ಕಲಬುರಗಿ
ಲಿಂಗೈಕ್ಯ ಶರಣಬಸವಪ್ಪ ಅವರ ಲಿಂಗ ಶರೀರದ ಮೇಲೆ (ತಲೆ ಮೇಲೆ) ಸ್ವಾಮಿಗಳು ಕಾಲಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ? ಬಸವಣ್ಣ ಕಟ್ಟಿದ ಕಲ್ಯಾಣ ನಾಡು ಈಗ ಏಕಿಲ್ಲ? ಬಸವ ಕಲ್ಯಾಣದಲ್ಲಿ ನಡೆಯಲಿರುವ ದಸರಾ ದರ್ಬಾರ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಸಮಾನತೆ ತಂದ ಬಸವಣ್ಣನವರನ್ನು ಕೆಲವರು ಈಗಲೂ ವಿರೋಧಿಸುತ್ತಾರಲ್ಲ ಏಕೆ? ಮಠಾಧೀಶರಾಗಿ ನೀವೇನು ಮಾಡುತ್ತಿದ್ದೀರಿ? ವೀರಶೈವ ಲಿಂಗಾಯತ ಹೇಗೆ ಬೇರೆ? ಎಂಬಿತ್ಯಾದಿ ಪ್ರಶ್ನೆಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಶ್ನೆಗಳು ತೂರಿ ಬರುತ್ತಿದ್ದರೆ ವೇದಿಕೆಯಲ್ಲಿ ಕುಳಿತ ಸ್ವಾಮಿಗಳು ತಬ್ಬಿಬ್ಬಾದರು.

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದ ಲಿಂ. ಬಸವರಾಜಪ್ಪ ಅಪ್ಪ ಸ್ಮಾರಕ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಈ ಪ್ರಸಂಗ ಜರುಗಿತು.
ವಿದ್ಯಾರ್ಥಿಗಳ ಈ ಪ್ರಶ್ನೆಗೆ ಬಹಳಷ್ಟು ಸಮಾಧಾನ ಹಾಗೂ ಶಾಂತಚಿತ್ತದಿಂದ ಸಾಣೇಹಳ್ಳಿ, ಗದಗ, ಭಾಲ್ಕಿ ಶ್ರೀಗಳು ಉತ್ತರಿಸಿದರು.
“ಬಸವ ಸಿದ್ಧಾಂತದಲ್ಲಿ ಚೈತನ್ಯಕ್ಕೆ ಮಹತ್ವವಿದೆ. ಜಂಗಮ ಸ್ವಾಮಿಗಳಿಗೆ ವಿವೇಕ ಕಡಿಮೆ ಇದೆ. ಪೂಜ್ಯ ಲಿಂ. ಶರಣಬಸಪ್ಪ ಅಪ್ಪ ಲಿಂಗ ಶರೀರದ ತಲೆಯ ಮೇಲೆ ಪಾದವಿಟ್ಟಿರುವುದು ಅವಿವೇಕದ ಪರಮಾವಧಿ” ಎಂದು ಸಾಣೇಹಳ್ಳಿ ಶ್ರೀಗಳು ತಿಳಿಸಿದರು.
“ಜಾತಿ ತಾರತಮ್ಯ ಮಾಡುವವರು ಲಿಂಗಾಯತರಲ್ಲ. ಲಿಂಗಾಯತ ಜಾತಿ ಅಲ್ಲ. ಅದೊಂದು ಕನ್ನಡ ನೆಲದ ಧರ್ಮ, ತತ್ವ ಸಿದ್ಧಾಂತ” ಎಂದು ಗದಗ ಶ್ರೀಗಳು ಹೇಳಿದರು.

“ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ರಾಜ್ಯ ಸರ್ಕಾರ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮರು ಪರಿಶೀಲನೆಗೆ ಮತ್ತೆ ಕಳಿಸಲಿದೆ” ಎಂದು ಭಾಲ್ಕಿ ಶ್ರೀಗಳು ತಿಳಿಸಿದರು.
ಬಸವ ಚಳವಳಿಯ ಭಕ್ತಿ, ಕಾಯಕ, ಸಮಾನತೆ ಶಿಕ್ಷಣದಲ್ಲಿ ಯಾಕಿಲ್ಲ? ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಮದ್ದೇನು? ಲಿಂಗಾಯತ ಧರ್ಮದಲ್ಲಿ ಏಕರೂಪದ ಸಂಸ್ಕೃತಿ ಯಾಕಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನು ಗುರುರಾಜ, ಸೃಷ್ಟಿ ಬಿರಾದಾರ, ಡಾ. ಕಾಮೇಶ, ಅಯ್ಯಣ್ಣಗೌಡ ಪಾಟೀಲ, ಸಂಜನಾ, ಗುಂಡಮ್ಮ, ಡಾ.ಮಹಾಂತೇಶ ಕುಂಬಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು.