ವಿಜಯಪುರ: ಅದ್ದೂರಿ ಕಾರ್ಯಕ್ರಮದಲ್ಲಿ ವಚನ ದರ್ಶನ ಪುಸ್ತಕ ಲೋಕಾರ್ಪಣೆ

ವಿಜಯಪುರ

ಬಸವ ಸಂಘಟನೆಗಳ ವಿರೋಧದ ನಡುವೆ ಸಂಘ ಪರಿವಾರ ಪ್ರಾಯೋಜಿತ ವಚನ ದರ್ಶನ ಪುಸ್ತಕ ಗುರುವಾರ ನಗರದಲ್ಲಿ ಬಿಡುಗಡೆಯಾಯಿತು.

ಈ ಕಾರ್ಯಕ್ರಮವನ್ನು ಬಹಿಷ್ಕರಿಸಲು ಬಸವಾದಿ ಶರಣರ ಸಂಘಟನೆಗಳ ಒಕ್ಕೂಟ ಎರಡು ಬಾರಿ ಸುದ್ದಿಗೋಷ್ಠಿ ನಡೆಸಿ ಕರೆಕೊಟ್ಟಿದವು. ಇದಕ್ಕೆ ಸ್ಪಂದಿಸಿ ಕಾರ್ಯಕ್ರಮದಲ್ಲಿ ವಿರಕ್ತ ಮಠಗಳ ಸ್ವಾಮೀಜಿಗಳು, ಜ್ಞಾನಯೋಗಾಶ್ರಮದ ಶ್ರೀಗಳೂ ಸೇರಿದಂತೆ ಅನೇಕರು ಭಾಗವಹಿಸಿರಲಿಲ್ಲ.

ಇಲ್ಲಿನ ಸಂಗನ ಬಸವ ಕಲ್ಯಾಣ ಮಂಟಪದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚಿಗೆ ಜನ ಸೇರಿದ್ದರು. ಅವರಲ್ಲಿ ಬಹುತೇಕವಾಗಿ ಸಂಘ ಪರಿವಾರದ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು, ಮುಖ್ಯವಾಗಿ ಸ್ಥಳೀಯ ಎಂ ಎಲ್ ಎ ಬಸನಗೌಡ ಯತ್ನಾಳ್ ಅವರ ಹಿಂಬಾಲಕರು, ಕಾಣಿಸುತ್ತಿದ್ದರು. ವೀರಶೈವ ಮಹಾಸಭೆಯ ಪ್ರತಿನಿಧಿಗಳೂ, ವೀರಶೈವ ಮಠಗಳ ಸ್ವಾಮೀಜಿಗಳೂ ವೇದಿಕೆ ಮೇಲೆ ಇದ್ದರು.

ಭಾಷಣ ಮಾಡಿದ ಆಲಮೇಲದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ವಚನ ದರ್ಶನವನ್ನು ಪ್ರಶಂಸಿಸಿದರು. ಸಂಸ್ಥಾನ ಬೃಹನ್ಮಠದ ಗುರಲಿಂಗ ಶಿವಾಚಾರ್ಯ ಸ್ವಾಮಿಗಳು ತಾವು ತಾಳಿಕೋಟಿಯ ಆರ್ ಎಸ್ ಎಸ್ ಕಾರ್ಯಕರ್ತರ ಜೊತೆಯೇ ಕಾರ್ಯಕ್ರಮಕ್ಕೆ ಬಂದಿರುವುದಾಗಿ ಘೋಷಿಸಿದರು. ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ವಚನಗಳು ವೇದಗಳ ಪ್ರೇರಣೆಯಿಂದಲೇ ಹುಟ್ಟಿದ್ದು ಎಂದು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಭಾರತೀಯ ಶಿಕ್ಷಣ ಮಂಡಲದ ಸಂಘಟನಾ ಕಾರ್ಯದರ್ಶಿ ಬಿ.ಆರ್. ಶಂಕರಾನಂದರು ಮಾತನಾಡಿ, ವಚನ ಪರಂಪರೆ ಚಳುವಳಿ, ಕ್ರಾಂತಿಯಾಗಿರದೆ ಕೇವಲ ಆತ್ಮ ಸಾಕ್ಷಾತ್ಕಾರದ ಸಾಧನೆಯಾಗಿತ್ತು ಎಂದರು.

ಪ್ರವೇಶ ದ್ವಾರದಲ್ಲಿ ಭಗವವಾಧ್ವಜ ಹಿಡಿದಿರುವ ಅಖಂಡ ‘ಭಾರತ ಮಾತೆ’ಯ ಫೋಟೋ ಮುಂದೆ ಇಟ್ಟಿದ್ದ ದೊಡ್ಡ ವಿಭೂತಿ ಗಟ್ಟಿ, ಇನ್ನೊಂದು ಕಡೆ ಶಿವ ಪಾರ್ವತಿಯರ ಚಿತ್ರದ ಕೆಳಗೆ ಬಿಡಿಸಿದ್ದ ಬಸವಾದಿ ಶರಣರ ಚಿತ್ರಗಳು ಬಂದಿದ್ದವರ ಗಮನ ಸೆಳೆದವು.

Share This Article
1 Comment
  • ಲಿಂಗಾಯತ ಧರ್ಮ ವೈದಿಕರ ಧರ್ಮ ಮಾಡಲು ಹೊರಟಿದ್ದಾರೆ. ಲಿಂಗಾಯತ ಬಸವ ಪರಂಪರೆ ಸ್ವಾಮಿಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ವಿಪರ್ಯಾಸ ಸುಮ್ಮನೆ ಕುಳಿತಿದ್ದಾರೆ.

Leave a Reply

Your email address will not be published. Required fields are marked *