ವಚನ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ದ್ರಾಕ್ಷಾಯಣಿ ಕೋಳಿವಾಡ

ಬಸವ ಮೀಡಿಯಾ
ಬಸವ ಮೀಡಿಯಾ

ಮುಳಗುಂದ

ಬಸವಾದಿ ಶರಣರ ವಚನ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಕಾರ್ಯದರ್ಶಿ ದ್ರಾಕ್ಷಾಯಣಿ ಕೋಳಿವಾಡ ಹೇಳಿದರು.

ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ 166ನೇ ಜಾತ್ರಾ ಮಹೋತ್ಸವದ ಅನುಭಾವ ಗೋಷ್ಠಿಯಲ್ಲಿ ಅವರು ಇತ್ತೀಚೆಗೆ ಉಪನ್ಯಾಸ ನೀಡಿದರು.

12ನೇ ಶತಮಾನದ ಬಸವಾದಿ ಶರಣರು ನಿತ್ಯ ಜೀವನದಲ್ಲಿ ಯಾವ ರೀತಿ ಬದುಕಿ ಬಾಳಬೇಕು ಎಂಬುದನ್ನು ವಚನಗಳ ಮೂಲಕ ಹೇಳಿ ಬದುಕಿ ತೋರಿಸಿ ಹೋಗಿದ್ದಾರೆ. ನಾವೀಗ ಶರಣರ ವಚನಗಳನ್ನು ಕೇವಲ ಪಠಿಸಿದರೆ ಸಾಲದು, ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಆಗುತ್ತದೆ ಎಂದರು.

‘ವೈಚಾರಿಕ ಕ್ರಾಂತಿ ಮಾಡುವುದಕ್ಕೆ, ಧರ್ಮ, ವೇದಾಂತ, ಶರಣತತ್ವ ವಿಚಾರಗಳ ಚಿಂತನೆಗಳನ್ನು ಜನರಿಗೆ ತಿಳಿಸುವ ಕಾರ್ಯವು ಜಾತ್ರೆಗಳ ಮೂಲಕ ನಡೆದಿದೆ. ಆದರೆ ಎಷ್ಟೇ ಶರಣ ಸಾಹಿತ್ಯ, ಧಾರ್ಮಿಕ ಪ್ರವಚನಗಳು ನಡೆದರೂ ಜಿಡ್ಡುಗಟ್ಟಿದ ಸಮಾಜ ಬದಲಾವಣೆ ಆಗುತ್ತಿಲ್ಲ’ ಎಂದು ಸಚಿವ ಎಚ್. ಕೆ. ಪಾಟೀಲ ಬೇಸರ ವ್ಯಕ್ತಪಡಿಸಿದರು. ‘ನಾವು ಶರಣರ ತತ್ವ ಧಾರ್ಮಿಕ ವಿಚಾರಗಳನ್ನು ಕೇಳಿ ಹಾಗೆ ಬಿಟ್ಟುಬಿಡುವುದಲ್ಲ, ಅವುಗಳನ್ನು ಬದುಕಿನಲ್ಲಿ ಅನುಷ್ಠಾನಕ್ಕೆ ತರಬೇಕು’ ಎಂದು ಸಚಿವರು ಹೇಳಿದರು.

ಸಾನ್ನಿಧ್ಯವನ್ನು ಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ವಹಿಸಿದ್ದರು. ಸಮ್ಮುಖವನ್ನು ಸವಣೂರ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ, ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ, ನೀಲಗುಂದ ಗುದ್ದೇಶ್ವರಮಠದ ಪ್ರಭುಲಿಂಗ ದೇವರು ವಹಿಸಿದ್ದರು.

ಡಾ. ವೀರೇಶ ಹಂಚಿನಾಳ, ಆನಂದ ಗಡ್ಡದೇವರಮಠ, ಡಾ. ಎಸ್.ಸಿ. ಚವಡಿ, ಇಮಾಮಸಾಬ ಶೇಖ, ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎಲ್. ಕರೇಗೌಡ್ರ ಇದ್ದರು.

ಕಲಾವಿದ ರಮೇಶ ಲಂಬಾಣಿ ಹಾಗೂ ಹುಬ್ಬಳ್ಳಿ ಶರಾವತಿ ಮೆಲೋಡಿ ಆರ್ಕೆಸ್ಟ್ರಾ ಅವರಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

Share This Article
Leave a comment

Leave a Reply

Your email address will not be published. Required fields are marked *