ನೆನಹು: ಮನೆ ಮನದಲ್ಲಿ ಬಸವತತ್ವ ಬಿತ್ತಿದ ವೀರಭದ್ರಪ್ಪ ಕುರಕುಂದ

ಲಿಂಗೈಕ್ಯ ಶರಣರ ಪ್ರಥಮ ವರ್ಷದ ನೆನಹು ಕಾರ್ಯಕ್ರಮ

ಸಿಂಧನೂರು

ಲಿಂಗೈಕ್ಯ ವೀರಭದ್ರಪ್ಪ ಕುರುಕುಂದ ಅವರು ಬಸವೇಶ್ವರರ ತತ್ವ ಸಿದ್ಧಾಂತವನ್ನು ಸಂಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ತಮ್ಮ ಜೀವಿತಾವಧಿಯಲ್ಲಿ ಬಹುದೊಡ್ಡ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಸವ ತತ್ವ ಚಿಂತಕರಾಗಿ ದೊಡ್ಡ ಹೆಸರು ಮಾಡಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಸ್ಥಳೀಯ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ವೀರಭದ್ರಪ್ಪ ಕುರಕುಂದ ಅವರ ಪ್ರಥಮ ವರ್ಷದ ನೆನಹು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಅವರಿಂದು ದೇಹದಿಂದ ದೂರವಾಗಿರಬಹುದು ಆದರೆ ನಮ್ಮೆಲ್ಲರ ಆತ್ಮದಲ್ಲಿ ಸದಾ ನೆಲೆಗೊಂಡಿದ್ದಾರೆ. ಮನುಷ್ಯ ಸಾಧನೆ ಮಾಡಲು ಅನೇಕ ಮಾರ್ಗಗಳಿವೆ. ವೀರಭದ್ರಪ್ಪನವರು ತಮ್ಮನ್ನು ತಾವು ಆಧ್ಯಾತ್ಮ ಮತ್ತು ಬಸವ ಮಾರ್ಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿ ಹೋದರು. ಜೊತೆಗೆ ನಾವು ನೀವು ಕೂಡ ವೀರಭದ್ರಪ್ಪನವರ ದಾರಿಯಲ್ಲಿ ಸಾಗಬೇಕಾಗಿದೆ.

ಬಸವತತ್ವ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾಗಿದೆ. ಕಾರಣಾಂತರಗಳಿಂದ ವಚನ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ತೃಪ್ತಿಕರವಾಗಿ ಬೆಳೆದಿಲ್ಲ. ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕಾಗಿದೆ. 12ನೆಯ ಶತಮಾನದ ಅನುಭವ ಮಂಟಪ ಅಂದು ಇಂದು ಎಂದೆಂದಿಗೂ ಮಾದರಿಯಾಗಿರುವಂತದ್ದು. ಶಿಕ್ಷಣದ ಜಾಗೃತಿ ಹಾಗೂ ಮೌಢ್ಯಾಚರಣೆಗಳನ್ನು ವಿರೋಧಿಸಲು ಅನುಭವ ಮಂಟಪ ಹುಟ್ಟಿತು.

ಸ್ಥಳೀಯವಾಗಿ ಬಸವ ಭವನ ನಿರ್ಮಾಣಕ್ಕೆ ಜಾಗವನ್ನು ಗುರುತಿಸಲಾಗಿದೆ. ಮುಂದಿನ ದಿನಮಾನಗಳಲ್ಲಿ ಅದಕ್ಕೆ ಬೇಕಾಗುವ ಅನುದಾನದ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದು ಈ ಸಂದರ್ಭದಲ್ಲಿ ಭರವಸೆಯನ್ನು ಶಾಸಕರು ನೀಡಿದರು.

ರಾಯಚೂರು ಬಸವ ಕೇಂದ್ರದ ಚೆನ್ನಬಸವಣ್ಣ ಮಹಾಜನಶೆಟ್ಟಿ ಅವರು ಮಾತನಾಡುತ್ತ, ವೀರಭದ್ರಪ್ಪ ಅಣ್ಣನವರು ರಾಯಚೂರಿನಲ್ಲಿ ಬಸವ ಕೇಂದ್ರದ ಸ್ಥಾಪನೆಗೆ ಕಾರಣಿಭೂತರಾದವರು. ಅವರ ಬದುಕು ಹಾಗೂ ಬೋಧನೆ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದವು. ಶರಣರ ವಿಚಾರಗಳು ನನ್ನ ಅಂತರಂಗದಲ್ಲಿ ಇಳಿಯಲು ಅವರೇ ಕಾರಣಿಭೂತರು.

ನಾನು ವೃತ್ತಿಯಿಂದ ನಿವೃತ್ತನಾದ ಮೇಲೆ ಬಸವತತ್ವಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಆ ಮೂಲಕ ಸಾರ್ಥಕ ಜೀವನ ಮಾಡುವಂತೆ ನನಗೆ ಬೋಧಿಸಿದರು. ಮುಂದಿನ ದಿನಮಾನಗಳಲ್ಲಿ ಅವರ ಸವಿನೆನಪಿಗಾಗಿ ಅವರ ಹೆಸರಿನಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವ ಯೋಚನೆಯನ್ನು ಮಾಡಬೇಕಾಗಿದೆ ಎಂದರು.

ಮಾಜಿ ಸಚಿವರಾದ ವೆಂಕಟರಾವ ನಾಡಗೌಡ್ರು ಮಾತನಾಡುತ್ತಾ, ನನ್ನ ಮತ್ತು ವೀರಭದ್ರಪ್ಪನವರ ಪರಿಚಯ ಬಸವಣ್ಣನವರ ಕಾರ್ಯಕ್ರಮದ ಮೂಲಕ ಆಯಿತು. ಅವರ ಮತ್ತು ನನ್ನ ಆತ್ಮೀಯತೆ ತುಂಬಾ ಗಾಢವಾಗಿತ್ತು. ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದುಕೊಂಡಿರಲಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡುತ್ತಾ, ಸಿಂಧನೂರಲ್ಲಿ ಮನೆ ಮನಗಳಲ್ಲಿ ಬಸವ ತತ್ವದ ಬೀಜವನ್ನು ಬಿತ್ತಲು ಕಾರಣೀಭೂತರಾದವರು ವೀರಭದ್ರಪ್ಪನವರು. ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದು ಮುಖ್ಯ ಅಲ್ಲ ಬದುಕಿದ್ದಾಗ ಎಂತಹ ಜೀವನ ನಡೆಸಿದ್ದೇವೆ ಎನ್ನುವುದೇ ಮುಖ್ಯ. ಸಂತ ಕಬೀರರು ಹೇಳುವಂತೆ ‘ನೀನು ಹುಟ್ಟಿದಾಗ ಜಗತ್ತು ನಗುತ್ತದೆ. ನೀನು ಸಾವನ್ನಪ್ಪಿದಾಗ ಜಗತ್ತು ನಿನ್ನ ಅಗಲಿಕೆಗಾಗಿ ದುಃಖಿಸಬೇಕು’ ಹಾಗೆ ನಾವು ಬದುಕಬೇಕು ಎಂದು ವೀರಭದ್ರಪ್ಪ ಅವರ ನೆನೆದು ನುಡಿದರು.

ವಿಧಾನ ಪರಿಷತ್ತು ಸದಸ್ಯರಾದ ಬಸವನಗೌಡ ಬಾದರ್ಲಿ ಅವರು ಮಾತನಾಡುತ್ತ, ವೀರಭದ್ರಪ್ಪ ಅಣ್ಣನವರು ನನಗೆ ಬಹುದೊಡ್ಡ ಮಾರ್ಗದರ್ಶಕರು. ನನಗೆ ಎಷ್ಟೋ ಸಾರಿ ರಾಜಕೀಯ ಗುರುಗಳಾಗಿದ್ದರು. ನಾನು ಕೆಲವೊಮ್ಮೆ ಅವರ ಸಲಹೆಗಳನ್ನು ಪಡೆಯುತ್ತಿದ್ದೆ. ಹಿರಿಯರಾದ ಅವರು ನನಗೆ ಉತ್ತಮ ಹಾಗೂ ಸರಿಯಾದ ಮಾರ್ಗದರ್ಶನ ನೀಡುತ್ತಿದ್ದರು.

ಕೋವಿಡ್ ದಿನಮಾನಗಳಲ್ಲಿ ಅವರು ಅನೇಕ ಕೆಲಸ ಕಾರ್ಯಗಳನ್ನು ಮಾಡಿದರು. ಜನರ ಮಧ್ಯ ಇದ್ದು ಆಹಾರ ಕಿಟ್ ವಿತರಣೆಯನ್ನು ಮಾಡಿದರು. ಆಗ ಅವರಿಗೆ ಯಾವ ಸೋಂಕು ತಗುಲಲಿಲ್ಲ. ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆಯಾಗಿ ನಮ್ಮನ್ನಗಲಿ ಹೋದರು ಅದನ್ನು ನನಗೆ ಮರೆಯಲಾಗುತ್ತಿಲ್ಲ. ಏನೇ ಇರಲಿ ಅವರನ್ನು ನಾವು ಶಾಶ್ವತವಾಗಿ ಉಳಿಸಲು ಅವರ ಕಾರ್ಯಗಳನ್ನು ಮುಂದುವರಿಸಬೇಕಾಗಿದೆ.

ಅದಕ್ಕಾಗಿ ಅವರ ನೇತೃತ್ವದಲ್ಲಿ ಸ್ಥಾಪಿಸಿರುವ ಬಸವ ಚಾರಿಟೇಬಲ್ ಟ್ರಸ್ಟ್ ಗೆ ನಮ್ಮ ಅನುದಾನದಲ್ಲಿ 5 ಲಕ್ಷ ರೂ.ಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಸ್ಥಳೀಯ ಖ್ಯಾತ ವೈದ್ಯರಾದ ನಾಗರಾಜ ಮಾಲಿಪಾಟೀಲ ಅವರು ಮಾತನಾಡುತ್ತಾ, ಅಣ್ಣನವರು ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿದ್ದರು. ಅವರನ್ನು ನೆನೆಸಿಕೊಂಡರೆ ನನಗೆ ಕಣ್ಣು ತುಂಬಿ ಬರುತ್ತವೆ.

ನಾನು 18 ವರ್ಷ ಇಂಗ್ಲೆಂಡನಲ್ಲಿ ಸೇವೆ ಸಲ್ಲಿಸಿ ಸಿಂಧನೂರಿಗೆ ಬರಲು ಅವರೇ ಪ್ರೇರಣೆ. ಸ್ಥಳೀಯವಾಗಿ ಆಸ್ಪತ್ರೆಯನ್ನು ಪ್ರಾರಂಭಿಸಲು ಸಹಕಾರಿಯಾದರು. ಅವರ ಅಗಲಿಕೆ ವೈಯಕ್ತಿಕವಾಗಿ ಮತ್ತು ನಮ್ಮ ಕುಟುಂಬಕ್ಕೆ ಆಘಾತ ತಂದಿದೆ ಎಂದು ನುಡಿದರು.

ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಅಂಬನಗೌಡ್ರು ಮಾತನಾಡುತ್ತಾ, ವೀರಭದ್ರಪ್ಪನವರು ನಮ್ಮ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗಲೇ ಪರಿಚಯವಾಗಿದ್ದು. ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ಯಾರು ಪರಿಚಯವಾಗದಿರಲಿ. ಅವರು ಹಾಸಿಗೆ ಮೇಲಿದ್ದಾಗಲೂ ನನ್ನ ಮತ್ತು ನಮ್ಮ ಕುಟುಂಬದ ಸಂಪೂರ್ಣ ವಿವರವನ್ನು ಹೇಳುವ ಮೂಲಕ ನನಗೆ ಆಶ್ಚರ್ಯವನ್ನು ಉಂಟು ಮಾಡಿದರು.

ಅನಾರೋಗ್ಯದಲ್ಲಿದ್ದಾಗಲೂ ಬಸವಾದಿ ಶರಣರ ವಿಚಾರಗಳು ಅವರ ಬಾಯಿಂದ ಬರುತ್ತಿದ್ದವು. ಅವರಿಗೆ ಶರಣರ ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕು ಎನ್ನುವ ಉತ್ಕಟ ಇಚ್ಚೆ ನನಗೆ ಅಚ್ಚರಿ ತರಿಸಿತು. ಅಷ್ಟೇ ಅಲ್ಲ ನಾನು ಕೂಡ ಅವರ ಮನೋಗುಣಕ್ಕೆ ಮಾರುಹೋದೆ. ಅವರೊಂದಿಗೆ ಕಳೆದ ಆ ಕ್ಷಣಗಳು ನನಗೆ ಮರೆಯಲಾಗುತ್ತಿಲ್ಲ. ಅವರ ಪ್ರಭಾವದಿಂದ ನಾನು ವೃತ್ತಿನಿಷ್ಠೆಯಲ್ಲಿ ಇನ್ನು ಗಟ್ಟಿಯಾಗಿ ಇರಬೇಕೆನಿಸಿದೆ. ಎಂದು ನುಡಿದರು.

ಶರಣತತ್ವ ಚಿಂತಕ ಅಮರೇಶಪ್ಪ ಮರಕಟ್ಟ ಅವರು ಮಾತನಾಡುತ್ತಾ, ನಮ್ಮ ಗ್ರಾಮಕ್ಕೆ ಅವರ ಕೊಡುಗೆ ಅಪಾರ. ಹಳಕಟ್ಟಿಯಂತಹ ಶರಣರ, ಕಲಬುರ್ಗಿಯಂತಹ ಚಿಂತಕರ ವ್ಯಕ್ತಿ ಚಿತ್ರವನ್ನು ಅವರಲ್ಲಿ ನಾನು ಕಂಡುಕೊಂಡಿದ್ದೇನೆ. ಅವರು ನಮ್ಮ ಗ್ರಾಮದ ಬಡವನೊಬ್ಬ ಕ್ಯಾನ್ಸರ್ ಇಂದ ಬಳಲುತ್ತಿದ್ದಾಗ ಒಂದು ಲಕ್ಷ ರೂಪಾಯಿಗಳ ದೇಣಿಗೆಯನ್ನು ಸಂಗ್ರಹಿಸಿ ಆ ವ್ಯಕ್ತಿಯ ಜೀವ ಉಳಿಸಲು ಕಾರಣೀಕರ್ತರಾಗಿದ್ದರು.

ನಮ್ಮ ಊರಿನಲ್ಲಿ 300ಕ್ಕಿಂತ ಹೆಚ್ಚು ಜನರಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿ, ಅವರನ್ನು ಬಸವ ಮಾರ್ಗದಲ್ಲಿ ಸಾಗಲು ಕಾರಣೀಭೂತರಾಗಿದ್ದರು ಎಂದು ನುಡಿದರು.

ನಿರುಪಾದಪ್ಪ ಗುಡಿಹಾಳ ವಕೀಲರು ಮಾತನಾಡುತ್ತಾ, ನುಡಿದಂತೆ ನಡೆದ ನಡೆದಂತೆ ನುಡಿದ ನ್ಯಾಯನಿಷ್ಟುರಿ ಶರಣ ವೀರಭದ್ರಪ್ಪ ಅಣ್ಣನವರು. ನನ್ನ ಜೀವನದಲ್ಲಿ ಜಾತ್ಯತೀತ ವ್ಯಕ್ತಿತ್ವವುಳ್ಳ ವ್ಯಕ್ತಿಯನ್ನು ಕಂಡಿದ್ದು ಇವರೊಬ್ಬರನ್ನು ಮಾತ್ರ. ಯಾವುದೇ ಜಾತಿಯವನು ತೀರಿಕೊಂಡಾಗ ತಮ್ಮ ಟವೆಲ್ನಿಂದ ಅವರ ಹಣೆಯನ್ನು ಒರೆಸಿ ವಿಭೂತಿ ಧಾರಣೆ ಮಾಡಿ ಬಸವಾದಿ ಶರಣರ ವಚನಗಳನ್ನು ಹೇಳಿ ಅಂತ್ಯ ಸಂಸ್ಕಾರ ಮಾಡುತ್ತಿದ್ದರು.

ಅವರು ತಳ ಸಮುದಾಯ ಹಾಗೂ ಸ್ತ್ರೀ ಸಮಾಜವನ್ನು ಮೇಲೆತ್ತುವ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಂತಹ ವ್ಯಕ್ತಿಯನ್ನು ನಾವು ಈ ನೆಲದಲ್ಲಿ ಹೂತಿಲ್ಲ ಬಿತ್ತಿದ್ದೇವೆ ಎಂದು ನುಡಿದರು.

ಮಾಜಿ ಶಾಸಕರು ಹಾಗೂ ಹಿರಿಯ ವಕೀಲರಾದ ಕೆ.ಶರಣಪ್ಪ ಅವರು ಮಾತನಾಡುತ್ತಾ, ನನ್ನ ಹಾಗೂ ವೀರಭದ್ರಪ್ಪನವರ ಸಂಬಂಧ 30 ವರ್ಷ ಹಳೆಯದ್ದು. ಕುಷ್ಟಗಿ ಭಾಗದಲ್ಲಿ ಸತ್ಸಂಗವನ್ನು ಹುಟ್ಟಾಕಿದವರು ವೀರಭದ್ರಪ್ಪನವರು.

ಕಲ್ಯಾಣ ಮಹೋತ್ಸವಗಳನ್ನು ಗಟ್ಟಿಗೊಳಿಸಿ ನಿಜಾಚರಣೆಗಳನ್ನು ಜಾರಿಗೆ ತಂದವರು. ಅವರ ಅನುಭವ ವಾಸ್ತವ ಬದುಕಿಗೆ ಹತ್ತಿರವಾಗಿರುತ್ತಿತ್ತು. ಅವರು ಚರಜಂಗಮರಾಗಿ ಜ್ಞಾನ ಜಂಗಮರಾಗಿದ್ದರು. ನಾವು 12ನೇ ಶತಮಾನದ ಶರಣರನ್ನು ಕಂಡಿಲ್ಲ ಅವರ ಪ್ರತಿರೂಪ ಕಂಡಿದ್ದೇವೆ ಅವರು ನಡೆಜಂಗಮರು ನುಡಿ ಜಂಗಮರಾಗಿದ್ದರು ಎಂದು ನುಡಿದರು.

ಬಸವಲಿಂಗಪ್ಪ ಬಾದರ್ಲಿ ಅವರು ಮಾತನಾಡುತ್ತಾ, ಅಣ್ಣನವರು ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ನಿಷೇಧದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಸೈಕ್ಲೋನ್ ಹಾಗೂ ನೆರೆಹಾವಳಿ ಸಂಭವಿಸಿದಾಗ ನಿರಾಶ್ರಿತರಿಗೆ ತಗಡುಗಳನ್ನು ವಿತರಿಸಿದರು. ವಿಶೇಷ ಅಂಗದವರಿಗೆ ತ್ರಿಚಕ್ರ ಸೈಕಲ್ ವಿತರಿಸಿದರು. ಪ್ರತಿಭಾವಂತ ಬಡ ಹೆಣ್ಣು ಮಕ್ಕಳಿಗೆ 15,000 ಮುದ್ದತಿ ಠೇವಣಿಯನ್ನು ಬ್ಯಾಂಕುಗಳಲ್ಲಿ ತೊಡಗಿಸುವ ಮೂಲಕ ಸಹಾಯಕರಾದರು. ಜಂಗಮ ಪದಕ್ಕೆ ನಿಜ ಅರ್ಥ ಕಲ್ಪಿಸಿದರು.

ದೀಪಾವಳಿಯ ಅಂಗಡಿ ಪೂಜೆಯ ಸಂದರ್ಭದಲ್ಲಿ ಭಿಕ್ಷುಕರನ್ನು ಮೊದಲ ಪಂತಿಯಲಿ ಊಟ ಮಾಡಿಸುವ ಮೂಲಕ ನೈಜತೆ ಮೆರೆದರು. ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದು ಮರೆಯುವಂತಿಲ್ಲ. ಮುಕ್ತ ಸಹಕಾರಿ ಸಂಘ ಸ್ಥಾಪಿಸುವ ಮೂಲಕ ಚಾರಿಟೇಬಲ್ ಟ್ರಸ್ಟಗೆ 22 ಲಕ್ಷ ರೂಪಾಯಿಗಳನ್ನು ಸಂದಾಯ ಮಾಡುವ ಮೂಲಕ ಸಮಾಜಮುಖಿ ಕೆಲಸಕ್ಕೆ ಸಹಕರಿಸಿದರು.

ಅನೇಕ ತಳಸಮುದಾಯದ ಜನರಿಗೆ ಲಿಂಗಧಾರಣೆ ಮಾಡುವ ಮೂಲಕ ಲಿಂಗಾಯತ ಎಂದರೆ ಜಾತಿಯಲ್ಲ ಅದು ಧರ್ಮ, ತತ್ವ ಎನ್ನುವುದನ್ನು ನಮ್ಮ ತಾಲೂಕಿನಲ್ಲಿ ತೋರಿಸಿಕೊಟ್ಟರು. ಅವರಿಗೆ 2019 ರಲ್ಲಿ ರಾಜ್ಯದ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ನುಡಿದರು.

ರೈತನಾಯಕರು, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ ಅವರು ಮಾತನಾಡುತ್ತಾ, ಮಲ್ಲಿನಾಥ ಶರಣರ ಸಂಗವೇ ಅವರನ್ನು ಬಸವ ತತ್ವಕ್ಕೆ ಸೆಳೆಯಿತು. ಮೂಲತಃ ವೀರಭದ್ರಪ್ಪನವರು ಕೃಷಿ ಕಾಯಕದವರು. ಕೃಷಿಕೃತ್ಯ ಕಾಯಕವ ಮಾಡುತ್ತಾ ಬಸವತತ್ವವನ್ನು ಮೈಗೂಡಿಸಿಕೊಂಡು ಇವತ್ತು ನಾಡಿನದ್ಯಂತ ಹೆಸರು ಮಾಡಿದ್ದಾರೆ.

ಅವರು ಕಷ್ಟ ಸಹಿಷ್ಣುಗಳು ಮತ್ತು ತಂದೆ ತಾಯಿಗಳ ಸೇವೆ ಮಾಡುವುದನ್ನು ಅವರಿಂದ ನೋಡಿ ಕಲಿಯಬೇಕು. ಅವರು ತಂದೆಯವರನ್ನು ತುಂಬಾ ಚೆನ್ನಾಗಿ ಹಾರೈಕೆ ಮಾಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಕೊನೆಗಳಿಗೆವರೆಗೂ ನೆರೆಹೊರೆಯವರನ್ನು ಪ್ರೀತಿಸಿ ತುಂಬು ಕುಟುಂಬವನ್ನು ನಿರ್ವಹಿಸಿದ ಅವರ ದಕ್ಷತೆಗೆ ನಾನು ಪ್ರಭಾವಿತನಾಗಿದ್ದೇನೆ ಎಂದರು.

ಚಿಂತಕ ಅಶೋಕ ಬರಗುಂಡಿ ಅವರು ಮಾತನಾಡುತ್ತಾ, ರಕ್ತಸಂಬಂಧಕ್ಕಿಂತ ಭಕ್ತಿ ಸಂಬಂಧ ದೊಡ್ಡದು ಎನ್ನುವಂತೆ ಅಣ್ಣನವರು ಎಲ್ಲರನ್ನೂ ಅಪ್ಪಿಕೊಳ್ಳುತ್ತಿದ್ದರು. ಬಸವ ಧರ್ಮ ಸಮಾನತೆಯ ಧರ್ಮ, ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಧರ್ಮ. ಅದೇ ರೀತಿ ಅಣ್ಣನವರು ತಮ್ಮ ಜೀವನವನ್ನು ನಡೆಸಿದರು. ವೀರಭದ್ರಪ್ಪ ಅಣ್ಣನವರು ಪ್ರತಿಯೊಬ್ಬರನ್ನು ತಮ್ಮಲ್ಲಿ ಇಂಬಿಟ್ಟುಕೊಂಡು ಅವರು ಸಮಾಜದ ಮಗನಾಗಿ ಸೇವೆ ಮಾಡಿದರು.

ಇಷ್ಟಲಿಂಗದ ಮಹತ್ವ ಅದರ ಪ್ರಚಾರಕ್ಕೆ ಬಹಳ ಒತ್ತು ಕೊಟ್ಟಿದ್ದರು. ಅಂಗ ಸಂಗಿಯಾದವನಿಗೆ ಲಿಂಗಸಂಗವಿಲ್ಲ. ಲಿಂಗಸಂಗಿ ಯಾದವಂಗೆ ಅಂಗ ಸಂಗವಿಲ್ಲ. ಮನುಷ್ಯನನ್ನು ಪರಿಪೂರ್ಣ ಪರಿವರ್ತನೆ ಮಾಡುವುದಕ್ಕೆ ಇಷ್ಟಲಿಂಗ ಮುಖ್ಯ ಎನ್ನುವುದನ್ನು ಅವರು ಮನಗಂಡಿದ್ದರು. ನಿಜಾಚರಣೆಗಳ ಮೂಲಕ ಸಮಾಜದ ಸ್ವಾಸ್ಥವನ್ನು ಕಾಪಾಡಬಹುದು ಎಂದುಕೊಂಡಿದ್ದರು ಎಂದರು.

ಸಾನಿಧ್ಯ ವಹಿಸಿ ಭಾಲ್ಕಿಯ ಪೂಜ್ಯ ಗುರುಬಸವ ಪಟ್ಟದ್ದೇವರು, ಶುಭಾಶಯದ ನುಡಿಗಳನ್ನು ನುಡಿಯುತ್ತಾ ಸಾವನ್ನಪ್ಪಿದವರು ಸಾವಿರಾರು ಜನರಿದ್ದಾರೆ. ಸಾವಾಗಿಯೂ ಬದುಕಿದವರು ತುಂಬಾ ಕಡಿಮೆ ಅಂಥವರಲ್ಲಿ ವೀರಭದ್ರಪ್ಪನವರು ಒಬ್ಬರು. 12ನೇ ಶತಮಾನವನ್ನು ನಾವು ಓದಿದ್ದೇವೆ ಕೇಳಿದ್ದೇವೆ ಆದರೆ ನೋಡಿಲ್ಲ ಅದನ್ನು ವೀರಭದ್ರಪ್ಪನವರ ವ್ಯಕ್ತಿತ್ವದಲ್ಲಿ ಕಂಡಿದ್ದೇವೆ ಎಂದರೆ ತಪ್ಪಾಗಲಾರದು. ಇಲ್ಲಿ ನೂರಾರು ಜನ ಸೇರಿರುವುದೇ ಅವರ ವ್ಯಕ್ತಿತ್ವಕ್ಕೆ ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ.

ಅವರು ದಾಸೋಹ ಮೂರ್ತಿಗಳಾಗಿದ್ದರು. ಬಸವಕಲ್ಯಾಣದ ಅನುಭವ ಮಂಟಪಕ್ಕೆ ಈ ಭಾಗದಿಂದ ಒಂದು ಟ್ರಕ್ ಅಕ್ಕಿಯನ್ನು ಕಳಿಸಿಕೊಡುವ ಮೂಲಕ ನಮ್ಮ ಸೇವೆಗೆ ಸಹಾಯ ಮಾಡಿದ್ದರು ಎಂದು ಸ್ಮರಿಸಿದರು. ಬಸವ ತತ್ವ ಎಂದೆಂದಿಗಿಂತಲೂ ಪ್ರಖರವಾಗಿ ಬೆಳೆಯುತ್ತದೆ. ಈಗ ಬಸವಣ್ಣನವರ ಕುರಿತು ತೆಲಂಗಾಣದ ಪಠ್ಯದಲ್ಲಿ ಸೇರ್ಪಡೆಯಾಗಿದೆ. ನಾವು ನೀವೆಲ್ಲರೂ ಬಸವ ತತ್ವದ ಪ್ರಚಾರಕ್ಕೆ ಕೈಜೋಡಿಸಬೇಕು.
ಇದೇ ತಿಂಗಳ 29 ಹಾಗೂ 30 ರಂದು ಬಸವ ಕಲ್ಯಾಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಬೇಕೆಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ಮಲ್ಲಿನಾಥ ಶರಣರ 203 ನೇ ಸಂಚಾರಿ ಶಿವಾನುಭವ ಹಾಗೂ ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕಿಂತ ಮುಂಚೆ ಪೂಜ್ಯ ಗುರುಬಸವ ಸ್ವಾಮಿಗಳಿಂದ ಸಿಂಧನೂರು ಕೆ.ಹೆಚ್.ಬಿ. ಕಾಲೋನಿಯ ರಸ್ತೆಗೆ ‘ಶರಣ ಶ್ರೀ ವೀರಭದ್ರಪ್ಪ ಕುರುಕುಂದ ರಸ್ತೆ’ ಎಂದು ನಾಮಕರಣ ಮಾಡಿ ನಾಮಫಲಕವನ್ನು ಅನಾವರಣಗೊಳಿಸಲಾಯಿ.

ಸಮಾರಂಭದ ಅಧ್ಯಕ್ಷತೆಯನ್ನು ನಾಗಭೂಷಣ ನವಲಿ ವಹಿಸಿದ್ದರು. ಮಹಾಂತಮ್ಮ ಸ್ವಾಗತಿಸಿದರು. ಚಂದ್ರೇಗೌಡ ಹರೇಟನೂರ ಕಾರ್ಯಕ್ರಮ ನಿರೂಪಿಸಿದರು.

ಸಿದ್ದರಾಮಪ್ಪ ಸಾಹುಕಾರ ಮಾಡಸಿರವಾರ, ಬಸವರಾಜ ಹಣಗಿ, ಶಂಭನಗೌಡ ನಿಡಗೋಳ, ಶಿವಕುಮಾರ ಬಳೆಗಾರ, ಈರಮ್ಮ ತಾಯಿ, ವೀರಭದ್ರಪ್ಪ ಕುಟುಂಬದವರು, ನೂರಾರು ಬಸವಭಕ್ತರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
1 Comment

Leave a Reply

Your email address will not be published. Required fields are marked *