ವಚನಗಳಿಂದ ನಾಡಿಗೆ ಕಲ್ಯಾಣ; ಸಾಣೇಹಳ್ಳಿ ಶ್ರೀ

ಗಣೇಶ ಅಮೀನಗಡ
ಗಣೇಶ ಅಮೀನಗಡ

ಹೊಸದುರ್ಗ:

ವಚನಗಳು ನಮ್ಮ ಬದುಕನ್ನು ಬದಲಿಸಲು ನೆರವಾಗುತ್ತವೆ‌. ಇದಕ್ಕಾಗಿ ಮತ್ತೆ ಮತ್ತೆ ವಚನ ಸಾಹಿತ್ಯ ಓದಿದರೆ ನಮ್ಮ ನಾಡು ಕಲ್ಯಾಣವಾಗುತ್ತದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ಶ್ರೀಮಠ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಮಂಗಳವಾರ ನಡೆದ ಚಿಂತನ ಗೋಷ್ಠಿಯ ಸಾನ್ನಿಧ್ಯ‌ ವಹಿಸಿ ಅವರು ಮಾತನಾಡಿದರು.

ಸತ್ಯವಂತ, ನೀತಿವಂತ, ಸಾತ್ವಿಕ, ಸಜ್ಜನ ಎನ್ನಿಸಿಕೊಂಡಾಗ ಶ್ರೇಷ್ಠ, ಆದರ್ಶರೆನಿಸಿಕೊಳ್ಳಲು ಸಾಧ್ಯ. ಆದರೆ ಆದರ್ಶವು ಅಂತರಂಗ ಹಾಗೂ ಬಹಿರಂಗದಲ್ಲೂ ಇರಬೇಕು ಎಂದರು.

12ನೇ ಶತಮಾನದಲ್ಲಿ ಅನೇಕ ಶರಣರು ತಳಸಮುದಾಯದವರು. ಅವರಲ್ಲಿ ಆದರ್ಶವಿತ್ತು. ಬೀದಿಯಲ್ಲಿ ಕಸಗುಡಿಸುವ ಸತ್ಯಕ್ಕ ಶರಣೆ. ಬೀದಿ ಗುಡಿಸುವಾಗ ಚಿನ್ನದಂಥ ಬೆಲೆ ಬಾಳುವ ವಸ್ತುಗಳು ಸಿಕ್ಕರೂ ಕೈ ಮುಟ್ಟಿ ಎತ್ತಲ್ಲ ಎಂದು ಪ್ರತಿಜ್ಞೆ ಮಾಡುತ್ತಾಳೆ. ನುಡಿದಂತೆ ನಡೆದ ಸತ್ಯಕ್ಕ ಆದರ್ಶಳು. ಹೀಗೆಯೇ ನುಲಿಯ ಚಂದಯ್ಯ, ಮಡಿವಾಳ ಮಾಚಿದೇವ ಮೊದಲಾದವರನ್ನು ಉದಾಹರಿಸಬಹುದಾಗಿದೆ ಎಂದು ಹೇಳಿದರು.

ಪಾರ್ಥೇನಿಯಂದಿಂದ ಉತ್ಕೃಷ್ಠ ಬೆಳೆ ತೆಗೆಯಲು ಸಾಧ್ಯವಿಲ್ಲ. ಸುಳ್ಳು ಹೇಳುವುದು, ಸೋಮಾರಿತನ ಇಂಥವೆಲ್ಲ ಪಾರ್ಥೇನಿಯಂ ಇದ್ದಂತೆ. ಅವನ್ನು ಕಿತ್ತು ಹಾಕಿ ಬೇರೆ ಸಸಿ ನೆಟ್ಟು ನೀರು, ಗೊಬ್ಬರ ಹಾಕಿದರೆ ಒಳ್ಳೆಯ ಬೆಳೆ ಬರಲು ಸಾಧ್ಯ. ಇದಕ್ಕಾಗಿ ಒಳ್ಳೆಯವರ ಸಹವಾಸ, ಒಳ್ಳೆಯ ಕೆಲಸ ಮಾಡಿದಾಗ ಆದರ್ಶವಾಗಲು ಸಾಧ್ಯ. ಅನಾಚರಗಳನ್ನು ದೂರ ಮಾಡಿ, ಸದಾಚಾರ ರೂಢಿಸಿಕೊಂಡರೆ ಆದರ್ಶರಾಗಲು ಸಾಧ್ಯ ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ಹೊಸದುರ್ಗದ ದೀಪಿಕಾ ಸತೀಶ್ ಅವರು ‘ಆದರ್ಶ’ ಕುರಿತು ಮಾತನಾಡಿ, ಕೇವಲ ಅಕ್ಷರವಂತರಾಗದೆ ಸುಸಂಸ್ಕೃತರಾದಾಗ ಆದರ್ಶವಂತರಾಗಲು ಸಾಧ್ಯ. ಇದಕ್ಕೆ ಸಾಣೇಹಳ್ಳಿ ಮಠ ನೆರವಾಗುತ್ತಿದೆ ಎಂದರು.

ಕಲಾ ಶಿಕ್ಷಕಿ ಜ್ಯೋತಿ ಹಾಗೂ ಎಚ್.ಎಸ್. ನಾಗರಾಜ ಅವರು ವಚನಗಳನ್ನು ಹಾಡಿದರು. ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *