ಬೆಂಗಳೂರು
ಬೆಂಗಳೂರಿನ ಗಾಂಧಿ ಭವನದಲ್ಲಿ ಈಚೆಗೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ನಿರಂತರ ಜಾಗೃತಿ ಮತ್ತು ದೃಢ ಸಂಕಲ್ಪದಿಂದ ಮಾತ್ರ ವ್ಯಸನಮುಕ್ತ ಸಮಾಜದ ಕನಸು ನನಸಾಗಲು ಸಾಧ್ಯವಿದೆ ಎಂದರು.
ಮದ್ಯಪಾನ, ಮಾದಕ ವಸ್ತುಗಳ ವ್ಯಸನಮುಕ್ತ ಸಮಾಜಕ್ಕಾಗಿ ಶಿಕ್ಷಕರು, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವ ಕಾರ್ಯಕ್ರಮ ರೂಪಿಸಬೇಕೆಂದು ಕರೆ ಕೊಟ್ಟರು.
ಪ್ರತಿ ಶಿಕ್ಷಕರು ಒಂದೊಂದು ವಿದ್ಯಾರ್ಥಿಗಳಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನಕ್ಕೆ ಬದುಕಿನಲ್ಲಿ ಆಸ್ಪದ ಕೊಡುವುದಿಲ್ಲ ವೆಂಬ ಪ್ರಮಾಣ ಪಡೆಯಬೇಕು.

ಅಲ್ಲದೇ ವಿದ್ಯಾರ್ಥಿಗಳು ಸಹ ಪೋಷಕರಿಗೆ, ಅಕ್ಕ-ಪಕ್ಕದ ನಿವಾಸಿಗಳಿಗೆ ಮದ್ಯಪಾನ ಮಾಡದಂತೆ ಭಾವನಾತ್ಮಕವಾಗಿ ಕಟ್ಟಿಹಾಕಬೇಕು ಎಂದು ಸಲಹೆ ನೀಡಿದರು.
ವ್ಯಸನಿಗಳು ಕಡಿಮೆಯಾದಂತೆ ಮದ್ಯದ ಅಂಗಡಿ, ಇತರೆ ಮಾದಕ ವಸ್ತುಗಳ ಮಾರಾಟ ಕ್ಷೀಣಿಸುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಮಾತನಾಡಿ ಪಠ್ಯ-ಪುಸ್ತಕಗಳಲ್ಲಿ ಮದ್ಯ, ಮಾದಕ ವಸ್ತುಗಳ ವ್ಯಸನಗಳಿಂದ ಆಗುವ ಅತ್ಯಂತ ಕೆಟ್ಟ ಪರಿಣಾಮ ಕುರಿತು ಸಂಭಾಷಣೆ ರೂಪದಲ್ಲಿ ಪಾಠಗಳನ್ನು ಸೇರಿಸಬೇಕಿದೆ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ ಕೃಷ್ಣ ಮಾತನಾಡಿ, ಮದ್ಯಪಾನ ಹೋಗಲಾಡಿಸಲು ಮಂಡಳಿ ಅಥವಾ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಇದಕ್ಕೆ ಸ್ವಾಸ್ಥ್ಯ ಸಮಾಜ ಬಯಸುವ ಸಾಹಿತಿಗಳು, ಚಿಂತಕರ ಪಾಲ್ಗೊಳ್ಳುವಿಕೆ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರ, ಸಂಯಮ ಮಂಡಳಿಯ ಕಾರ್ಯದರ್ಶಿ ಮಹೇಶ ಹಾಗೂ ಇತರರಿದ್ದರು.
