‘ವಚನಗಳು ಬೆನ್ನ ಹಿಂದಿನ ಬೆಳಕಾಗಬೇಕು’

ಕಲಬುರಗಿ

“ವಿದ್ಯಾರ್ಥಿಗಳಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಹಾಗೂ ಶರಣರ ವಚನಗಳು ಬೆನ್ನ ಹಿಂದಿನ ಬೆಳಕಾಗಬೇಕು” ಎಂದು ಶರಣ ಚಿಂತಕಿ ಡಾ. ನೀಲಾಂಬಿಕಾ ಪೊಲೀಸಪಾಟೀಲ ಹೇಳಿದರು.

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದ ಲಿಂ. ದೊಡ್ಡಪ್ಪ ಅಪ್ಪ ಸ್ಮಾರಕ ಭವನದಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು, “ವಚನ ಸಾಹಿತ್ಯ ನಮಗೆ ಆ ಧೈರ್ಯ ಮತ್ತು ಸ್ವಾತಂತ್ರ್ಯ, ನೈತಿಕ ಮೌಲ್ಯ ಕೊಟ್ಟಿರುವುದರಿಂದ ಇಂದಿನ ವಿದ್ಯಾರ್ಥಿಗಳು ಮಠಗಳು ಹಾಗೂ ಮಠಾಧೀಶರಗಳನ್ನು ಕೂಡ ಜಾಗೃತ ಮಾಡಬೇಕಾಗಿದೆ” ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸಾರಿಕಾದೇವಿ ಕಾಳಗಿ ಮಾತನಾಡಿ, “ಬಸವ ಚಳುವಳಿ ಮನೆಯೊಳಗಿಂದಲೇ ಆರಂಭಗೊಂಡು, ಶುದ್ಧ ನಡೆ ನುಡಿಗಳ ಮೂಲಕ ಅವರು ಸಮಾಜದಲ್ಲಿ ಸತ್ಯ, ಧರ್ಮ, ಸಮಾನತೆ, ಜ್ಞಾನವಂತಿಕೆಯ ಬೆಳಕು ಹರಡಿದರು” ಎಂದು ಹೇಳಿದರು.

ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ ಸ್ವಾಗತಿಸಿದರು. ಅಥಣಿ ಮೋಟಗಿ ಮಠದ ಚನ್ನಬಸವಾನಂದ ಸ್ವಾಮೀಜಿ ಆಶಯ ಭಾಷಣ ಮಾಡಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ಅನಿಲ ಬಿಡವೆ ಅಧ್ಯಕ್ಷತೆ ವಹಿಸಿದ್ದರು.

ಆರಂಭದಲ್ಲಿ ಬಸವ ಮೂರ್ತಿಗೆ ಪುಷ್ಪವೃಷ್ಟಿ ಸಲ್ಲಿಸಿ, ಬಸವಧ್ವಜ ನೆರವೇರಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಗದಗನ ಡಾ. ಸಿದ್ಧರಾಮ ಸ್ವಾಮಿಗಳು, ಹುಲಸೂರು ಶಿವಕುಮಾರ ಶ್ರೀ, ಆಳಂದ ಕೊರಣೇಶ್ವರ ಶ್ರೀ, ಭಾಲ್ಕಿ ಗುರುಬಸವ ಪಟ್ಟದ್ದೇವರು ಸೇರಿದಂತೆ ಅನೇಕ ಸ್ವಾಮಿಗಳು ವೇದಿಕೆಯಲ್ಲಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ರಾಷ್ಟ್ರೀಯ ಬಸವ ದಳದ ಆರ್.ಜಿ. ಶೆಟಗಾರ, ಅಶೋಕ ಘೂಳಿ, ಸತೀಶ ಸಜ್ಜನ, ಶಿವಶರಣಪ್ಪ ದೇಗಾಂವ, ಸಂಗಮೇಶ ನಾಗನಳ್ಳಿ, ರಾಜಕುಮಾರ ಕೋಟಿ, ರಾಜಶೇಖರ ಯಂಕಂಚಿ, ಅಪ್ಪಾರಾವ ಅಕ್ಕೋಣೆ ಇತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *