ವಚನ ಸಾಹಿತ್ಯ ಜನಪರ ಸಾಹಿತ್ಯ: ಪಾಲ್ಕುರಿಕೆ ಪೀಠದ ಅಧ್ಯಕ್ಷ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಶರಣ ಸಾಹಿತ್ಯಕ್ಕೆ ಪಾಲ್ಕುರಿಕೆ ಸೋಮನಾಥನ ಕೊಡುಗೆ ಅಪಾರ. ಆತ ರಚಿಸಿದ ಬಸವ ಪುರಾಣ ಕೃತಿಯು ಶರಣ ಸಾಹಿತ್ಯಕ್ಕೆ ಸಂಬಂಧಪಟ್ಟ ಮಹತ್ವದ ಕೃತಿ ಎನಿಸಿದೆ ಎಂದು ಎಂದು ತೆಲಂಗಾಣ ವಾರಂಗಲ್‌ನ ಪಾಲ್ಕುರಿಕೆ ಸೋಮನಾಥ ಕಲಾ ಪೀಠದ ಅಧ್ಯಕ್ಷ ಡಾ. ರಾಪುಲು ಸತ್ಯನಾರಾಯಣ ಹೇಳಿದರು.

ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಒಂದು ಬಸವಗಿರಿಯಲ್ಲಿ ನಡೆಯುತ್ತಿರುವ ೨೪ನೇ ವಚನ ವಿಜಯೋತ್ಸವ ಉದ್ಘಾಟಿಸಿ ಮಾತನಾಡಿದರು.

ವಚನ ಸಾಹಿತ್ಯ ಜನಪರ ಸಾಹಿತ್ಯವಾಗಿದ್ದು, ಪಾಲ್ಕುರಿಕೆ ಸೋಮನಾಥ ೧೨ನೇ ಶತಮಾನದ ಸಾಮಾಜಿಕ ಸುಧಾರಕ ಬಸವಣ್ಣನವರ ಮತ್ತು ಅವರ ಬರಹಗಳ ಅನುಯಾಯಿಯಾಗಿದ್ದು ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದರು. ಬಸವೇಶ್ವರ ಹಾಗೂ ಶಿವಭಕ್ತರನ್ನು ಕುರಿತೇ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಅವರ ವಂಶಸ್ಥರು ಇನ್ನು ಮಹಾರಾಷ್ಟ್ರದಲ್ಲಿ ಇದ್ದು ಇಂದಿಗೂ ಬಸವ ಜಯಂತಿ ಆಚರಿಸುತ್ತಾರೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗಂಗಾಂಬಿಕಾ ಅಕ್ಕ ಪ್ರಾಸ್ತಾವಿಕ ಮಾತನಾಡಿ, ಶರಣರು ತಮ್ಮ ಪ್ರಾಣ ಬಲಿದಾನ ನೀಡಿ ವಚನ ಸಾಹಿತ್ಯ ರಕ್ಷಿಸಿದ ಅತ್ಯಂತ ಪವಿತ್ರ ದಿನ. ವಚನ ಸಾಹಿತ್ಯ ಸದ್ಗುಣ, ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ವಚನ ಸಾಹಿತ್ಯದಲ್ಲಿ ಮಾತ್ರ ಕಾಯಕ ಸಿದ್ಧಾಂತವನ್ನು ಕಾಣುತ್ತೇವೆ. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳು.

ವಚನಗಳಲ್ಲಿ ಸಮಾನತೆಯ ತತ್ವ ಸಿದ್ಧಾಂತ ಇದೆ. ಎಲ್ಲ ದರ್ಶನಕ್ಕಿಂತಲೂ ವಚನ ದರ್ಶನ ಅತ್ಯಂತ ಮಹತ್ವದ್ದು. ೧೨ನೇ ಶತಮಾನದಲ್ಲಿ ಎಲ್ಲಾ ಜನಾಂಗದವರಿಗೂ ಆಶ್ರಯ ನೀಡಿದ್ದು ಕಲ್ಯಾಣದ ಅನುಭವ ಮಂಟಪ. ಶರಣರ ಆಶಯಗಳು ಸಾಂವಿಧಾನಕವಾಗಿ ಕಾನೂನು ರೂಪದಲ್ಲಿ ಜಾರಿಯಾಗಿವೆ. ಶರಣರು ಬಿಟ್ಟು ಹೋದ ವಚನ ಸಾಹಿತ್ಯದ ಸೆರಗನ್ನು ಮುಂದಿನ ಜನಾಂಗಕ್ಕೆ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಸಾಹಿತಿ ಡಾ. ಬಸವರಾಜ ಸಬರದ ಅನುಭಾವ ನೀಡಿ, ಗುರು-ಶಿಷ್ಯನಾಗುವುದು, ಶಿಷ್ಯ-ಗುರುವಾಗುವುದು ಲಿಂಗಾಯತ ಧರ್ಮದಲ್ಲಿ ಮಾತ್ರ ಇದೆ. ಸಮಾನತೆ ಈ ಧರ್ಮದ ಜೀವಾಳ,  ಸೌಹಾರ್ದತೆ ಈ ಧರ್ಮದ ಗುರಿ. ಇವೆರಡೂ ಇವತ್ತಿನ ಮೌಲ್ಯಗಳು. ಈ ಮೌಲ್ಯಗಳು ಶರಣರು ೧೨ನೇ ಶತಮಾನದಲ್ಲಿ ಆರಂಭಿಸಿದರು. ಸಮಾನತೆ, ಕಾಯಕ, ದಾಸೋಹ, ಸೌಹಾರ್ದತೆ ಶರಣರ ಮೌಲ್ಯಗಳಾಗಿವೆ. ಧರ್ಮವನ್ನು ಕ್ರಾಂತಿಯನ್ನಾಗಿ ಮಾಡಿದ್ದ ವ್ಯಕ್ತಿ ಜಗತ್ತಿನಲ್ಲಿ ಬಸವಣ್ಣ ಮಾತ್ರ. ಶರಣರು ಮರಣಕ್ಕೆ ಹೆದರುವವರಲ್ಲ. ಮರಣವೇ ಮಹಾನವಮಿಯಾಗಿದೆ. ಧರ್ಮ ಮತ್ತು ಕ್ರಾಂತಿ ಇವೆರಡು ಬೇರೆ- ಬೇರೆ, ಧರ್ಮ ಮತ್ತು ಕ್ರಾಂತಿ ಕೂಡಿಸಿದವರು ಬಸವಣ್ಣನವರು. ಧರ್ಮವೇ ಕ್ರಾಂತಿ, ಕ್ರಾಂತಿಯೇ ಧರ್ಮ ಎಂದವರು ಬಸವಣ್ಣನವರು. ಜಗತ್ತಿನಲ್ಲಿ ಜರುಗಿದ ಫ್ರಾನ್ಸ್ ಮತ್ತು ಜಾಗತಿಕ ಕ್ರಾಂತಿಗಳಿಗಿಂತ ಬಸವಣ್ಣನವರ ಕ್ರಾಂತಿ ವಿಶಿಷ್ಟವಾಗಿದೆ ಎಂದರು.

ಸಾನಿಧ್ಯ ವಹಿಸಿದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಚನ ವಿಜಯೋತ್ಸವ ಎಲ್ಲರದ್ದಾಗಿದೆ. ವಚನ ಸಾಹಿತ್ಯ ನಿತ್ಯ ಸತ್ಯವಾಗಿದೆ. ಇಂದು ಎಂದು ಮುಂದೆ ಎಂದೆಂದಿಗೂ ಶಾಶ್ವತವಾಗಿದೆ. ಎಲ್ಲರೂ ವಚನದ ದಾರಿಗೆ ಬರುತ್ತಾರೆ. ವಚನಕ್ಕೆ ಭವಿಷ್ಯವಿದೆ. ಪಠ್ಯಪುಸ್ತಕದಲ್ಲಿ ವಚನ ಸಾಹಿತ್ಯ ಅಳವಡಿಸಿದರೆ ಕೋಟಿ ಕೋಟಿ ಜನರಿಗೆ ತಲುಪುತ್ತವೆ ಎಂದರು.

ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರು ನಮ್ಮ  ಧರ್ಮಗುರು, ವಚನ ಸಾಹಿತ್ಯವೇ ಧರ್ಮಗ್ರಂಥ  ಎಂದರು.

ವಚನ ವಿಜಯೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಚಂದ್ರಕಾಂತ ಮಿರ್ಚೆ ಆಶಯ ನುಡಿಗಳಾಡಿದರು. ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಆಂಧ್ರಪ್ರದೇಶದ ಬಪತಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕುರುಪತಿ ನೀಲಕಂಠೇಶ್ವರ ಪ್ರಸಾದ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಭಾರತೀಯ ಬಸವ ಬಳಗ ರಾಜ್ಯಾಧ್ಯಕ್ಷ ಬಾಬು ವಾಲಿ, ಜಗನ್ನಾಥ ಹೆಬ್ಬಾಳೆ, ಕುಶಾಲ ಪಾಟೀಲ ಖಾಜಾಪುರ, ಶರಣಪ್ಪ ಮಿಠಾರೆ, ಸೋಮಶೇಖರ ಪಾಟೀಲ ಗಾದಗಿ, ಬಿ.ಜಿ. ಶೆಟಕಾರ, ಸಿದ್ಧಯ್ಯ ಕಾವಡಿಮಠ, ಶ್ರೀಕಾಂತ ಸ್ವಾಮಿ, ಪ್ರಕಾಶ ಟೊಣ್ಣೆ, ರಮೇಶ ಪಾಟೀಲ ಸೋಲಪುರ, ಭಾಲ್ಕಿ ತಹಸೀಲ್ದಾರ ಮಹೇಶ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ರಾಜು ಚಿಂತಾಮಣಿ, ಡಾ. ವಿಜಯಶ್ರೀ ಸಬರದ, ಸುಭಾಷ ಹಮ್ಮಿಲಪೂರೆ, ರಾಜಕುಮಾರ ನಾಗೇಶ್ವರ, ಸೋಮನಾಥ ಅಮಲಾಪೂರೆ, ಸುಭಾಷ ಮಡಿವಾಳ, ವಿಠಲ ಕುಂಬಾರ, ಜಗನ್ನಾಥ ಜಮಾದಾರ ರಮೇಶ ಕಟ್ಟಿಮನಿ ಸೇರಿ ಇತರರಿದ್ದರು.

ವನಿತಾ ಗುಂಡಪ್ಪ ಬಳತೆ, ಡಾ. ದೇವಕಿ ಡಾ. ಅಶೋಕ ನಾಗೂರೆ ಗುರುಪೂಜೆ ನೆರವೇರಿಸಿದರು. ನೀಲಮ್ಮನ ಬಳಗದ ಶರಣೆಯರಿಂದ ವಚನ ವಿಜಯೋತ್ಸವದ ಸಮೂಹ ಗಾಯನ ನಡೆಯಿತು. ನೃತ್ಯಾಂಗನಾ ನಾಟ್ಯ ಮತ್ತು ಕಲಾ ಕೇಂದ್ರ ತಂಡದವರು ವಚನ ನೃತ್ಯ ನಡೆಸಿಕೊಟ್ಟರು. ರಾಜಮತಿ ಗಂಗು ನಿರೂಪಿಸಿದರು. ಕರಣ ಪಾಟೀಲ ಶರಣು ಸಮರ್ಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *