ವಚನಗಳಿಗೆ ಕಾನೂನಿನ ಬಲ ನೀಡಲು ಸರ್ಕಾರದ ಚಿಂತನೆ: ಎಚ್.ಕೆ. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ತೋಂಟದಾರ್ಯ ಮಠದಲ್ಲಿ ‘ವಚನ ಪಾಠಶಾಲೆ’ ಉದ್ಘಾಟನೆ, ಭಾವೈಕ್ಯತಾ ನಡಿಗೆ

ಗದಗ:

ಬಸವಾದಿ ಶರಣರ ವಚನಗಳು ಸಾರ್ವತ್ರಿಕ ಮನ್ನಣೆ ಪಡೆದಿರುವ ಸರ್ವಸಮ್ಮತ ಮೌಲ್ಯಗಳಾಗಿದ್ದು, ಸಮಾಜದಲ್ಲಿ ಇವುಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ ವಚನಗಳಿಗೆ ಕಾನೂನಿನ ಬಲ ತಂದು ಅವುಗಳನ್ನು ಸಶಕ್ತೀಕರಣಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ನುಡಿದರು.

ಅವರು ಶನಿವಾರ ನಗರದ ತೋಂಟದಾರ್ಯ ಮಠದಲ್ಲಿ ಕನ್ನಡದ ಜಗದ್ಗುರುಗಳು ಹಾಗೂ ಬಸವತತ್ವದ ದಂಡನಾಯಕರಾಗಿದ್ದ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೭೭ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ, ಗ್ರಂಥಗಳ ಬಿಡುಗಡೆ ಹಾಗೂ ವಚನ ಪಾಠಶಾಲೆ ಉದ್ಘಾಟನೆ ಮತ್ತು ಸಂಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ವಚನ ಪಾಠಶಾಲೆ ಉದ್ಘಾಟನೆ ಮಾಡಿದ್ದು ಸಂತಸದ ಸಂಗತಿಯಾಗಿದ್ದು, ಇಂದು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನಮ್ಮ ನಡುವೆ ಇದ್ದರೆ ರಾಜ್ಯ ಸರ್ಕಾರ ವಚನಗಳಿಗೆ ಕಾನೂನಿನ ಬಲತುಂಬಲು ಹೊರಟಿರುವ ನಡೆಯನ್ನು ಖಂಡಿತ ಶ್ಲಾಘಿಸುತ್ತಿದ್ದರು.

ಬಸವತತ್ವಗಳ ಕಟ್ಟುನಿಟ್ಟಿನ ಪರಿಪಾಲಕರಾಗಿದ್ದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ತೋಂಟದಾರ್ಯ ಮಠದ ಜಾತ್ರೆಗೆ ಹೊಸ ಭಾಷ್ಯ ಬರೆದು ಜಾತ್ರೆಗಳನ್ನು ಜನೋಪಯೋಗಿ ಹಾಗೂ ಸಮಾಜಮುಖಿಯಾಗಿ ಆಚರಿಸುವ ಪರಂಪರೆ ಹಾಕಿಕೊಟ್ಟರು.

ಪುಸ್ತಕಗಳನ್ನು ಪ್ರಕಟಿಸುವ, ಹಂಚುವ ಮುಖೇನ ಕೇವಲ ಧಾರ್ಮಿಕತೆಗೆ ಸೀಮಿತವಾಗಿದ್ದ ಜಾತ್ರೆಗಳನ್ನು ಸಾಂಸ್ಕೃತಿಕವಾಗಿ ಮಾರ್ಪಡಿಸಿದರು. ಇಂದಿನ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಹ ಅದೇ ಪರಂಪರೆಯನ್ನು ಮುಂದುವರೆಸಿದ್ದು, ಇಂದು ಹೆಸರಾಂತ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕುರಿತ ಗ್ರಂಥಗಳನ್ನು ಬಿಡುಗಡೆ ಮಾಡುವ ಭಾಗ್ಯ ನನಗೆ ದೊರೆತಿದೆ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕೇವಲ ಸಾಹಿತಿಯಲ್ಲ, ಬದಲಿಗೆ ಸಂಘ-ಸಂಸ್ಥೆಗಳು ಮಾಡುವ ಕಾರ್ಯವನ್ನು ಏಕವ್ಯಕ್ತಿಯಾಗಿ ನಿರ್ವಹಿಸಿದ್ದಾರೆ.

