ರಾಷ್ಟ್ರ ಕಟ್ಟಲು ವಿಶ್ವಕಲ್ಯಾಣ ಯುವ ಪರಿಷತ್ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

೧೨ನೇ ಶತಮಾನದಲ್ಲಿ ನಡೆದ ಕಲ್ಯಾಣಕ್ರಾಂತಿ ಸಾಮಾನ್ಯವಾದದ್ದಲ್ಲ. ಮನುಷ್ಯನು ಜೀವನದಲ್ಲಿ ಹೇಗೆ ಬದುಕಬೇಕು ಎಂಬುದು ತಿಳಿಸಿಕೊಡುತ್ತದೆ. ಅದು ವೈಚಾರಿಕ ಕ್ರಾಂತಿಯಾಗಿದ್ದು, ಸರ್ವಕಾಲಿಕವಾದದ್ದು. ಅದಕ್ಕಾಗಿ ವಚನ ಸಾಹಿತ್ಯ ಅಂದಿಗೂ ಇಂದಿಗೂ ಮುಂದೆಯೂ ಪ್ರಸ್ತುತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಅವರು ಬಸವಗಿರಿಯಲ್ಲಿ ನಡೆಯುತ್ತಿರುವ ವಚನ ವಿಜಯೋತ್ಸವದ ಎರಡನೇ ದಿನ ನಡೆದ ಯುವಶಕ್ತಿ ಸಮಾವೇಶದಲ್ಲಿ, ವಿಶ್ವಕಲ್ಯಾಣ ಯುವ ಪರಿಷತ್ ನಾಮಫಲಕ ಅನಾವರಣ ಮಾಡಿ ಮಾತನಾಡಿದರು.

ಜಗತ್ತಿನ ವಿವಿಧೆಡೆಯಿಂದ ಕಲ್ಯಾಣದ ಅನುಭವ ಮಂಟಪಕ್ಕೆ ಶರಣರು ಬಂದು ತಮ್ಮ ಅನುಭವ ವಿಶ್ಲೇಷಣೆಯನ್ನು ಮಾಡಿ ಬರೆದದ್ದು ವಚನ ಸಾಹಿತ್ಯ. ಇದನ್ನು ಎಲ್ಲರೂ ಸರ್ವಸಮ್ಮತವಾಗಿ ಒಪ್ಪಿಕೊಂಡಿರುವಂತಹದ್ದು. ಹಾಗಾಗಿ ಅದರಲ್ಲಿ ಬಹುದೊಡ್ಡ ಶಕ್ತಿ ಇದೆ.

ಸಮಾಜದಲ್ಲಿನ ಮೂಢನಂಬಿಕೆ, ಅಜ್ಞಾನ ಅಂಧಕಾರ, ಹೋಗಲಾಡಿಸಿ ಜನರನ್ನು ಸರಿಯಾದ ದಾರಿಗೆ ತರಲು ಮಾಡಿದ ಪ್ರಯತ್ನ. ಮಹಿಳೆಯರು ಆಧ್ಯಾತ್ಮದಲ್ಲಿ ಎತ್ತರಕ್ಕೆ ಏರಬಲ್ಲರು ಎಂಬುದಕ್ಕೆ ಶರಣೆಯರೇ ನಮಗೆ ನಿದರ್ಶನ. ನಮ್ಮ ಯುವಪೀಳಿಗೆ ಪಾಶ್ಚಾತ ಜೀವನಕ್ಕೆ ಮಾರು ಹೋಗಿ ಅನುಕರಣೆ ಮಾಡುತ್ತಿರುವುದು ನೋಡಿದರೆ ನಮ್ಮ ಶರಣ ಸಂಸ್ಕೃತಿ ಮರೆತು ಹೋಗುತ್ತಿದ್ದಾರೆ ಎಂಬುದು ಕಾಣಬರುತ್ತಿದೆ.

ನಮ್ಮ ಮಕ್ಕಳಿಗೆ ಇಷ್ಟಲಿಂಗಪೂಜೆ, ವಚನ ಅಧ್ಯಯನ, ಶರಣ ಸಂಸ್ಕೃತಿ ತಿಳಿಸಿಕೊಡಬೇಕು. ಇದರಿಂದ ಅವರು ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸರಿಯಾದ ಆಲೋಚನೆಯಿಂದ ಬದುಕಲು ಸಾಧ್ಯ. ವಚನಗಳಲ್ಲಿ ಸರ್ವ ಸಮಸ್ಯೆಗಳಿಗೆ ಪರಿಹಾರವಿದೆ. ಬಸವತತ್ವ ಪ್ರಸಾರ -ಪ್ರಚಾರಕ್ಕಾಗಿ ಅಕ್ಕನವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಶರಣ ವಿಜ್ಞಾನಿ ಪುರಸ್ಕಾರ ಸ್ವೀಕರಿಸಿ ಇಸ್ರೋ ಉಪನಿರ್ದೇಶಕಿ ಕೆ.ಎಲ್. ಶಿವಾನಿ ಮಾತನಾಡಿ, ಮಹಿಳೆಯರು ಕೀಳರಿಮೆ ಬಿಟ್ಟು ಹೊರಗಡೆ ಬಂದು ಸ್ವಂತ ವಿಕಾಸಕ್ಕೆ ಮುಂದಾಗಬೇಕು.

ಸೋಲಾದರೂ ಹಿಂದೆ ಸರಿಯದೆ ಮುಂದೆ ಸಾಗಬೇಕು. ಸೋಲೆ ಗೆಲುವಿಗೆ ಮೆಟ್ಟಿಲಾಗಬೇಕು. ಆರೋಗ್ಯಕರ ಸ್ಫರ್ಧೆ ಮಾಡಬೇಕು. ಇಸ್ರೋದಲ್ಲಿ ಯಾವುದೇ ಪದವಿ  ಪಡೆದವರಿಗೂ ವಿಪುಲ ಅವಕಾಶಗಳಿವೆ. ಕಲಿಯುವ ವಿಷಯ ಬಹಳಷ್ಟಿದ್ದು ಗುರಿಗಳ ಸಾಧನೆಗೆ ಡಿಜಿಟಲ್ ಮಾಧ್ಯಮಗಳನ್ನು ಒಳ್ಳೆಯದಕ್ಕೆ ಉಪಯೋಗಿಸಿಕೊಳ್ಳಬೇಕೆಂದು ಯುವಕ-ಯುವತಿಯರಿಗೆ ಕರೆಯಿತ್ತರು.

ಸಕರಾತ್ಮವಾಗಿ ಯೋಚಿಸಿ ನಿಷ್ಠೆ, ಶೃದ್ಧಯಿಂದ ಕೆಲಸ ಮಾಡಿದರೆ ಅಸಾಧ್ಯವಾದುದ್ದನ್ನು ಸಾಧಿಸಬಹುದು. ಕಷ್ಟಪಟ್ಟು ಓದಿ ತಮ್ಮದೇ ಹಾದಿಯಲ್ಲಿ ಮುನ್ನಡೆಯಲ್ಲಿ ಸಾಗಲು ರ್ಯಾಂಕ್ ಮುಖ್ಯವಲ್ಲ. ನಿಗದಿತ ಗುರಿ ಮತ್ತು ಅಚಲವಾದ ನಂಬಿಕೆಯಿಂದಲೂ ಅತ್ಯುತ್ತಮ ಸಾಧನೆ ಮಾಡಬಹುದು ಎಂದರು.

 ನೇತೃತ್ವ ವಹಿಸಿದ್ದ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಮಾನವನ ಸರ್ವ ಸ್ವಪ್ನಗಳನ್ನು ಸಾಕಾರಗೊಳಿಸುವ ಭೂಮಿ ಭಾರತ. ಶರಣರು ದೇಶಭಕ್ತರು. ಐಕ್ಯತೆಗಾಗಿ ದುಡಿದವರು. ದೇಶದ ಶಕ್ತಿಯಾದ ಯುವಶಕ್ತಿಯ ಸದ್ಬಳಕೆ ಅವಶ್ಯಕವಾಗಿದೆ. ಸದೃಢ ನಾಡು ರಾಷ್ಟ್ರ ಕಟ್ಟುವಲ್ಲಿ ಸ್ವಯಂ ಪ್ರೇರಣೆ ಕಾರ್ಯ ನಿರ್ವಹಿಸಬೇಕಾಗಿದೆ. ಅದಕ್ಕಾಗಿಯೇ ವಿಶ್ವಕಲ್ಯಾಣ ಯುವ ಪರಿಷತ್ತು ಆರಂಭಿಸಲಾಗಿದೆ.

ಯುವಕರು ತಮ್ಮ ಬದುಕಿನಲ್ಲಿ ಶಿಸ್ತು, ಸಮಯ ಪ್ರಜ್ಞೆ, ಆತ್ಮ, ವಿಶ್ವಾಸ ದೃಢ ನಂಬಿಕೆ, ಶ್ರದ್ದಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಆದರ್ಶ ನಾಗರಿಕರಾಗಲು ಸಾಧ್ಯ ಎಂದರು.

ಸಾನಿಧ್ಯ ವಹಿಸಿದ ಭಾಲ್ಕಿ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿ, ಯುವಶಕ್ತಿ ದೇಶದ ಶಕ್ತಿ. ಎಲ್ಲಾ ರಂಗದಲ್ಲಿ ಭಾರತದ ವೈಶಿಷ್ಟ್ಯತೆ ಇದೆ. ಇಡೀ ಜಗತ್ತಿಗೆ ಭಾರತ ಹೃದಯವಿದ್ದಂತೆ. ಯುವಕರು ಆಚರಣೆಯಿಂದ ದೇಹವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ನಡೆ-ನುಡಿ ಶುದ್ಧವಾಗಿಟ್ಟು ಹೋದಾಗ ಜಗತ್ತಿಗೆ ಆದರ್ಶವಾಗಬಹುದು ಎಂದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಸರ್.ಸಿ.ವಿ. ರಾಮನ್ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಎಸ್. ಜೋಗದ  ಮಾತನಾಡಿ, ಯುವಕರು ಧೈರ್ಯವಂತರಾಗಬೇಕು. ಸ್ಪಷ್ಟವಾದ ಗುರಿಯನ್ನು ಹೊಂದಿರಿ ಮತ್ತು ಅದನ್ನು ಸಾಧಿಸುವವರೆಗೆ ದಣಿವರಿಯದೆ ಶ್ರಮಿಸಬೇಕು. ಆತ್ಮವಿಶ್ವಾಸ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸೆಜಲಾ ಬಸವಕುಮಾರ ಸುಲಗುಂಟೆ ಗುರುಪೂಜೆ ನೇರವೇರಿಸಿದರು.

ಅನುಭಾವಿಗಳಾದ ಶಂಕರ ದೇವನೂರು, ಮುಖಂಡರಾದ ಬಸವರಾಜ ಭತಮುರ್ಗೆ, ಶಿವರಾಜ ನರಶೆಟ್ಟಿ, ಕಾರ್ಯನಿರ್ವಾಹಕ ಅಭಿಯಂತರ ರಾಮಲಿಂಗ ಬಿರಾದಾರ, ಬೀದರ ವಿವಿ ಸಿಂಡಿಕೇಟ್ ಸದಸ್ಯ ಶಿವನಾಥ ಪಾಟೀಲ, ಚಿದಂಬರ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ. ಹಾವಗಿರಾವ ಮೈಲಾರೆ, ಜ್ಞಾನ ಸುಧಾ ವಿದ್ಯಾಲಯದ ಅಧ್ಯಕ್ಷೆ ಪೂರ್ಣಿಮಾ ಜಾರ್ಜ, ಅಕ್ಕಮಹಾದೇವಿ ಕಾಲೇಜು ಪ್ರಾಚಾರ್ಯ ಡಾ. ರಂಜನಾ ಪಾಟೀಲ, ಸಂಗೀತಾ ಮಿರ್ಚೆ, ವಿವೇಕ ಧನ್ನೂರು, ಶೇಖರ ಬಿರಾದಾರ, ಸತೀಶ ಪಾಟೀಲ, ಡಾ. ವಿಜಯಕುಮಾರ ಕೋಟೆ, ರಾಜಕುಮಾರ ಟಿಳ್ಳೇಕರ್, ಚಂದ್ರಕಾಂತ ಪಾಟೀಲ, ಸಂಗಮೇಶ ಕಾವಡಿ, ಯೋಗೇಶ ಸಿರಿಗೆರೆ, ಸಚಿನ ಕೊಳ್ಳೂರ, ನಿಖಿಲ ಖಂಡ್ರೆ,  ಬಸವರಾಜ ಬಿರಾದಾರ, ಅಶೋಕ ಹೆಬ್ಬಾಳೆ,  ಅರ್ಚನಾ ಮದಕಟ್ಟಿ, ವಿರೇಶ ತೂಗಾಂವೆ, ವಿಶಾಲ ಗಂದಗೆ, ಶಿವಪ್ರಸಾದ ಬಿರಾದಾರ, ರವಿಕಾಂತ ಪಾಟೀಲ ಇತರರಿದ್ದರು.

ಆಕಾಶ ಮೊಳಕೇರಿ ವಚನ ಗಾಯನ ಮಾಡಿದರು. ವೈಷ್ಣವಿ ಪಾಟೀಲ ಸ್ವಾಗತಿಸಿದರೆ, ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು. ರೋಹಿತ ಜಿರೋಬೆ ಶರಣು ಸಲ್ಲಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *