ಬೆಂಗಳೂರು
ಕಳೆದ ಕೆಲವು ದಿನಗಳಿಂದ ವೀಣಾ ಬನ್ನಂಜೆಯವರು ಆಡಿದ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರಾಡಿದ ಮಾತುಗಳಲ್ಲಿ ಅನುಭವ ಮಂಟಪ ಎಂಬ ಭೌತಿಕ ಕಟ್ಟಡ ಇರಲಿಲ್ಲ, ಅಲ್ಲಿ ಚರ್ಚೆ ನಡದೇ ಇಲ್ಲ, ವಚನಗಳಲ್ಲಿ ಇದರ ಬಗ್ಗೆ ಉಲ್ಲೇಖ ಇಲ್ಲ ಎಂಬ ಸುಳ್ಳುಗಳೇ ತುಂಬಿವೆ.
1) ವಚನಯುಗದ ಯಾವ ವಚನಗಳಲ್ಲಿ ಅನುಭವ ಮಂಟಪದ ಬಗ್ಗೆ ಉಲ್ಲೇಖ ಇಲ್ಲ ಎಂಬದುರ ಬಗ್ಗೆ ಪ್ರತಿಕ್ರಿಯೆ.
ಬಸವಣ್ಣನವರ ಮನೆಯೇ ಮಹಾಮನೆ ಆಗಿ, ಅನುಭವಮಂಟಪವಾಗಿ ಮುಕ್ತ ಚಿಂತನೆಗೆ ಕಲ್ಪಸಿಲಾಗಿದ್ದ ವೇದಿಕೆಯಾಗಿತ್ತು. ದೇಶದ ವಿವಿಧ ಭಾಗಗಳಿಂದ ಬಂದ ವಿವಿಧ ಚಿಂತನೆಗಳುಳ್ಳ ವಿವಿಧ ಸಮುದಾಯ, ವರ್ಗಗಳ ಜನರು ವೈಚಾರಿಕ,ವಾಸ್ತವ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವಗಳ ಆಧಾರದ ಮೇಲೆ ಚರ್ಚೆಗಳು ನಡೆಯುತ್ತಿದ್ದವು.
ನಂಬಿಕೆ, ಆಚರಣೆಗಳನ್ನು ವಿಶ್ಲೇಷಣೆಗೆ ಗುರಿಪಡಿಸಿದ ಜನರನ್ನು ಮೌಢ್ಯಗಳಿಂದ ಬಿಡುಗಡೆಪಡಿಸುವ ಪ್ರಯತ್ನ ಮಾಡುವ ಮೂಲಕ ಸಮಸಮಾಜ ಕಟ್ಟುವ ಗುರಿಯಾಗಿತ್ತು.
ಈ ಚರ್ಚೆಯಲ್ಲಿ ಬಸವಣ್ಣರಾದಿಯಾಗಿ, ಅಲ್ಲಮಪ್ರಭು, ಮಾದಾರಚನ್ನಯ್ಯ, ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ಡೋಹಾರ ಕಕ್ಕಯ್ಯ, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ದರಾಮಯ್ಯ ಹಡಪದ ಅಪ್ಪಣ್ಣ, ಹಡಪದ ಲಿಂಗಮ್ಮ, ಸಮಗಾರ ಹರಳಯ್ಯಾ, ಕಲ್ಯಾಣಮ್ಮ, ಆಯ್ದಕ್ಕಿ ಮಾರಯ್ಯ, ಲಕ್ಕಮ್ಮ ಮಡಿವಾಳ ಮಾಚಯ್ಯ ಮುಂತಾದ 770 ಅಮರಗಣಂಗಳು ಭಾಗವಹಿಸಿ ಚರ್ಚೆ ಮಾಡಿದ್ದು ಬಸವಣ್ಣನವರ ವಿಚಾರಪತ್ನಿ ನೀಲಾಂಬಿಕೆ ಶರಣೆಯ ವಚನದಲ್ಲಿ ಕಾಣುತ್ತೇವೆ.
ವಚನ;
ಪಂಚಾಕ್ಷರಿಯ ಬೆಳೆಯ ಬೆಳೆದು ಪರಮಪ್ರಸಾದವನೊಂದುರ -ಪಮಾಡಿ ಮೆರೆದು ಭಕ್ತಿ ಫಲವನುಂಡಾತ ನಮ್ಮ ಬಸವಯ್ಯ.
ಚನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವ ಮಂಟಪ -ವನನು ಮಾಡಿ ಅನುಭವ ಮೂರ್ತಿಯಾದ ನಮ್ಮ ಬಸವಯ್ಯ. ಅರಿವ ಸಂಪಾದಿಸಿ ಆಚಾರನಂಗೆಗೊಳಸಿ ಏಳುನೂರೆಪ್ಪತ್ತು ಅಮರಗಣಗಳ ಅನುಭವ ಮೂರ್ತಿಗಳ ಮಾಡಿದ ನಮ್ಮ ಬಸವಯ್ಯನು ಸಂಗಯ್ಯನಲ್ಲಿ ಸ್ವಯಂಲಿಂಗಿಯಾದ ನಮ್ಮ ಬಸವಯ್ಯನು.
ಈ ವಚನದಲ್ಲಿ ಅನುಭವ ಮಂಟಪ ಜಗತ್ತಿನ ಪ್ರಜಾಪ್ರಭುತ್ವ ಮಾದರಿಯ ಸ್ವತಂತ್ರ ಚಿಂತನೆಯ ಪ್ರಥಮ ಸಂಸತ್ತು, ಇಲ್ಲಿ 770 ಶರಣ-ಶರಣೆಯರು ಮುಕ್ತವಾಗಿ ಚರ್ಚೆ ಮಾಡುತ್ತಿದ್ದರು ಎನ್ನುವ ಸ್ಪಷ್ಟತೆ ಉಲ್ಲೇಖವಾಗಿದೆ.
2) 1938ರಲ್ಲಿ ಕಲಬುರ್ಗಿಯ ವಿಪ್ರ ವಿದ್ವಾಂಸ ಸಾಹಿತಿ ಕ್ರಷ್ಣರಾವ್ ಕಪಟರಾಳ ಇವರು ಸಹ ಅಂದಿನ ” ಜಯಂತಿ” ಮಾಸಪತ್ರಿಕೆಯಲ್ಲಿ ಇಂದು ವೀಣಾ ಬನ್ನಂಜೆ ಹೇಳಿದ ಹಾಗೆ ಅನುಭವ ಮಂಟಪ ಕಲ್ಪನೆ, ಇದರ ಭೌತಿಕ ಕಟ್ಟಡ ಇಲ್ಲ, ಚರ್ಚೆ ನಡದೇ ಇಲ್ಲ ಎಂಬ ಲೇಖನಕ್ಕೆ ಧಾರವಾಡದ ರೆವರೆಂಡ್ ಉತ್ತಂಗಿ ಚನ್ನಪ್ಪನವರು ತಮ್ಮ “ಅನುಭವ ಮಂಟಪ” ಕ್ರೃತಿಯಲ್ಲಿ ಕಪಟರಾಳ ಇವರ ಎಲ್ಲಾ ಮಾತುಗಳಿಗೆ ಆಧಾರಸಹಿತ ಉತ್ತರ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ಕಪಟರಾಳ ಉತ್ತರ ಕೊಡದೇ ಸೋಲನ್ನು ಒಪ್ಪಿಕೊಳ್ಳುತ್ತಾನೆ.
ಜಾನಪದ ಸಾಹಿತ್ಯದಲ್ಲಿ ಅನುಭವ ಮಂಟಪದ ಉಲ್ಲೇಖ.
ಸಾಗಿ ಬಸವನು ಬಂದು ತೂಗಿದನು ಕಲ್ಯಾಣ ಹಾಗಿನಲ್ಲಿ ಕಟ್ಟಿ ಅನುಭವ ಮಂಟಪದ ಕೂಗು ಕೇಳುತಲ್ಲಿ ಜನವೆದ್ದು.
ಕೂಡಿದರು ಹುರುಪಿನಲ್ಲಿ ನಾಡ ಬಲ್ಲಿದರೆಲ್ಲ ಸೂಡು ಕಟ್ಟಿದರು ಶಿವ ನುಡಿಯ ಕಾಯಕದ ಗೂಡಾತು ಲೋಕ ಜನ ಹಿಗ್ಗಿ.
