆಮೇಲೆ ಹೊತ್ತು ವಚನ ವಿಜಯೋತ್ಸವ ಆಚರಿಸುವುದು ನೋಡಿದರೆ ನಿಜಕ್ಕೂ ಆನಂದದ ಕಣ್ಣೀರು ಬರುತ್ತದೆ ಎಂದು ತಿಳಿಸಿದರು.
ನೀರಿನಲ್ಲಿ ಮೀನು ಸುಳಿದಾಡಿದರೆ ನೀರು ತಿಳಿಯಾಗುವಂತೆ ಸಮಾಜದಲ್ಲಿ ಸ್ವಾಮಿಗಳು ತಿರುಗಾಡಿದರೆ ಸಮಾಜ ಸದೃಢ ಮತ್ತು ಸಂಸ್ಕಾರಯುತವಾಗಿ ನಡೆಯುತ್ತದೆ. ಎಲ್ಲರೂ ದೇಶವಿದೇಶ ಸುತ್ತಿ ಬರಬೇಕೆಂದು ಯೋಚಿಸಿದರೆ ಪೂಜ್ಯರು ಹಳ್ಳಿಹಳ್ಳಿಗಳಲ್ಲಿ ಪ್ರವಚನಗಳನ್ನು ಮಾಡುತ್ತಾ ವಚನ ವಿಜಯೋತ್ಸವ ಆಚರಿಸುತ್ತಾ ಜನರಲ್ಲಿ ಬಸವತತ್ವ ನೆಲೆಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮದಲ್ಲಿ ಸಂಭ್ರಮದ ವಾತಾವರಣ ತುಂಬಿ ತುಳುಕುತ್ತಿತ್ತು. ಕಾರ್ಯಕ್ರಮದಲ್ಲಿ ಡಾ. ಎಸ್. ಆರ್. ಮಠಪತಿ, ಚನ್ನಬಸಪ್ಪ ಪತಂಗೆ, ಪ್ರಕಾಶ ಮಠಪತಿ, ಬಾಬುರಾವ ರಾಜೋಳೆ, ಸಿ.ಎಸ್. ಗಣಾಚಾರಿ, ಸೋಮನಾಥಪ್ಪ ರಾಜೇಶ್ವರೆ, ವಿಜಯಲಕ್ಷ್ಮಿ ರಾಜೋಳೆ, ಓಂಕಾರ್ ಬಿರಾದರ, ಶಿವಶಂಕರ ಬಚ್ಚನೆ ಸಂಗೀತ ಬಿರಾದಾರ, ನೀಲಮ್ಮನ ಬಳಗ ಗೋಟಾ೯ ಗ್ರಾಮದ ತಾಯಂದಿರು ಭಾಗವಹಿಸಿದರು.
