ಸನಾತನಿಗಳ ವಿರೋಧ ಬಸವಾಭಿಮಾನಿಗಳ ಒಗ್ಗಟ್ಟಿಗೂ ಕಾರಣವಾಗಿದೆ
ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಲು ಮುಂದಾಗಿವೆ.
ಲಿಂಗಾಯತ ಪೂಜ್ಯರ, ಮುಖಂಡರ, ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.
ಈ ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ಪ್ರೊ. ಪಂಚಾಕ್ಷರಿ ಹಳೇಬೀಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.
1) ಅಭಿಯಾನದ ಮೇಲೆ, ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಉದ್ವೇಗ ಬಂದಿರುವುದು ಯಾಕೆ?
ಅಭಿಯಾನ ಕೇವಲ ಒಂದು ನೆಪ ಅಷ್ಟೆ! ೧೨ನೇ ಶತಮಾನದಿಂದಲೂ ಕೂಡ ಇಂಥಾ ಹೀನ ಮನಸ್ಸಿನ ಮನುವಾದಿಗಳು, ಶರಣರನ್ನು ಕಾಡುತ್ತಲೇ ಬಂದಿವೆ. ಈಗ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳು ಹನ್ನೆರಡನೇ ಶತಮಾನದ ಮುಂದುವರೆದ ಭಾಗವಷ್ಟೆ.
ಅವರು ಪ್ರಗತಿಪರ ಚಿಂತನೆಗಳನ್ನು ಒಪ್ಪುವುದಿಲ್ಲ, ಸಮಾನತೆಯನ್ನು ಒಪ್ಪುವುದಿಲ್ಲ, ವಿಜ್ಞಾನ ಅವರಿಗೆ ಕತ್ತಲು, ಅಜ್ಞಾನವೇ ಅವರ ಬೆಳಕು. ಅವರ ಪ್ರಕಾರ ಹಿಂದುತ್ವವೆಂದರೆ ಸನಾತನ, ಸನಾತನವೆಂದರೆ ಶಾಶ್ವತ. ಅಂದರೆ ಬದಲಾವಣೆ ಇಲ್ಲದ್ದು, ಅಂದರೆ ವೈಜ್ಞಾನಿಕ, ವೈಚಾರಿಕ ಹಾಗೂ ಪ್ರಗತಿಪರ ಚಿಂತನೆಗಳ ವಿರುದ್ಧ.
ವಿಜ್ಞಾನ ಅವರಿಗೆ ಕತ್ತಲು, ಅಜ್ಞಾನವೇ ಅವರ ಬೆಳಕು.
ಲಿಂಗಾಯತ ಸ್ವಾಮೀಜಿಗಳು ಬಸವಾದಿ ಶರಣರ ವಸ್ತುನಿಷ್ಠ ವೈಜ್ಞಾನಿಕ, ವೈಚಾರಿಕ ಹಾಗೂ ಪ್ರಗತಿಪರ ಚಿಂತನೆಗಳ ವಿಚಾರಗಳನ್ನು ಸಮಾಜದ ಮುಂದಿಟ್ಟು ಜನಜಾಗೃತಿಯಲ್ಲಿ ತೊಡಗಿರುವುದು ಸನಾತನಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಈ ಉದ್ವೇಗ!
2) ಲಿಂಗಾಯತರ ಮೇಲೆ ಕೆಲವು ಸ್ವಾಮೀಜಿಗಳನ್ನು, ನಾಯಕರನ್ನು ಛೂ ಬಿಟ್ಟಿದ್ದಾರೆ. ಲಿಂಗಾಯತರ ವಿರುದ್ಧ ಸಮಾವೇಶ, ಹೋರಾಟ ಮಾಡುವ ಬೆದರಿಕೆ ಹಾಕಿದ್ದಾರೆ. ಇವರ ಉದ್ದೇಶವೇನು?
ಮುಗ್ಧ ಲಿಂಗಾಯತರ ಮನಸ್ಸಿನಲ್ಲಿ ಬಸವಾದಿ ಶರಣರ ಆದರ್ಶಗಳಿಗೆ ವಿರುದ್ಧವಾದ ಗೊಂದಲಕಾರಿ ವಿಚಾರಗಳನ್ನು ಬಿತ್ತುವುದರ ಮೂಲಕ ಲಿಂಗಾಯತ ಸಮಾಜವನ್ನು ಒಡೆಯುವುದು, ಸಮಾಜವನ್ನು ವರ್ಗೀಕರಿಸಿ ತಾರತಮ್ಯದ ವಾತಾವರಣವನ್ನು ಉಳಿಸಿ ಬೆಳೆಸುವುದು ಇವರ ಉದ್ದೇಶ. ಲಿಂಗಾಯತ ಸಮಾಜವನ್ನು ಒಡೆಯುವುದೇ ಅವರ ಪ್ರಮುಖ ಗುರಿ. ಇದು ಮಾಡದಿದ್ದಲ್ಲಿ ಅವರ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಹಿತಾಸಕ್ತಿಯ ಬೇಳೆ ಬೇಯುವುದಿಲ್ಲ.
ಯಾವ ಅವ್ಯವಸ್ಥೆಯ ವಿರುದ್ಧ ಗುರು ಬಸವಣ್ಣನವರು ಸುವ್ಯವಸ್ಥಿತ ಸಮಾಜವನ್ನು ನಿರ್ಮಿಸಿದ್ದರೋ ಅಂಥಾ ಬಸವಣ್ಣನವರ ವಿರುದ್ಧ ಅಂದಿನ ಸನಾತನಿಗಳು ಕಲ್ಯಾಣಕ್ರಾಂತಿಗೆ ಕಾರಣರಾದರು. ಇಂದೂ ಕೂಡ ಇಂದಿನ ಬಸವಾಭಿಮಾನಿಗಳ ವಿರುದ್ಧ ಅದೇ ಸಂಕುಲ ವಿಷಕಾರುತ್ತಿರುವುದು ಅತ್ಯಂತ ಸ್ಪಷ್ಟ.
ಬಸವಣ್ಣನವರ ವಿರುದ್ಧ ಅಂದಿನ ಸನಾತನಿಗಳು ಕಲ್ಯಾಣಕ್ರಾಂತಿಗೆ ಕಾರಣರಾದರು
ಕನ್ನೇರಿ ಸ್ವಾಮಿಯ ಹೀನ ಹೇಳಿಕೆಯನ್ನು ಇದುವರೆಗೂ ಒಬ್ಬನೇ ಒಬ್ಬ ಸನಾತನ ಮಾರ್ಗಿ ಖಂಡಿಸದೇ ಆ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಅವರ ಸಂಸ್ಖೃತಿಯನ್ನು ಜಗಜ್ಜಾಹೀರುಗೊಳಿಸಿದೆ.
3) ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಮೇಲೆ ಬಳಕೆಯಾಗುತ್ತಿರುವ ಭಾಷೆಗೆ ನಿಮ್ಮ ಪ್ರತಿಕ್ರಿಯೆ ಏನು?
ಇವರು ಜಗತ್ತಿನೆದುರು ಬೆತ್ತಲಾಗಿದ್ದಾರೆ.
ಅವರ ಅಸಂಸದೀಯ, ಅಸಭ್ಯ ಭಾಷೆಯು ಅವರ ಹೀನ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದೆ. ಲಿಂಗಾಯತ ಸ್ವಾಮೀಜಿಗಳು, ಧರ್ಮಾನುಯಾಯಿಗಳು ಅವರ ಹಾಗೆ ಕಳಪೆ ಮಾತು ಆಡದಿರುವುದರಿಂದ ಲಿಂಗಾಯತ ಸ್ವಾಮೀಜಿಗಳ ಘನವ್ಯಕ್ತಿತ್ವ ಬೆಳಕಿಗೆ ಬರುತ್ತಿರುವುದು ಸುದೈವ.
ಮಾತೆಂಬುದು ಜ್ಯೋತಿರ್ಲಿಂಗ ಸ್ವರವೆಂಬುದು ಪರತತ್ವ ಎಂಬ ಪ್ರಭುವಾಣಿ, ನುಡಿದರೆ ಮುತ್ತಿನ ಹಾರದಂತಿರಬೇಕು ….. ನುಡಿದರೆ ಲಿಂಗಮೆಚ್ಚಿ ಅಹುದಹುದೆನುವಂತಿರಬೇಕು ಎಂಬ ಗುರು ಬಸವವಾಣಿಯ ಪಥವಿಡಿದು ಸಾಗುವ ಯಾವ ಲಿಂಗಾಯತನೂ ಕೂಡ ಅವರಂತೆ ಕೀಳುಮಟ್ಟದ ಪದಪ್ರಯೋಗ ಮಾಡಬಾರದು.
ನಮ್ಮ ಅರಿವಿಗೆ ತಕ್ಕುದಾಗಿ ನಾವು ಪದಬಳಕೆ ಮಾಡಬೇಕು, ಆಕ್ರೋಶದಿಂದ ಅಸಭ್ಯ ಭಾಷೆ ಬಳಸಿದಲ್ಲಿ ನಮ್ಮ ಅರಿವಿಗೆ ಹಾನಿ.
ಇವರು ಜಗತ್ತಿನೆದುರು ಬೆತ್ತಲಾಗಿದ್ದಾರೆ.
4) ಈ ಸಂದರ್ಭದಲ್ಲಿ ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಪರವಾಗಿ ಬಸವ ಸಂಘಟನೆಗಳು ನಿಲ್ಲಬೇಕೆ? ಅವರೇನು ಮಾಡಬೇಕು?
ಖಂಡಿತವಾಗಿಯೂ ಎಲ್ಲ ಬಸವಾನುಯಾಯಿಗಳೂ, ಬಸವಪರ ಸಂಘಟನೆಗಳೂ, ಅಷ್ಟೇ ಅಲ್ಲ, ಎಲ್ಲಾ ವೈಚಾರಿಕ, ವೈಜ್ಞಾನಿಕ, ಪ್ರಗತಿಪರ ನಿಲುವುಳ್ಳ ಸಂಘಟನೆಗಳೂ ಕೂಡ ಲಿಂಗಾಯತ ಸ್ವಾಮೀಜಿಗಳ ಪರ ನಿಲ್ಲಬೇಕು. ಇದರಿಂದ ಅವುಗಳ ತಾತ್ವಿಕ ಬದ್ಧತೆ ದೃಢೀಕರಿಸಿದಂತಾಗುತ್ತದೆ.

5) ಈ ಬೆಳವಣಿಗೆಗೆಳಿಂದ ಲಿಂಗಾಯತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆ ಬಂದಿದೆಯೇ? ಅದನ್ನು ಉಳಿಸಿಕೊಳ್ಳುವುದು ಹೇಗೆ?
ಮುಗ್ಧ ಲಿಂಗಾಯತರ ಮನದಲ್ಲಿ ಕೆಲವೊಂದು ಗೊಂದಲಗಳು ತಾತ್ಕಾಲಿಕವಾಗಿ ಉಂಟಾಗಿರಬಹುದು ಅಷ್ಟೆ. ಅದರಿಂದ ಯಾವುದೇ ದುಷ್ಪರಿಣಾಮ ಸಮಾಜದ ಮೇಲೆ ಉಂಟಾಗದು. ಸಮುದ್ರದಲ್ಲಿ ಏಳುವ ಅಲೆಗಳಂತೆ ಇಂಥಾ ಅಲೆಗಳು ಎದ್ದು ಮಾಯವಾಗುತ್ತವೆ. ಹಾಗೂ ಇಂಥಾ ಅಲೆಗಳು ಸಮುದ್ರದ ಕಸವನ್ನು ದಡಕ್ಕೆ ತಂದೆಸೆಯುವಂತೆ ಇಂಥಾ ಕೆಲವು ಘಟನೆಗಳು ಬಸವಾಭಿಮಾನಿಗಳ ಒಗ್ಗಟ್ಟಿಗೂ ಕಾರಣವಾಗುತ್ತವೆ.
ಮತ್ತು ಸಮಾಜದಲ್ಲಿ ಅಜಾಗ್ರತೆಯಿಂದ ಬೆಳೆದುಬಂದ ಪಾದಪೂಜೆಯಂಥ ಅನಗತ್ಯ ಆಚರಣೆಗಳನ್ನು ನಮ್ಮ ಸಮಾಜದಿಂದ ಹೊರದಬ್ಬಲು ಪ್ರೇರೇಪಿಸುತ್ತವೆ. ಆಗಿಂದಾಗ್ಗೆ ಇಂಥಾ ಹೊಲಸು ಮನಸುಗಳಿಂದ ಸಮಾಜದ ಮೇಲೆ ಈ ತರಹದ ಮಂಜು ಕವಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ ಆದರೆ ಬಸವಸೂರ್ಯನ ಬೆಳಕಿನೆದುರು ಆ ಮಂಜು ಸದ್ದಿಲ್ಲದೆ ಕರಗಿ ಹೋಗುತ್ತದೆ, ಬಸವ ಬೆಳಕು ವಿಶ್ವವ್ಯಾಪಿಯಾಗುವುದರಲ್ಲಿ ಯಾವುದೇ ಸಂದೇಹ ಬೇಡ.
ಹೊಲಸು ಮನಸುಗಳಿಂದ ಸಮಾಜದ ಮೇಲೆ ಮಂಜು
ಕವಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ
6) ಸಾರ್ವಜನಿಕ ಸಂವಾದದಲ್ಲಿ ನಾವೂ ಸಭ್ಯತೆ ಕಳೆದುಕೊಳ್ಳಬೇಕೇ? ನಮ್ಮ ಸೈದ್ಧಾಂತಿಕ ವಿರೋಧಿಗಳ ಮೇಲೆ ಇದೇ ಭಾಷೆ ಬಳಸಬೇಕೇ?
“ಹಂದಿಯೂ ಮದಕರಿಯೂ ಒಂದೇ ದಾರಿಯಲ್ಲಿ ಸಂಧಿಸಿದಡೆ ಹಂದಿಗಂಜಿ ಮದಕರಿ ಕೆಲಕ್ಕೆ ಸಾರಿದಡೆ ಈ ಹಂದಿಯದು ಕೇಸರಿಯಪ್ಪುದೆ ಚೆನ್ನಮಲ್ಲಿಕಾರ್ಜುನಾ? ಎಂದು ಜಗನ್ಮಾತಾ ಅಕ್ಕಮಹಾದೇವಿಯವರು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಇದರ ಮರ್ಮವರಿತು ನಾವು ನಮ್ಮ ನಡೆನುಡಿಯನ್ನು ರೂಪಿಸಿಕೊಳ್ಳಬೇಕು.
7) ಈ ಸಮಯದಲ್ಲಿ ಬಸವಾದಿ ಶರಣರಿದ್ದರೆ ಏನು ಮಾಡುತ್ತಿದ್ದರು?
ಇಂದಿನದು ಅಂದಿನ ಪುನರಾವರ್ತನೆ! ಅಂದೂ ಇಂತಹದೇ ಘಟನೆಗಳು ನಡೆದದ್ದು ನಮಗೆ ನೆನಪಿದೆ.
ಕಲ್ಯಾಣ ಕ್ರಾಂತಿ ಘಟಿಸಿದ್ದೂ ಇಂಥಾ ಕೊಳಕು ಮನಸ್ಸಿನ ಅವಿವೇಕಿಗಳಿಂದಲೇ ಅಲ್ಲವೇ? ಅಂದು ನಮ್ಮ ಶರಣರು ಏನು ಮಾಡಿದರು? ಹೋರಾಡಲು ಶಕ್ತಿಯಿದ್ದವರು ಹೋರಾಡಿ ವಚನ ಸಾಹಿತ್ಯ ಉಳಿಸಿದರು, ಅವರ ಪರಂಪರೆಯ ಸಂತಾನಿಗಳಾದ ನಾವು ಇಂದು ಅದನ್ನೇ ಮಾಡಬೇಕಿದೆ. ಆದರೆ ಭಾಷೆಯ ಮೇಲೆ ಹಿಡಿತವಿರಬೇಕು, ಸಾತ್ವಿಕವಾಗಿರಬೇಕು, ನಮ್ಮ ನಡೆನುಡಿಗಳಿಂದ ಶರಣರ ಹೆಸರಿಗೆ ಕಳಂಕ ಹಚ್ಚದಂತಿರಬೇಕು.

ಅಭಿಪ್ರಾಯ ಸರಿಯಾಗಿ ಮಂಡನೆ ಮಾಡಿದ್ದಾರೆ. ಶರಣರು ಇದ್ದಿದ್ದರೆ ಅನ್ನೋ ಮಾತೇ ಇಲ್ಲ. ಎಮ್ಮವರಿಗೆ ಸಾವಿಲ್ಲ ಅವರು ತಮ್ಮ ಚಿಂತನೆಗಳ ಮೂಲಕ ಜೀವಂತವಾಗಿದ್ದಾರೆ. ಅವರ ಪ್ರತಿ ರೂಪವೇ ನಮ್ಮ ಲಿಂಗಾಯತ ಮಠಾಧೀಶರು..
ನಮ್ಮ ದೇಶ ಕುವೆಂಪು ಹೇಳಿದ ಹಾಗೆ, “ಸರ್ವ ಜನಾಂಗದ ಶಾಂತಿಯ ತೋಟ”ವನ್ನು, ಸಮುದಾಯಗಳ ನಡುವೆ ದ್ವೇಷ ಹುಟ್ಟಿಸಿ “ಒಂದೆ ಜನಾಂಗದ ಸಂಘರ್ಷದ ತೋಟ” ಮಾಡಲು ಹೋರಟಿದ್ದಾರೆ.
ಸದಾಚಾರ ಸದ್ಗುಣಗಳನ್ನು ಮೈಗೂಡಿಸಿಕೊಂಡ ಬಸವಾನುಯಾಯಿಗಳು ಇಂತಹಕ್ಕೆಲ್ಲ ಬಾಗುವುದಿಲ್ಲ
ಬಸವ ತತ್ವವೆಂಬ ಅನಾದಿ ಬೆಳಕು ವಿಶ್ವವ್ಯಾಪಿ
ಅರಿವಾಗಿದೆ ಆಚರಣೆಗೆ ಸಮಯ ಬೇಕಾಗುತ್ತದೆ
ಬದುಕು ಮತ್ತು ಪಾರಮಾರ್ಥ ಸಾಧಿಸುವ ಬಸವಾದಿ ಪ್ರಮಥರ ಘನತತ್ಪ 21ನೇ ಶತಮಾನದ ಬೆಳಕು🙏🙏
ಸದಾಚಾರ ಸದ್ಗುಣಗಳನ್ನು ಮೈಗೂಡಿಸಿಕೊಂಡ ಬಸವಾನುಯಾಯಿಗಳು ಇಂತಹಕ್ಕೆಲ್ಲ ಬಾಗುವುದಿಲ್ಲ
ಬಸವ ತತ್ವವೆಂಬ ಅನಾದಿ ಬೆಳಕು ವಿಶ್ವವ್ಯಾಪಿ
ಅರಿವಾಗಿದೆ ಆಚರಣೆಗೆ ಸಮಯ ಬೇಕಾಗುತ್ತದೆ
ಬದುಕು ಮತ್ತು ಪಾರಮಾರ್ಥ ಸಾಧಿಸುವ ಬಸವಾದಿ ಪ್ರಮಥರ ಘನತತ್ಪ 21ನೇ ಶತಮಾನದ ಬೆಳಕು🙏🙏