ಎಲ್ಲಿ ವೀರಶೈವವೋ ಅಲ್ಲಿ ಗೊಂದಲ: ಅತ್ತಿವೇರಿ ಬಸವೇಶ್ವರಿ ಮಾತೆ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ

ನಂಜನಗೂಡು

“ಎಲ್ಲಿ ವೀರಶೈವವೊ ಅಲ್ಲಿ ಗೊಂದಲ, ಅದಕ್ಕೆ ಕಾರಣ ಬಸವಣ್ಣನವರ ಅಭಾವ,” ಎಂದು ಪೂಜ್ಯ ಅತ್ತಿವೇರಿ ಬಸವೇಶ್ವರಿ ಮಾತಾಜಿ ಶುಕ್ರವಾರ ಹೇಳಿದರು.

ಸಾಂಸ್ಕೃತಿಕ ನಾಯಕ ‘ಬಸವಣ್ಣನವರ ಜೀವನ ದರ್ಶನ’ ವಿಷಯದ ಮೇಲೆ 21 ದಿನಗಳ ನಡೆದ ಪ್ರವಚನದ ಕೊನೆಯ ದಿನದಂದು ಈ ಮಾತನ್ನು ಹೇಳಿದರು.

ಸಮಾಜದಲ್ಲಿ ಬಸವಣ್ಣನವರ ಬಗ್ಗೆ ಸರಿಯಾದ ಅರಿವಿನ ಕೊರತೆಯಿದೆ. ಇದನ್ನು ಬಳಸಿಕೊಂಡು ವೀರಶೈವರು ಗೊಂದಲ ಮೂಡಿಸುತ್ತಿದ್ದಾರೆ. ಅದಕ್ಕೆ ಜನಗಣತಿಯಲ್ಲಿ ಸರಿಯಾಗಿ ಬರೆಸದೆ ಲಿಂಗಾಯತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಪ್ರವಚನದ ಕಡೆಯ ದಿನ ಬಸವಣ್ಣನವರ ಒಟ್ಟಾರೆ ಜೀವನ ಮತ್ತು ಸಾಧನೆಯನ್ನು ಸ್ಮರಿಸಿಕೊಂಡರು. ದೇವನಾಗಬಹುದು ಆದರೆ ಬಸವಣ್ಣನಾಗಲು ಹೋಗಬಾರದು ಎನ್ನುತ್ತಾ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ‘ನಾನೇ ಬಸವಣ್ಣ’ನೆಂದು ಹೇಳಿದ ಮಾತು ಅಜ್ಞಾನದ ಮಾತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಲ್ಲರೆ ಶಿವಬುದ್ಧಿ ಮತ್ತು ತಂಡದವರಿಂದ ವಚನ ಗಾಯನ ನಡೆಯಿತು. ಭಾಲ್ಕಿಯ ಪೂಜ್ಯ ಚನ್ನಬಸವ ಪಟ್ಟದೇವರು ಬಸವಣ್ಣನವರ ಕಳಬೇಡ ಕೊಲಬೇಡ ವಚನವನ್ನು ತಮ್ಮ ಎಲ್ಲಾ ಪ್ರವಚನದಲ್ಲಿ ಹೇಳುತ್ತಿದ್ದರು ಎಂದು ಶಿವಬುದ್ಧಿ ಹೇಳಿದರು. ಮಹಾತ್ಮ ಗಾಂಧೀಜಿಯವರು ಒಂದು ಭಾಷಣದಲ್ಲಿ ಬಸವಣ್ಣನವರನ್ನು ಸಿದ್ದಪುರುಷರೆಂದು ಹೇಳಿದ ವಿಷಯವನ್ನೂ ಸ್ಮರಿಸಿಕೊಂಡರು.

ಈ ಪ್ರವಚನ ಕಾರ್ಯಕ್ರಮವು ಬಸವ ಮಾಸದ ವತಿಯಿಂದ ನಾಲ್ಕು ವರ್ಷಗಳಿಂದ ನಡೆದು ಬರುತ್ತಿದೆ ಎಂದು ನಂಜನಗೂಡಿನ ಜಗನ್ಮಾತೆ ಅಕ್ಕಮಹಾದೇವಿಯ ಮಹಿಳಾ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಚೆನ್ನಒಡೆಯನಪುರದ ಚನ್ನಪ್ಪ ತಿಳಿಸಿದರು.

ವೇದಿಕೆಯ ಮೇಲೆ ಪೂಜ್ಯಶ್ರೀ ಉಧ್ದಾನ ಶಿವಯೋಗಿಗಳು ಮೂಡಗೂರು, ಪೂಜ್ಯಶ್ರೀ ಓಂಕಾರೇಶ್ವರಿ ಮಾತಾಜಿ ಕಪ್ಪತ್ತಗುಡ್ಡ ಗದಗ ,ಪೂಜ್ಯಶ್ರೀ ಅನ್ನಪೂರ್ಣ ಮಾತಾಜಿ , ಗುರುಮಲ್ಲೇಶ್ವರಮಠದ ಸ್ವಾಮೀಜಿ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *