‘ಮನೆ-ಮನಗಳಿಗೆ ವಚನಸಾರ ಮುಟ್ಟಿಸುತ್ತಿರುವ ವಚನ ಶ್ರಾವಣ’

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

ಬಸವಪರ ಸಂಘಟನೆಗಳ ‘ವಚನ ಶ್ರಾವಣ’ ಕಾರ್ಯಕ್ರಮದ ಉದ್ದೇಶವೇ ಮನೆ-ಮನಗಳಿಗೆ ವಚನಸಾರ ಮುಟ್ಟಿಸುವುದಾಗಿದೆ. ಈ ನಾಡಿನಲ್ಲಿ ಹುಟ್ಟಿದ ಏಕೈಕ ಧರ್ಮ ಬಸವಧರ್ಮ ಅಥವಾ ಲಿಂಗಾಯತ ಧರ್ಮವಾಗಿದೆ. ಧರ್ಮದ ತತ್ವಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವುದೇ ಕಾರ್ಯಕ್ರಮದ ಉದ್ದೇಶ ಎಂದು ವಚನತತ್ವ ಚಿಂತಕ ನಿಂಗನಗೌಡ ಹಿರೇಸಕ್ಕರಗೌಡ್ರ ಹೇಳಿದರು.

ಅವರು ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ, ಅಮರೇಶ್ವರ ನಗರದ ಮಂಜುನಾಥ ಎಸ್. ಲಾಲಗೊಂಡ ಅವರ ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯಂಗವಾಗಿ, ‘ವಚನ ಶ್ರಾವಣ-೨೦೨೫’ರ ೧೯ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವ ಧರ್ಮದ ಮಹತ್ವದ ತಿರುಳೆಂದರೆ ಸರ್ವರನ್ನೂ ಸಮಾನತೆಯಿಂದ ಕಾಣುವುದಾಗಿದೆ. ಶರಣರು ತಮ್ಮ ಸಂಕಲ್ಪಗಳನ್ನು ವಚನಗಳ ರೂಪದಲ್ಲಿ ಬರೆದಿಟ್ಟರು. ಅನುಭವ ಮಂಟಪದಲ್ಲಿ ಚರ್ಚಿಸಿದರು. ವಚನ ಸಾಹಿತ್ಯ ಹುಟ್ಟಿದ್ದು ಸರ್ವ ಕಾಯಕ ವರ್ಗಗಳವರಿಂದ ಎಂದರು.

ಶರಣರದು ಗುಡಿ-ಗುಂಡಾರಗಳ, ಹಲವು ಸ್ಥಾವರ ದೇವರು-ದಿಂಡಿರುಗಳ ಧರ್ಮವಲ್ಲ. ಇದು ಏಕದೇವೋಪಾಸನೆಯ ಧರ್ಮ. ಈ ಜಗತ್ತಿನ ಚೈತನ್ಯದ ಮೂಲ ದೇವನಾಗಿದ್ದಾನೆ. ಮನುಷ್ಯನೂ ಆ ಚೈತನ್ಯ ಸ್ವರೂಪಿಯೇ ಆಗಿದ್ದಾನೆ. ಆ ಕಾರಣ ಮನುಷ್ಯ ಶರಣನಾಗಿ ಚೆಂದನೆಯ ಬದುಕನ್ನು ಬದುಕಿ ಹೋಗಲು ಶರಣರು ವಚನಗಳ ಮೂಲಕ ಕರೆ ನೀಡಿದ್ದಾರೆಂದರು.

“ಹೊನ್ನಿನ ಆಪ್ಯಾಯಕ್ಕೆ ಬೋಳಾದವನಲ್ಲ, ಮಣ್ಣಿನ ಆಪ್ಯಾಯಕ್ಕೆ ಬೋಳಾದವನಲ್ಲ, ಹೆಣ್ಣಿನ ಆಪ್ಯಾಯಕ್ಕೆ ಬೋಳಾದವನಲ್ಲ, ಕೂಡಲಸಂಗಮದೇವರಲ್ಲಿ ಎನಗಾರು ಇಲ್ಲವೆಂದು ಬೋಳಾದನೆನ್ನ ಪ್ರಭುದೇವರು”

ಈ ವಚನ ಧರ್ಮಗುರು ಬಸವಣ್ಣನವರದು. ವಚನ ಕಿರಿದಾಗಿದೆ ಅದರೆ ಮಹತ್ವದ್ದಾಗಿದೆ. ಶೂನ್ಯ ಸಿಂಹಾಸನಾಧೀಶ್ವರ ಪ್ರಭುದೇವರ ವೈರಾಗ್ಯದ ಬಗ್ಗೆ ಹೇಳಲಾಗಿಗಿದೆ. ಐದು ಸಾಲುಗಳಲ್ಲಿ ಪ್ರಾರಂಭದ ಮೂರು ಸಾಲುಗಳಲ್ಲಿ ‘ಆಪ್ಯಾಯಕ್ಕೆ’ ಎಂಬ ಶಬ್ದ ಬರುವುದು. ಅಂದರೆ ಇದರ ಅರ್ಥ ಆಶೆ, ಹಸಿವು ಎಂದಾಗುವುದು. ಇನ್ನೂ ಬೋಳಾಗುವುದು ಎಂದರೆ ಆಸೆಯನ್ನು ತೊರೆದಾತ ಎಂದಾಗುವುದು. ಶರಣ ತತ್ವವೇ ಹಾಗೆ, ಶರಣ ಸಂಸಾರಿಯಾಗಿದ್ದರೂ ಆತ ನಿರ್ಮೋಹಿಯಾಗಿರುವನು. ವಿರಾಗಿಯಂತಿರುವನು.

ವಾಡಿಕೆಯಂತೆ ಈ ವಚನದಲ್ಲಿ ಬರುವ ಶಬ್ದ ಹೆಣ್ಣು ಬರೀ ಹೆಣ್ಣಲ್ಲ, ಗಂಡಿಗೂ ಈ ವಚನಾರ್ಥ ಸಲ್ಲುತ್ತದೆ. ಹೊನ್ನು, ಹೆಣ್ಣು, ಮಣ್ಣು ಇವುಗಳಾವವು ನಮ್ಮ ಶರಣರಿಗೆ ಹೆಚ್ಚಿನವಲ್ಲ. ಇದ್ದರೂ ಇರದಂತಿದ್ದವರು ಶರಣರು.
ಈ ಜಗದ ಇತಿಹಾಸದಲ್ಲಿ ಅನೇಕ ದೊಡ್ಡ ದೊಡ್ಡ ಸಾಮ್ರಾಜ್ಯಗಳೇ ವೈಭವದ ಆಳ್ವಿಕೆ ಮಾಡಿವೆ. ಕಾಲಾಂತರದಲ್ಲಿ ಅವೇ ಹೇಳ ಹೆಸರಿಲ್ಲದಂತೆ ಮರೆಯಾಗಿವೆ. ಈ ಮಣ್ಣಿಗಾಗಿ ಅನೇಕ ಯುದ್ಧಗಳೇ ನಡೆದು ಹೋಗಿವೆ. ಆಮಿಷಕ್ಕೊಳಗಾದವರು ಮಣ್ಣಿಗಾಗಿ ಚಿಂತಿಸುವರು ಈ ಜಗದಲ್ಲಿ ತುಂಬಿದ್ದಾರೆ. ಆದರೆ ಶರಣರು ಮಾತ್ರ ಇವೆಲ್ಲವುಗಳಿಂದ ಮುಕ್ತರಾಗಿದ್ದಾರೆ.

ಈ ಮೂರು ಶರಣರ ಬದುಕಿನಲ್ಲಿ ಮಿಳಿತವಾಗಿದ್ದರೂ ಅವರೆಂದು ಅವುಗಳ ಬಗ್ಗೆ ಮೋಹವಿಟ್ಟುಕೊಂಡವರಲ್ಲ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಳ್ಳುವರು. ಬೇಕೆ ಬೇಕೆಂಬ ದುರಾಶೆಗಳಿಂದ ಮುಕ್ತರಾಗಿದ್ದವರು ಶರಣರು. ಅದರಂತೆ ಶೂನ್ಯ ಪೀಠವನ್ನಲಂಕರಿಸಿದ್ದ ಪ್ರಭುದೇವರೂ ಇದೇ ಪಥದಲ್ಲಿದ್ದಾರೆಂದು, ಅವರೂ ತಮಗೆ ಮಾರ್ಗದರ್ಶಕರು ಎಂದು ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ ಎಂದು ಹಿರೇಸಕ್ಕರಗೌಡ್ರ ವಿಶ್ಲೇಷಿಸಿದರು.

ಇದೇ ವಚನ ಕುರಿತಾಗಿ ಶರಣತತ್ವ ಚಿಂತಕ ಎಸ್.ಎ. ಮುಗದವರು ಮಾತನಾಡಿದರು. ಮಂಜುನಾಥ ಲಾಲಗೊಂಡ ಅವರ ಮನೆತನದ ಬಗ್ಗೆ ಬಿ.ಬಿ. ಪಾಟೀಲರು ಪರಿಚಯ ಮಾಡಿಕೊಟ್ಟರು.

ಬಸವದಳದ ಶರಣೆಯರ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸರ್ವರನ್ನೂ ವಿಜಯಲಕ್ಷ್ಮೀ ಲಾಲಗೊಂಡ ಸ್ವಾಗತಿಸಿದರು. ನಿರೂಪಣೆ ಬಸವದಳದ ಶರಣರು ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *