ಜಯಮೃತ್ಯುಂಜಯ ಸ್ವಾಮಿ ಪ್ರಾಣ ಕೊಡಲು ಸಿದ್ದ ಎಂದಿದ್ದಾರೆ. ಅದರಂತೆ ನೀನು ಕೂಡ ಪ್ರಾಣ ಕೊಡು, ಎಂದು ಎಚ್. ಎಸ್. ಶಿವಶಂಕರ ಅವರು ಏಕವಚನದಲ್ಲಿ ಶ್ರೀಗಳಿಗೆ ತಿಳಿಸಿದರು
ದಾವಣಗೆರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಮೇಲೆ ಬಿದ್ದಿರುವ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಯವರ ಬೆಂಬಲಿಗರ ಕೆಂಗಣ್ಣು ಹರಿಹರ ಪೀಠದ ವಚನಾನಂದ ಶ್ರೀಗಳ ಮೇಲೂ ತಿರುಗಿದೆ.
ಇಲ್ಲಿಯ ಜನತಾ ದಳದ ಮಾಜಿ ಶಾಸಕ ಎಚ್. ಎಸ್. ಶಿವಶಂಕರ, “ಪಂಚಮಸಾಲಿ ಸಮಾಜ ಬೀದಿಗೆ ಬಂದು ಮೀಸಲಾತಿಗಾಗಿ ಹೋರಾಟ ಮಾಡ್ತಾ ಇದೆ, ಆದರೆ ಒಂದು ಪಂಚಮಸಾಲಿ ಪೀಠದ ಪೀಠಾಧಿಪತಿಯಾಗಿ ಎಲ್ಲಿ ಕೂತಿದ್ದೀಯಾ,” ಎಂದು ವಚನಾನಂದ ಶ್ರೀಗಳನ್ನು ಗುರುವಾರ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.
ದಾವಣಗೆರೆಯಲ್ಲಿ ನಡೆದ ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಭಾಗವಹಿಸಿ, ಮಾಧ್ಯಮದವರೊಂದಿಗೆ ಮಾತನಾಡುತ್ತ ಸಮಾಜದ ಸ್ವಾಮೀಜಿಯಾಗಿ ಬೀದಿಗೆ ಬಾರಪ್ಪ, ಸಮಾಜದ ಸ್ವಾಮೀಜಿ ಆಗಿರುವುದು ಸಮಾಜ ಕಷ್ಟದಲ್ಲಿದ್ದಾಗ ಕೈಹಿಡಿಯಲಿಕ್ಕೆ. ಬುದ್ಧಿ ಎಲ್ಲಿಟ್ಟಿದ್ದೀಯ, ನಾಚಿಕೆ ಆಗಬೇಕು ನಿನಗೆ, ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಶ್ರೀಗಳಿಗೆ ಏಕ ವಚನದಲ್ಲಿ ಸಂಭೋದಿಸಬಾರದು ಎಂದು ಹೇಳಲು ಪ್ರಯತ್ನಿಸಿದ ಅಲ್ಲೇ ಇದ್ದ ಒಬ್ಬರನ್ನು ಮಿಕ್ಕವರು ಸುಮ್ಮನಾಗಿಸಿದರು.
ವಚನ ದರ್ಶನ, ಸಂತರ ಸಮಾವೇಶಗಳಂತಹ ಸಂಘಪರಿವಾರದ ಕಾರ್ಯಕ್ರಮಗಳಲ್ಲಿ ವಚನಾನಂದ ಶ್ರೀಗಳು ತಪ್ಪದೆ ಕಾಣಿಸಿಕೊಳ್ಳುತ್ತಾರೆ, ಆದರೆ ಮೀಸಲಾತಿ ಹೋರಾಟದಲ್ಲಿ ಅವರದು ಅಪರೂಪದ ದರ್ಶನ ಎನ್ನುವುದು ಪಂಚಮಸಾಲಿ ಹೋರಾಟಗಾರರ ಆರೋಪ.

ಶ್ರೀಗಳ ಮೇಲೆ ತಮ್ಮ ವಾಗ್ದಾಳಿ ಮುಂದುವರೆಸುತ್ತ ಶಿವಶಂಕರ ಅಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಹೋರಾಟ ಮಾಡ್ತಾ ಇದ್ದಾರೆ, ಬೀದಿಯಲ್ಲಿ ಕುಳಿತಿದ್ದಾರೆ, ಅರೆಸ್ಟ್ ಆಗಿದ್ದಾರೆ. ಇದು ಗೊತ್ತಿದ್ದರೂ ಸುಮ್ಮನೆ ಇದ್ದೀಯ ಅಂದ್ರೆ ನಿನಗೆ ನಾಚಿಕೆ ಇಲ್ಲವೆ? ನೀನು ಆ ಪೀಠದಲ್ಲಿ ಕೂಡಲಿಕ್ಕೆ ನಾಲಾಯಕ ಇದ್ದೀಯಾ. ನೀನು ಪೀಠದಲ್ಲಿ ಕುಳಿತಿರುವುದು ವಿರಾಜಮಾನನಾಗಿ ಮೆರೆಯುವುದಕ್ಕೆ ಅಲ್ಲ, ಪಾದಪೂಜೆ ಮಾಡಿಸಿಕೊಳ್ಳಲಿಕ್ಕೆ ಅಲ್ಲ, ಎಂದರು.
ಮೀಸಲಾತಿ ಸಮಾಜದ ಕಟ್ಟಕಡೆಯ ಬಂಧುಗಳಿಗೆ, ಮಕ್ಕಳಿಗೆ. ಶ್ರೀಮಂತರಿಗಲ್ಲ, ನಾಚಿಕೆಯಾಗಬೇಕು ನಿನಗೆ. ಪೀಠದಲ್ಲಿ ನಿನ್ನನ್ನು ಕುಳ್ಳಿರಿಸಿರುವುದು ಕತೆ ಹೇಳಲಿಕ್ಕಲ್ಲ, 2ಎ ಮೀಸಲಾತಿಗಾಗಿ ಹೋರಾಟ ಮಾಡು ನೀನು, ಎಂದು ಹೇಳುವಾಗ ಉದ್ವೇಗದಿಂದ ಬಿಕ್ಕಳಿಸಿ ಕಣ್ಣು ಒರೆಸಿಕೊಂಡರು.
“ನಿನಗೆ ಮನುಷ್ಯತ್ವ, ಏನಾದರೂ ಕಳಕಳಿ ಇದ್ದರೆ ಬೀದಿಗಿಳಿ. ಜಯಮೃತ್ಯುಂಜಯ ಸ್ವಾಮಿ ನನಗೆ ಪೀಠ ಬೇಡ, ಸಮಾಜ ಬೇಕು, ಪ್ರಾಣ ಕೊಡಲು ಸಿದ್ದ ಎಂದಿದ್ದಾರೆ. ಅದರಂತೆ ನೀನು ಕೂಡ ಪ್ರಾಣ ಕೊಡು. ಅಂದಾಗ ಇತಿಹಾಸದಲ್ಲಿ ಉಳಿತಿಯಾ, ಇಲ್ಲದೆ ಹೋದ್ರೆ ಇತಿಹಾಸ ನಿನ್ನನ್ನು ಕ್ಷಮಿಸುವುದಿಲ್ಲ,” ಎಂದು ಹೇಳಿದರು.
ಹರಿಹರದ ಜನತಾ ದಳದ ಮುಖಂಡರೊಬ್ಬರು ಶಿವಶಂಕರ್ ಮತ್ತು ವಚನಾನಂದ ಶ್ರೀಗಳ ನಡುವಿನ ಹಳಸಿದ ಸಂಬಂಧ ಹಳೆಯ ಕಥೆ ಎಂದು ಹೇಳಿದರು.
2018ರಲ್ಲಿ ಚುನಾವಣೆಯಲ್ಲಿ ಸೋತ ಮೇಲೆ ಅವರು ವಚನಾನಂದ ಶ್ರೀಗಳ ಹೆಸರು ಹೇಳದೆ ಅವರಿಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಿದರು. “ನನ್ನನ್ನು ಮುಗಿಸಲು ಬಂದರೆ ನಾನು ನಿಮ್ಮನ್ನು ಮುಗಿಸುತ್ತೇನೆ. ನಿಮ್ಮ ಬಂಡವಾಳವನ್ನು ಇಂಚಿಂಚು ಬಯಲಿಗೆಳೆಯುತ್ತೇನೆ. ಅಲ್ಪಸ್ಪಲ್ಪ ತಿಳಿದೋರು ಕುರ್ಚಿ ಮೇಲೆ ಕೂತು ಹಗುರವಾಗಿ ಮಾತನಾಡಿದರೆ ಅಂಥವರ ನಾಲಿಗೆ ಕಟ್ ಮಾಡೋ ಶಕ್ತಿ ನನ್ನಲ್ಲಿದೆ” ಎಂದು ಕಾರ್ಯಕ್ರಮದಲ್ಲಿ ಶಿವಶಂಕರ ಅವರು ಗುಡುಗುವ ವಿಡಿಯೋ ವೈರಲ್ ಆಗಿತ್ತು.