ವಚನಗಳು ಕೇವಲ ಸಭೆ-ಸಮಾರಂಭಗಳ ಭಾಷಣದ ಉಲ್ಲೇಖಕ್ಕೆ ಸೀಮಿತವಾಗದೇ ಪ್ರತಿಯೊಬ್ಬರ ಬದುಕಿನಲ್ಲಿ ಜಾರಿಯಾದಾಗ ನಮ್ಮಷ್ಟು ಸುಸಂಸ್ಕೃತ ಸಮಾಜ ಬೇರೆಲ್ಲೂ ಇರುವುದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಮಾತನಾಡಿ, ಸಿದ್ಧಲಿಂಗ ಶ್ರೀಗಳ ಜಯಂತಿಯು ಅವರ ಸಾಧನೆಗಳನ್ನು ಮೆಲುಕು ಹಾಕಲು ಇರುವ ಅವಕಾಶ ಎಂದು ನಾನು ಭಾವಿಸಿದ್ದೇನೆ, ಅವರು ತಮ್ಮ ಸಾಧನೆಗಳೊಂದಿಗೆ ಅಜರಾಮರರಾಗಿದ್ದಾರೆ.

ಶ್ರೀಮಠದ ಪೀಠಕ್ಕೆ ಬಂದಾಗಿನಿಂದ ಅವರು ಲಿಂಗೈಕ್ಯರಾಗುವವರೆಗೆ ಅವರ ಸಾಧನೆಗಳು ಅಪರಿಮಿತವಾಗಿದ್ದು, ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದ್ದಾರೆ, ಮುಖ್ಯವಾಗಿ ಬಸವತತ್ವವನ್ನು ವಿಶ್ವದಾದ್ಯಂತ ಪಸರಿಸಿದ ಮಹಾನ್ ಗರಿಮೆ ಶ್ರೀಗಳಿಗೆ ಇದೆ. ಸಿದ್ಧಲಿಂಗ ಶ್ರೀಗಳು ಕೋಟಿಗೊಬ್ಬರಾಗಿದ್ದು, ಇಂಥ ಮಹಾತ್ಮರ ಒಡನಾಟ ದೊರೆತಿದ್ದು ನಮ್ಮ ಸೌಭಾಗ್ಯ ಎಂದರು.

ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ತೋಂಟದಾರ್ಯ ಸಂಸ್ಥಾನಮಠ ಸಾಹಿತ್ಯ ಪ್ರಕಟಣೆಗಳು; ತಾತ್ವಿಕ ಸ್ವರೂಪ, ಮಾಯದಂಥಾ ಬೆಳದಿಂಗಳ, ಚಲವಾದಿ ಗೌರಮ್ಮನ ಕಥೆಗಳು ಗ್ರಂಥಗಳು ಲೋಕಾರ್ಪಣೆಗೊಂಡವು.

ವಚನ ಪಾಠಶಾಲೆ ಉದ್ಘಾಟನೆ

ತೋಂಟದಾರ್ಯ ಮಠದ ‘ವಚನ ಪಾಠಶಾಲೆ’ಯ ಉದ್ಘಾಟನೆ ನೆರವೇರಿತು.

ಹಿರಿಯ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಶಣೆಟ್ಟಿ ಮಾತನಾಡಿ, ಸಿದ್ಧಲಿಂಗ ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ಸಿದ್ಧರಾಮ, ಇಂದಿನ ನಮ್ಮ ಪೂಜ್ಯರ ಹೆಸರು ಸಿದ್ಧರಾಮ ಮಹಾಸ್ವಾಮಿಗಳು, ಹೀಗೆ ಲಿಂಗೈಕ್ಯ ಗುರುಗಳ ಪ್ರತಿರೂಪವೇ ಇಂದಿನ ಶ್ರೀಗಳಾಗಿದ್ದಾರೆ.

ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಅನನ್ಯ ಪ್ರೀತಿ ಹಾಗೂ ಕೃಪಾಶೀರ್ವಾದಕ್ಕೆ ನಾನು ಪಾತ್ರನಾಗಿದ್ದೇನೆ. ಅವರ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭದಲ್ಲಿ ನನ್ನಿಂದ ಕಲ್ಯಾಣದ ಹಾದಿ ಗ್ರಂಥವನ್ನು ಬರೆಯಿಸಿದರು. ಇಂದಿನ ಅವರ ಜಯಂತಿಯಲ್ಲಿ ನನ್ನ ಕುರಿತು ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದರು.

ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕನ್ನಡದ ಜಗದ್ಗುರುಗಳೆಂದೇ ಖ್ಯಾತರಾಗಿದ್ದ ಸಿದ್ಧಲಿಂಗ ಮಹಾಸ್ವಾಮಿಗಳು ರೈತಪ್ರೇಮಿಗಳು ಹಾಗೂ ಜಾನಪದ, ಕಲೆ, ಸಂಗೀತ-ಸಾಹಿತ್ಯದ ಪ್ರೋತ್ಸಾಹಕರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.

ನಾನು ಶಾಸಕನಾಗಿದ್ದ ಅವಧಿಯಲ್ಲಿ ನನ್ನ ಕಾರ್ಯಗಳನ್ನು ಮೆಚ್ಚಿ ಮನಸಾರೆ ಅಭಿನಂದಿಸಿ ಆಶೀರ್ವದಿಸುತ್ತಿದ್ದ ಶ್ರೀಗಳ ಜವಾರಿ ಭಾಷೆ, ಗಟ್ಟಿ ಧ್ವನಿಯನ್ನು ನಾನು ಮರೆಯಲು ಸಾಧ್ಯವಿಲ್ಲ.

ಅವರಿಂದ ಅನೇಕ ನುಡಿಮುತ್ತುಗಳನ್ನು, ಭಾಷೆಯ ಪ್ರಯೋಗವನ್ನು ನಾನು ಕಲಿತಿದ್ದೇನೆ ಎಂದರು.

ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ವಚನ ನೃತ್ಯ ಜರುಗಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ.ಎಸ್.ಎಸ್. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭೈರನಹಟ್ಟಿ ಮಠದ ಶಾಂತಲಿಂಗ ಮಹಾಸ್ವಾಮಿಗಳು, ಆಳಂದದ ಕೋರಣೇಶ್ವರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಮಾಜಿ ಸಂಸದರಾದ ಐ.ಜಿ. ಸನದಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡರ, ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷರಾದ ವಿನಾಯಕ ಮಾನ್ವಿ, ಶಶಿ ಸಾಲಿ, ಹೇಮಾ ಪಟ್ಟಣಶೆಟ್ಟಿ, ಗ್ರಂಥಗಳ ಲೇಖಕರಾದ ಶಶಿಧರ ತೋಡಕರ್, ವಿದ್ಯಾವತಿ ಅಕ್ಕಿ, ವೆಂಕಟಾಪೂರ ಶರಣರು ಮುಂತಾದವರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅಪಾರ ಭಕ್ತರು-ಅಭಿಮಾನಿಗಳು ಪಾಲ್ಗೊಂಡಿದ್ದರು.

ಭಾವೈಕ್ಯತಾ ನಡಿಗೆ:

ಬೆಳಗ್ಗೆ ೮.೩೦ಕ್ಕೆ ಭೀಷ್ಮಕೆರೆಯ ಮಹಾತ್ಮ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೆ ಭಾವೈಕ್ಯತಾ ನಡಿಗೆ ನಡೆಯಿತು.

ಭಾವೈಕ್ಯತೆ ನಡಿಗೆಯನ್ನು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು, ಮಾಜಿ ಶಾಸಕರಾದ ಡಿ.ಆರ್. ಪಾಟೀಲ ಉದ್ಘಾಟನೆ ಮಾಡಿದರು.

ನಡಿಗೆಯಲ್ಲಿ ಪೂಜ್ಯರು, ಬಸವಪರ ಸಂಘಟನೆಗಳ ಪ್ರಮುಖರು, ಗಣ್ಯರು, ಮಠದ ಭಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
Leave a comment

Leave a Reply

Your email address will not be published. Required fields are marked *