ಬೆಂಗಳೂರು:
12ನೇ ಶತಮಾನದ ವಚನಕಾರ್ತಿಯರ ಚಳವಳಿ ಪ್ರತ್ಯೇಕವಾದದ್ದಾಗಿದ್ದು, ಅದನ್ನು ಚಳವಳಿಯೊಳಗೊಂದು ಚಳವಳಿ ಎಂಬುದಾಗಿ ಗುರುತಿಸಬೇಕು ಎಂದು ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅಭಿಪ್ರಾಯಪಟ್ಟರು.
ಶನಿವಾರ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ವತಿಯಿಂದ ನಡೆದ ‘ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
’12ನೇ ಶತಮಾನ ಸ್ತ್ರೀಯರಿಗೆ ಸಮಾನತೆ ಕೊಟ್ಟಿತು’ ಎಂಬುದು ಗೊಂದಲಮಯವಾಗಿದ್ದು, ಅವರು ಕೊಟ್ಟಿದ್ದೋ? ಅಥವಾ ನಾವು ಪಡೆದುಕೊಂಡದ್ದೋ? ಎಂಬ ಪ್ರಶ್ನೆ ಮೂಡುತ್ತದೆ. ಶರಣ ಚಳವಳಿ ಮಹಿಳೆಯರಿಗೆ ನೈತಿಕ ಬೆಂಬಲ ನೀಡಿತು, ಮಹಿಳೆಯರ ಮಾತನ್ನು ಅವರ ಭಾಷೆಯಲ್ಲಿ ಕೇಳುವ ತಾಳ್ಮೆ ತೋರಿತು ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ದಲಿತರಿಗೆ ತೋರಿದ ಕಾಳಜಿಯನ್ನು ಮಹಿಳೆಯರಿಗೂ ತೋರಿತೇ ಎಂಬ ಕುರಿತು ನಾನಾ ಭಿನ್ನಾಭಿಪ್ರಾಯಗಳಿವೆ ಎಂದು ತಿಳಿಸಿದರು.

ನಮಗೆ ಸಮಾನತೆ ಬೇಡ. ಇಲ್ಲಿ ಯಾರು ಯಾರಿಗೂ ಸಮಾನರಲ್ಲ. ಏಕೆಂದರೆ, ಗಂಡು ಹಾಗೂ ಹೆಣ್ಣಿಗೆ ಅವರದ್ದೇ ಆದ ಅನನ್ಯತೆಯಿದೆ. ಪರಸ್ಪರ ಅನನ್ಯತೆ, ವಿಶಿಷ್ಟತೆಯನ್ನು ಗೌರವದಿಂದ ಒಪ್ಪಿಕೊಳ್ಳುವುದು ಮಾತ್ರ ನಮ್ಮ ಮುಂದಿರುವ ಆಯ್ಕೆ ಎಂದು ಆಶಾದೇವಿ ತಿಳಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸಮಾನತೆ ನೀಡುವ ಕ್ರಾಂತಿಕಾರಕ ಹೋರಾಟ ನಡೆದಿದೆ. ಅನುಭವ ಮಂಟಪದಲ್ಲಿ ಪುರುಷರಿಗೆ ಸಮಾನವಾಗಿ ಕುಳಿತು ವಚನ ರಚಿಸುವ ಅಭಿವ್ಯಕ್ತಿ ಸ್ಥಾತಂತ್ರ್ಯ, ಧಾರ್ಮಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನು ವಚನಕಾರ್ತಿಯರಿಗೆ ನೀಡಲಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಡಾ. ಬಿ.ಟಿ. ಲಲಿತಾನಾಯಕ, ಸ್ತ್ರೀವಾದಿ ಚಿಂತಕಿ ಡಾ. ಎಚ್.ಎಸ್. ಶ್ರೀಮತಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷ ಎಂ. ತಿಮ್ಮಯ್ಯ ಉಪಸ್ಥಿತರಿದ್ದರು.
ಕೃಪೆ: ವಾರ್ತಾ ಭಾರತಿ
