ಚಿತ್ರದುರ್ಗ
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ವಚನ ಕಮ್ಮಟ ರ್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ನಡೆಯಿತು.
ಸಮ್ಮುಖ ವಹಿಸಿದ್ದ ಉತ್ತಂಗಿ ಮಹಾಸಂಸ್ಥಾನ ಮಠದ ಪೂಜ್ಯ ಸೋಮಶೇಖರ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಕೂಡ ಬಸವತತ್ವದ ಅಡಿಯಲ್ಲಿ ಬದುಕುವುದು ಉತ್ತಮ. ತಿಳಿಯಲಾರದವರಿಗೆ ತಿಳಿಯುವಂತೆ ನಡೆಸಿಕೊಡುವುದು ವಚನದ ಶಕ್ತಿಯಲ್ಲಿದೆ. ಜನಸಾಮಾನ್ಯರಲ್ಲಿ ಬಸವಣ್ಣನವರ ವಚನಗಳು ಒಂದು ರೀತಿಯಲ್ಲಿ ಮಂತ್ರಗಳಾಗಬೇಕು.
ಸಾಮಾಜಿಕ ವ್ಯವಸ್ಥೆಯಲ್ಲಿ ಸತ್ಯಾಂಶವನ್ನು ನಾವು ಬೇಗ ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಳ್ಳುವಂತೆ ಮಾಡುವ ಶಕ್ತಿ ಈ ವಚನಗಳಲ್ಲಿವೆ. ಎಲ್ಲಾ ಸಮುದಾಯದವರಿಗೂ ಕೂಡ ಬದುಕಿನ ದಾರಿ ತೋರಿಸಬೇಕು. ಅದು ನಿಜವಾದ ಧರ್ಮ.

ಸಿರಿ ಸಂಪತ್ತು ನಿಜವಾದ ಸಂಪತ್ತಲ್ಲ. ದೈಹಿಕ ಶ್ರಮದಿಂದ, ಸತ್ಯದಿಂದ, ಕರ್ಮದಿಂದ, ಕಾಯಕದಿಂದ ಸಂಪಾದಿಸುವುದು ನಿಜವಾದ ಸಂಪತ್ತು, ಸಂಸ್ಕಾರ ಎನ್ನಬಹುದು. ನಿಸ್ವಾರ್ಥ ಸಮಾಜವನ್ನು ಕಟ್ಟಬೇಕು ಅಂದರೆ, ನಮ್ಮಲ್ಲಿ ಸ್ವಾರ್ಥ ಎನ್ನುವ ವಿಚಾರದಿಂದ ಹೊರಬರಬೇಕು.
ಪ್ರತಿಯೊಬ್ಬರನ್ನು, ಪ್ರತಿಯೊಂದು ಜಾತಿಯವರನ್ನು ಸಮಾನತೆಯಿಂದ ಕಾಣುವ ರೂಪ ನಮ್ಮದಾಗಬೇಕು. ನಮ್ಮ ಮಕ್ಕಳಿಗೆ ಬಸವಾದಿ ಶರಣರ ವಚನಗಳನ್ನು ತಿಳಿದುಕೊಳ್ಳುವಂತಹ ತಿಳಿಸಿ ಕೊಡುವಂತಹ ಕೆಲಸ ನಮ್ಮದಾಗಬೇಕು ಎಂದು ನುಡಿದರು.
ಚಿತ್ರದುರ್ಗ ಶ್ರೀ ಸೇವಾಲಾಲ್ ಗುರುಪೀಠದ ಪೂಜ್ಯ ಸರ್ದಾರ್ ಸೇವಾಲಾಲ ಸ್ವಾಮಿಗಳು ಮಾತನಾಡಿ, ವಚನಗಳನ್ನು ಸರಿಯಾಗಿ ಅರ್ಥೈಸಿಕೊಂಡಿದ್ದೆ ಆದರೆ ಯಾವ ವಿಶ್ವವಿದ್ಯಾಲಯದಲ್ಲಿ ಓದಿದರು ಅಂತಹ ವೈಚಾರಿಕತೆ ಬರಲು ಸಾಧ್ಯವಿಲ್ಲ. ಅಂತಹ ಶಕ್ತಿ ವಚನಗಳಿಗೆ ಇದೆ.
ವಚನಗಳ ಶಕ್ತಿಯು ಉತ್ತಮ ಸಮಾಜ ನಿರ್ಮಾಣಕ್ಕೆ ಮೂಲ ಕಾರಣವಾಗುತ್ತಿದೆ. ಹಾಗಾಗಿ ಶರಣರು ಈ ವಚನಗಳನ್ನು ಈ ನಾಡಿಗೆ ಈ ವಿಶ್ವಕ್ಕೆ ನೀಡಿದ್ದಾರೆ. ಅವುಗಳನ್ನು ಬಿತ್ತರಿಸುವ ಕೆಲಸ ನಮ್ಮದಾಗಬೇಕು. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ವಿಕಸಿತಗೊಳಿಸುವ ಶಕ್ತಿ ಈ ವಚನ ಸಾಹಿತ್ಯದಲ್ಲಿದೆ. ಶರಣರ ಅನುಭಾವಗಳನ್ನು ಪ್ರತಿ ಕುಟುಂಬಗಳಲ್ಲಿ ಬಿತ್ತರಿಸುವ ಕೆಲಸ ನಮ್ಮದಾಗಬೇಕು ಎಂದು ನುಡಿದರು.
