ವಿಜಯಪುರ
ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಾಲು ಮತ್ತು ಹಣ್ಣು ಕೊಡುವುದರ ಮೂಲಕ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ, ಕಾಯಕಯೋಗಿ ಶಿಕ್ಷಣ ಸಂಸ್ಥೆ, ಮಾನವ ಬಂಧುತ್ವ ವೇದಿಕೆ ಸಂಘಟನೆಗಳು ಮಂಗಳವಾರ ‘ಬಸವ ಪಂಚಮಿ’ ಆಚರಿಸಿದವು.

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಹರ್ನಾಳ ಮಾತನಾಡುತ್ತಾ, “ಬಸವಣ್ಣನವರು ಲಿಂಗೈಕ್ಯವಾದ ದಿನವನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ. ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು; ದಿಟನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ನುಡಿಯಂತೆ ದೇವಸ್ಥಾನಗಳಲ್ಲಿ ಕಲ್ಲನಾಗರ ಹಾವಿಗೆ ಹಾಲೆರೆಯುತ್ತಾರೆ. ಆದರೆ ನಿಜ ಹಾವನ್ನು ಕಂಡರೆ ಹೊಡೆಯುವುದು ಸರಿಯೇ? ಇದರ ಬದಲಾಗಿ ಹಸಿದವರಿಗೆ, ಅನಾರೋಗ್ಯ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲನ್ನು ನೀಡಿದರೆ ಒಳ್ಳೆಯದು” ಎಂದರು.

ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಂಡಗುಳಿ, ಉಪಾಧ್ಯಕ್ಷ ಹಣಮಂತ ಚಿಂಚಲಿ, ಕಾರ್ಯದರ್ಶಿ ಪ್ರಭುಗೌಡ ಪಾಟೀಲ, ಕುಮಾರಗೌಡ ಹರ್ನಾಳ, ಶ್ವೇತಾ ಹರ್ನಾಳ, ಫಯಾಜ್ ಕಲಾದಗಿ, ಡಾ. ರವಿ ಬಿರಾದಾರ, ಅಶೋಕ ಸೌದಾಗರ್, ರವಿ ಕಿತ್ತೂರ, ಚಂದ್ರಶೇಖರ ಗಂಟೆಪ್ಪಗೋಳ, ಚನ್ನು ಕಟ್ಟಿಮನಿ, ಮಹಾದೇವಿ ಗೋಕಾಕ, ಸವಿತಾ ಬಬಲೇಶ್ವರ, ಶಶಿಕಲಾ ಕೊಟಗಿ ಮತ್ತಿತರರು ಉಪಸ್ಥಿತರಿದ್ದರು.