ನೀತಿ ಮಂಟಪದೊಳಗೆ ಭೀತಿ ಶರಣರಿಗುಂಟೆ ಮಾತಿನಲ್ಲಿ ಮೊದಲು ನೂರೊಂದು ಸ್ಥಳಗಳಿಗೆ ಕಾತಿ ನೀಯೆಂದ ಹರಳನಿಗೆ.
ಚೆನ್ನಬಸವನೆ ಕಾಯೋ ಇನ್ನು ಮಂಟಪ ನೀನು. ಗುನ್ನೆ ಮಾಡುವರು ಶಿವಮತಕ್ಕೆ ಕೋಪಿಗಳು ಮಣ್ಣು ಗೂಡಿಸುವ ಮಾಚಯ್ಯ.
ಹೀಗೆ ಜನಪದರು ತಮ್ಮ ಹಾಡುಗಳಲ್ಲಿ ಅನುಭವ ಮಂಟಪದ ಬಗ್ಗೆ ಹಾಡಿ ಹೊಗಳಿದ್ದಾರೆ.
3) ಇನ್ನು ವಚನಗಳು ಕನ್ನಡದ ಉಪನಿಷತ್ತುಗಳು ಸಂಸ್ಕೃತದ ಭಾಷೆಯಿಂದ ಕನ್ನಡಕ್ಕೆ ತರ್ಜುಮೆ ಆಗಿವೆ, ವಚನಗಳ ಮೂಲ ವೇದದ ಸಾರ ಎಂದು ಹಸಿ ಸುಳ್ಳನ್ನು ಹೇಳುತ್ತಾರೆ. ಇದನ್ನು ಆಕ್ಷೇಪಿಸುತ್ತಾ ಪ್ರೊ. ಎಂ. ಆರ್. ಶ್ರೀನಿವಾಸ ಮೂರ್ತಿ ವಚನ ಸಾಹಿತ್ಯ ಎರವಲು ತಂದದಲ್ಲಾ ಅದು ಕನ್ನಡದ ಸ್ವಹಾರ್ಜಿತ ಸ್ವತ್ತು. ವಚನಕಾರರು ಸಂಸ್ಕೃತದ ಆಚಾರ್ಯರಲ್ಲ ಅಚ್ಚಕನ್ನಡದ ಬೇಸಾಯಗಾರರು ಎಂದು ಹೇಳುವ ಮೂಲಕ ಉಪನಿಷತ್ತುಗಳಲ್ಲಿರುವ ಕೆಲವು ಜ್ಞಾನ ಕಾಂಡದ ವಿಚಾರಗಳು ವಚನಗಳಲ್ಲಿ ಇವೆ.
ಆದರೆ ವಚನಗಳಲ್ಲಿ ಇರುವ ಯಾವ ವಿಚಾರಗಳು ಉಪನಿಷತ್ತುಗಳಲ್ಲಿ ಇಲ್ಲ ಎಂಬುದು ತಮ್ಮ ವಚನ ಶಾಸ್ತ್ರ ರಹಸ್ಯ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇಷ್ಟೆಲ್ಲಾ ಆಧಾರ, ಉಲ್ಲೇಖಗಳು ಇತಿಹಾಸದಲ್ಲಿ ದಾಖಲೆಯಾಗಿದ್ದರೂ ವಿನಾಕಾರಣ ಮತ್ತೂಂದು ಧರ್ಮದಲ್ಲಿ ಮೂಗು ತೂರಿಸಿ ಹೇಳುವುದನ್ನು ನಿಲ್ಲಿಸಿ. ಇಂದು ಲಿಂಗಾಯತರು ಎಚ್ಚೆತ್ತು ಕೊಂಡಿದ್ದಾರೆ ನಿಮ್ಮ ಈ ಪ್ರತಿಕ್ರಾಂತಿಗೆ ಲಿಂಗಾಯತ ಗಣಾಚಾರ ಪಡೆ ಸದಾ ಸಿದ್ದ.
ಶರಣು ಶರಣಾರ್ಥಿಗಳು. ತಾವು ಗುರುಬಸವಪ್ಪನವರ ಹಾಗೂ ಆದಿಶರಣಶರಣೆಯರ ನಿಜ ವಾರಸುದಾರರು. ತಕ್ಕ ಉತ್ತರ ಕೊಟ್ಟಿದ್ದೀರಿ.