ಪ್ರಥಮ ಮಹಿಳಾ ಜಗದ್ಗುರು ಪೂಜ್ಯ ಮಾತೆ ಮಹಾದೇವಿಯವರ ೭೯ನೇ ಜಯಂತಿ (ಮಾರ್ಚ ೧೩), ೬ನೇ ಲಿಂಗೈಕ್ಯ ಸಂಸ್ಮರಣೆ (ಮಾರ್ಚ ೧೪) ನಿಮಿತ್ತ ಲೇಖನ
ಕೂಡಲಸಂಗಮ
ಸಂಘಟನೆ, ಹೋರಾಟದ ಮೂಲಕ ೫೫ ವರ್ಷಗಳ ಕಾಲ ಬಸವ ತತ್ವವನ್ನು ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಭಿತ್ತರಿಸಿ, ಜೀವನದುದ್ದಕ್ಕೂ ಕಷ್ಟ ನಿಂದನೆಗಳನ್ನು ಎದುರಿಸಿ, ಭಕ್ತರಿಂದ ಅಭಿನವ ಅಕ್ಕಮಹಾದೇವಿ, ಮಾತಾಜಿ ಎಂದು ಕರೆಯಿಸಿಕೊಂಡವರೇ ಮಾತೆ ಮಹಾದೇವಿ.
ಸಿದ್ಧಾಂತದ ಬದಲು ಸಂಪತ್ತು, ಸುಖಕ್ಕಾಗಿ ಬದುಕುವವರ ಸಂಖ್ಯೆಯೇ ಹೆಚ್ಚಾಗಿದೆ. ಅದರೆ, ಮಾತೆ ಮಹಾದೇವಿ ಜೀವನದುದ್ದಕ್ಕೂ ಸಿದ್ದಾಂತಕ್ಕಾಗಿ ಬದುಕಿ, ಬಾಳಿದರು. ಬಸವ ತತ್ವ ಹಾಗೂ ವಚನ ಸಾಹಿತ್ಯ ಪ್ರಚಾರಕ್ಕಾಗಿ ಎಷ್ಟೋ ವಿರೋಧದ ನಡುವೆಯೂ ತಮ್ಮನ್ನೇ ತಾವು ಗಂಧದ ಕಡ್ಡಿಯಂತೆ ಸವೆದುಕೊಂಡರು.
ವಿರೋಧದ ನಡುವೆ
ಜಂಗಮರಲ್ಲದ ವಟುಗಳಿಗೆ ಲಿಂಗದೀಕ್ಷೆ ನೀಡಿ ಅವರನ್ನು ಮಠಾಧೀಶರನ್ನಾಗಿ ಮಾಡಿದ ಹಾಗೂ ಮಹಿಳೆಯರನ್ನು ಮಠಾಧೀಶರನ್ನಾಗಿ ಮಾಡಿದ ಮೊದಲ ವ್ಯಕ್ತಿ ಮಾತೆ ಮಹಾದೇವಿ. ಇದಕ್ಕಾಗಿ ಅವರು ಸಮಾಜದ ವಿರೋಧವನ್ನು ಎದುರಿಸಬೇಕಾಯಿತು.
ಸನ್ಯಾಸಿಯಾಗುವುದು ಪುರುಷರಿಗೆ ಮಾತ್ರ, ಸ್ತ್ರೀಗೆ ಕಾವಿ, ಸನ್ಯಾಸಿ ಸಲ್ಲದು ಎಂಬ ಸಂಪ್ರದಾಯ ಮಠಾಧೀಶರ ವಿರುದ್ದ ಸಡ್ಡುಹೊಡೆದು ಹಲವಾರು ವಿರೋಧದ ಮಧ್ಯದಲ್ಲಿಯೇ ಲಿಂಗಾನಂದ ಸ್ವಾಮೀಜಿಯವರಿಂದ ೧೯೬೫ ಅಗಷ್ಟ ೧೯ ರಂದು ಇಷ್ಟಲಿಂಗ ದೀಕ್ಷೆ ಪಡೆದ ರತ್ನಾ ೧೯೬೬ ಎಪ್ರಿಲ್ ೫ ರಂದು ಲಿಂಗಾನಂದ ಸ್ವಾಮೀಜಿಯವರಿಂದ ಜಂಗಮ ದೀಕ್ಷೆ ಪಡೆದು ಮಾತೆ ಮಹಾದೇವಿಯಾದರು.

ಮಹಿಳೆ ಕಾವಿ ತೊಟ್ಟು ಸನ್ಯಾಸಿಯಾದರೆ ಸಾಲದು ಜಗದ್ಗುರು ಆಗಬೇಕು ಎಂಬ ಲಿಂಗಾನಂದ ಸ್ವಾಮೀಜಿಯವರ ಇಚ್ಚೆಯಂತೆ ೧೯೭೦ ಎಪ್ರಿಲ್ ೨೧ ರಂದು ಧಾರವಾಡದಲ್ಲಿ ಅಕ್ಕಮಹಾದೇವಿಯ ಜಯಂತಿಯಂದು ಅಕ್ಕಮಹಾದೇವಿ ಅನುಭಾವ ಪೀಠ ಎಂಬ ಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಸ್ಥಾಪಿಸಿ, ಪ್ರಥಮ ಪೀಠಾದ್ಯಕ್ಷೆಯಾಗಿ ಮಾತೆ ಮಹಾದೇವಿಗೆ ಪ್ರತಿಜ್ಞಾವಿಧಿಯನ್ನು ಲಿಂಗಾನಂದ ಶ್ರೀಗಳು ಭೋಧಿಸಿದರು, ಆಶಿರ್ವದಿಸಲು ಸಾಂಪ್ರದಾಯ ಮಾಠಾಧೀಶರು ಬರದೆ ಇದ್ದಾಗ ವಿಜಯಪುರದ ಮಲ್ಲಿಕಾರ್ಜುನ ಶ್ರೀಗಳು ಬಂದು ಪ್ರಥಮ ಮಹಿಳಾ ಪೀಠಾಧ್ಯಕ್ಷೆ ಮಾತೆ ಮಹಾದೇವಿಗೆ ಆಶಿರ್ವಾದ ಮಾಡಿದ್ದರು.
ಗುರುಗಳ ಇಚ್ಚೆಯಂತೆ ಪ್ರಥಮ ಮಹಿಳಾ ಜಗದ್ಗುರುವಾದ ಮಾತೆ ಮಹಾದೇವಿ, ಗುರುಗಳಿಗಾಗಿಯೇ ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠ ಎಂಬ ಮಹಾಜದ್ಗುರು ಪೀಠವನ್ನು ೧೯೯೨ ಜನವರಿ ೧೩ ರಂದು ಸ್ಥಾಪಿಸಿ ಅದರ ಪ್ರಥಮ ಪೀಠಾಧ್ಯಕ್ಷರಾಗಿ ಲಿಂಗಾನಂದ ಸ್ವಾಮೀಜಿಯವರಿಗೆ ಪೀಠಾರೋಹಣ ಮಾಡುವ ಮೂಲಕ ಮಹಾಜಗದ್ಗುರುಗಳಾಗಿ ಮಾಡಿದರು. ಗುರುಗಳು ಶಿಷ್ಯರನ್ನು ಜಗದ್ಗುರು ಮಾಡಿರುವುದು, ಶಿಷ್ಯೆ ಗುರುಗಳನ್ನು ಮಹಾಜಗದ್ಗುರು ಮಾಡಿರುವುದು ಚರಿತ್ರೆಯಲ್ಲಿ ಅಪರೂಪದ ಘಟನೆಯಾಗಿದೆ.
ಶರಣರ ಹೆಸರಿನಲ್ಲಿ ಪೀಠಗಳು
ಬಸವಾದಿ ಶರಣರ ಹೆಸರಿನಲ್ಲಿ ಅನೇಕ ಪೀಠಗಳನ್ನು ಸ್ಥಾಪಿಸಿ, ಜಾತಿ, ವರ್ಣ, ವರ್ಗಾತಿತವಾಗಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಸಂಕಲ್ಪ ಹೊತ್ತು ಇಡಿ ಸಮಾಜವೇ ಬೆರಗಾಗುವಂತೆ ಬಸವ ಧರ್ಮ ಪೀಠವನ್ನು ಸ್ಥಾಪಿಸಿ ಅನೇಕ ವರ್ಗದದಿಂದ ಬಂದ ಪ್ರತಿಭಾವಂತರನ್ನು, ಆಸಕ್ತಿಹೊಂದಿದವರನ್ನು ಗುರುತಿಸಿ ಜಂಗಮ ಮೂರ್ತಿಗಳನ್ನಾಗಿ ಮಾಡಿ, ಸಾವಿರಾರು ಸಂಖ್ಯೆಯ ಹಿಂದುಳಿದವರನ್ನು, ಧರ್ಮ ವಂಚಿತರನ್ನು ಗುರುತಿಸಿ ಶರಣರನ್ನಾಗಿ ಮಾಡಿದ ಶ್ರೇಯಸ್ಸು ಮಾತಾಜಿಯವರಿಗೆ ಸಲ್ಲುತ್ತದೆ.

ಬಸವ ತತ್ವ ಪ್ರಸಾರವನ್ನು ಜೀವನ ಮೂಲ ಉದ್ದೇಶವಾಗಿ ಇಟ್ಟುಕೊಂಡ ಮಾತಾಜಿ ಬಸವ ತತ್ವ ಪ್ರಸಾರಕ್ಕಾಗಿ ಪ್ರತಿ ವರ್ಷ ಕೂಡಲಸಂಗಮದಲ್ಲಿ ಶರಣ ಮೇಳ, ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ, ಧಾರವಾಡದಲ್ಲಿ ಶರಣೋತ್ಸವ, ಬೆಂಗಳೂರಿನಲ್ಲಿ ಬಸವೋತ್ಸವ ಹಾಗೂ ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಲಿಂಗಾಯತ ಗಣಮೇಳ ಎಂಬ ಸಮಾವೇಶ ಹಮ್ಮಿಕೊಂಡು ಲಕ್ಷಾಂತರ ಜನರಿಗೆ ಬಸವಣ್ಣನವರ ೧೨ನೇ ಶತಮಾನದ ವಚನಕಾರರ ವಚನ ಸಾಹಿತ್ಯವನ್ನು ಬಿತ್ತರಿಸುತ್ತಿರುವರು.
ರಾಷ್ಟ್ರೀಯ ಬಸವ ದಳ
ಯುವ ಜನಾಂಗದಲ್ಲಿ ಬಸವ ತತ್ವ ಭಿತ್ತರಿಸಬೇಕು, ಯುವಕರಿಗೆ ಶರಣ ಸಂಸ್ಕೃತಿಯನ್ನು ಬೆಳಸಬೇಕು ಎಂಬ ಉದ್ದೇಶದಿಂದ ೧೯೮೦ರಲ್ಲಿ ಮಾತಾಜಿ, ಲಿಂಗಾನಂದ ಸ್ವಾಮೀಜಿ ರಾಷ್ಟ್ರೀಯ ಬಸವ ದಳ ಎನ್ನುವ ಸಂಘಟನೆಯನ್ನು ಪ್ರಾರಂಭಿಸಿದ ಫಲವಾಗಿ ಇಂದು ದೇಶದ ೮ ರಾಜ್ಯದಲ್ಲಿ ೧೨೦೦ಕ್ಕೂ ಅಧಿಕ ಶಾಖೆಗಳ ಮೂಲಕ ಬಸವ ಸಂಘಟನೆ, ಶರಣ ಸಂಸೃತಿಯನ್ನು ಬಿಂಬಿಸುತ್ತಿವೆ.
ಬಸವ ತತ್ವ , ಶರಣರ ಸಂದೇಶಗಳನ್ನು ಭಿತ್ತರಿಸುವ ಉದ್ದೇಶದಿಂದ ಮಾತಾಜಿ ೧೯೬೮ರಲ್ಲಿ ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ, ೧೯೭೫ರಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ವಿಶ್ವ ಕಲ್ಯಾಣ ಮೀಷನ್, ೧೯೭೮ರಲ್ಲಿ ಬೆಂಗಳೂರಿನ ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ, ೧೯೯೨ರಲ್ಲಿ ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠ, ೨೦೦೧ರಲ್ಲಿ ಬಸವ ಕಲ್ಯಾಣದಲ್ಲಿ ಬಸವ ಧರ್ಮ ಪೀಠ, ೨೦೦೬ರಲ್ಲಿ ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಅಲ್ಲಮಪ್ರಭು ಶೂನ್ಯ ಪೀಠ, ೨೦೦೬ರಲ್ಲಿ ದೆಹಲಿಯಲ್ಲಿ ಬಸವ ಮಂಟಪ, ಉಳವಿ, ಚಿತ್ರದುರ್ಗ, ಸಾಸಲಟ್ಟಿ, ಬೀದರ, ಕಲಬುರ್ಗಿ, ಬಳ್ಳಾರಿ, ಭದ್ರಾವತಿ, ಬೆಳಗಾವಿ, ಹುಬ್ಬಳ್ಳಿ ಮಾತ್ರವಲ್ಲದೆ ನೆರೆಯ ರಾಜ್ಯದಲ್ಲಿ ಅನೇಕ ಬಸವ ಮಂಟಪ ನಿರ್ಮಿಸಿ ಸಮುದಾಯ ಪ್ರಾರ್ಥನೆ, ಶರಣ ಸಂಗ, ವಚನ ಪಠಣ ಮುಂತಾದ ಕಾರ್ಯಗಳ ಮೂಲಕ ಶರಣ ಸಂಸೃತಿಯನ್ನು ಶರಣ, ಶರಣಿಯರಿಗೆ ಮಾತಾಜಿ ಕೊಟ್ಟಿದ್ದಾರೆ.
ಬಸವ ತತ್ವ ಪ್ರಸಾರಕ್ಕಾಗಿ ೧೯೯೩ ತಮಿಳುನಾಡಿನ ಊಟಿಯಲ್ಲಿ ಪ್ರಥಮ ಬಸವ ಧರ್ಮ ಸಮ್ಮೇಳನವನ್ನು, ೧೯೯೪ರಲ್ಲಿ ಆಂದ್ರಪ್ರದೇಶದ ಹೈದ್ರಾಬಾದದಲ್ಲಿ ದ್ವಿತೀಯ ಬಸವ ಧರ್ಮ ಸಮ್ಮೇಳನವನ್ನು, ೧೯೯೫ರಲ್ಲಿ ಬೆಂಗಳೂರಿನಲ್ಲಿ ತೃತೀಯ ಬಸವ ಧರ್ಮ ಸಮ್ಮೇಳನವನ್ನು, ನಾಲ್ಕನೆಯದು ಧಾರವಾಡದಲ್ಲಿ, ಐದನೆಯದು ದೆಹಲಿಯಲ್ಲಿ, ಆರನೇಯದು ಮುಂಬೈಯಲ್ಲಿ ಹಮ್ಮಿಕೊಂಡಿದ್ದರು.

ದೇಶ, ವಿದೇಶ
ದೇಶ ಮಾತ್ರವಲ್ಲದೇ ವಿದೇಶದಲ್ಲಿಯು ಬಸವ ತತ್ವ ಪ್ರಸಾರವಾಗಬೇಕು ಎಂಬ ಉದ್ದೇಶದಿಂದ ಮಾತಾಜಿ ೧೯೭೬ರಲ್ಲಿ ಇಂಗ್ಲೆಂಡ್, ೧೯೮೦, ೧೯೮೧, ೨೦೦೪ರಲ್ಲಿ ಅಮೇರಿಕಾಗೆ ಬಸವ ತತ್ವ ಪ್ರಸಾರಕ್ಕಾಗಿ ಪ್ರವಾಸ ಕೈಗೊಂಡಿದ್ದರು.
ಬಸವಣ್ಣನವರ ವಿಚಾರಗಳನ್ನು, ಜೀವನ ಚರಿತ್ರೆಯನ್ನು ಸಿನಿಮಾದ ಮೂಲಕ ಜನರಿಗೆ ತಲುಪಿಸುವ ಉದ್ಧೇಶದಿಂದ ೧೯೮೩ರಲ್ಲಿ ಕ್ರಾಂತಿಯೋಗಿ ಬಸವಣ್ಣ ಚಲನಚಿತ್ರ ನಿರ್ಮಿಸಿ ಬಸವಣ್ಣನವರ ವಿಚಾರಗಳನ್ನು ಎಲ್ಲ ಕಡೆ ಪಸರಿಸುವಂತೆ ಮಾಡಿದರು.
ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರಕಬೇಕು ಎಂದು ನಿರಂತರ ಹೋರಾಟದಲ್ಲಿ ತೊಡಗಿದ್ದರು, ಸಂಘಟನೆಗಾಗಿ ೨೦೦೫ರಲ್ಲಿ ಪ್ರಥಮ ಲಿಂಗಾಯತ ಧರ್ಮ ಸಮ್ಮೇಳನವನ್ನು ದೆಹಲಿಯಲ್ಲಿ, ೨೦೦೮ರಲ್ಲಿ ಎಪ್ರಿಲ್ ಚನೈನಲ್ಲಿ ೨ನೇ ಲಿಂಗಾಯತ ಧರ್ಮ ಸಮ್ಮೇಳನ, ೨೦೧೧ ಪೂಣಾದಲ್ಲಿ ೩ನೇ ಲಿಂಗಾಯತ ಧರ್ಮ ಸಮ್ಮೇಳನ, ೨೦೧೨ರಲ್ಲಿ ಬೆಂಗಳೂರಿನಲ್ಲಿ ರ‍್ಯಾಲಿ, ೨೦೧೩ರಲ್ಲಿ ದೇಹಲಿಯ ಜಂತರ ಮಂತರದಲ್ಲಿ ರ‍್ಯಾಲಿ, ೨೦೧೭, ೧೮ರಲ್ಲಿ ಬೀದರ, ಬೆಂಗಳೂರಿನಲ್ಲಿ ರ‍್ಯಾಲಿ, ೨೦೧೯ ಫೆಬ್ರವರಿ ೧೦ ರಿಂದ ೧೨ರ ವರೆಗೆ ದೆಹಲಿಯಲ್ಲಿ ಲಿಂಗಾಯತ ಆಂದೋಲನ ಹಮ್ಮಿಕೊಳ್ಳುವ ಮೂಲಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹಗಲಿರುಳು ಶ್ರಮಿಸಿದ್ದಾರೆ.
ಇಡೀ ಬದುಕನ್ನು ಬಸವಣ್ಣ ಹಾಗೂ ಶರಣ ತತ್ವಗಳನ್ನು ಪಸರಿಸಲು ದುಡಿದ ಮಾತೆ ಮಹಾದೇವಿ ಬಸವಣ್ಣನವರ ವಿದ್ಯಾಭೂಮಿ, ಐಕ್ಯಸ್ಥಳ ಕೂಡಲಸಂಗಮ, ಕರ್ಮಭೂಮಿ ಬಸವ ಕಲ್ಯಾಣ ವಿಶ್ವಕ್ಕೆ ಪರಿಚಯಿಸಿದ ಕಿರ್ತಿ ಅವರಿಗೆ ಸಲ್ಲುತ್ತದೆ. ಬಸವಣ್ಣನವರ ವಿದ್ಯಾಭೂಮಿ, ಐಕ್ಯಸ್ಥಳ, ಕರ್ಮಭೂಮಿಯ ಕಡೆ ಯಾವ ಮಠಾಧೀಶರು ಕಾಲಿಡದ ಸಂದರ್ಭದಲ್ಲಿ ಲಿಂಗಾಯತ ಧರ್ಮ ಕ್ಷೇತ್ರ ಕೂಡಲಸಂಗಮ, ಬಸವ ಕಲ್ಯಾಣ ಎಂದು ಸಾರಿ ಕೂಡಲಸಂಗಮದಲ್ಲಿ ಶರಣ ಮೇಳ, ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ ಎಂಬ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಬಸವ ತತ್ವ, ಬಸವಣ್ಣನವರ ಸ್ಥಳಗಳನ್ನು ವಿಶ್ವಕ್ಕೆ ಪಸರಿಸಿದರು. ನಂತರ ಈ ಸ್ಥಳಗಳ ಅಭಿವೃದ್ಧಿ ಸರ್ಕಾರ ಕೂಡಲಸಂಗಮ ಹಾಗೂ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿತು. ಅಲಮಪ್ರಭುಗಳು ನಡೆದಾಡಿದ ಸ್ಥಳವಾದ ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಗಣಮೇಳ, ಉಳವಿಯಲ್ಲಿ ಲಿಂಗಾಯತ ಗಣಪರ್ವ ಸಮಾರಂಭದ ಮೂಲಕ ಚನ್ನಬಸವಣ್ಣ, ಅಕ್ಕನಾಗಲಾಂಬಿಕೆಯ ಸ್ಥಳಗಳನ್ನು ಪರಿಚಯಿಸಿದ ಶ್ರೇಯಸ್ಸು ಮಾತೆಗೆ ಸಲ್ಲುತ್ತದೆ.
ರಾಜ್ಯದಲ್ಲಿ ಯಾವ ಬಸವ ತತ್ವದ ಮಠಾಧೀಶರು ಬಸವಣ್ಣ, ಶರಣರ ಸ್ಥಳಗಳಲ್ಲಿ ಆಶ್ರಮಗಳನ್ನು ಸ್ಥಾಪಿಸಿ ಅವರ ತತ್ವ ಪಸರಿಸುವ ಕಾರ್ಯಮಾಡಲಿಲ್ಲ ಆದರೆ ಮಾತಾಜಿ ಶರಣರ ಸ್ಥಳಗಳಲ್ಲಿಯೇ ಆಶ್ರಮ ಸ್ಥಾಪಿಸಿ ಆ ಸ್ಥಳಗಳನ್ನು ಜಗತ್ತಿಗೆ ಪರಿಚಯಿಸಿದರು.
ಅದ್ಭುತ ಸಾಧಕಿ. ಬಸವ ತತ್ವ ಮತ್ತು ಲಿಂಗಾಯತ ಅಸ್ಮಿತೆಗೆ ಮುನ್ನುಡಿ ಬರೆದವರು. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ದೊಡ್ಡ ಮಟ್ಟದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾಢೊಟ್ಟಿಗೆ ಕೆಲಸ ಮಾಡಿದವರು.
ಜಾಗತಿಕ ಲಿಂಗಾಯತ ಮಹಾಸಭೆ ಹುಟ್ಟೋದಕ್ಕೂ 30 ವರ್ಷಗಳ ಮೊದಲೇ ಮಾತಾಜಿಯವರು ದೆಹಲಿ ವರೆಗೂ ಸಾವಿರಾರು ಭಕ್ತರನ್ನು ಇಟ್ಟುಕೊಂಡು ಹೋರಾಟ ಮಾಡಿದ್ದಾರೆ
ಅಭಿನಂದನೀಯ ಲೇಖನ.. ವರ್ಣಿಸಲಸಾಧ್ಯ ಮಹಾ ಮಾತೆ. ಶರಣು ಶರಣಾರ್ಥಿಗಳು 🙏
ಲಿಂಗೈಕ್ಯ ಪರಮ ಪೂಜ್ಯ ಡಾ.ಮಾತೆ ಮಹಾದೇವಿ ತಾಯಿಯವರು ಒಬ್ಬ ವ್ಯಕ್ತಿಯಾಗಿಲ್ಲ ಸಮಾಜದ
ಶಕ್ತಿಯಾಗಿದ್ದರು . ಬಸವ ತತ್ವ ಪ್ರಸಾರದಲ್ಲಿ ಅವರಿಗಿದ್ದ ಧೈರ್ಯ, ತ್ಯಾಗ , ನಿಷ್ಟೆ, ತಾಳ್ಮೆ ,ಬಿಡದ ಛಲ ಇಂದಿನ ಎಲ್ಲಾ ಲಿಂಗಾಯತ ಮಠಾಧೀಶರಿಗೆ , ಮಾತಾಜಿ ಗಳಿಗೆ ಮತ್ತು
ಬಸವ ತತ್ವ ಪ್ರಸಾರ ಮಾಡುವ ಎಲ್ಲಾ ಗ್ರಹಸ್ಥ ಜಂಗಮರಿಗೆ
ಮಾದರಿಯಾಗಬೇಕು.
ಮಾತಾಜಿ ಅವರ ಐತಿಹಾಸಿಕ ಸಾಧನೆಯನ್ನು ಹೃದಯಂಗಮವಾಗಿ ಚಿತ್ರಿಸಿ ಕೊಟ್ಟಿರುವ ತಮಗೆ ಶರಣು ಶರಣಾರ್ಥಿಗಳು. ಅಪರಿಮಿತ ಜ್ಞಾನದಾಹವುಳ್ಳ ಮಾತಾಜಿಯವರಿಗೆ ಸರಿಸಾಟಿ ಮಾತಾಜಿಯವರೇ. ಶರಣು ಶರಣಾರ್ಥಿಗಳು ಮಾತೆ.
ಶರಣು ಶರಣಾರ್ತಿ
ಮಾತೆ ಮಹಾದೇವಿಯವರು ಬಸವಣ್ಣನವರ ತತ್ವವನ್ನು ಅವರ ಸಾಹಿತ್ಯ ಮತ್ತು ಭಾಷಣ ಹಾಗು ಸಂಘಟನೆಗಳ ಮೂಲಕ ಜನರಿಗೆ ಮತ್ತು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಇದು ಲಿಂಗಾಯತ್ ಸಮಾಜಕ್ಕೆ ದೊಡ್ಡಾ ಕೊಡುಗೆ. ಲಿಂಗಾಯತ್ ಪೀಠಾಧಿಪತಿಗಳು ಸರಿಯಾದ ದಿಕ್ಕಿನಲ್ಲ ನಮ್ಮ ಸಮಾಜವನ್ನು ಮುಂಧ್ವರಿಸ್ಸಬೇಕು.
ಈ ದಿಸೆಯಲ್ಲಿ ಶಿವಾನಂದ ಜಮದಾರ್ ಮತ್ತು ಸಾನೆಹಳ್ಳಿ ಪಂಡಿತರಾದ್ಯ ಸ್ವಾಮೀಜಿಗಳು ದಿಟ್ಟ ನಿಲುವು ತೆಗೆದ್ಕೊಂಡಿದ್ದಾರೆ. ಇವರಿಗೆ ಯಲ್ಲಾ ಲಿಂಗಾಯತ್ ಸ್ವಾಮಿಗಳು ಬೆಂಬಲಿಸಬೇಕು ಎಂದು ನನ್ನ ಮನವಿ