ರಾವಂದೂರು ಶ್ರೀ ವಿರಕ್ತಮಠದ ಪೂಜ್ಯ ಮೋಕ್ಷಪತಿ ಸ್ವಾಮೀಜಿಗಳು ಮಾತನಾಡಿ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಸಂಸ್ಕಾರಗಳನ್ನು ಕಲಿಸಬೇಕು. ಬಸವಾದಿ ಶರಣರ ವಚನಗಳನ್ನು ಕಲಿಸುವಂತಹ ಗುಣ ನಮ್ಮದಾಗಬೇಕು. ನಮ್ಮ ಜೀವನದಲ್ಲಿ ತಾರ್ಕಿಕ ಜ್ಞಾನ ಎಷ್ಟು ಮುಖ್ಯವೋ ಆಧ್ಯಾತ್ಮಿಕ ಜ್ಞಾನವು ಕೂಡ ಅಷ್ಟೇ ಮುಖ್ಯ.
ಅತಿ ಆಸೆ ಬಿಟ್ಟು ಸಮಾಜದ ಪ್ರಗತಿಗೆ ಕಾರಣವಾಗಬೇಕು. ನಮ್ಮ ಮಕ್ಕಳಲ್ಲಿ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಬೇಕು ಎಂದು ನುಡಿದರು.
ಚಿಂತಕ ಅಶೋಕ ಬರಗುಂಡಿ ಮಾತನಾಡುತ್ತಾ, ಈ ನಾಡಿಗೆ ಭೇದಭಾವವಿಲ್ಲದ ಸಮಾಜವನ್ನು ತಂದಂತವರು ಬಸವಣ್ಣನವರು. ಬಸವತತ್ವದ ನೆಲೆಯನ್ನು ಗಟ್ಟಿಗೊಳಿಸಿ ನಾಡಿನ ಸರ್ವಜನಾಂಗದವರನ್ನು ಸಮಾನರಾಗಿ ಕಾಣುತ್ತಾ ಬಂದಿರುವುದನ್ನು ಈ ಮುರುಘಾಮಠದಲ್ಲಿ ಕಾಣಬಹುದು.

ವಿಚಾರಧಾರೆಗಳು ಸಣ್ಣ ಮಕ್ಕಳಿಂದಲೂ ವಚನಗಳ ಮುಖಾಂತರ ಬಿತ್ತರಿಸುವ ಕೆಲಸ ಆಗಬೇಕು. ಒಳ್ಳೆಯ ಭಾವನೆಗಳನ್ನು ಬೆಳೆಸುವಂತಹ ಗುಣ ಎಲ್ಲರದ್ದಾಗಬೇಕು. ಶ್ರೀಮಠವು ಯಾವುದೇ ಫಲಾಪೇಕ್ಷೆ ಹೊಂದದೆ ಈ ವಚನ ಪರೀಕ್ಷೆಗಳನ್ನು ನಡೆಸುತ್ತಾ ಬಂದಿದೆ. ಇದರಿಂದ ವಿದ್ಯಾರ್ಥಿಗಳನ್ನು ಆದರ್ಶ ವ್ಯಕ್ತಿಗಳನ್ನಾಗಿಸುವ ಸೃಷ್ಟಿಸುವ ಕೆಲಸ ನಮ್ಮದಾಗಬೇಕು. ಮುಂದಿನ ಪೀಳಿಗೆಯವರಿಗೂ ಸಹ ಬಸವಾದಿ ಶರಣರ ವಚನಗಳನ್ನು ಬಿತ್ತರಿಸುವ ಕಾರ್ಯ ನಮ್ಮದಾಗಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಗುರುಮಠಕಲ್ ಖಾಸಾ ಮುರುಘಾಮಠದ ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಸಿದ್ಧರಾಮಣ್ಣ ನಡಕಟ್ಟಿ, ಸಿ ಎಂ ಚಂದ್ರಪ್ಪ, ವಚನ ಕಮ್ಮಟ ನಿರ್ದೇಶಕರಾದ ವೀರಭದ್ರಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಪುಷ್ಪವಲ್ಲಿ ಸ್ವಾಗತಿಸಿ, ನೇತ್ರಾವತಿ ನಿರೂಪಿಸಿ ಶಿವಲೀಲಾ ವಂದಿಸಿದರು.
ಚಿತ್ರದುರ್ಗ ವೀರಶೈವ ಸಮಾಜದ ಕಾರ್ಯಕಾರಿ ಸಮಿತಿ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಕಾರ್ಯಕ್ರಮದ ಸೇವಾರ್ಥಿಗಳಾಗಿದ್ದರು.
ವಚನ ಕಮ್ಮಟ ಪರೀಕ್ಷೆಗಳನ್ನು ಪ್ರತಿ ಜಿಲ್ಲೆಯಲ್ಲಿ ಒಂದು ಮಠಕ್ಕೆ ಉಸ್ತುವಾರಿ ವಹಿಸ ಬೇಕು. ವ್ಯವಸ್ಥಿತವಾಗಿ ಆಯೋಜನೆ ಆಗ ಬೇಕು. ಉತ್ತಮ ಬಸವ ಸಮಾಜ ನಿರ್ಮಾಣದತ್ತ ನಮ್ಮ ಗುರಿ ಸಾಗ ಬೇಕು.