ಲಿಂಗಾಯತ ಸಮುದಾಯವನ್ನು ಮಠಾಧೀಶರು, ಮುಖಂಡರು, ರಾಜಕಾರಣಿಗಳು ಮತ್ತು ವೈದಿಕ ಶೈವರುಗಳು ೧೮೯೧ ರಿಂದ ತಪ್ಪು ದಾರಿಗಳಲ್ಲೇ ಕೊಂಡೊಯುತ್ತಿರುವುದು ಇತಿಹಾಸ. ಆದರು ಇಂದಿಗೂ ಅದೇ ಪ್ರವುತ್ತಿ ಮುಂದುವರೆಯುತ್ತಿದ್ದು ಸಮಾಜ ಎಚ್ಚೆತ್ತುಕೊಂಡಿಲ್ಲ. ಇಂದಿಗೂ ಸಮುದಾಯದ ಬಹಳಷ್ಟು ಜನರಿಗೆ ಧರ್ಮ ಮತ್ತು ಇತಿಹಾಸ ತಿಳಿದಿಲ್ಲ. ಧರ್ಮಿಯರನ್ನು ಸರಿದಾರಿಯಲ್ಲಿ ಕೊಂಡೋಗಿ ಜಾಗೃತಿಗೊಳಿಸುವ ಪ್ರಯತ್ನ ಯಾರು ಮಾಡುತ್ತಿಲ್ಲ.. ವಿಪರ್ಯಾಸವೇನೆಂದರೆ ಮೀಸಲಾತಿ ಬಗ್ಗೆ ಪೂರ್ಣ ವಿಷಯ ತಿಳಿಯದೆ, ಸಾದ್ಯಾ-ಅಸಾದ್ಯದ ಅರಿವಿಲ್ಲದೆ ಹೋರಾಟ ಪ್ರಾರಂಭಿಸಿ ವಿಪಲರಾಗುತ್ತಿದ್ದಾರೆ.
ಯಾರನ್ನು ದೂಷಿಸುವುದು? ವಿದ್ಯಾವಂತ ಲಿಂಗಾಯತರು ಇನ್ನೂ ಕಾಲಿಗೆ ಬೀಳುವುದು,ಪಾದಪೂಜೆ ಮಾಡಿ,ನೀರು ಕುಡಿಸುವುದು,temple run ಮಾಡುವುದು,ರಾಮ ಹನುಮಂತ ಜೈ ಎನ್ನುವುದು, …ಪಂಚಮಸಾಲಿಗಳು ಒಳ ಪಂಗಡದ ಹೆಸರನ್ನು ಬಿಟ್ಟು ಒಟ್ಟಾರೆ ಲಿಂಗಾಯತ ಹೆಸರಲ್ಲಿ ಹೋರಾಟ ಮಾಡಬೇಕು. ..ಕಟ್ಟುವವರಿಗಿಂತ ರಾಜಕೀಯ ಹಾಗೂ ಹಣಕ್ಕಾಗಿ ಮತ್ತು ಮೆತ್ತಿಕೊಂಡಿರುವ ಮೌಡ್ಯ ದಿಂದಾಗಿ ಬಸವನನ್ನೇ ಬದಿಗೆ ನೂಕುವವರೆ ಜಾಸ್ತಿ.
ಸಮಸ್ತ ಲಿಂಗಾಯತ ಧರ್ಮೀಯರು ಒಳಪಂಗಡಗಳ ಭೇದವನ್ನು ಮರೆತು ಸ್ವತಂತ್ರ ಧರ್ಮದ ಮಾನತ್ಯಕ್ಕಾಗಿ ಹೋರಾಟ ಮಾಡಿದರೆ ದೊಡ್ಡ ಇತಿಹಾಸದ ಸೃಷ್ಟಿಯಾಗುತ್ತೆ . ಎಲ್ಲ ಒಳಪಂಗಡದವರಿಗೂ ಸೌಲಭ್ಯಗಳು ದೊರೆಯುತ್ತವೆ. ಲಿಂಗಾಯತ ಧರ್ಮದಲ್ಲಿ ಬಲಾಢ್ಯ ಮತ್ತು ದುರ್ಬಲ ಎರಡು ಪಂಗಡಗಳಿವೆ . ಬಲಾಢ್ಯರು ದುರ್ಬಲರನ್ನು ಅಪ್ಪಿಕೊಂಡು ಮೇಲೆ ಎತ್ತುವ ಕೆಲಸವಾಗಬೇಕು .. ಒಳಪಂಗಡ ಮರೆತು ಎಲ್ಲರೂ ಒಂದೇ ಲಿಂಗಾಯಿತ ಎಂಬ ಒಂದೇ ದ್ವಜದಡಿ ಹೋರಾಟ ಮಾಡುವುದು ಸೂಕ್ತ .