ಅನುಭವ ಮಂಟಪದಲ್ಲಿ ಎಲ್ಲಾ ಸಮಾಜದವರು ಒಗ್ಗೂಡಬೇಕು: ಈಶ್ವರ ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣದಲ್ಲಿ ಶರಣ ಗ್ರಾಮ ನಿರ್ಮಾಣ

ಬೀದರ:

ಇಡೀ ಜಗತ್ತಿಗೆ ಬಸವತತ್ವ ಪ್ರಸಾರ – ಪ್ರಚಾರ ಮಾಡುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಇದರಲ್ಲಿ ಎಲ್ಲಾ ಸಮಾಜದವರು ಒಗ್ಗೂಡಬೇಕು ಎಂಬ ಆಶಯದಿಂದ ೭೭೦ ಕಂಬಗಳು ಅಳವಡಿಸಿ, ಅದರ ಮೇಲೆ ಶರಣ ವಚನ ಚರಿತ್ರೆ ಅಳವಡಿಸಲಾಗಿದೆ, ಎಂದು ಸಚಿವರು ಹಾಗೂ ವಚನ ವಿಜಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಈಶ್ವರ ಖಂಡ್ರೆ ಹೇಳಿದರು.

ಅವರು ವಚನ ವಿಜಯೋತ್ಸವದಲ್ಲಿ ಗುರುಬಸವ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ಯುವಕರೇ ಆಧಾರ ಸ್ತಂಭವಾಗಿರುವುದರಿಂದ ಬಸವಕಲ್ಯಾಣದಲ್ಲಿ ಶರಣ ಗ್ರಾಮ ನಿರ್ಮಾಣ ಮಾಡುವ ಯೋಜನೆಯಿದೆ. ಶರಣರನ್ನು ಸೀಮಿತಗೊಳಿಸಬೇಡಿ, ವಚನಗಳ ಸಾರ ತಿಳಿದು ಅನುಸರಿಸಿದರೆ ವಚನ ವಿಜಯೋತ್ಸವಕ್ಕೆ ಇನ್ನು ಅರ್ಥ ಬರುತ್ತದೆ.

೧೨ನೇ ಶತಮಾನದಲ್ಲಿ ಬಸವಾದಿ ಶರಣರು ಇಡೀ ಜಗತ್ತಿನಲ್ಲಿ ಜಾತಿರಹಿತ, ಅಸ್ಪೃಶ್ಯತೆ, ಮೇಲು-ಕೀಳೆಂಬ ತಾರತಮ್ಯ, ಮೂಢನಂಬಿಕೆ ಇವುಗಳನ್ನು ತೊಡೆದು ಹಾಕಿ ವೈಜ್ಞಾನಿಕ, ವೈಚಾರಿಕ ತಳಹದಿಯ ಮೇಲೆ ಸಮಸಮಾಜ ಸದೃಢವಾಗಿ ನಿರ್ಮಾಣವಾಗಬೇಕು ಎಂಬುದು ಶರಣರ ಸಂಕಲ್ಪವಾಗಿತ್ತು.

ಶರಣರು ತಮ್ಮ ಪ್ರಾಣ ತ್ಯಾಗ, ಬಲಿದಾನ ಮಾಡಿ ವಚನ ಸಾಹಿತ್ಯ ಸಂರಕ್ಷಣೆ ಮಾಡಿದ್ದಾರೆ. ಅದರ ಮೂಲಕ ಸುಸಂಸ್ಕೃತ ಸಮಜ ನಿರ್ಮಾಣವಾಗಬೇಕು. ಭೌತಿಕವಾಗಿ ಎಷ್ಟೇ ಪ್ರಗತಿಯಾದರೂ, ವಿಜ್ಞಾನ ಮುಂದುವರೆದರೂ ಆದರೆ ಜಗತ್ತಿನಲ್ಲಿ ಆತಂಕವಿದೆ.

ಇಂದಿಗೂ ಮೌಢ್ಯತೆ, ಕಂದಾಚಾರ, ಅಸ್ಪೃಶ್ಯತೆ, ಜಾತೀಯತೆ, ದ್ವೇಷ, ದುರಾಶೆಗಳೆಂಬ  ಅನಿಷ್ಠಗಳು ಹೋಗಿಲ್ಲ. ಇವೆಲಕ್ಕೂ ವಚನ ಸಾಹಿತ್ಯದಲ್ಲಿ ಪರಿಹಾರವಿದೆ.

ಜಗತ್ತಿನ ಪ್ರತಿಯೊಂದು ಸಮಸ್ಯೆಗಳಿಗೆ ವಚನಗಳು ಸಿದ್ಧೌಷಧಿಗಳು, ನಾವೆಲ್ಲರೂ ವಚನಗಳ ಅರಿವು ಅಳವಡಿಸಿಕೊಂಡು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸೋಣ ಎಂದರು.

ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪ್ರಾಸ್ತಾವಿಕವಾಗಿ ಮಾತನಾಡಿ,  ವಚನ ಸಾಹಿತ್ಯ ಅನುಭಾವ ಸಾಹಿತ್ಯ. ಶರಣರು ಅರಿವಿನಿಂದ ಅರಿತು ಆಚರಿಸಿ ಅನುಭವಿಸಿದ ಅನುಭಾವ ಸಾಹಿತ್ಯ. ಇದರ ಅಧ್ಯಯನದಿಂದ ಪರಿವರ್ತನೆ ಸಾಧ್ಯ. ಇದರಿಂದ ಸಣ್ಣ ಗುಣಗಳು ಹೋಗಿ ದೊಡ್ಡ ಗುಣಗಳು ಬರುತ್ತವೆ. ವಚನಕ್ಕೆ ಪಟ್ಟಗಟ್ಟುವುದೆಂದರೆ ಜ್ಞಾನಕ್ಕೆ ಪಟ್ಟಗಟ್ಟುವುದೆಂರ್ಥ.

ದೇಹವೇ ದೇಗುಲವಾಗಬೇಕು. ಇಷ್ಟಲಿಂಗ ಧರಿಸಿ ಪೂಜಿಸಬೇಕು. ವಚನಗಳ ಪಠಣ ಮಾಡಿ ಶರಣ ಸಂಸ್ಕೃತಿ ಪಥ ಹಿಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಚಿವ ರಹೀಂಖಾನ ಮಾತನಾಡಿ, ವಚನ ಸಾಹಿತ್ಯದ ಬಗ್ಗೆ ಹೆಮ್ಮೆ ಮತ್ತು ವಿಶ್ವಾಸವಿದೆ. ಪ್ರತಿದಿನ ವಚನ ಹೇಳಿದ ರೀತಿಯಲ್ಲಿ ನಾವೆಲ್ಲರೂ ಸಾಗಬೇಕು. ದೇವರೊಬ್ಬನೆ, ಆತ ಸರ್ವವ್ಯಾಪಿಯಾಗಿದ್ದಾನೆ. ಶರಣರು ಹೇಳಿದಂತೆ ನಡೆದರೆ ಸಮೃದ್ಧ ರಾಷ್ಟ್ರ ಆಗುವಲ್ಲಿ ಸಂದೇಹವಿಲ್ಲ ಎಂದರು.

ಗುರುಬಸವ ಪುರಸ್ಕಾರ ಪ್ರದಾನ :

ಪತ್ರಕರ್ತ ಹಾಗೂ ಹರಳಯ್ಯ ಸಮಾಜದ ಹಿರಿಯರಾದ ಮಾರ್ಕಂಡೇಯ ದೊಡಮನಿ, ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಶರಣ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ. ಸಿ. ಸೋಮಶೇಖರ ಮಾತನಾಡಿ, ವಚನಗಳ ಪಟ್ಟಾಭಿಷೇಕ ಎಂದರೆ ಮಾನವ ಧರ್ಮದ, ಶರಣರ ಚಿಂತನೆಗಳ, ಮೌಲ್ಯಗಳ ಪಟ್ಟಾಭಿಷೇಕವಾಗಿದೆ. ವಚನಗಳು ವಿಶ್ವಕ್ಕೆ ಜೀವನ ಸಂವಿಧಾನವಾಗಿವೆ. ಇವು ಬದುಕನ್ನು ಹಸನಗೊಳಿಸುತ್ತವೆ. ಮಾನವೀಯ ಸ್ಪರ್ಶ ನೀಡುತ್ತವೆ. ಆತ್ಮ ವಿಶ್ವಾಸದ ಜ್ಯೋತಿಗಳಾಗಿವೆ ಎಂದರು.

ಸಾನಿಧ್ಯ ವಹಿಸಿದ ಪಾಂಡೋಮಟ್ಟಿಯ ಗುರುಬಸವ ಮಹಾಸ್ವಾಮಿಗಳು ಮಾತನಾಡಿ, ಲಿಂಗಾಯತ ಎಂಬುದು ಜಾತಿಯಲ್ಲ ಅದೊಂದು ಧರ್ಮ. ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ. ಕಾಯಕ ಮೊದಲು ಎಂದು, ಬೆವರಿಗೆ ಬೆಲೆ ಕೊಟ್ಟಿದ್ದು ವಚನ ಪರಂಪರೆ ಎಂದು ನುಡಿದರು.

ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು  ಮಾತನಾಡಿ, ಬಸವತತ್ವ ನಂಬಿದವರಿಗೆ ಸೋಲೆ ಇಲ್ಲ. ಬಸವತತ್ವ ಸಮಾನತೆ, ಮಾನವೀಯತೆ ಮತ್ತು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಶಾಂತಿಯುತ ಮಾರ್ಗವಾಗಿದೆ ಎಂದು ನುಡಿದರು.

ಶಾಸಕರಾದ ಶೈಲೆಂದ್ರ ಬೆಲ್ದಾಳೆ, ಡಾ. ಎಂ.ಜಿ. ಮುಳೆ, ಶಿವಶರಣಪ್ಪಾ ವಾಲಿ, ಮುಖಂಡ ಗುರುನಾಥ ಕೊಳ್ಳೂರ, ವಿಜಯಪುರದ ಕೆ.ಬಿ.ಎನ್. ನಾಗೂರ, ಇಇ ಸೂರ್ಯಕಾಂತ ಕಾರಬಾರಿ, ವಿಶ್ವನಾಥ ಕಾಜಿ, ಜಯರಾಜ ಖಂಡ್ರೆ, ರಾಜೇಂದ್ರಕುಮಾರ ಗಂದಗೆ ಅನಿಲಕುಮಾರ ರಗಟೆ, ರಾಜಶೇಖರ ಯಂಕಂಜಿ, ಬಸವರಾಜ ರುದ್ರವಾಡಿ, ಅನಿಲ ರಾಠೋಡ, ಕಲ್ಪನಾ ಕರಬಸಪ್ಪ ಬೀದೆ,  ವಿಜಯಕುಮಾರ ಕುಮಸಿ ಕಲಬುರಗಿ, ಆನಂದ ದೇವಪ್ಪ, ಎನ್.ಕೆ. ಕುಂಬಾರ, ಗುರುರಾಜ ಬೊಮ್ಮಣ್ಣ, ಬಸವರಾಜ ಚಟ್ನಳ್ಳಿ, ಆನಂದ ಬೆಡಸೂರ, ಚಂದ್ರಕಾಂತ ಶೆಟಕಾರ ಇತರರಿದ್ದರು. ಉಷಾಮಿರ್ಚೆ ಸ್ವಾಗತಿಸಿದರೆ, ಶಿವಶಂಕರ ಟೋಕರೆ ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *