ಕಲಬುರಗಿ
ಪ್ರತಿಯೊಂದು ವಚನವೂ ಸಮಾನತೆ, ಸ್ವಾತಂತ್ರ್ಯ ಮತ್ತು ಸೌಹಾರ್ದದ ಆಧಾರದ ಮೇಲೆ ಸಮಾಜವನ್ನು ಕಟ್ಟುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಯಾವುದು ಒಳ್ಳೆಯದೋ ಅದೇ ಮೌಲ್ಯ, ಬೇರೆಯವರಿಗೆ ಕೆಟ್ಟದ್ದನ್ನು ಬಯಸದಿರುವುದು ಸಹ ಮೌಲ್ಯ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ. ಸುಲೇಖಾ ಮಾಲಿಪಾಟೀಲ ಅಭಿಪ್ರಾಯಪಟ್ಟರು.
ಶ್ರಾವಣ ಮಾಸದ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಾಣಿಕಪ್ರಭು ಕಾಲೋನಿಯ ಶರಣ ಮಲ್ಲಿನಾಥ ಹನ್ನೂರು ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ “ವಚನ ವೈಭವ”ವಿಶೇಷ ಕಾರ್ಯಕ್ರಮದಲ್ಲಿ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು ವಿಷಯ ಕುರಿತು ಮಾತನಾಡಿದ ಅವರು, ಕಾಗೆಯ ಗುಣವನ್ನು ಉಲ್ಲೇಖಿಸುತ್ತಾ ಹಂಚಿಕೊಂಡು ಬದುಕಬೇಕು, ಸಹಕಾರ ಸಹಬಾಳ್ವೆಯಿಂದ ಬಾಳಬೇಕು ಎಂದರು.
ವಚನಗಳನ್ನು ಮಾತೃಭಾಷೆಯಲ್ಲಿ ಬರೆದಿರುವುದರಿಂದ ಅಲ್ಲಿನ ಮೌಲ್ಯಗಳು ಸಾಮಾನ್ಯರಿಗೆ ಸುಲಭವಾಗಿ ಅಳವಡಿಸಿಕೊಳ್ಳುವಂತಾಗಿವೆ ಎಂದು ಹೇಳಿದರು.
ಕಾಯಕವೇ ಕೈಲಾಸ ಎಂಬ ಸಂದೇಶದ ಮೂಲಕ ಶ್ರಮ ಸಂಸ್ಕೃತಿಗೆ ಶರಣರು ನಿರ್ಮಿಸಿದ ನೂತನ ಸಮಾಜದ ಬಗ್ಗೆ ಮತ್ತು ಅದರ ಮಹತ್ವವನ್ನು ಅವರು ಒತ್ತಿ ಹೇಳಿದರು. “ಆಚಾರ ಹೇಳೋಕೆ; ಬದನೆಕಾಯಿ ತಿನ್ನೋಕೆ” ಎಂಬುದನ್ನು ಉಲ್ಲೇಖಿಸಿ ಮೊದಲು ನಮ್ಮನ್ನು ನಾವು ತಿದ್ದಿಕೊಂಡು ಸರಿಯಾಗಲು ಒತ್ತಾಯಿಸಿದರು.
ಢಂಬಾಚಾರ ಆಚರಿಸದೇ, ಕೆಟ್ಟದನ್ನು ಮಾಡದೇ ಬದುಕುವುದು ಜೀವನದ ಮುಖ್ಯವಾದ ಮೌಲ್ಯ ಎಂದು ಹೇಳಿದರು. ಕರೋನೋತ್ತರ ಜೀವನವು ಸಾಮಾನ್ಯರಲ್ಲಿ ಸಹ ಮೌಲ್ಯಗಳ ಅರಿವು ಮೂಡಿಸಿದೆ ಎಂದರು. ಬಸವಣ್ಣನವರ ವಚನವೊಂದನ್ನು ಉಲ್ಲೇಖಿಸಿ ಕಾಗೆಯಂತಹ ಸಹಕಾರ ಮನೋಭಾವವನ್ನು ಕಲಿತುಕೊಳ್ಳುವಂತೆ ಹೇಳಿದರು. ಮನುಷ್ಯ ಸತ್ತ ಮೇಲೆ ಯಾವುದೇ ಉಪಯೋಗಕ್ಕೆ ಬಾರನಾದ್ದರಿಂದ ಜೀವಿತಾವಧಿಯಲ್ಲಿದ್ದಾಗ ಸಮಾಜಕ್ಕೆ ಉಪಯುಕ್ತರಾಗಿರಬೇಕು, ಇನ್ನೊಬ್ಬರಿಗೆ ಭಾರವಾಗದಂತೆ ಬದುಕಬೇಕು ಎಂದು ತಿಳಿಸಿದರು.
ಸಮಾಜದಲ್ಲಿನ ಮೇಲುಕೀಳು ವ್ಯವಸ್ಥೆಯನ್ನು ಮೌಲ್ಯವಿರೋಧಿ ಎಂದು ಉಪನ್ಯಾಸಕರು ಖಂಡಿಸಿದರು. ಬಸವಣ್ಣನವರು ಕೆಳವರ್ಗದ ಶೋಷಿತರ ಜನರೊಂದಿಗೆ ಬೆರೆತು ಅವರ ಗೌರವ ಹೆಚ್ಚಿಸಿದ ಬಗ್ಗೆ ವಚನಗಳನ್ನು ಉದಾಹರಿಸಿ ವಿವರಿಸಿದರು. ಅತಿ ಆಸೆಯು ಸಂಗ್ರಹ ಬುದ್ಧಿಯನ್ನು ಕಲಿಸಿ ಸಮಾಜದ ಆರ್ಥಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಲಂಚಗುಳಿತನ ಮತ್ತು ಭ್ರಷ್ಟಾಚಾರವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು. ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವುದು ಪೋಷಕರ ಆದ್ಯ ಕರ್ತವ್ಯ ಎಂದು ಹೇಳಿದರು.
ಅಂತಿಮವಾಗಿ ಮೇದಾರ ಕೇತಯ್ಯ, ಬಿಬ್ಬಿ ಬಾಚಯ್ಯ, ಹಡಪದ ಅಪ್ಪಣ್ಣ, ದಾಸಿಮಯ್ಯ ಮುಂತಾದ ಕಾಯಕ ಶರಣರ ಜೀವನದ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯಿಸಿ ಇತ್ತೀಚೆಗೆ ಬಸವ ತತ್ವಕ್ಕಾಗಿ ದುಡಿದ ಮಹನೀಯರ ಸೇವೆಯನ್ನು ನೆನೆಸಿಕೊಂಡರು. ವಚನಗಳನ್ನು ಓದಲು, ಸಜ್ಜನರ ಸಂಗವನ್ನು ಮಾಡಲು ಸೂಚಿಸಿ, ಪೋಷಕರು ಮಕ್ಕಳಿಗೆ ಮಾದರಿಯಾಗಬೇಕು; ಮಕ್ಕಳು ತಪ್ಪು ದಾರಿಯಲ್ಲಿ ಸಾಗದಂತೆ ಎಚ್ಚರವಹಿಸಬೇಕು ಎಂದರು. ಈ ಮೂಲಕ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಉಳಿಸಿ ಬೆಳೆಸಿ, ಸರಳ, ಪ್ರಾಮಾಣಿಕ ಮತ್ತು ಸಹಜ ಜೀವನ ನಡೆಸಬೇಕು ಎಂದರು.
ನೀಲಮ್ಮ ತಾಯಿ ಅಧ್ಯಕ್ಷತೆ ವಹಿಸಿದ್ದರು. ಶರಣ ಶರಣೆಯರು ಉಪಸ್ಥಿತರಿದ್ದರು.