ಸಿಂಧನೂರು
ತಾಲೂಕಿನ ಕುರುಕುಂದ ಗ್ರಾಮದ ಬಸವ ಕೇಂದ್ರದಲ್ಲಿ ಲಿಂಗೈಕ್ಯ ಶರಣ ವೀರನಗೌಡ ಕಾಸರೆಡ್ಡಿ ಅವರ ಪ್ರಥಮ ವರ್ಷದ ನೆನಹು ಕಾರ್ಯಕ್ರಮ ನಡೆಯಿತು.
ವೆಂಕಟಾಪುರ ಬಸವರಾಜಪ್ಪ ಶರಣರು ಅನುಭಾವ ನೀಡುತ್ತ, “ನಮ್ಮ ಶರಣರಿಗೆ ಸಾವಿಲ್ಲ. ಅವರು ಬಾವನ್ನದ ವೃಕ್ಷವಿದ್ದಂತೆ”, ಊರೊಳಗಿದ್ದರು ಅಷ್ಟೇ, ಕಾಡಿನೊಳಗಿದ್ದರೂ ಅಷ್ಟೇ ಅದು ತನ್ನ ಪರಿಮಳವನ್ನು ಹೊರಸೂಚಿಸುತ್ತದೆ.
ಹಾಗೆಯೇ ನಮ್ಮ ಶರಣರು ಜೀವಂತವಾಗಿದ್ದಾಗಲೂ, ಲಿಂಗೈಕರಾದ ಮೇಲೂ ತಮ್ಮ ಇರುವಿಕೆಯ ಕುರುಹನ್ನು ಬಿಟ್ಟು ಹೋಗಿರುತ್ತಾರೆ. ನಮ್ಮ ಮನೆಯ ಹಿರಿಯರು ತಮ್ಮ ಇಷ್ಟಾರ್ಥಗಳನ್ನ ಬದಿಗಿಟ್ಟು ನಮಗಾಗಿ ನಮ್ಮ ಕುಟುಂಬದ ಸದಸ್ಯರಿಗಾಗಿ ಏನೆಲ್ಲಾ ತ್ಯಾಗವನ್ನು ಮಾಡಿರುತ್ತಾರೆ. ನಮ್ಮ ಶಿಕ್ಷಣಕ್ಕಾಗಿ ಹಾಗೂ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಟದ ಬದುಕನ್ನು ನಡೆಸಿರುತ್ತಾರೆ ಅಂತವರನ್ನು ನಾವು ಸದಾ ಸ್ಮರಿಸುತ್ತಿರಬೇಕು.

ಇಂದಿನ ಸಾಮಾಜಿಕ ಬದುಕಿನಲ್ಲಿ ಸತ್ಯಶುದ್ಧವಾಗಿ ಬದುಕುವುದು ಕೆಲ ಮತಿಗೇಡಿಗಳಿಗೆ ಅಪರಾಧವಾಗಿ ಕಾಣುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ನಡೆದ ಮಠಾಧಿಪತಿಗಳ ಒಕ್ಕೂಟದ ಹಾಗೂ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬಸವ ಸಂಸ್ಕೃತಿಯ ಅಭಿಯಾನ ಕಾರ್ಯಕ್ರಮದ ಕುರಿತು ‘ಕನ್ನೇರಿಯ ಶ್ರೀಗಳು’ ಅತ್ಯಂತ ನಿಕೃಷ್ಟವಾಗಿ ಮಾತನಾಡಿರುವುದು ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ.
ಆದರೆ ನಮ್ಮ ಎಲ್ಲಾ ಪರಮಪೂಜ್ಯರು ಅದನ್ನು ಬಹಳ ಸರಳವಾಗಿ ತೆಗೆದುಕೊಂಡಿದ್ದಾರೆ. ಅದು ನಮ್ಮ ಪೂಜ್ಯರ ದೊಡ್ಡಗುಣ. “ಶರಣರು ಹೇಳುವಂತೆ ಫಲವಾದ ಮರಕ್ಕೆ ಕಲ್ಲಲಿ ಹೊಡೆಯುವವರು ಕೋಟಿ ಜನ. ಫಲವಿಲ್ಲದ ಮರಕ್ಕೆ ಯಾರೂ ಕಲ್ಲು ಹೊಡೆಯುವುದಿಲ್ಲ”.
“ಚಂದನ ಕಡಿದು ತಂದು ತೇದರೆ ಕಂಪು ಕಡಿಮೆಯಾಗುವುದಿಲ್ಲ. ಕಬ್ಬನ್ನು ತಂದು ಕತ್ತರಿಸಿ ಗಾಣದಲ್ಲಿ ಹಾಕಿ ಹಿಂಡಿದರೆ ಸಕ್ಕರೆ ರುಚಿ ಸಿಹಿಯಾಗಿಯೇ ಇರುತ್ತದೆ. ಬಂಗಾರವನ್ನು ಕಾಯಿಸಿದಷ್ಟು ಹೊಳಪು ಬರುತ್ತದೆ ಹಾಗೆಯೇ ನಮ್ಮ ಶರಣರಿಗೆ ನೂರು ಜನ ಮೂರ್ಖರು ನೂರಾರು ಮಾತನಾಡಿದರೂ ಏನು ಪರಿಣಾಮ ಬೀರುವುದಿಲ್ಲ”. ಎಂದು ಬಸವರಾಜಪ್ಪ ಅವರು ನುಡಿದರು.

ಗವಿಸಿದ್ದಪ್ಪ ಹೊಸಮನಿ ಕಾನಿಹಾಳ ಇವರು ಮಾತನಾಡುತ್ತಾ, ಯಾಂತ್ರಿಕ ಹಾಗೂ ಮುಖವಾಡ ಧರಿಸಿದ ಬದುಕು ನಮ್ಮದಾಗಬಾರದು. “ಒಬ್ಬರ ಮನವ ನೋಯಿಸುವುದು, ಮತ್ತೊಬ್ಬರಿಗೆ ಘಾತವ ಮಾಡುವುದು ಶರಣ ಸಂಸ್ಕೃತಿ ಅಲ್ಲ”. ನಮ್ಮ ಜೀವನ ಮುಗಿಯುತ್ತದೆ ಆದರೆ ನಮ್ಮ ಆಸೆಗಳು ಮುಗಿಯುವುದೇ ಇಲ್ಲ. ಸಾಮ್ರಾಟ ಅಶೋಕ ಇಡೀ ಭಾರತವನ್ನೇ ಗೆದ್ದ ಆದರೆ ಆತ ಇಲ್ಲಿ ಶಾಶ್ವತವಾಗಿ ಉಳಿಯಲಿಲ್ಲ.
ಮುತ್ತು ರತ್ನಗಳಿಂದ ತುಂಬಿದ ವಿಜಯನಗರ ಸಾಮ್ರಾಜ್ಯ ಅಳಿದು ಹೋಯಿತು. ಇದರಿಂದ ನಾವು ಕಲಿಯಬೇಕಾದದ್ದು ಭೌತಿಕ ಸಂಪತ್ತಿಗಿಂತ ಆಧ್ಯಾತ್ಮ ಬದುಕು ಮುಖ್ಯ ಎಂದು ಹೇಳಿದರು.
ಹೊಗರನಾಳ ಗ್ರಾಮದ ಪ್ರಗತಿಪರ ರೈತ ದೊಡ್ಡಪ್ಪಗೌಡ ಯರಡಿಹಾಳ ಮಾತನಾಡುತ್ತಾ, ನಮ್ಮ ಜೀವನದಲ್ಲಿ ಅಜ್ಞಾನವೆಂಬ ಕಸವನ್ನು ಕಿತ್ತು ತೆಗೆಯಬೇಕು ಆಗ ಮಾತ್ರ ಸುಳಿ ತೆಗೆದು ಬೆಳೆಯಲು ಸಾಧ್ಯ. ಅಂತಹ ಅಜ್ಞಾನದ ಕಸ ತೆಗೆಯಲು ಇಂತಹ ಸತ್ಸಂಗ ಕಾರ್ಯಕ್ರಮಗಳು ಜರುಗಬೇಕು, ನಾವು ನೀವೆಲ್ಲರೂ ಭಾಗವಹಿಸಬೇಕು ಎಂದರು.
“ಸಜ್ಜನರ ಸಂಗ ಲೇಸು ಕಂಡಯ್ಯ ದುರ್ಜನರ ಸಂಘ ಬೇಡವಯ್ಯ ಆವ ಹಾವಾದರೇನು ವಿಷವೊಂದೇ ಅಂಥವರ ಸಂಘ ನಾವು ಮಾಡಬಾರದು”. ಲಿಂಗಾಯತ ಎಂದರೆ ಕಾಯಕ ಸಿದ್ಧಾಂತ. ಇಂತಹ ಸಿದ್ಧಾಂತಕ್ಕೆ ಬೈಯುವ ಅಜ್ಞಾನಿಗಳಿಗೆ ಕಾಲವೇ ಉತ್ತರ ಕೊಡುತ್ತದೆ ಎಂದು ನುಡಿದರು.
ಪ್ರಾಸ್ತಾವಿಕವಾಗಿ ರಾಮಣ್ಣ ಪೂಜಾರಿ ಮಾತನಾಡಿದರು. ವಚನ ಪ್ರಾರ್ಥನೆಯನ್ನು ಬಸವರಾಜಪ್ಪ ವರದಾಪುರ ನಡೆಸಿಕೊಟ್ಟರು. ಬಸಲಿಂಗಪ್ಪ ಬಾದರ್ಲಿ, ನಾಗಭೂಷಣ ನವಲಿ, ಶರಣಪ್ಪ ಸಾಹುಕಾರ, ರುದ್ರಪ್ಪ ಮಟ್ಟೂರ್ ಹಾಗೂ ಕುರುಕುಂದ ಗ್ರಾಮದ ಶರಣ ಶರಣೆಯರು ಭಾಗವಹಿಸಿದ್ದರು. ಗಂಗಮ್ಮ ನವಲಿ ಕಾರ್ಯಕ್ರಮ ನಿರೂಪಿಸಿದರು. ಹನುಮನಗೌಡ ಖಾಸರೆಡ್ಡಿ ಶರಣು ಸಮರ್ಪಣೆ ಮಾಡಿದರು.