ಗುಳೇದಗುಡ್ಡ
ವೇದ ನಡನಡುಗಿತ್ತು,
ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯ
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ
ಆಗಮ ಹೆರತೊಲಗಿ ಅಗಲಿದ್ದಿತಯ್ಯಾ|
ನಮ್ಮ ಕೂಡಲ ಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
-ಬಸವ ತಂದೆಗಳು
ಶನಿವಾರ ಸಂಜೆ ಶರಣ ಬಾಬು ಗಂಗಾವತಿ (ಬಸವರಾಜ ಪ್ರ. ಗಂಗಾವತಿ) ಅವರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಜರುಗಿತು.
ಧರ್ಮ ಸಂಸ್ಥಾಪಕ ಬಸವ ತಂದೆಯ ಈ ಮೇಲಿನ ವಚನವನ್ನು ನಿರ್ವಚನಕ್ಕಾಗಿ ಆಯ್ದುಕೊಳ್ಳಲಾಗಿತ್ತು.
ವಚನವನ್ನು ನಿರ್ವಚನ ಮಾಡಿದ ಪ್ರೊ. ಶ್ರೀಕಾಂತ ಗಡೇದ ಅವರು, ಹಿನ್ನೆಲೆಯಾಗಿ ಅಂದಿನ ಸಮಾಜದಲ್ಲಿದ್ದ ಪರಿಸ್ಥಿತಿಯನ್ನು ವಿವರಿಸಿದರು. ಜಾತಿ, ಲಿಂಗ, ಅಂತಸ್ತುಗಳ ಅಸಮಾನತೆಯನ್ನು ಕಿತ್ತೆಸೆದು ಸಮಸಮಾಜದ ನಿರ್ಮಾಣಕ್ಕೆ ಮಹತ್ವವನ್ನು ಬಸವಣ್ಣನವರು ಕೊಟ್ಟರು. ಸಮಾನತೆ ತರಲು ದೃಢಸಂಕಲ್ಪವನ್ನು ತೊಟ್ಟರು. ಇದರಿಂದ ಏನೆಲ್ಲ ಆಯಿತು ಎಂಬುದನ್ನು ಈ ವಚನದಲ್ಲಿಯೇ ಕಾಣಬಹುದು. ಅವರು ಆಚರಿಸಿ ತೋರಿದ ಕಾಯಕ ಮತ್ತು ದಾಸೋಹ ತತ್ವದಲ್ಲಿ ಜಾತೀಯತೆಯನ್ನು ತೊಡೆದು ಹಾಕಲು ಸಹಾಯಕವಾದವು. ಇಂದಿಗೂ ಜರ್ಮನ್ ದಂತಹ ದೇಶಗಳಲ್ಲಿಯೂ ಮೂಢನಂಬಿಕೆ ತುಂಬಿಕೊಂಡಿರುವಾಗ 900 ವರ್ಷಗಳ ಹಿಂದೆಯೇ ಅಪ್ಪನವರು ಮೌಡ್ಯರಹಿತ ಸಮಾಜವನ್ನು ನಿರ್ಮಾಣ ಮಾಡಿದ್ದರು ಎಂದು ಅಭಿಪ್ರಾಯ ಪಟ್ಟರು.
ಪ್ರೊ. ಸುರೇಶ ತಿ. ರಾಜನಾಳ ಅವರು ಈ ವಚನವನ್ನು ವಿಶ್ಲೇಷಿಸುತ್ತ ಗುರು ಬಸವಣ್ಣನವರು ಕೆಳಸಮುದಾಯವನ್ನು ಅಪ್ಪಿಕೊಳ್ಳುವುದರ ಮೂಲಕ, ಹಳೆಯ ಸಂಪ್ರದಾಯ ಕಂಚಾಚಾರಕ್ಕೆ ಕೊಡಲಿಪೆಟ್ಟನ್ನು ನೀಡಿದರು. ಭಾರತದ ಇತಿಹಾಸದಲ್ಲಿ ಮೊದಲು ಗುರುತಿಸುವುದು ವೇದಕಾಲವನ್ನು. ತರತಮ ಭಾವವನ್ನು ಹುಟ್ಟು ಹಾಕಿದ್ದು ಈ ವೇದಗಳು. ಜ್ಞಾನನಿಧಿಯೆಂದು ಕೆಲವರು ಕರೆಯುವ ಈ ವೇದಗಳಲ್ಲಿಯೇ ವರ್ಣಾಶ್ರಮದ ಪ್ರತಿಪಾದನೆ ಇದೆ.

ಅಪ್ಪ ಬಸವಣ್ಣನವರು ಎಲ್ಲ ಕಾಯಕ ವರ್ಗವೂ ಸಮಾನವೇ ಕಾಯಕಗಳು ಜಾತಿಯಲ್ಲ. ಜಾತಿಗಿಂತ ಮೇಲೆಂದು ಸಾರಿದರಲ್ಲದೆ, ಮಾದಾರ ಚೆನ್ನಯ್ಯನ ಪ್ರಸಂಗವನ್ನು ಮುಂದೆ ಮಾಡಿ ಸನಾತನಿಗಳನ್ನು ಛೇಡಿಸಿದರು. ದೇವರೆನ್ನಿಸಿಕೊಳ್ಳುವಾತ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿ ಕುಡಿಯಬೇಕು. ಆತನೊಂದಿಗೆ ಕಷ್ಟ ಸುಖ ಹಂಚಿಕೊಳ್ಳಬೇಕು. ಅದು ನಿಜವಾದ ಧರ್ಮವೆಂದು ಈ ವಚನದ ಆಂತರ್ಯವಾಗಿದೆ ಎಂದು ಹೇಳಿದರು.
ಪ್ರೊ. ಮಹಾದೇವಯ್ಯ ಪಂಚಾಕ್ಷರಿಸ್ವಾಮಿ ನೀಲಕಂಠಮಠ ಅವರು, ವಚನದ ತಾತ್ಪರ್ಯವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಪ್ರಾರಂಭದಲ್ಲಿ ಮನುಷ್ಯನ ಬದುಕು ಚೆನ್ನಾಗಿ ಸಾಗಲು ಕೆಲ ನಿಬಂಧನೆಗಳನ್ನು ಹಾಕಲಾಯಿತು. ಅವುಗಳನ್ನು ವೇದ ಆಗಮ ಶಾಸ್ತ್ರಗಳೆಂದು ಕರೆದರು. ಅದರಲ್ಲಿ ಅಪಾರ ಜ್ಞಾನ ಭಾಂಡಾರವೇ ತುಂಬಿದೆ ಎಂದು ಪ್ರಚುರ ಪಡಿಸಲಾಯಿತು.
ಬರಬರುತ್ತ ಇವು ಕೆಳವರ್ಗದವರನ್ನು ಹೀನಾಯ ಪರಿಸ್ಥಿತಿಗೆ ತಂದೊಡ್ಡಿದವು. ಶ್ರೇ಼ಷ್ಠತೆಯ ಹೆಸರಿನಲ್ಲಿ, ಕರ್ಮದ ಹೆಸರಿನಲ್ಲಿ ಮನುಷ್ಯರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣಲಾಯಿತು. ಒಂದು ಪ್ರಾಣಿಗೂ ಸಿಗುವ ಕನಿಷ್ಠ ದಯೆ ಅನುಕಂಪಗಳು ಮನುಷ್ಯನೆಂಬ ಪ್ರಾಣಿಗೆ ಸಿಗಲಿಲ್ಲ. ಕೆಲವರು ದುಡಿಯುವ, ಉಳಿದವು ಕುಳಿತು ಉಣ್ಣುವ ಪರಿಸ್ಥಿತಿ ನಿರ್ಮಾಣವಾಗಿ, ದುಡಿಯದೆಯೇ ತಿನ್ನುವಾತ ಶ್ರೇಷ್ಠನೆನಿಸಿಕೊಂಡ. ಹೀಗೆ ಅಮಾನವೀಯ ಬದುಕನ್ನು ಬದುಕಿದವರ ಪ್ರತಿನಿಧಿಯನ್ನಾಗಿಸಿ ಮಾದಾರ ಚೆನ್ನಯ್ಯನನ್ನು ಉಪಯೋಗಿಸಿಕೊಂಡು ಈ ವಚನವನ್ನು ರಚಿಸಲಾಗಿದೆ.
ಬಸವಣ್ಣನವರು ಇವರನ್ನೆಲ್ಲ ಅಪ್ಪ ಬೊಪ್ಪನೆಂದು ಅಪ್ಪಿಕೊಂಡಾಗ ಮೇಲ್ವರ್ಗ ಬೆಚ್ಚಿ ಬಿದ್ದಿತು. ಈ ದೇವರೂ ಸಹ ಮಾದಾರ ಚೆನ್ನಯ್ಯನೊಡನೆ ಸಹಪಂಕ್ತಿ ಸಹಭೋಜನವನ್ನು ಮಾಡಿದ. ಇಂದಿಗೂ ಸಾಧ್ಯವಾಗದ ಪದ್ಧತಿಯನ್ನು ಅಂದು ಬಸವಣ್ಣನವರು ಸಾಧ್ಯವಾಗಿಸಿದರು. ಇದು ಇಂದಿಗೂ ದೊಡ್ಡ ಕ್ರಾಂತಿಯಾಗಿದೆ ಎಂದು ತಿಳಿಸಿದರು.

ಮಹಾಮನೆಯ ಸಮಾರೋಪವನ್ನು ಮಾತನಾಡಿದ ಅನುಭಾವಿಗಳಾದ ಪ್ರೊ. ಸಿದ್ದಲಿಂಗಣ್ಣ ಬ. ಬರಗುಂಡಿಯವರು ಈವರೆಗೆ ಮಾತನಾಡಿದ ಎಲ್ಲ ಅನುಭಾವಿಗಳ ನುಡಿಗಳು ಸತ್ಯವಾಗಿವೆ. ಎಂದರೆ ಈ ವಚನದ ವೈಶಿಷ್ಟ್ಯ ಅದರ ವಚನ ರಚನಾ ಕ್ರಮದಲ್ಲಿಯೇ ಇದೆ. ಯಾವುದೋ ಒಬ್ಬ ವ್ಯಕ್ತಿ ಪ್ರಾಣಿ, ಪಕ್ಷಿಗಳು ಉಣ್ಣುವುದೇನೂ ಹೊಸದಲ್ಲ, ವಿಶೇಷವೂ ಅಲ್ಲ. ಆದರೆ ನಮ್ಮ ಮಾದಾರ ಚೆನ್ನಯ್ಯನ ಮನೆಯಲ್ಲಿ ಶಿವ ಉಣ್ಣುವುದೇನಿದೆಯಲ್ಲ ಅದು ಹೊಸದು. ಅದು ಜಗತ್ತನ್ನು ಬೆಚ್ಚಿಬೀಳಿಸುವ ಅಘಾತಕಾರಿ ಸಂಗತಿಯಾಗಿತ್ತು. ದೇವರ ಹೆಸರಿನಲ್ಲಿ ಪ್ರಾಣಿಗಿಂತ ಕೀಳಾಗಿ ನೋಡಿ ಜನರನ್ನು ಮುಟ್ಟಿಸಿಕೊಳ್ಳದಿರುವ ಸಂದರ್ಭದಲ್ಲಿ ಅ ದೇವರೇ ಮಾದಾರ ಚೆನ್ನಯ್ಯನ ಮನೆಯಲ್ಲಿ ಊಟ ಮಾಡಿದನೆಂದರೆ ಅದೂ ಷಡ್ರಸೋಪೇತವಾದ ಆಹಾರವನ್ನು ಬಿಟ್ಟು ಅಂಬಲಿಯನ್ನು ಕುಡಿದನೆಂದರೆ ಏನಾಗಿರಬೇಡ.
ವೇದ, ಶಾಸ್ತ್ರ, ತರ್ಕ ಮತ್ತು ಆಗಮಗಳು ತಲ್ಲಣಿಸಿ ಹೋದವು. ಕೇವಲ ಗ್ರಂಥಸ್ಥವಾಗಿದ್ದ ತತ್ವಗಳು ಬಸವಣ್ಣರನವರ ಮೂಲಕ ಕಾರ್ಯರೂಪಕ್ಕೆ ಇಳಿದಾಗ ಮೇಲು ವರ್ಗದವರಿಗೆ ಅಘಾತವಾಗಿರುವುದು ಸಹಜವಾದುದು. ಸಾವಿರ ಸಾವಿರ ವರ್ಷಗಳಿಂದ ಕರ್ಮದ ಹೆಸರಿನಲ್ಲಿ ಉಪಜೀವನಕ್ಕಾಗಿ ಮಾಡಿಕೊಂಡು ಬಂದಿದ್ದ ಸ್ಪೃಶ್ಯ-ಅಸ್ಪೃಶ್ಯ ಎಂಬ ಭೇದ-ಶೋಷಣೆಯಿಂದಲೇ ಉಳಿದುಕೊಂಡು ಬಂದಿದ್ದ ಹೊಟ್ಟೆಪಾಡಿಗೆ ವಿಚಾರದ ಕೊಡಲಿ ಪೆಟ್ಟಿಗೆ ಸನಾತನಿಗಳ ಶೋಷಕರ, ಕರ್ಮಠರ ಸ್ಥಾನ ಉಳಿದೀತೆ? ಇದನ್ನೇ ಸಾಂಕೇತಿಕವಾಗಿ ವೇದ, ಆಗಮ ತರ್ಕ ಶಾಸ್ತ್ರಗಳೆಂಬ ಹೆಸರಿನ್ನಲ್ಲಿ ಸೂಚಿಸಲಾಗಿದೆ. ಹೀಗೆ ಅಪ್ಪನವರು ಮಾಡಿದ ಅತಿಮುಖ್ಯ ಕೆಲಸವೆಂದರೆ ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಒಂದೇ ಎಂದು ನುಡಿದದ್ದು ಹಾಗೆ ನಡೆದುಕೊಂಡದ್ದು. ಈ ಎಲ್ಲ ಸಾರವೇ ಈ ವಚನದಲ್ಲಿ ಅಡಕವಾಗಿದೆಯೆಂದು ವಿವರಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶರಣ ರಾಚಣ್ಣ ಕೆರೂರ, ಶರಣೆ ಶ್ರೀದೇವಿ ಶೇಖಾ ಅವರಿಂದ ಸಾಮೂಹಿಕ ಪ್ರಾರ್ಥನೆಯಾಯಿತು. ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗಂಗಾವತಿ ಬಂಧು-ಬಳಗವಲ್ಲದೆ ಸುಭಾಸ ಜಿರ್ಲಿಗೌಡರ, ಮಹೇಶ ಮುಧೋಳ, ಪಾಂಡಪ್ಪ ಕಳಸಾ, ಚಂದ್ರಶೇಖರ ತೆಗ್ಗಿ, ಬ್ಯಾಳಿ ವಕೀಲರು, ಅಶೋಕ ಸವದಿ, ಮೋಹನ ಕರನಂದಿ, ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಸುಹಾಸಿನಿ ಬೀಳಗಿ, ಸರೋಜಕ್ಕ ಅಂಗಡಿ ಮೊದಲಾದರು ಸೇರಿದಂತೆ ಓಣಿಯ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.