ದಾವಣಗೆರೆ:
ವಚನ ಸಾಹಿತ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಜವಾಬ್ದಾರಿ, ಆಧ್ಯಾತ್ಮಿಕ ಜಾಗೃತಿ ಹಾಗೂ ಸಮಾನತೆ ಇದೆ ಎಂದು ಬಿಐಇಟಿ ಕಾಲೇಜಿನ ಇ ಅಂಡ್ ಸಿ ವಿಭಾಗದ ಮುಖ್ಯಸ್ಥರಾದ ಜಿ.ಎಸ್. ಸುನಿತಾ ಹೇಳಿದರು.
ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಶ್ರೀ ಗುರುಬಸವ ಮಂಟಪದಲ್ಲಿ ಲಿಂಗೈಕ್ಯ ಸಿ.ಎಂ ರೇವಪ್ಪ ಮತ್ತು ಪಿ.ಹೆಚ್. ಪಾರ್ವತಮ್ಮ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
12 ನೇ ಶತಮಾನದಲ್ಲಿ ಶಿವಶರಣರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಕಲ್ಪನೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆಂದು ಬಣ್ಣಿಸಿದರು. ಆರ್ಥಿಕ ಸ್ವಾತಂತ್ರ್ಯ ಎಂದರೆ ಕಾಯಕ ಮತ್ತು ದಾಸೋಹವಾಗಿದೆ. ಶರಣರು ಆತ್ಮಕ್ಕೆ ಲಿಂಗಬೇಧವಿಲ್ಲ ಎಂದು ಹೇಳಿದ್ದಾರೆ. ಅದರಂತೆ ಶರಣೆಯರು ವಚನ ಸಾಹಿತ್ಯವನ್ನು ಅತ್ಯಂತ ಸಮೃದ್ಧಗೊಳಿಸಿದ್ದರು.

ಮಹಿಳೆಯರು ಪುರುಷರಂತೆ ಭಕ್ತಿ ಮತ್ತು ಜ್ಞಾನದಲ್ಲಿ ಸಮಾನರು ಎಂದು ತೋರಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಸಮಾನತೆಗೆ ಹಾಗೂ ಸುಧಾರಣೆಗೆ ಕಾರಣರಾಗಿದ್ದಾರೆ. ಅಂಧಶ್ರದ್ದೆಯ ಆಚರಣೆಗಳನ್ನು ಮಾರ್ಪಾಡು ಮಾಡಿ ಅಂತರಂಗ ಶುದ್ದಿಗೆ ಹೆಚ್ಚು ಮಹತ್ವ ನೀಡಿದ್ದರು. ಕಾಯಕ ಮತ್ತು ದಾಸೋಹದ ಮಹತ್ವವನ್ನು ಜಗತ್ತಿಗೆ ತಿಳಿಸಿ ಅದರಂತೆ ಆಚರಿಸಿದರು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪನವರು ಮಾತನಾಡಿ, 1986ರಲ್ಲಿ ಮೈಸೂರಿನಲ್ಲಿ ಸುತ್ತೂರು ಶ್ರೀಗಳು ಶರಣ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಇಂದು ಪರಿಷತ್ತು 40ನೇ ವರ್ಷದ ಸಂಭ್ರಮದಲ್ಲಿದೆ. ಪರಿಷತ್ತಿನಿಂದ ದಾವಣಗೆರೆಯಲ್ಲಿ ನಿರಂತರವಾಗಿ ಅರ್ಥಪೂರ್ಣ ಉಪನ್ಯಾಸಗಳನ್ನು ಆಯೋಜಿಸುತ್ತಾ ಬಂದಿದ್ದೇವೆ ಎಂದರು.
ದತ್ತಿ ಪರಿಚಯವನ್ನು ಮಾಡಿಕೊಟ್ಟ ಸಂಜೆವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ತೇಜಸ್ವಿನಿ ಪ್ರಕಾಶ್ ಅವರು, ದಾವಣಗೆರೆ ಜಿಲ್ಲೆಯಲ್ಲಿ ಶರಣಸಾಹಿತ್ಯ ಪರಿಷತ್ತು ಬಸವಾದಿ ಶಿವಶರಣರ ಮೌಲ್ಯಗಳನ್ನು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಖಚಾಂಚಿ ಆರ್. ಸಿದ್ದೇಶಪ್ಪ ಸ್ವಾಗತಿಸಿದರು. ಬಸವಮಂಟಪದ ಸದಸ್ಯರು ಪ್ರಾರ್ಥಿಸಿದರು. ದತ್ತಿ ದಾನಿಗಳಾದ ಆರ್. ಮಂಜುನಾಥ ಪ್ರಸಾದ, ಪುಷ್ಪ ಮಲ್ಲಿಕಾರ್ಜುನ ಸ್ವಾಮಿ, ಡಾ.ಸಿ.ಆರ್. ಅನ್ನಪೂರ್ಣ, ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಮಮತಾ ನಾಗರಾಜ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಭರಮಪ್ಪ ಮೈಸೂರು ನಿರೂಪಿಸಿದರು. ಮುದೇಗೌಡ್ರ ನಾಗರಾಜ ವಂದನಾರ್ಪಣೆ ಸಲ್ಲಿಸಿದರು.
