ಬೆಂಗಳೂರು
ವೀರಶೈವ ಮಹಾಸಭಾಕ್ಕೆ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಬರಲಿ ಎಂದು ಉದ್ಯಮಿ ಹಾಗೂ ಸಂಘಟನೆಯ ಉಪಾಧ್ಯಕ್ಷ ಪ್ರಭಾಕರ ಕೋರೆ ಹೇಳಿದ್ದಾರೆ.
“ಶಾಮನೂರು ಶಿವಶಂಕರಪ್ಪ ನಂತರ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆದರೆ ಸಮಾಜದಲ್ಲಿ ಭೇದ ಭಾವ ಮೂಡುತ್ತದೆ. ಎಲ್ಲರೂ ಒಟ್ಟಿಗೆ ಶಾಮನೂರು ಅವರ ಕೆಲಸ ಮುಂದುವರೆಸಬೇಕು,” ಎಂದು ಬುಧವಾರ ಬಸವ ಮೀಡಿಯಾಕ್ಕೆ ಹೇಳಿದರು.
ಕಳೆದ ಒಂದು ವಾರದಿಂದ ಕೆಲವು ವೈದಿಕ ಪತ್ರಿಕೆಗಳು ವೀರಶೈವ ಮಹಾಸಭಾದಲ್ಲಿ ಚುನಾವಣೆ ನಡೆಯಲಿದೆ ಎಂದು ವರದಿ ಮಾಡುತ್ತಿವೆ. ಈಶ್ವರ ಖಂಡ್ರೆ, ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ, ಪ್ರಭಾಕರ ಕೋರೆ ಈ ವರದಿಗಳಲ್ಲಿ ಮುಖ್ಯವಾಗಿ ಕೇಳಿ ಬರುತ್ತಿರುವ ಹೆಸರುಗಳು.
ಮಹಾಸಭಾದ ಹಿರಿಯ ಪದಾಧಿಕಾರಿಗಳೊಬ್ಬರ ಪ್ರಕಾರ ಈ ಪಟ್ಟಿಯಲ್ಲಿ ಗಂಭೀರವಾಗಿ ಪರಿಗಣಿಸಬಹುದಾದ ಅಭ್ಯರ್ಥಿಗಳೆಂದರೆ ಈಶ್ವರ ಖಂಡ್ರೆ ಮತ್ತು ಪ್ರಭಾಕರ ಕೋರೆ. “ಯಡಿಯೂರಪ್ಪ ಅವರಿಗೆ ವಯಸ್ಸು, ಅಗತ್ಯ ಎರಡೂ ಇಲ್ಲ. ಸುತ್ತೂರು ಸ್ವಾಮೀಜಿಯವರ ಬಗ್ಗೆ ಬಹಳ ಗೊಂದಲಗಳಿವೆ. ಅವರು ನಿಲ್ಲುವುದಿಲ್ಲ, ನಿಂತರೂ ಗೆಲ್ಲುವುದಿಲ್ಲ,” ಎಂದು ಹೇಳಿದರು.

ಮಹಾಸಭಾದ ಹಿರಿಯ ಉಪಾಧ್ಯಕ್ಷರಾಗಿರುವ ಸಚಿವ ಈಶ್ವರ ಖಂಡ್ರೆ ಶಾಮನೂರು ನಂತರ ಸಂಘಟನೆಯ ಮೇಲೆ ಹಿಡಿತವಿರುವ ವ್ಯಕ್ತಿ. ಅವರ ತಂದೆ ಭೀಮಣ್ಣ ಖಂಡ್ರೆಯವರ ಕಾಲದಿಂದಲೂ ಬೆಳೆದಿರುವ ಪ್ರಭಾವವನ್ನು ಯಶಸ್ವಿಯಾಗಿ ಉಳಿಸಿಕೊಂಡು ಬಂದಿದ್ದಾರೆ.
ಪ್ರಭಾಕರ ಕೋರೆ ಪ್ರಖ್ಯಾತ ಉದ್ಯಮಿ, ರಾಜ್ಯದ ಪ್ರಮುಖ ಲಿಂಗಾಯತ ಶಕ್ತಿ ಕೇಂದ್ರ ಬೆಳಗಾವಿಯ ಪ್ರಭಾವಿ. ಜೊತೆಗೆ ಸಮಾಜಕ್ಕೆ, ಮಹಾಸಭಾಕ್ಕೆ ಸಕ್ರಿಯವಾಗಿ ದುಡಿದಿರುವ ವ್ಯಕ್ತಿ. ಈ ಮೊದಲೇ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆಸಕ್ತಿ ತೋರಿಸಿದ್ದ ಅವರು ಶಾಮನೂರು ಅವರ ಹಿರಿತನಕ್ಕೆ ಬೆಲೆ ಕೊಟ್ಟು ಮತ್ತು ಸಮಾಜದ ಒಗ್ಗಟ್ಟಿನ ದೃಷ್ಟಿಯಿಂದ ಹಿಂದೆ ಸರಿದಿದ್ದರು.
ಬಸವ ಮೀಡಿಯಾದೊಂದಿಗೆ ಮಾತನಾಡುತ್ತ ಪ್ರಭಾಕರ ಕೋರೆ “ಸಮಾಜದಲ್ಲಿ ಮಾಡಬೇಕಾಗಿರುವ ಕೆಲಸಗಳು ಬಹಳಷ್ಟಿವೆ. ಉಪ ಪಂಗಡಗಳನ್ನು ಒಟ್ಟಿಗೆ ತರಬೇಕು. ಮುಂದುವರೆದ ಸಮಾಜ ಎಂದು ಬಿಂಬಿತವಾಗಿದ್ದರೂ ನಮ್ಮ ಜನ, ಮುಖ್ಯವಾಗಿ ಕಲ್ಯಾಣ ಕರ್ನಾಟಕದಲ್ಲಿ,ಬಹಳ ಹಿಂದೆ ಉಳಿದಿದ್ದಾರೆ,” ಎಂದು ಹೇಳಿದರು.
“ಇಷ್ಟೊಂದೆಲ್ಲಾ ಶಿಕ್ಷಣ ಸಂಸ್ಥೆಗಳಿದ್ದರೂ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ತೆರೆಯಬೇಕು. ಈ ಕೆಲಸ ಬೆಳಗಾವಿಯಲ್ಲಿ ಆಗಲೇ ಶುರು ಮಾಡಿದ್ದೇವೆ. ಸಮಾಜದಲ್ಲಿ ಶಿಕ್ಷಣ ಬೆಳೆಸಲು ಇನ್ನೂ ಅನೇಕ ಗಂಭೀರ ಪ್ರಯತ್ನಗಳು ನಡೆಯಬೇಕು. ಇಂತಹ ಸಂದರ್ಭದಲ್ಲಿ ಬಿರುಕು ಮೂಡಿಸಿಕೊಳ್ಳದೆ ಒಗ್ಗಟ್ಟಿನಿಂದ ಮುಂದುವರೆಯಬೇಕು,” ಎಂದು ತಿಳಿಸಿದರು.

Yes