ವೈದಿಕತೆ ನಿರಾಕರಿಸಿದ ಶರಣರ ವಚನಗಳ ಸರಣಿ 2

ಅಂಬಿಗರ ಚೌಡಯ್ಯನವರ ವಚನಗಳು

ಸನಾತನ ಧರ್ಮದ ತೀರ್ಥ ಕ್ಷೇತ್ರಗಳಿಗೆ ಹೋಗುವುದನ್ನು ಜರಿದ ಅಂಬಿಗರ ಚೌಡಯ್ಯನವರ ವಚನ

ಕಾಶಿಯಾತ್ರೆಗೆ ಹೋದೆನೆಂಬ

 ಹೇಸಿಮೂಳರ ಮಾತ ಕೇಳಲಾಗದು!  

ಕೇತಾರಕ್ಕೆ ಹೋದೆನೆಂಬ

ಹೇಸಿಹೀನರ ನುಡಿಯ ಲಾಲಿಸಲಾಗದು!

ಸೇತುಬಂಧ ರಾಮೇಶ್ವರಕ್ಕೆ ಹೋದೆನೆಂಬ

ಸರ್ವಹೀನರ ಮುಖವ ನೋಡಲಾಗದು!

ಪರ್ವತಕ್ಕೆ ಹೋದೆನೆಂಬ

ಪಂಚಮಹಾಪಾತಕರ ಮುಖವ ನೋಡಲಾಗದು!

 ಅದೆಂತೆಂದಡೆ: ಕಾಯವೆ ಕಾಶಿ, ಒಡಲೆ ಕೇತಾರ,

ಮಾಡಿನೀಡುವ ಹಸ್ತವೆ ಸೇತುಬಂಧರಾಮೇಶ್ವರ,

ಮಹಾಲಿಂಗವ ಹೊತ್ತಿರುವ ಶಿರಸ್ಸೆ  ಶ್ರೀಶೈಲಪರ್ವತ

ನೋಡಾ.

 ಇಂತಿವನರಿಯದೆ ಪರ್ವತಕ್ಕೆ ಹೋಗಿ, ಪಾತಾಳಗಂಗೆಯ

 ಮುಳುಗಿ,

ತಲೆಯ ಬೋಳಿಸಿಕೊಂಡು, ಗಡ್ಡವ ಕೆರೆಸಿಕೊಂಡು,

ಮೀಸೆಯ ತರಿಸಿಕೊಂಡು,

ಗಂಗೆಯೊಳು ಕೋಣನ ಹಾಂಗೆ ಮೈಗೆಟ್ಟು ಫಕ್ಕನೆ ಮುಳುಗಿ,

 ಅಲ್ಲಿಂದ ಬಂದು ಅನ್ನವಸ್ತ್ರವಂ ಕಾಸುವೀಸವಂ ಕೊಟ್ಟು,

 ಪಾಪ ಹೋಯಿತ್ತೆಂದು

ಅಲ್ಲಿಂದ ಬಂದು ಲಿಂಗವಡಿಗಡಿಗೆ ಹಾಯ್ದು,

ಬಾರದ ಪಾಪವ ತಾವಾಗ ಬರಸಿಕೊಂಡು, ತಗರ ಜನ್ಮದಲ್ಲಿ

ಹುಟ್ಟುವರಯ್ಯ.

ಕೋಲು ಪುಟ್ಟಿಯಂ ಕೊಟ್ಟು ಅಟ್ಟಿಸಿ ಬಿಟ್ಟ ಬಳಿಕ,

 ಅಲ್ಲಿಂದ ಬಂದವರಿಗೆ ಇಲ್ಲಿದ್ದವರು ಹೋಗಿ,

 ಇದಿರುಗೊಂಡು ಕರತರುವುದಕ್ಕೆ!

ಕತ್ತೆ ಮೂಳಹೊಲೆಯರಿರ, ನೀವು ಕೇಳಿರೋ,

ಅದಂತೆಂದಡೆ: ಶ್ರೀಮಹಾಪರ್ವತಕ್ಕೆ ಹೋದವರು ತಿರಿಗಿಬಪ್ಪರೆ ?

 ಶ್ರೀಮಹಾಮೇರುವಿಗೆ ಹೋದವರು ಮರಳಿಬಪ್ಪರೆ ?

 ಛೀ! ಛೀ! ನೀಚ ಮೂಳ ದಿಂಡೆಯ ನೀಳಹೊಲೆಯರೆಂದಾತ

 ನಮ್ಮ ದಿಟ್ಟ ವೀರಾಧಿವೀರನಂಬಿಗರ ಚೌಡಯ್ಯನು.

ಸನಾತನ ಧರ್ಮದ ಆಧಾರ ಸ್ತಂಭಗಳು ಆದ ವೇದ ಶಾಸ್ತ್ರಗಳ ಬಗ್ಗೆ ಅಂಬಿಗರ ಚೌಡಯ್ಯನವರ ವಚನ

ನಾದದ ಬಲದಿಂದ ವೇದಂಗಳಾದವಲ್ಲದೆ,

ವೇದ ಸ್ವಯಂಭುವಲ್ಲ. ನಿಲ್ಲು

ಮಾತಿನ ಬಲದಿಂದ ಶಾಸ್ತ್ರಂಗಳಾದವಲ್ಲದೆ,

 ಶಾಸ್ತ್ರ ಸ್ವಯಂಭುವಲ್ಲ ನಿಲ್ಲು.

ಪಾಷಾಣದ ಬಲದಿಂದ

ಸಮಯಂಗಳಾದವಲ್ಲದೆ ಸಮಯ ಸ್ವಯಂಭುವಲ್ಲ ನಿಲ್ಲು.

ಇಂತೀ ಮಾತಿನ ಬಣಬೆಯ

ಮುಂದಿಟ್ಟುಕೊಂಡು

ಆತನ ಕಂಡೆಹೆನೆಂದಡೆ,

ಆತನತ್ಯತಿಷ್ಟದ್ದಶಾಂಗುಲ,

ಆತನೆಂತು ಸಿಲುಕುವನೆಂದಾತನಂಬಿಗ ಚೌಡಯ್ಯ.

ಸನಾತನ ಧರ್ಮದಲ್ಲಿ ವೇದಗಳನ್ನು ಓದಿದ ಬ್ರಾಹ್ಮಣ ಶ್ರೇಷ್ಠರು ಎಂದು ಸಾರಿದ್ದಾರೆ. ಆದರೆ ಅಂಬಿಗರ ಚೌಡಯ್ಯನವರು ಅದನ್ನು ತಿರಸ್ಕರಿಸಿದ ವಚನ

ನಾಲ್ಕು ವೇದವನೋದಿದ ನಂತರ ಮನೆಯ

 ಬೋನವ ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ

 ನೋಡಲಾಗದು.

ಸಾಮವೇದಿ ಹೋಗುತ್ತಿರಲು

ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ

ಮುಚ್ಚಿದರು.

“ಶ್ವಾನೋ ಶ್ರೇಷ*ವೆಂದು ಇಕ್ಕಿದೆನು

ಮುಂಡಿಗೆಯ.

ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು.

ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ

ಮೋರೆಯ ಮೇಲೆ ಹೊಡೆ ಎಂದಾತ

ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.

ಇಷ್ಟಲಿಂಗ ಕಟ್ಟಿಕೊಂಡು ಸನಾತನ ಧರ್ಮದ ಗುಡಿ ಗುಂಡಾರ ತಿರುಗುವವರನ್ನು ಗಟ್ಟಿಯಾದ ಪಾದರಕ್ಷೆಯಿಂದ ಹೊಡೆ ಎಂದಿದ್ದಾರೆ ಚೌಡಯ್ಯನವರು.

ಕಟ್ಟಿದ ಲಿಂಗವ ಕಿರಿದು ಮಾಡಿ,

ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ

 ನೋಡ!

ಇಂತಪ್ಪ ಲೊಟ್ಟಿಮೂಳರ ಕಂಡರೆ

ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು

ಲೊಟಲೊಟನೆ ಹೊಡೆಯೆಂದಾತ ನಮ್ಮ

 ಅಂಬಿಗರ ಚೌಡಯ್ಯ.

ಸನಾತನ ಧರ್ಮದಲ್ಲಿ ವೇದ ಶಾಸ್ತ್ರ ಪುರಾಣಗಳು ಆಗಮಗಳನ್ನು ಓದಿದವರು ಶ್ರೇಷ್ಠ ಎಂದು ಹೇಳಿದ ಮಾತನ್ನು ಅಂಬಿಗರ ಚೌಡಯ್ಯನವರು ಈ ಕೆಳಗಿನ ವಚನದಲ್ಲಿ ತಿರಸ್ಕರಿಸಿದ್ದಾರೆ.

ವೇದವನೋದಿದವರು ವಿಧಿಗೊಳಗಾದರಲ್ಲದೆ

ದೇವರಿಹರವಾವನರಿದಿಪ್ಪುದಿಲ್ಲ.

ಶಾಸ್ತ್ರವನೋದಿದವರು

 ಸಂಶಯಕ್ಕೊಳಗಾದವರಲ್ಲದೆ

 ಸದ್ಗುರುವನರಿದುದಿಲ್ಲ.

ಆಗಮವನೋದಿದವರೆಲ್ಲರು ಆಗುಚೇಗಿಗೆ

 ಒಳಗಾದರಲ್ಲದೆ

ಆದಿ ಅನಾದಿಯಿಂದತ್ತಣ ಶರಣ-ಲಿಂಗ

ಸಂಬಂಧವನರಿದುದಿಲ್ಲ.

ಪುರಾಣವನೋದಿದವರೆಲ್ಲರು ಪೂರ್ವದ

ಬಟ್ಟೆಗೊಳಗಾದವರಲ್ಲದೆ

 ಪೂರ್ವದ ಕರ್ಮವ ಹರಿದು

ಪುರಾತನರನರಿದುದಿಲ್ಲ.

ಇಂತಿವರೆಲ್ಲರು ಚರಶೇಷವ

ಲಿಂಗಕ್ಕರ್ಪಿಸಲರಿಯರಾಗಿ

ಇವರಿಗೆ ಲಿಂಗವು ಕಾಣಿಸದೆಂದಾತ ನಮ್ಮ

ಅಂಬಿಗರ ಚೌಡಯ್ಯ.

ವೇದ ಶಾಸ್ತ್ರ ಪುರಾಣ ಆಗಮಗಳು ಬಹಳ ಶ್ರೇಷ್ಠ ಎಂದು ಹೇಳುವುದನ್ನು ಅಂಬಿಗರ ಚೌಡಯ್ಯನವರು ಈ ವಚನದಲ್ಲಿ ಅಲ್ಲಗಳೆದಿದ್ದಾರೆ.

ವೇದಂಗಳೆಲ್ಲ ಬ್ರಹ್ಮನೆಂಜಲು,

ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು,

 ಆಗಮಂಗಳೆಲ್ಲ ರುದ್ರನೆಂಜಲು,

ಪುರಾಣಂಗಳೆಲ್ಲ ವಿಷ್ಣುವಿನೆಂಜಲು,

ನಾದಬಿಂದುಕಳೆಗಳೆಂಬವು

ಅಕ್ಷರತ್ರಯದೆಂಜಲು,

ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು.

 ಇಂತಿವೆಲ್ಲವ ಹೇಳುವರು ಕೇಳುವರು

ಪುಣ್ಯಪಾಪಂಗಳೆಂಜಲೆಂದಾತನಂಬಿಗರ

ಚೌಡಯ್ಯ.

ಸನಾತನ ಧರ್ಮದಲ್ಲಿ ವಾರ ತಿಥಿ ನಕ್ಷತ್ರ ಇವುಗಳ ಆಧಾರದಲ್ಲಿ ಮಾಡುವ ವ್ರತಾಚರಣೆಗಳನ್ನು ಇಲ್ಲಿ ಖಂಡಿಸಿದ್ದಾರೆ.

ಸೋಮವಾರ, ಹುಣ್ಣಿಮೆ, ಅಮವಾಸ್ಯೆ

ಎಂದು ಉಪವಾಸವಿರ್ದು

ಶಿವನಿಗೆ ಅರ್ಪಿತ ಎಂದು ನುಡಿವರು.

 ಕಾಮ ಕ್ರೋಧ [ಲೋಭ]

 ಮೋಹ ಮದ ಮತ್ಸರವನಳಿಯರು.

ಶಿವನ ನೆಲೆಯನರಿಯದೆ,

ಎನಗೆ ಗತಿಕೊಡುವ ಲಿಂಗವಿದೇ ಎಂದು

 ತಿಳಿಯದೆ,

ಗ್ರಾಮದ ಹೊರತಾಯದಲ್ಲಿರುವ

ದೇವರುಗಳು ಅದ್ಥಿಕವೆಂದು ಪೂಜಿಸಿ,

 ಅವಕಿಕ್ಕಿದ ಕೂಳ ತಾ ತಿಂಬುವನು.

 ಇನ್ನು ಸೋಮಧರಗರ್ಪಿತವೆಂದು

ಭುಂಜಿಸುವವರ ತೆರನಂತೆ

ದೊಡ್ಡ ಗ್ರಾಮದ ಸೂಕರನು

ಗಂಗೆಯಲ್ಲಿ ಮಿಂದು ಬಂದು

ಅಮೇಧ್ಯವ ಭುಂಜಿಸಿದ ತೆರನಾಯಿತೆಂದಾತ

 ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.

ಸನಾತನ ಧರ್ಮದ ಕಾಲ್ಪನಿಕ ದೇವರುಗಳನ್ನು ತಿರಸ್ಕರಿಸಿದ್ದಾರೆ ಅಂಬಿಗರ ಚೌಡಯ್ಯನವರು ಈ ವಚನದಲ್ಲಿ.

ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು

ಬಲ್ಲೆವು,

ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು.

ಅದೇನು ಕಾರಣವೆಂದಡೆ:

 ಇವರು ಹಲವು ಕಾಲ ನಮ್ಮ

ನೆರೆಮನೆಯಲ್ಲಿದ್ದರಾಗಿ.

ಇವರು ದೇವರೆಂಬುದ ನಾ ಬಲ್ಲೆನಾಗಿ,

ಒಲ್ಲೆನೆಂದಾತನಂಬಿಗ ಚೌಡಯ್ಯ.

-ಮುಂದುವರೆಯುವುದು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು