ಬಸವಗಿರಿಯಲ್ಲಿ ಫೆಬ್ರವರಿ 12 ರಿಂದ 14 ವಚನ ವಿಜಯೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ನಗರದ ಬಸವಗಿರಿಯಲ್ಲಿ ಫೆಬ್ರವರಿ 12 ರಿಂದ 14ರ ವರೆಗೆ ವಚನ ವಿಜಯೋತ್ಸವ ಆಯೋಜಿಸಲಾಗುವುದು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಶಿವಯೋಗ ಸಾಧಕರ ಕೂಟದಿಂದ ಶುಕ್ರವಾರ ನಡೆದ ಸಾಮೂಹಿಕ ಶಿವಯೋಗ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಅರ್ಥಪೂರ್ಣ ವಚನ ವಿಜಯೋತ್ಸವಕ್ಕೆ ಈಗಿನಿಂದಲೇ ಅಗತ್ಯ ಸಿದ್ಧತೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣನ ಮಣಿಹವೆ ಪ್ರಾಣವಿಂದಿಂಗೆ ಎಂದು ಅಕ್ಕನಾಗಮ್ಮ ಅವರು ವಚನಗಳನ್ನು ಉಳವಿ ಕಾಡಿನಲ್ಲಿ ಉಳಿಸಿ ಮತ್ತೆ ನಾಡಿಗೆ ತಂದರು. ಮಾನವೀಯ ಮಾಲ್ಯಗಳನ್ನೇ ಮೈವೆತ್ತ ವಚನಗಳನ್ನು ಉಳಿಸಿದ ದಿನವನ್ನು ಗುರುತಿಸಿದ ಅಕ್ಕ ಅನ್ನಪೂರ್ಣತಾಯಿ ಅವರು ಎರಡು ದಶಕಗಳ ಹಿಂದೆ ವಚನ ವಿಜಯೋತ್ಸವ ಆರಂಭಿಸಿದರು ಎಂದು ಹೇಳಿದರು.

ವಚನಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆ, ವಚನಗಳಿಗೆ ಪಟ್ಟಗಟ್ಟಿ ಪರಮೋಚ್ಚ ಗೌರವ ಸಲ್ಲಿಕೆ ಮೊದಲಾದ ಅವರ ಕಾರ್ಯಗಳು ಜನಮನಸೂರೆಗೊಂಡವು. ಅಲ್ಪಕಾಲದಲ್ಲೇ ವಚನ ವಿಜಯೋತ್ಸವ ಕಲ್ಯಾಣ ಕರ್ನಾಟಕದ ಹೆಮ್ಮೆಯ ಕಾರ್ಯಕ್ರಮವಾಗಿ ಹೆಸರು ಮಾಡಿತು ಎಂದು ತಿಳಿಸಿದರು.

ಅಕ್ಕನವರ ಕನಸೇ ನಮ್ಮ ಉಸಿರು. ಅವರ ಸಂಕಲ್ಪಗಳನ್ನು ಪೂರೈಸುವುದು ನಮ್ಮ ಆದ್ಯ ಕರ್ತವ್ಯ. ವಚನ ವಿಜಯೋತ್ಸವ ವೈಭವ ಮತ್ತೆ ಬೀದರದಲ್ಲಿ ಹೊರಹೊಮ್ಮಿ ನಾಡಿನಾದ್ಯಂತ ಹರಡಬೇಕಿದೆ ಎಂದು ಹೇಳಿದರು.

ಪ್ರಾಣಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟ ಸಾಹಿತಿ ರಮೇಶ ಮಠಪತಿ ಅವರು ಫಲಭೋಗಗಳನ್ನು ಬಯಸದೆ, ಅರಿವಿನಿಂದ ಪೂಜೆಗೈದರೆ ಪರಮಾನಂದ ಲಭಿಸುವುದು ಎಂದು ಮಾರ್ಮಿಕವಾಗಿ ಹೇಳಿದರು.

ನೀಲಮ್ಮನ ಬಳಗದ ಪ್ರಭಾವತಿ ಗೋರನಾಳೆ ಅತಿಥಿಯಾಗಿದ್ದರು. ಪರುಷಕಟ್ಟೆಯ ಚನ್ನಬಸವಣ್ಣ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಭಕ್ತಿದಾಸೋಹಗೈದ ಮಾಣಿಕಪ್ಪ ಗೋರನಾಳೆ ಸ್ವಾಗತಿಸಿ, ವಂದಿಸಿದರು.

Share This Article
1 Comment
  • “ವಚನ ವಿಜಯೋತ್ಸವ” ಮೂಲಕ ವಚನಗಳ ಚಿಂತನ ಮಂಥನ ಕೈಗೊಂಡು ಜನಮಾನಸದಲ್ಲಿ ಉಳಿಸಿದ ಕೀರ್ತಿ ಅನ್ನಪೂರ್ಣ ಅಕ್ಕನವರಿಗೆ ಸಲ್ಲುತ್ತದೆ. ವಿಶೇಷವಾಗಿ ನೀಲಮ್ಮನ ಬಳಗ ಕಟ್ಟಿ ಮಹಿಳೆಯರ “ವಿರಾಟ ಸಂಘಟನೆ”ಗೆ ಸಾಕ್ಷಿಯಾದವರು. ನಿರಂತರವಾಗಿ ವಚನ ವಿಜಯೋತ್ಸವ ಸಾರ್ವತ್ರಿಕ ರೂಪದಲ್ಲಿ ವಿಜೃಂಭಿಸಲೆಂದು ವಿಶ್ವಾತ್ಮನಲ್ಲಿ ಪ್ರಾರ್ಥಿಸುತ್ತೇನೆ. ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *