ವೀರಶೈವ ಪದ ಬಂದದ್ದು 14ನೇ ಶತಮಾನದಿಂದ : ಬೆಲ್ದಾಳ ಶರಣರು

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ವೀರಶೈವ ಪದ ಬಂದದ್ದು 14ನೇ ಶತಮಾನದಿಂದ. 12ನೇ ಶತಮಾನದಲ್ಲಿ ಇದ್ದದ್ದು ಬರೀ ಲಿಂಗಾಯತ ಅಥವಾ ಲಿಂಗವಂತ ಎಂದು ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ಧರಾಮ ಶರಣರು ಬೆಲ್ದಾಳ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ಈಚೆಗೆ ಏರ್ಪಡಿಸಿದ್ದ ಮಾಸಿಕ ವಚನ ಮಂಟಪ, ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಹಾಗೂ ಮಹಾಜ್ಞಾನಿ ಮಹಾ ಪ್ರಕಾಶ ಬಸವಣ್ಣನ ಧರ್ಮವಯ್ಯ ಚಿಂತನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಈ ಕುರಿತು ಯಾರೊಂದಿಗೂ ದಾಖಲೆಗಳೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ. ನನ್ನ ಸತ್ಯ ಶರಣರು ಸತ್ಯ ಶೋಧ ಕೃತಿಯಲ್ಲಿ ವೀರಶೈವ ಹಾಗೂ ಲಿಂಗಾಯತದ ಬಗ್ಗೆ ವಿವರಿಸಿದ್ದೇನೆ ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ವಚನ ಸಾಹಿತ್ಯ ಆಡು ಭಾಷೆ, ಜನಪದ ಭಾಷೆಯಲ್ಲಿ ಇರುವ ವಿಶಿಷ್ಟ ಸಾಹಿತ್ಯವಾಗಿದೆ. ಇದೇ ಕಾರಣಕ್ಕಾಗಿ ಶರಣರ ವಚನಗಳಿಂದ 12ನೇ ಶತಮಾನದಲ್ಲಿ ಬಹಳ ದೊಡ್ಡ ಬದಲಾವಣೆ ತರಲು ಸಾಧ್ಯವಾಯಿತು ಎಂದು ಹೇಳಿದರು.

ವಚನ ಮಂಟಪದ ಮೂಲಕ ಶರಣರ ಕುರಿತು ಚಿಂತನ-ಮಂಥನ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬಸವಣ್ಣನವರ ಕಾರ್ಯವನ್ನು ಎಲ್ಲರೂ ಒಗ್ಗಟ್ಟು ಹಾಗೂ ಸ್ವಚ್ಛ ಮನಸ್ಸಿನಿಂದ ಮಾಡೋಣ ಎಂದು ಹೇಳಿದರು.

ಲಿಂಗಾಯತ ಮಹಾಸಭಾ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಬಸವತತ್ವದ ಕಾರ್ಯಗಳಲ್ಲಿ ನಿರತವಾಗಿದೆ. 2023ರಲ್ಲಿ ಬಸವಕಲ್ಯಾಣದಲ್ಲಿ ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನ, 2025 ರಲ್ಲಿ ಬೀದರ್‍ನಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದೆ. ಬರುವ ದಿನಗಳಲ್ಲಿ ಇನ್ನೂ ಅನೇಕ ಸಂಘಟನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಮಹಾಜ್ಞಾನ ಮಹಾ ಪ್ರಕಾಶ ಬಸವಣ್ಣನ ಧರ್ಮವಯ್ಯ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಕುರಿತು ಶಿಕ್ಷಕ ಶಿವಲಿಂಗ ಹೇಡೆ ವಿಶೇಷ ಉಪನ್ಯಾಸ ನೀಡಿದರು.

ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ ಹಾಗೂ ಪತ್ರಕರ್ತ ನಾಗಶೆಟ್ಟಿ ಧರಂಪುರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎರಡು ನಿಮಿಷಗಳ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಲಬುರಗಿ ವಲಯ ಸಂಚಾಲಕ ಕುಶಾಲರಾವ್ ಪಾಟೀಲ ಗಾದಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ದೇವಪ್ಪ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ನಿರ್ದೇಶಕ ರಾಜಕುಮಾರ ತರಿ, ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಬಸವರಾಜ ಭತಮುರ್ಗೆ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್ ಘಾಳೆ ಅವರನ್ನು ಸನ್ಮಾನಿಸಲಾಯಿತು.

ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ಅವರು ಸೆ. 3 ರಂದು ಬೀದರ್‍ನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಲೆಕ್ಕ ಪತ್ರ ಮಂಡಿಸಿದರು.

ಮನ್ನಾಎಖ್ಖೆಳ್ಳಿಯ ಮಾತೆ ಮೈತ್ರಾದೇವಿ ದಿವ್ಯ ಸಮ್ಮುಖ ವಹಿಸಿದ್ದರು. ಕೆ.ಆರ್.ಇ. ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಕಾರ್, ರಾಷ್ಟ್ರೀಯ ಬಸವದಳದ ಕೊಳಾರ್(ಕೆ) ಗ್ರಾಮ ಘಟಕದ ಅಧ್ಯಕ್ಷ ಅಶೋಕ್ ಶಂಭು ಮತ್ತಿತರರು ಇದ್ದರು.

ಉದ್ಯಮಿ ಕಂಟೆಪ್ಪ ಗಂದಿಗುಡಿ ವಚನ ಗಾಯನ ನಡೆಸಿಕೊಟ್ಟರು. ದಿ. ಗ್ರೇನ್ ಆ್ಯಂಡ್ ಸೀಡ್ಸ್ ಮಚರ್ಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ ದಾಸೋಹ ಸೇವೆಗೈದರು.

ವಿಜಯಕುಮಾರ ಪಾಟೀಲ ಸ್ವಾಗತಿಸಿದರು. ಮಹಾಸಭಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜಯದೇವಿ ಯದಲಾಪುರೆ ನಿರೂಪಿಸಿದರು. ಬಸವ ದಳದ ರವಿ ಪಾಪಡೆ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *