ಬಸವಣ್ಣನವರ ಪುರುಷ ಅಹಂಕಾರದ ಮಾತು ಆತುರದ ಅಭಿಪ್ರಾಯ

ಶರಣರು ಹೆಣ್ಣು ಗಂಡಿನ ಗಡಿರೇಖೆಯನ್ನೇ ಅಳಿಸಿ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲವೆಂದು ಲಿಂಗತಾರತಮ್ಯವನ್ನೇ ತೊಡೆದರು

ಬೆಳಗಾವಿ

ಹನ್ನೆರಡನೆಯ ಶತಮಾನದ ಶರಣರನ್ನು ಮತ್ತು ಶರಣತತ್ವ ಸಿದ್ಧಾಂತಗಳ ಬೀಜ ಸ್ವರೂಪವಾದ ವಚನ ಸಾಹಿತ್ಯವನ್ನು ಕುರಿತು ವಿಮರ್ಶೆ ಮಾಡುವಾಗ ಗಮನಿಸಬೇಕಾದ ಅಂಶವೆಂದರೆ ಅದು ಅನುಭಾವಿಕ ನೆಲೆಯಲ್ಲಿ ರೂಪಗೊಂಡಿರುವ ಸಾಹಿತ್ಯ. ಲೌಕಿಕ ಬದುಕಿನ ಇನ್ನಿತರ ಯಾವುದೇ ಸಾಹಿತ್ಯ ರಚನೆಗಳಿಗೂ ಹಾಗೂ ಶರಣರ ವಚನ ಸಾಹಿತ್ಯ ರಚನೆಗೂ ನಡುವೆ ಅತ್ಯಂತ ಮಹತ್ವದ ವ್ಯತ್ಯಾಸವಿದೆ ಎನ್ನುವ ಎಚ್ಚರವನ್ನ ವಹಿಸುವುದು ಕೂಡಾ ಮುಖ್ಯವಾಗಿದೆ.

ಲೌಕಿಕ ಬದುಕಿನ ಸಾಹಿತ್ಯವು ಆಯಾ ಸಾಹಿತ್ಯದ ರಚನೆಕಾರರ ಬದುಕಲ್ಲಿನ ಅನುಭವ, ಅಧ್ಯಯನ ಹಾಗೂ ಅವರುಗಳ ಪ್ರತಿಭೆಯ ಒಟ್ಟಂದದ ಸೃಜನಶೀಲ ಶಕ್ತಿಯ ಪ್ರತಿಫಲವಾಗಿ, ಸಿದ್ಧ ಮಾದರಿಯ ಅರ್ಥ ಉಳ್ಳ ಭಾಷೆಯನ್ನು ಬಳಸಿಕೊಂಡು ರೂಪಗೊಂಡಿರುವ ಲೌಕಿಕ ಜೀವನದ ಸಾಹಿತ್ಯವಾಗಿರುತ್ತದೆ.

ಆದರೆ ಶರಣರು ರಚಿಸಿರುವ ವಚನ ಸಾಹಿತ್ಯವು ಮಾತ್ರ ಲೌಕಿಕದ ಬದುಕಿನ ಆ ಸಾಹಿತ್ಯಕ್ಕಿಂತಲೂ ಇಹಪರ ಬದುಕಿನ ತಾತ್ವಿಕ ಸೈದ್ಧಾಂತಿಕ, ಪ್ರಾಯೋಗಿಕ ಜೀವನದ ಅನುಭವ ಹಾಗೂ ಅನುಭಾವಿಕ ಸಂವೇದನೆಯ ರೀತಿಯ ನೆಲೆಯಲ್ಲಿ ರೂಪ ಗೊಳ್ಳುತ್ತದೆ. ಇದರ ಜೊತೆಗೆ ವಚನಗಳು ಶರಣರು ತಮ್ಮ ಸೃಜನ ಶೀಲ ಅಭಿವ್ಯಕ್ತಿಗಾಗಿ ಲಭ್ಯವಿರುವ ಭಾಷೆಯನ್ನು ಮುರಿದು ಕಟ್ಟಿದ ವಿಶೇಷವಾದ ಪರಿಭಾಷೆಯಲ್ಲಿ ಅರಳಿದ ಅನುಭಾವದ ಅನನ್ಯ ಸಾಧ್ಯತೆಗಳನ್ನೊಳಗೊಂಡ ವಿಶಿಷ್ಟ ಮಾದರಿಯ ಸಾಹಿತ್ಯವಾಗಿದೆ.

ಹಾಗಾಗಿ, ಲೌಕಿಕ ಸಾಹಿತ್ಯವನ್ನ ಗ್ರಹಿಸಿ ಪ್ರತಿಕ್ರಿಯೆ ಮಾಡುವುದಕ್ಕೂ ಶರಣರ ಅನುಭಾವಿಕ ಸಾಹಿತ್ಯ ಪರಿಗ್ರಹಿಸಿ ಪ್ರತಿಕ್ರಿಯೆಯನ್ನು ನೀಡುವುದಕ್ಕೂ ಮೂಲಭೂತವಾದ ವ್ಯತ್ಯಾಸ ಎನ್ನುವುದನ್ನು ಮರೆಯಬಾರದು.

ಶರಣರ ತಾತ್ವಿಕ ಹಾಗೂ ಸೈಧಾಂತಿಕ ಪರಿಕಲ್ಪನೆಯಲ್ಲಿ ಸಾಧಕ ವ್ಯಕ್ತಿಯ ಶರೀರ ಸ್ವರೂಪವನ್ನು ಸಾಧನೆಯ ಪರಿಕ್ರಮದ ನೆಲೆಯ ವಿಕಾಸದಂತೆ ಮೂರು ಹಂತದಲ್ಲಿ ವಿಂಗಡಿಸಿ ನೋಡಲಾಗಿದ್ದು ಅವುಗಳನ್ನು ತನುತ್ರಯಗಳೆಂದು ಸ್ಥೂಲ ಸೂಕ್ಷ್ಮ ಮತ್ತು ಕಾರಣ ಶರೀರಗಳು ಎನ್ನುವ ಹೆಸರಿನಲ್ಲಿ ಪರಿಭಾವಿಸಿ ನೋಡಲಾಗಿದೆ. ಆ ಮೂಲಕವಾಗಿ ಸಾಧಕನ ಶರೀರಕ್ಕೆ ಸ್ಥೂಲತನು ಮನಕ್ಕೆ ಸೂಕ್ಷ್ಮತನು ಹಾಗೂ ಭಾವಕ್ಕೆ ಕಾರಣತನು ಎಂಬುದಾಗಿ ಕರೆಯುತ್ತಾರೆ.

ಇವುಗಳನ್ನು ಅರಿವು ಆಚರಣೆ ಮತ್ತು ಅನುಭಾವದ ಮೂಲಕ ಉನ್ನತೀಕರಿಸುತ್ತ ಅವುಗಳಿಗೆ ಇಲ್ಲಿಯೂ ಸಹಿತ ಕ್ರಮವಾಗಿ ಗುರು ಲಿಂಗ ಜಂಗಮವೆಂದು ಕರೆಯಲಾಗುತ್ತದೆ. ಹೀಗೆ ಶರಣರ ವಚನ ಸಾಹಿತ್ಯವು; ಶರಣನ ಶರೀರಗತ ಭಾವದ ನೆಲೆಯಲ್ಲಿ, ಮನೋಭಾವದ ನೆಲೆಯಲ್ಲಿ ಹಾಗೂ ಅನುಭಾವಿಕ ನೆಲೆಯಲ್ಲಿ ರೂಪಗೊಂಡ ಸಾಹಿತ್ಯವಾಗಿದೆ ಎನ್ನುವ ಈ ಸೂಕ್ಷ್ಮ ವ್ಯತ್ಯಾಸದ ಬಹು ಮುಖ್ಯ ಎಚ್ಚರವನ್ನ ವಚನಗಳನ್ನೋದುವ ಹಾಗೂ ವಿಮರ್ಶೆಯ ಮಾಡುವ ಮನಸುಗಳು ಮನಗಂಡು ಮುನ್ನಡೆಯಬೇಕಾದ ಜರೂರಿದೆ.

ಈ ಎಲ್ಲಾ ಅಂಶಗಳ ಅರಿವಿನ ಬೆಳಕಿನಲ್ಲಿ ಈಚೆಗೆ ಬಸವಣ್ಣನವರ ವಚನವೊಂದರಲ್ಲಿ ಪ್ರಯೋಗ ಆಗಿರುವ ನುಡಿ ಚಿತ್ರಗಳನ್ನು ಸ್ತ್ರೀವಾದಿ ದೃಷ್ಟಿಯ ಹಿನ್ನಲೆಯಲ್ಲಿ ವಿಮರ್ಶೆ ಮಾಡಿ ಅರ್ಥೈಸಿಕೊಂಡು ಬಸವಣ್ಣನವರ ಘನತೆ ಗೌರವವನ್ನು ಲೆಕ್ಕಿಸದೇ ಬಸವಣ್ಣವರೂ ‘ಪುರುಷ ಅಹಂಕಾರ’ ಮೀರಲು ಸಾಧ್ಯವಾಗಿಲ್ಲ ಎನ್ನುವ ಆತುರದ ಅಭಿಪ್ರಾಯ ವಿನಯ ಒಕ್ಕುಂದ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಈಗ ಸಾಕಷ್ಟು ವಾದ ಪ್ರತಿವಾದಗಳ ಧ್ವನಿಯು ಮಾಧ್ಯಮಗಳಲ್ಲಿ ಮೊಳಗುತ್ತಿವೆ.

ಬಸವಾದಿ ಶರಣರ “ಶರಣಸತಿ ಲಿಂಗಪತಿ” ಎನ್ನುವ ಶರಣರ ಪರಿಕಲ್ಪನೆಯನ್ನೇ ಬಿಚ್ಚಿ ನೋಡಿದಾಗ; ಅಲ್ಲಿ ಶರಣತತ್ವ ಸಿದ್ಧಾಂತಗಳ ಸಾಧಕನಾದ ಭಕ್ತ ಅರಿವು ಆಚರಣೆ ಅನುಭಾವದ ನೆಲೆಯಲ್ಲಿ ಪಂಚತತ್ವಗಳ ಮೊತ್ತವಾದ ತನ್ನ ತನುಮನವನ್ನು ಹೆಣ್ಣಾಗಿ ಪರಿಭಾವಿಸಿ, ಇಷ್ಟಲಿಂಗ ಸಾಧನೆ ಮಾಡುತ್ತಾನೆ. ಆ ಮೂಲಕ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳ ಅರಿಷಡ್ವರ್ಗಗಳನ್ನು ನಿಗ್ರಹಿಸುವ ಜೊತೆಗೆ ಅಂತರಂಗದಲ್ಲಿನ ಚತುಷ್ಟಯಗಳಾದ ಮನ ಚಿತ್ತ ಬುದ್ಧಿ ಹಾಗೂ ಅಹಂಕಾರಗಳ ಗೆದ್ದು ಉನ್ನತಿಕರಣಗೊಂಡು ಶರಣ ಸ್ಥಲವನ್ನು ಸಾಧಿಸಿ ‘ಶರಣಸತಿ’ ಭಾವದಿಂದ ‘ಲಿಂಗಪತಿ’ಯಲ್ಲಿ ಐಕ್ಯತೆ ಸಾಧಿಸುವ ಮೂಲಕ ಶರಣನಾಗುವನು. ಹೀಗೆ ಬಸವಣ್ಣನವರು ಶರಣಸ್ಥಲ ಸಾಧಿಸಿದರೂ ಭಕ್ತ ಸ್ಥಲದಲ್ಲಿದ್ದುದ ಅರ್ಥಮಾಡಿಕೊಂಡರೆ; ಆಗ ಬಸವಣ್ಣನವರು ಪುರುಷ ಅಹಂಕಾರ ಮೀರಿದ ಮಹಿಮರು ಹೌದೊ ಅಲ್ಲವೋ ಎನ್ನುವುದು ವಿಮರ್ಶೆ ಮಾಡಿದವರ ಅರಿವಿಗೆ ಬರುತ್ತದೆ.

ಅಷ್ಟೆ ಯಾಕೆ ಶರಣರು ಈ ಹೆಣ್ಣು ಗಂಡಿನ ಗಡಿ ರೇಖೆಯನ್ನೇ ಅಳಿಸಿ ಹಾಕಿ ನಡುವೆ ಸುಳಿವ ಆತ್ಮ ಹೆಣ್ಣುಲ್ಲ ಗಂಡೂ ಅಲ್ಲವೆಂದು ಲಿಂಗತಾರತಮ್ಯವನ್ನೇ ತೊಡೆದವರು. ಅಷ್ಟು ಉನ್ನತ ನೆಲೆಗೆ ಭಕ್ತ ನಿಂದ ಶರಣರಾಗಿಯೂ ‘ಎನಗಿಂತ ಕಿರಿಯರಿಲ್ಲ’ ಎನ್ನುವ ಕಿಂಕರ ಭಾವದ ಬಸವಣ್ಣನವರ ವಚನ ಯಾವ ಭಾವದ ನೆಲೆಯಲ್ಲಿ ರಚನೆಯಾಗಿದ್ದೆಂದು ಅಂದ್ರೆ ಅಂಗಭಾವ ಲಿಂಗಭಾವ ಜಂಗಮಭಾವ ಯಾವುದೆಂದು ಪರಾಮರ್ಶೆ ಮಾಡಿ ನೋಡಿಯೇ ಮಾತನಾಡುವ ಅಗತ್ಯವಿದೆ ಎನಿಸುತ್ತದೆ. ಅಲ್ಲದೆ ಬಸವಣ್ಣನವರು ವಿಮರ್ಶಾತೀತರೇ? ಎನ್ನುವ ಮನಸುಗಳು ಇಂತಹ ಘನವ್ಯಕ್ತಿತ್ವದ ವಿಮರ್ಶೆಗೆ ಯಾವ ರೀತಿಯ ಮಾನದಂಡಗಳು ಇರಬೇಕೆಂಬ ವಿಚಾರ ಮತ್ತು ಬಳಸುವ ಪರಿಭಾಷೆ ಸಹಿತವಾಗಿ ಹೇಗಿರಬೇಕು ಎನ್ನುವ ಪ್ರಜ್ಞಾವಂತಿಕೆಯ ಎಚ್ಚರ ಇಲ್ಲಿ ಮುಖ್ಯ ಅಲ್ಲವೇ ? ಬಸವಣ್ಣವರ ಕಾಲದಲ್ಲಿ ಇದ್ದಂತಹ ವಚನಕಾರ್ತಿಯರಿಗೆ ಅವರು ಅರ್ಥ ವಾಗಿರುವ ಬಗೆಯ ಬಗ್ಗೆ ಅವರುಗಳ ವಚನಗಳ ಗಮನಿಸಿದರೆ ಖಂಡಿತಾ ಸ್ತ್ರೀವಾದಿ ವಿಮರ್ಶೆಯ ನೋಟದ ಸಂಶಯ ನೀಗೀತು ಎನಿಸುತ್ತದೆ.

Share This Article
3 Comments
  • ಅತ್ಯಂತ ಅರ್ಥಪೂರ್ಣ ವಿಷಯ ಮಂಡನೆ. ಚರ್ಚೆ ಮುಂದುವರಿದು. ಜನಸಾಮಾನ್ಯರಲ್ಲಿ ಶರಣ ಚಿತ್ತ ಹುಟ್ಟಲಿ
    .

  • ಸರ್ ಅತ್ಯುತ್ತಮ ವಿಶ್ಲೇಷಣೆ. ಧನ್ಯವಾದಗಳು ಸರ್.
    ಶರಣರು ಮತ್ತು ಅವರ ವಚನಗಳನ್ನು ಕೆಲವರು ತಮಗೆ ತೋಚಿದ ರೀತಿಯಲ್ಲಿ ವಿಶ್ಲೇಷಿಸಿ ಅವರ ವ್ಯಕ್ತಿತ್ವವನ್ನು ಗೌಣವಾಗಿಸುವವರು ಇಂದಿನ ಹೊಸ ತಲೆಮಾರಿಗೆ ಯಾವ ಮಾದರಿಯ ವ್ಯಕ್ತಿಗಳನ್ನು ಪರಿಚಯಿಸುವರೋ?.

  • ವಚನಸಾಹಿತ್ಯದ ವಿಶೇಷತೆಯನ್ನು ಅರಿಯದೆ ಆತುರದಲ್ಲಿ ಒಬ್ಬ ದಾರ್ಶನಿಕರಿಗೆ ಮಸಿ ಬಳಿಯುವ ಚಿಂತಕರಿಗೆ ಅರ್ಥವಾಗುವ ರೀತಿಯಲ್ಲಿ ಈ ಚಿಂತನೆ ಮೂಡಿಬಂದಿದೆ. ಇನ್ನಾದರೂ ಮುತ್ಸಧ್ದಿತನ ತೋರುವ ನೆಪದಲ್ಲಿ ಅವಸರದ ನಿರ್ಣಾಯಕ ನಿಲುವು ತಳೆಯುವದನ್ನು ನಾವು ಮೊಟಕುಗೊಳಿಸುವ. ಶರಣು ಶರಣಾರ್ಥಿಗಳು.

Leave a Reply

Your email address will not be published. Required fields are marked *