ಧಾರವಾಡ
ವಚನ ಸಾಹಿತ್ಯ ವಚನ ಸಂಸ್ಕೃತಿಗಳನ್ನು ಹೊಗಳುತ್ತ ಓದುಗರ ದಿಕ್ಕು ತಪ್ಪಿಸುವ ಕಾರ್ಯ ಕುಹಕಿಗಳಿಂದ ನಡೆದಿದೆ, ಎಂದು ಗದಗ ತೋಂಟದಾರ್ಯ ಮಠದ ಡಾ.ಶ್ರೀ ತೋಂಟದ ಸಿದ್ದರಾಮ ಸ್ವಾಮಿಜಿ ಎಚ್ಚರಿಸಿದರು.
ಲಿಂಗಾಯತ ಭವನದಲ್ಲಿಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಕರ್ನಾಟಕ ಲಿಂಗಾಯತ ಒಳಪಂಗಡಗಳ ವಿಕತಾ ಸಮಿತಿ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ”ವಚನ ದರ್ಶನ” ಮಿಥ್ಯ/ಸತ್ಯ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶರಣರು ಹೊಸದನ್ನು ಏನೂ ಹೇಳಿಲ್ಲ ಅವರು ಹೇಳಿದ್ದೆಲ್ಲವೂ ಈ ಮೋದಲೆ ವೇದ ಆಗಮ ಉಪನಿಷತ್ತು ಭಗವದ್ಗೀತೆಗಳಲ್ಲಿತ್ತು ಎಂದು ಹೇಳಿ ವೈಚಾರಿಕತೆ ವೈಜ್ಞಾನಿಕತೆಗಳನ್ನು ಪ್ರಜ್ಞಾಪೂರ್ವಕವಾಗಿ ಮರೆ ಮಾಚಿ ವಚನ ದರ್ಶನ ಕೃತಿ ಪ್ರಕಟಿಸಿ ಮತ್ತೆ ಜನರನ್ನು ಮೌಢ್ಯಗಳತ್ತ ಸಾಗುವಂತೆ ಮಾಡುವುದು ಇದರ ಉದ್ದೇಶ. ಹೀಗಾಗಿ ವಚನ ದರ್ಶನ ಗೃಂಥದಲ್ಲಿ ಏನಿದೆ ಮಿತ್ಯ ಸತ್ಯ ಎನ್ನುವದನ್ನು ತಿಳಿಸಿಕೊಡಲು ನಮ್ಮ ಗೃಂಥ ಹೊರಬಂದಿದೆ ಎಂದರು.
ವರ್ಣಭೇದ, ವರ್ಗಭೇದ, ಲಿಂಗಭೇದಗಳನ್ನು ನಿರಂತರ ಮುಂದುವರೆಸಿಕೊಂಡು ಹೋಗುವ ದುರ್ವಿಚಾರ ಹೊಂದಿರುವ ಸನಾತನಿಗಳು, ವಚನಗಳ ಆಶಯವನ್ನು ಉದ್ದೇಶ ಪೂರ್ವಕವಾಗಿ ತಿರುಚಿ ಬಸವತತ್ವದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ, ಎಂದು ಹೇಳಿದರು.
ಮೂರಸಾವಿರಮಠದ ಶ್ರೀ ಡಾ.ಗುರುಸಿದ್ದರಾಜಯೋಗೀಂದ್ರ ಸ್ವಾಮಿಜಿ ಮಾತನಾಡಿ, ವಚನಗಳು ಪವಿತ್ರವಾದವು ಅದರ ದರ್ಶನ ಮಾಡಬೇಕು ನಿಜ ಆದರೆ ವಚನ ದರ್ಶನ ಪುಸ್ತಕದಲ್ಲಿ ಅಪವಿತ್ರವಿದೆ. ಇತ್ತೀಚೆಗೆ ಕೆಲವು ದುಷ್ಟವಿಚಾರವಾದಿಗಳು ಹೊರ ತಂದ ವಚನ ದರ್ಶನ ಪುಸ್ತಕ ಬಿಡುಗಡೆ ಹಿಂದೆ ದುರುದ್ದೇಶ ಇರುವುದು ಕಂಡ ಬಂದ ಹಿನ್ನಲೆಯಲ್ಲಿ ಮಠಾಧೀಶರು ಅದನ್ನು ವಿರೋಧಿಸಿದ್ದೇವೆ. ವಚನ ದರ್ಶನ ಪುಸ್ತಕ ಹೊರಬಂದ ಹಿನ್ನಲೆಯಲ್ಲಿ ಎಲ್ಲಾ ಮಠಾಧೀಶರು, ಬಸವ ಸಂಘಟನೆಗಳು, ಲಿಂಗಾಯತ ಸಮಸ್ತ ಸಮಾಜದವರು ಒಗ್ಗಟ್ಟಾಗಿ ವಿರೋಧ ಮಾಡಿದ್ದಾರೆ.
ವಿರೋಧಿಸುವುದರ ಜೊತೆಗೆ ಅದರಲ್ಲಿನ ಸುಳ್ಳುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲು ವಚನ ದರ್ಶನ ಮಿಥ್ಯ ಸತ್ಯ ಗೃಂಥ ಲೋಕಾರ್ಪಣೆಗೊಂಡಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ ಮಾತನಾಡಿ, ಲಿಂಗಾಯತ ವಿರೋಧಿ ಹಿನ್ನಲೆಯುಳ್ಳ ಸ್ವಾಮಿಜಿಯೊಬ್ಬರ ಸಂಪಾದಕತ್ವದಲ್ಲಿ ಸಿದ್ದವಾಗಿ ಸನಾತನಿಗಳ ಜೊತೆ ಕೈಗೂಡಿ ವಿವಾದಾತ್ಮಕ ವಿಕೃತಿಯ ಲೇಖಕರ ವಚನ ದರ್ಶನ ಜನರ ದಿಕ್ಕು ತಪ್ಪಿಸುವ ಯೋಜನೆ ರೂಪಿಸಿದೆ. ಈ ಹಿನ್ನಲೆಯಲ್ಲಿ ವಚನ ದರ್ಶನ ಪುಸ್ತಕ ಮುಟ್ಟುಗೋಲು ಹಾಕಲು ಹಾಗೂ ಮರು ಮುದ್ರಣ ಮಾಡದಂತೆ ಆದೇಶ ಮಾಡುವಂತೆ ಮಠಾಧೀಶರ, ಎಲ್ಲಾ ಬಸವ ಸಂಘಟನೆಗಳ, ಲಿಂಗಾಯತ ಸಮಾಜದ ವತಿಯಿಂದ ಮುಖ್ಯ ಮಂತ್ರಿಗಳಿಗೆ ಒತ್ತಾಯ ಮಾಡಲಿದ್ದೇವೆ ಎಂದರು.
ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಜಿ, ಅಖಿಲ ಕರ್ನಾಟಕ ಅಂಗಾಯತ ಒಳ ಪಂಗಡಗಳ ವಿಕತಾ ಸಮಿತಿ ರಾಜ್ಯಾಧ್ಯಕ್ಷ ಜಿ.ವಿ. ಕೊಂಗವಾಡ, ಸಾಹಿತಿಗಳಾದ ಡಾ. ಎನ್.ಜಿ. ಮಹಾದೇವಪ್ಪ, ಡಾ. ಸಿ.ಎಂ. ಕುಂದಗೋಳ, ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಪ್ರದೀಪಗೌಡ ಪಾಟೀಲ, ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಬಸವಂತ ತೋಟದ, ಶಿವಶರಣ ಕಲಬಶೆಟ್ಟರ, ಸವಿತಾ ನಡಕಟ್ಟಿ ವೇದಿಕೆಯಲ್ಲಿದ್ದರು.