ಮುದ್ದೇಬಿಹಾಳ:
ವಚನ ಸಾಹಿತ್ಯ ಅನುಭವಿಗಳ ಸಾಹಿತ್ಯ. ಈ ಸಾಹಿತ್ಯ ಶರಣರ ಅಂತರಂಗದ ಅರಿವಿನ ಮನೆಯಲ್ಲಿ ಮೂಡಿಬಂದ ಅನುಭಾವ ಸಾಹಿತ್ಯ. ವಚನಗಳು ಕುಳಿತು ಬರೆದ ಕಾವ್ಯಗಳಲ್ಲ. ಅವು ಹೃದಯದ ಪರದೆಯ ಮೇಲೆ ಮೂಡಿಬಂದ ಮುಕ್ತಕಗಳು ಎಂದು ಮಡಿವಾಳೇಶ್ವರ ವಿದ್ಯಾವರ್ಧಕ ಸಂಘದ ಚೇರ್ಮನ್ ಎಸ್.ಎಸ್. ಪಾಟೀಲ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಢವಳಗಿ ಸಹಯೋಗದೊಂದಿಗೆ ಹಮ್ಮಿಕೊಂಡ ಲಿಂಗೈಕ್ಯ ಯಮುನಾಬಾಯಿ ರಾಮಪ್ಪ ಕಲಕೇರಿ, ಲಿಂಗೈಕ್ಯ ಹನುಮಂತರಾಯ ರಾಮಪ್ಪ ಕಲಕೇರಿ, ಲಿಂಗೈಕ್ಯ ಗಿರಿಜಾ ಹನುಮಂತರಾಯ ಕಲಕೇರಿ ಇವರ ಸ್ಮರಣಾರ್ಥ ಹಮ್ಮಿಕೊಂಡ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಢವಳಗಿಯಲ್ಲಿ ಹಮ್ಮಿಕೊಂಡ ಶರಣ ಕಿರಣ, ವಿದ್ಯಾರ್ಥಿಗಳಿಗಾಗಿ ಪ್ರಶ್ನೋತ್ತರ ಕ್ವಿಜ್ ಕಾರ್ಯಕ್ರಮದಲ್ಲಿ ಅನುಭಾವವನ್ನು ಹಂಚಿಕೊಂಡರು.

ದರ್ಪವೇರಿದ ಒಡಲೆಂಬ ಬಂಡಿಗೆ ಕಡೆಗೀಲು ಕೀಲುಗಳಾಗಿವೆ. ವಚನಗಳಲ್ಲಿ ಬೆಳಕಿದೆ, ಬೆಡಗಿದೆ, ಬೆರಗಿದೆ. ಸತ್ಯದ ಮಾರ್ಗಕ್ಕೆ ಸುಲಭ ಸೋಪಾನಗಳು ವಚನಗಳು. ದಿನಾಲು ಎದ್ದ ತಕ್ಷಣ ಒಂದು ವಚನವನ್ನು ಓದುವುದು ಅದರ ಚಿಂತನೆಯಲ್ಲಿ ಅಂದಿನ ಕಾಯಕವನ್ನು ಮಾಡುವುದು ರೂಡಿಸಿಕೊಳ್ಳಬೇಕು. ಶರಣರ ವಚನಗಳು ಮಂತ್ರಗಳಂತೆ. ಬದುಕಿಗೆ ಬೆಳಕನ್ನು ನೀಡುವಂತಹ ಎಂದು ಪಾಟೀಲ ಹೇಳಿದರು.
ಮಹಾದೇವಿ ಕಂಠಿ ಅವರು ದತ್ತಿಗಳ ಪರಿಚಯ ಮಾಡುತ್ತಾ, ಕಲಕೇರಿ ಮನೆತನ ಅಕ್ಷರ ದಾಸೋಹದ ಮನೆತನ. ಮಾತೋಶ್ರೀ ಯಮುನಾ ಬಾಯಿಯವರು ಬಡತನದ ಬದುಕಿನಲ್ಲಿ ಮಗ ಹನುಮಂತ ರಾಯರನ್ನು ಆದರ್ಶ ಶಿಕ್ಷಕರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಅದೇ ರೀತಿಯಾಗಿ ಹನುಮಂತರಾಯರು ಆದರ್ಶ ಶಿಕ್ಷಕರಾಗಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಮಾಜಿಕ ಸೇವೆಯನ್ನು ಸಲ್ಲಿಸಿದಂತವರು. ತಮ್ಮ ಪತ್ನಿ ಗಿರಿಜಾ ಕಲಕೇರಿಯವರನ್ನು ಗುರು ಮಾತೆಯ ವೃತ್ತಿಯೊಂದಿಗೆ, ಶಿವಶರಣರ ಮಾರ್ಗ ತೋರಿಸಿ, ವೈಚಾರಿಕ, ಕಾಯಕ, ದಾಸೋಹದ ಬದುಕನ್ನು ತೋರಿಸಿಕೊಟ್ಟರು.
