ಶಹಾಪುರ:
ಮಹಿಳೆಯರು ಕೀಳು ಎಂದು ಹೇಳುತ್ತಿದ್ದ ದಿನಮಾನಗಳಲ್ಲಿ, ಅವಳು ಧಾರ್ಮಿಕ ಕ್ಷೇತ್ರಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ವೇದಾಗಮಗಳು ಸಾರುತ್ತಿದ್ದ ಸಂದರ್ಭದಲ್ಲಿ ಬಸವಣ್ಣ ಅವರ ಪರವಾಗಿ ಧ್ವನಿ ಎತ್ತಿ ಮಾತನಾಡಿದ ಪ್ರಜಾಪ್ರಭುತ್ವವಾದಿ ಎಂದು ಡಾ. ಜಯದೇವಿ ಗಾಯಕವಾಡ ಅಭಿಪ್ರಾಯ ಪಟ್ಟರು.
ನಗರದ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯ ಸಹಯೋಗದಲ್ಲಿ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು – ೧೨೯ನೇ ಸಭೆಯಲ್ಲಿ ‘ಶಿವಶರಣೆಯರ ವಚನಗಳಲ್ಲಿ ವೈಚಾರಿಕತೆ’ ವಿಷಯದ ಕುರಿತು ಅವರು ಮಾತನಾಡಿದರು.
ಹೆಣ್ಣು ಸಮಾಜದಲ್ಲಿ ಕಾಣಿಸಿಕೊಳ್ಳುವುದೇ ನಿಷಿದ್ಧವಾಗಿದ್ದ ಕಾಲದಲ್ಲಿ, ಮಹಿಳೆಯರನ್ನು ಅನುಭವ ಮಂಟಪಕ್ಕೆ ಆಹ್ವಾನಿಸಿ, ವ್ಯವಸ್ಥೆಯ ಲೋಪದೋಷಗಳನ್ನು ಪ್ರಶ್ನಿಸಲು ಅವಕಾಶ ನೀಡಿದ್ದು ಬಸವಣ್ಣನವರ ಮಹತ್ವದ ಪರಿಶ್ರಮವಾಗಿದೆ ಎಂದು ಅವರು ತಿಳಿಸಿದರು.
ಆಯ್ದಕ್ಕಿ ಮಾರಯ್ಯ ಶರಣರು ಅನುಭವ ಮಂಟಪದಲ್ಲಿ ವಿಚಾರಮಂಥನ ತೊಡಗಿಸಿಕೊಂಡು ತಮ್ಮ ಕಾಯಕವನ್ನು ಮರೆತ ಸಂದರ್ಭದಲ್ಲಿ, ‘ಹೋಗಯ್ಯ ಎನ್ನಾಳದ್ದನೆ’ ಎಂದು ಎಚ್ಚರಿಸಿದರು. ಅವರ ನಿಲುವು ಮಹಿಳೆಯರ ವೈಚಾರಿಕ ಧೈರ್ಯದ ಸಂಕೇತವಾಗಿದೆ ಎಂದರು. ‘ಕನ್ನೆಯ ಸ್ನೇಹವೆಂಬುದು ಕೂಡಲ ಸಂಗಮ ದೇವನ ನಿಲುವು’ ಎಂಬ ಬಸವಣ್ಣನವರ ಮಾತು ಮಹಿಳೆಯರ ಚಿಂತನಾ ಮಾರ್ಗವನ್ನು ತೆರೆದಿಟ್ಟಿತು ಎಂದು ವಿವರಿಸಿದರು.

ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ದಬ್ಬಾಳಿಕೆಯನ್ನು ಪ್ರಶ್ನಿಸುವ ಮೂಲಕ ಅದನ್ನು ಹತ್ತಿಕ್ಕುವ ದಾರಿ ತೋರಿಸಿದವರು ಬಸವಣ್ಣನವರು. ಸತ್ಯಕ್ಕ, ಕಾಳವ್ವೆ, ಕದಿರೆಯ ರೆಮ್ಮವ್ವೆ ಸೇರಿದಂತೆ ಅನೇಕ ವಚನಗಾರ್ತಿಯರ ವಚನಗಳ ತಿರುಳು ಜಡ ವ್ಯವಸ್ಥೆಯನ್ನು ಪ್ರಶ್ನಿಸುವುದಾಗಿತ್ತು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಲಬುರ್ಗಿ ವಿಶ್ವವಿದ್ಯಾಲಯದ ಡಾ. ಎಂ.ಬಿ. ಕಟ್ಟಿ ಮಾತನಾಡಿ, ಕುಂಬಾರ, ಕಂಬಾರ, ಹಡಪದ, ಕಮ್ಮಾರ, ಚಮ್ಮಾರ ಮುಂತಾದವು ಮೂಲತಃ ಉದ್ಯೋಗಗಳಾಗಿದ್ದವು. ಆದರೆ ಸ್ಥಾಪಿತ ವ್ಯವಸ್ಥೆ ಅವುಗಳನ್ನು ಜಾತಿಗಳಾಗಿ ಪರಿವರ್ತಿಸಿ, ಸಮಾಜದಲ್ಲಿ ಮೇಲು–ಕೀಳು ಭೇದವನ್ನು ಸೃಷ್ಟಿಸಿದೆ ಎಂದು ವಚನಗಳ ಉದಾಹರಣೆಗಳ ಮೂಲಕ ವಿವರಿಸಿದರು.
ಮತ್ತೋರ್ವ ಅತಿಥಿ ಗುಂಡಣ್ಣ ಕಲಬುರ್ಗಿ ಮಾತನಾಡಿ, ಭಾರತೀಯ ಶಿಕ್ಷಣ ನೀತಿ ಮಾನವ ಸಮಾಜದ ವೈಜ್ಞಾನಿಕ ಬೆಳವಣಿಗೆಯ ಅರಿವನ್ನು ಸಮರ್ಪಕವಾಗಿ ನೀಡಲಿಲ್ಲ. ಇದರ ಪರಿಣಾಮವಾಗಿ ಜಾತೀಯತೆ, ದೇವರು–ದೆವ್ವ, ಜೋತಿಷ್ಯ ಹಾಗೂ ಕೀಳು–ಮೇಲು ಭಾವನೆಗಳು ಸಮಾಜದಲ್ಲಿ ಬೇರುಬಿಟ್ಟಿವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವಾರಾಧ್ಯ ಸತ್ಯಂಪೇಟೆ, ಸಮಾಜದ ವೈಚಾರಿಕ ಮತ್ತು ವೈಜ್ಞಾನಿಕ ಪ್ರಗತಿಗೆ ಅಡ್ಡಿಯಾಗಿರುವುದು ನಮ್ಮದೇ ಶಿಕ್ಷಣ ಹಾಗೂ ಆಲೋಚಿಸದ ಮನೋಭಾವ ಎಂದು ಅಭಿಪ್ರಾಯಪಟ್ಟರು. ಪ್ರಶ್ನೆ ಹುಟ್ಟಿದಲ್ಲೇ ಸತ್ಯದ ಅನಾವರಣವಾಗುತ್ತದೆ ಎಂದರು.
ಸಭೆಯ ಸಾನಿಧ್ಯವನ್ನು ಗುರುಮಠಕಲ್ಲ ಖಾಸಾಮಠದ ಪೂಜ್ಯ ಶ್ರೀ ಶಾಂತವೀರ ಮಹಾಸ್ವಾಮಿಗಳು ವಹಿಸಿದ್ದರು. ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಸಂಪು, ಪೂಜಾ ಮತ್ತು ಶರಾವತಿ ವಚನ ಪ್ರಾರ್ಥನೆ ಸಲ್ಲಿಸಿದರು. ಕೊನೆಯಲ್ಲಿ ಲಕ್ಷ್ಮಣ ಲಾಳಸೇರಿ ಶರಣು ಸಮರ್ಪಣೆ ಮಾಡಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಷಣ್ಮುಖ ಅಣಬಿ, ಪಂಪಣ್ಣಗೌಡ ಮಳಗ, ಚೆನ್ನಪ್ಪ ಹರನೂರ, ಸಂಗಣ್ಣಗೌಡ ವಡಿಗೇರಿ, ಮರೆಪ್ಪ ಅಣಬಿ, ಶಿವಕುಮಾರ ಕರದಳ್ಳಿ, ಶಿವಲಿಂಗಪ್ಪ ಎಚ್.ಎಂ., ತಿಪ್ಪಣ್ಣ ಶಿಕ್ಷಕರು, ಶಿವಯೋಗಪ್ಪ ಹವಾಲ್ದಾರ, ಸೃಷ್ಟಿ ಬಸವರಾಜ ನಂದಿ, ಪಲ್ಲವಿ ಜಾಲವಾದಿ, ಲಲಿತಾ ಶರಣಪ್ಪ ಯಡ್ರಾಮಿ, ಸಿದ್ದಲಿಂಗಪ್ಪ ಆನೇಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