ವಿದ್ಯಾರ್ಥಿಗಳಿಗಾಗಿ ನಡೆಸಿದ ಪ್ರಶ್ನೋತ್ತರ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದ ಕುಮಾರಿ ವೈಷ್ಣವಿ ಹಡಪದ, ಅರ್ಪಿತ ಕೋಣನವರ, ಪ್ರೀತಮ್ ಮಾದರ, ಐಶ್ವರ್ಯ ಕೋಣನವರ, ಗುರುದೇವಿ ಅಡ್ಡೋಡಗಿ ಈ ವಿದ್ಯಾರ್ಥಿಗಳಿಗೆ ಪದಕ ಪ್ರಶಸ್ತಿ, ಗ್ರಂಥಗಳನ್ನು ನೀಡಿ ಗೌರವಿಸಲಾಯಿತು.

ಮಡಿವಾಳಪ್ಪ ಬಿರಾದಾರ, ಬಾಂಬೆ ಗೌಡ್ರು ಬಸವ ಭಾವ ಪೂಜೆ ನಡೆಸಿಕೊಟ್ಟರು. ನಾನಗೌಡ ಕೊಣ್ಣೂರ ಅವರು ಉದ್ಘಾಟಕರಾಗಿ ಆಗಮಿಸಿದರು. ಲಕ್ಷ್ಮಿ ಬಡಿಗೇರ ಭರತ ನಾಟ್ಯ ಮಾಡಿದರು.
ಕ್ವಿಜ್ ಕಾರ್ಯಕ್ರಮದ ಸಂಯೋಜಕರಾದ ಎಸ್. ಆರ್. ಗೌಡರ, ಎಸ್. ಎಸ್. ಹುನಗುಂದ, ಮಹಾದೇವಿ ಕಂಠಿ, ಭಾರತಿ ಪಾಟೀಲ ಇವರು ವಿಜೇತ ಕ್ವಿಜ್ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿದರು. ಬಸವರಾಜ ನಾಲತ್ವಾಡ, ಮಹಾಂತಗೌಡ ಬಿರಾದಾರ ಅವರು ತಮ್ಮ ತಂದೆಯವರಾದ ಲಿಂಗೈಕ್ಯ ಸಿದ್ದನಗೌಡ ಬಿರಾದಾರ ಅವರ ಸ್ಮರಣಾರ್ಥ ದತ್ತಿ ನಿರ್ಮಿಸಿದ್ದಕ್ಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಸವರಾಜ್ ಕೋರಿ ಅವರು ಕ್ವಿಜ್ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗುರುಬಸಪ್ಪ ಕೋರಿ, ಬಾಪು ಗೌಡ ಪಾಟೀಲ, ಶ್ರೀಮತಿ ಕಾಶಿಬಾಯಿ ರಾಂಪುರ, ಶ್ರೀ ರಮೇಶ್ ಮೂಲಿಮನಿಯವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಬಾಪುಗೌಡ ಪಾಟೀಲರು ಪ್ರಾರ್ಥನೆ, ರಮೇಶ್ ಮೂಲಿಮನಿ ಸ್ವಾಗತಿಸಿದರು.
ಬಸವಂತರಾಯ ಬಿರಾದಾರ, ಬಾಪುಗೌಡ ಬಿರಾದಾರ. ಜೆ. ಎಸ್. ಬಿರಾದಾರ. ಬಿ ಎಸ್. ಪಾಟೀಲ, ಎಸ್ ಬಿ . ಬಿರಾದಾರ, ಹರಿನಾಥ್ ಎನ್, ಎಸ್ ಎಸ್. ಅವಟಿ ಳ, ವಿಜಯಲಕ್ಷ್ಮಿ ಕಟ್ಟಿಮನಿ, ಎಚ್.ಎಸ್. ಕಥೆಗಾರ, ಮಹೇಶ ಕೊಣ್ಣೂರ, ಎಸ್.ಎಚ್. ಸಜ್ಜನ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
